Site icon Vistara News

Joe Root : ಟೆಸ್ಟ್ ಇತಿಹಾಸದ ರನ್​ ಗಳಿಕೆಯ ದಾಖಲೆಯ ಪಟ್ಟಿಯಲ್ಲಿ ಲಾರಾ ಹಿಂದಿಕ್ಕಿದ ಜೋ ರೂಟ್

Joe Root

ಎಡ್ಜ್ ಬಾಸ್ಟನ್: ಇಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಎರಡನೇ ದಿನವಾದ ಶನಿವಾರ ಇಂಗ್ಲೆಂಡ್ ಸ್ಟಾರ್ ಬ್ಯಾಟ್ಸ್ ಮನ್ ಜೋ ರೂಟ್ (Joe Root) ವೆಸ್ಟ್ ಇಂಡೀಸ್ ದಂತಕತೆ ಬ್ರಿಯಾನ್ ಲಾರಾ ಅವರನ್ನು ಹಿಂದಿಕ್ಕಿ ಟೆಸ್ಟ್ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಏಳನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಲಾರಾ ಅವರ ವೃತ್ತಿಜೀವನದಲ್ಲಿ ಗಳಿಸಿದ್ದ 11,953 ರನ್​ ಳಿಗಿಂತ ಕೇವಲ 14 ರನ್​ ಹಿಂದಿದ್ದ ರೂಟ್​ ಮೊದಲ ದಿನ ಸ್ಟಂಪ್ ವೇಲೆ 2* ರನ್ ಗಳಿಸಿ ಅಜೇಯರಾಗಿದ್ದರು. ಅಂತೆಯೇ ಇಂಗ್ಲೆಂಡ್​ನ ಮೊದಲ ಇನ್ನಿಂಗ್ಸ್​ನ 14 ನೇ ಓವರ್​ನಲ್ಲಿ ಅವರು ಜೇಡನ್ ಸೀಲ್ಸ್ ಅವರ ಎಸೆತವನ್ನು ಎದುರಿಸಿ ಲಾರಾ ಹಿಂದಿಕ್ಕಿದರು. ಇದು ರೂಟ್​ ವೃತ್ತಿಜೀವನದಲ್ಲಿ ಮತ್ತೊಂದು ಮಹತ್ವದ ಸಾಧನೆಯನ್ನು ಸೂಚಿಸುತ್ತದೆ.

ಈ ಮೈಲಿಗಲ್ಲು ದಾಟುವಲ್ಲಿ ರೂಟ್ ಕೆಲವು ನಾಟಕೀಯ ಅವಕಾಶಗಳನ್ನು ಪಡೆದರು. 10 ನೇ ಓವರ್​ನಲ್ಲಿ ಸೀಲ್ಸ್ ಅವರ ಬೌಲಿಂಗ್​ ವೇಳೆ ಎಲ್ಬಿಡಬ್ಲ್ಯು ನಿರ್ಧಾರವನ್ನು ವೆಸ್ಟ್ ಇಂಡೀಸ್ ಪರಿಶೀಲಿಸಲಿಲ್ಲ, ಈ ನಿರ್ಧಾರವು ದುಬಾರಿ ಎಂಬುದಾಗಿ ಸಾಬೀತಾಯಿತು. ಡಿಆರ್​ಎಸ್​ ತೆಗೆದುಕೊಂಡಿದ್ದರೆ ರೂಟ್ ಔಟ್ ಆಗುತ್ತಿದ್ದರು ಎಂದು ರಿಪ್ಲೇಗಳು ತೋರಿಸಿದ್ದವು. ಇಂಗ್ಲೆಂಡ್​ನ ಬ್ಯಾಟಿಂಗ್ ಲೈನ್ಅಪ್​​ನ ಆಧಾರಸ್ತಂಭವಾಗಿರುವ ರೂಟ್, ಟೆಸ್ಟ್ ಕ್ರಿಕೆಟ್​​ನಲ್ಲಿ 10 ನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಈ ಸರಣಿ ಪ್ರಾರಂಭಿಸಿದ್ದರು. ಲಾರ್ಡ್ಸ್​ನಲ್ಲಿ ನಡೆದ ಮೊದಲ ಟೆಸ್ಟ್​ನಲ್ಲಿ ಅವರು ಸೀಮಿತ ಅವಕಾಶಗಳನ್ನು ಪಡೆದುಕೊಂಡಿದ್ದರು. ಒಮ್ಮೆ ಮಾತ್ರ ಬ್ಯಾಟಿಂಗ್ ಮಾಡಿದ್ದರು. ಆದಾಗ್ಯೂ, ಟ್ರೆಂಟ್ ಬ್ರಿಜ್​​ನಲ್ಲಿ ನಡೆದ ಎರಡನೇ ಟೆಸ್ಟ್​​ನಲ್ಲಿ ಅವರು ಶ್ರೀಲಂಕಾದ ಆಟಗಾರ ಮಹೇಲಾ ಜಯವರ್ಧನೆ ಮತ್ತು ವೆಸ್ಟ್ ಇಂಡೀಸ್​​ನ ಶಿವನಾರಾಯಣ್ ಚಂದ್ರಪಾಲ್ ಅವರನ್ನು ಹಿಂದಿಕ್ಕಿದ್ದರು. ಇದರಲ್ಲಿ ಅವರ 32 ನೇ ಟೆಸ್ಟ್ ಶತಕವೂ ಸೇರಿದೆ.

ಫಾರ್ಮ್​ಗೆ ಮರಳಿದ ರೂಟ್​

ಇಂಗ್ಲೆಂಡ್​ನ ಮಾಜಿ ನಾಯಕ ಜೋ ರೂಟ್ ಟೆಸ್ಟ್ ಕ್ರಿಕೆಟ್​ನಲ್ಲಿ ತಮ್ಮ ಫಾರ್ಮ್ ಮರಳಿ ಪಡೆದಿದ್ದಾರೆ. ತವರಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪ್ರಸ್ತುತ ಮೂರು ಪಂದ್ಯಗಳ ಸರಣಿಯಲ್ಲಿ, ಅವರು ಇಲ್ಲಿಯವರೆಗೆ ಒಂದು ಶತಕ ಮತ್ತು ಅರ್ಧಶತಕವನ್ನು ಗಳಿಸುವ ಮೂಲಕ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಟೆಸ್ಟ್ ಕ್ರಿಕೆಟ್​ನಲ್ಲಿ ಸಾರ್ವಕಾಲಿಕ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗುವ ಸಾಮರ್ಥ್ಯ ರೂಟ್ ಹೊಂದಿದ್ದಾರೆ ಎಂದು ಅನೇಕ ಕ್ರಿಕೆಟ್ ಶ್ರೇಷ್ಠರು ಮತ್ತು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 32 ಶತಕಗಳು ಮತ್ತು 62 ಅರ್ಧಶತಕಗಳನ್ನು ಹೊಂದಿರುವ ಅವರ ದಾಖಲೆ ಸ್ವತಃ ಮಾತನಾಡುತ್ತಿದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಮತ್ತು ಶತಕಗಳ ದಾಖಲೆಯನ್ನು ರೂಟ್ ಹೊಂದಿದ್ದಾರೆ.

Exit mobile version