ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ (Paris Olympics 2024) ಶೂಟಿಂಗ್ ವಿಭಾಗದಲ್ಲಿ 2 ಐತಿಹಾಸಿಕ ಕಂಚಿನ ಪದಕ ಗೆದ್ದ ಶೂಟರ್ ಮನು ಭಾಕರ್ (Manu Bhaker) ಅವರು ಬುಧವಾರ (ಆಗಸ್ಟ್ 7) ಭಾರತಕ್ಕೆ ಆಗಮಿಸಿದ್ದಾರೆ. ಅವರು ದೆಹಲಿಯ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಲೇ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಹೂವಿನ ಹಾರ ಮತ್ತು ಸಿಹಿ ತಿನ್ನಿಸುವ ಮೂಲಕ ಭರ್ಜರಿ ವೆಲ್ಕಮ್ ಮಾಡಲಾಯಿತು. ಇದಾದ ಬಳಿಕ ಬಾಲಿವುಡ್ ನಟ ಜಾನ್ ಅಬ್ರಾಹಂ ಅವರು ಮನು ಭಾಕರ್ ಅವರನ್ನು ಭೇಟಿಯಾಗಿದ್ದು, ಅವರ ಪದಕಗಳನ್ನು ನಟ ಮುಟ್ಟಿದ್ದು ಈಗ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಮನು ಭಾಕರ್ ಜತೆಗಿನ ಫೋಟೊವನ್ನು ಜಾನ್ ಅಬ್ರಾಹಂ ಅವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅವರು ಮನು ಭಾಕರ್ ಅವರ ಒಂದು ಪದಕವನ್ನು ಕೈಯಲ್ಲಿ ಹಿಡಿದಿರುವುದು ಈಗ ಜನರ ಆಕ್ರೋಶಕ್ಕೆ ಕಾರಣವಾಗಿದೆ. “ಒಲಿಂಪಿಕ್ಸ್‌ನಲ್ಲಿ ಮನು ಭಾಕರ್ ಅವರು ಪದಕಗಳನ್ನು ಗೆದ್ದು ಭಾರತಕ್ಕೆ ಹೆಮ್ಮೆ ತಂದಿದ್ದಾರೆ. ಅವರು ಗೆದ್ದಿರುವ ಪದಕಗಳನ್ನು ನೀವೇ ಗೆದ್ದಿರುವಂತೆ ಹಿಡಿದುಕೊಂಡು ಪೋಸ್ ನೀಡುವುದು ಸಮಂಜಸವಲ್ಲ” ಎಂದು ಜನ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
John Abraham meeta the Champion Manu Bhaker#GOLD #ManuBhaker pic.twitter.com/EgFSdVTYv1
— Aaksha Singh (@AakshaSingh21) August 7, 2024
22 ವರ್ಷದ ಮನು ಭಾಕರ್ ಇದಕ್ಕೂ ಮುನ್ನ ಮಹಿಳೆಯರ ವೈಯಕ್ತಿಕ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಮತ್ತು ಸರಬ್ಜೋತ್ ಸಿಂಗ್ ಜತೆಗೂಡಿ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ಸ್ಪರ್ಧೆಯಲ್ಲೂ ಕಂಚಿನ ಪದಕ ಜಯಿಸುವ ಮೂಲಕ ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲೇ ಒಂದೇ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಜಯಿಸಿದ ಭಾರತದ ಮೊದಲ ಕ್ರೀಡಾಪಟು ಎನ್ನುವ ಐತಿಹಾಸಿಕ ದಾಖಲೆ ನಿರ್ಮಿಸಿದ್ದರು. 25 ಮೀ. ಪಿಸ್ತೂಲ್ ಶೂಟಿಂಗ್ ಫೈನಲ್ ಪಂದ್ಯದಲ್ಲಿ ನಾಲ್ಕನೇ ಸ್ಥಾನ ಪಡೆಯುವ ಮೂಲಕ ಹ್ಯಾಟ್ರಿಕ್ ಪದಕ ಗೆಲ್ಲುವ ಅವಕಾಶದಿಂದ ವಂಚಿತರಾಗಿದ್ದರು.
ಕಳೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಕನಸಿನೊಂದಿಗೆ ಟೋಕಿಯೋಗೆ ಆಗಮಿಸಿದ್ದ ಮನು ಭಾಕರ್ಗೆ ಅದೃಷ್ಟ ಕೈಕೊಟ್ಟಿತ್ತು. ಕೂಟದ ಮೊದಲ ಸ್ಪರ್ಧೆಯಲ್ಲೇ ಅವರ ಪಿಸ್ತೂಲ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ಅವರಿಗೆ ಫೈನಲ್ಗೇರುವ ಅವಕಾಶ ಕೈತಪ್ಪಿತ್ತು. ಮೊದಲ ಸುತ್ತಿನಲ್ಲಿ ಎದುರಾಗ ಈ ಆಘಾತದಿಂದ ಚೇತರಿಕೊಳ್ಳದ ಮನು ಆ ಬಳಿಕ ಆಡಿದ 2 ಸ್ಪರ್ಧೆಗಳಲ್ಲಿಯೂ ಏಕಾಗ್ರತೆ ಸಾಧಿಸಲು ವಿಫಲರಾಗಿ ಸೋಲು ಕಂಡಿದ್ದರು. ಅಂದಿನ ಸೋಲಿನಿಂದ ಮನನೊಂದು ಶೂಟಿಂಗ್ಗೆ ವಿದಾಯ ಹೇಳಲು ಬಯಸಿದ್ದ ಮನು, ತಂದೆಯ ಆತ್ಮವಿಶ್ವಾಸದ ಮಾತಿನಂತೆ ಶೂಟಿಂಗ್ನಲ್ಲಿ ಮುಂದುವರಿದಿದ್ದರು. ಈ ಬಾರಿ ಪ್ಯಾರಿಸ್ನಲ್ಲಿ 2 ಪದಕ ಗೆದ್ದು ಭಾರತೀಯ ಒಲಿಂಪಿಕ್ಸ್ ಕ್ರೀಡಾ ಇತಿಹಾಸದಲ್ಲಿ ತಮ್ಮ ಹೆಸರನ್ನು ದಾಖಲಿಸಿದ್ದಾರೆ.
ಇದನ್ನೂ ಓದಿ: Manu Bhaker: ಅವಳಿ ಒಲಿಂಪಿಕ್ಸ್ ಪದಕ ವಿಜೇತೆ ಮನು ಭಾಕರ್ಗೆ ತವರಿನಲ್ಲಿ ಅದ್ಧೂರಿ ಸ್ವಾಗತ