Site icon Vistara News

Joe Root: ಕ್ರಿಕೆಟ್​ ದೇವರು ಸಚಿನ್​ ದಾಖಲೆ ಮುರಿದ ಜೋ ರೂಟ್​

Joe Root

ಹೈದರಾಬಾದ್​: ಗುರುವಾರದಂದು(ಜನವರಿ 25) ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಆರಂಭವಾದ ಭಾರತ ಎದುರಿನ ಮೊದಲ ಟೆಸ್ಟ್​ ಪಂದ್ಯದಲ್ಲಿ ಇಂಗ್ಲೆಂಡ್​ ಬ್ಯಾಟರ್ ಜೋ ರೂಟ್(Joe Root) ಕ್ರಿಕೆಟ್​ ದೇವರು ಸಚಿನ್​ ತೆಂಡೂಲ್ಕರ್(Sachin Tendulkar)​ ಅವರ ದಾಖಲೆಯೊಂದನ್ನು ಮುರಿದಿದ್ದಾರೆ.

ಈ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಇಂಗ್ಲೆಂಡ್​ ನಿರೀಕ್ಷಿತ ಆರಂಭ ಪಡೆಯುವಲ್ಲಿ ಯಶಸ್ಸು ಕಾಣಲಿಲ್ಲ. ಆದರೆ ಜೋ ರೂಟ್​ ಅವರು ಸಚಿನ್​ ಅವರ ಮಹತ್ವದ ದಾಖಲೆಯೊಂದನ್ನು ಮುರಿಯುವಲ್ಲಿ ಯಶಸ್ಸಿಯಾಗಿದ್ದಾರೆ. ರೂಟ್​ 10 ರನ್ ಗಳಿಸುತ್ತಿದ್ದಂತೆ ಭಾರತ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿಗಳಲ್ಲಿ ಅತ್ಯಧಿಕ ರನ್ ಕಲೆಹಾಕಿದ ದಾಖಲೆಯನ್ನು ತಮ್ಮ ಹೆಸರಿಗೆ ಬರೆದರು. ಈ ಮೂಲಕ ಸಚಿನ್​ ದಾಖಲೆಯನ್ನು ಪತನಗೊಳಿಸಿದರು. ಸದ್ಯ ರೂಟ್​ ಬ್ಯಾಟಿಂಗ್​ ಕಾಯ್ದುಕೊಂಡಿದ್ದಾರೆ.

ಸಚಿನ್ ತೆಂಡೂಲ್ಕರ್​ ಭಾರತ ಮತ್ತು ಇಂಗ್ಲೆಂಡ್ ಟೆಸ್ಟ್‌ಗಳಲ್ಲಿ 32 ಪಂದ್ಯಗಳಲ್ಲಿ 51.73 ಸರಾಸರಿಯಲ್ಲಿ 2,535 ರನ್ ಗಳಿಸುವ ಮೂಲಕ ಪ್ರಮುಖ ರನ್ ಗಳಿಸಿ ಇದುವರೆಗೆ ಅಗ್ರಸ್ಥಾನ ಪಡೆದಿದ್ದರು. ಈಗ ದ್ವಿತೀಯ ಸ್ಥಾನಕ್ಕೆ ಜಾರಿದ್ದಾರೆ. ರೂಟ್‌ ಅವರು ಭಾರತದ ವಿರುದ್ಧ 25 ಪಂದ್ಯಗಳಿಂದ 63.15 ಸರಾಸರಿಯಲ್ಲಿ ಒಂಬತ್ತು ಶತಕಗಳು ಮತ್ತು 10 ಅರ್ಧ ಶತಕಗಳೊಂದಿಗೆ 2,536* ರನ್ ಗಳಿಸಿದ್ದಾರೆ.

ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಮೂರನೇ ಸ್ಥಾನದಲ್ಲಿದ್ದಾರೆ. 38 ಪಂದ್ಯಗಳಲ್ಲಿ, ಅವರು 38.20 ಸರಾಸರಿಯಲ್ಲಿ 2,483 ರನ್ ಗಳಿಸಿದ್ದಾರೆ. ಇದರಲ್ಲಿ ನಾಲ್ಕು ಶತಕಗಳು ಮತ್ತು 16 ಅರ್ಧಶತಕಗಳು ಸೇರಿವೆ.

ಭಾರತದ ವಿರುದ್ಧ 30 ಟೆಸ್ಟ್ ಪಂದ್ಯಗಳಲ್ಲಿ 47.66 ಸರಾಸರಿಯಲ್ಲಿ 2,431 ರನ್ ಗಳಿಸಿದ ಮಾಜಿ ಇಂಗ್ಲೆಂಡ್ ನಾಯಕ ಅಲಿಸ್ಟೈರ್ ಕುಕ್ ಅವರು ಗವಾಸ್ಕರ್ ನಂತರದ ಸ್ಥಾನದಲ್ಲಿದ್ದಾರೆ. ಕುಕ್ ಭಾರತದ ವಿರುದ್ಧ ಏಳು ಶತಕಗಳು ಮತ್ತು ಒಂಬತ್ತು ಅರ್ಧಶತಕಗಳನ್ನು ಬಾರಿಸಿದ್ದಾರೆ. 294 ರನ್ನುಗಳು ಅವರ ವೈಯಕ್ತಿಕ ಅತ್ಯುತ್ತಮ ಸಾಧನೆಯಾಗಿದೆ.

ವಿರಾಟ್ ಕೊಹ್ಲಿ ಈ ಸಾಧಕರ ಪಟ್ಟಿಯಲ್ಲಿ ಐದನೇ ಸ್ಥಾನವನ್ನು ಪಡೆದಿದ್ದಾರೆ. 35 ವರ್ಷದ ಕೊಹ್ಲಿ 28 ಪಂದ್ಯಗಳಿಂದ 1,991 ರನ್ ಗಳಿಸಿದ್ದಾರೆ. ಈ ಪೈಕಿ ಐದು ಶತಕ ಮತ್ತು ಒಂಬತ್ತು ಅರ್ಧಶತ ದಾಖಲಾಗಿದೆ. ವೈಯಕ್ತಿಕ ಕಾರಣಗಳಿಂದ ಮೊದಲ ಎರಡು ಟೆಸ್ಟ್‌ಗಳಿಂದ ಕೊಹ್ಲಿ ಹೊರಗುಳಿದಿದ್ದಾರೆ.

Exit mobile version