ನ್ಯೂಯಾರ್ಕ್: ಶ್ವೇತಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ(Prime Minister Narendra Modi) ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್(US President Joe Biden) ಅವರು ಆಯೋಜಿಸಿದ್ದ ಔತಣಕೂಟದಲ್ಲಿ ಮೋದಿ ಅವರು ಬೈಡೆನ್ ದಂಪತಿಯೊಂದಿಗೆ ಮಾತುಕತೆ ನಡೆಸುತ್ತಿರುವ ಫೋಟೊವನ್ನು ಡಬ್ಲ್ಯುಡಬ್ಲ್ಯುಇ(WWE) ರಸ್ಲೆರ್ ಜಾನ್ ಸೀನಾ(John Cena) ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ವೃತ್ತಿಪರ ಕುಸ್ತಿಪಟು ಆಗಿರುವ ಜಾನ್ ಸೀನಾ ಅವರ ಟ್ರೇಡ್ ಮಾರ್ಕ್ ಶೈಲಿಯಾಗಿರುವ “ಯೂ ಕಾಂಟ್ ಸೀ ಮೀ” ಎಂಬ ರೀತಿಯಲ್ಲಿಯೇ ಮೋದಿ ಅವರು ಮಾತಿನ ಬರದಲ್ಲಿ ಕೈ ಮೇಲಿತ್ತಿದ ಫೋಟೊವನ್ನು ಶೇರ್ ಮಾಡಿದ್ದಾರೆ. ಈ ಮೂಲಕ ತಮ್ಮದೇ ಶೈಲಿಯನ್ನು ಮೋದಿ ಕೂಡ ಅನುಸರಿಸಿದ್ದಾರೆ ಎಂಬ ಅರ್ಥದಲ್ಲಿ ಅವರು ಈ ಫೋಟೊವನ್ನು ಹಂಚಿಕೊಂಡಿದ್ದಾರೆ. ಸೀನಾ ಪೋಸ್ಟ್ ಕಂಡ ಅನೇಕ ಮೋದಿ ಅಭಿಮಾನಿಗಳು “ನೆವರ್ ಗಿವ್ ಆಪ್” ಎಂದು ಕಮೆಂಟ್ ಮಾಡಿದ್ದಾರೆ. ಇದು ಸೀನಾ ಅವರ ಫೇಮಸ್ ಡೈಲಾಗ್ ಆಗಿದೆ. ಜಾನ್ ಸೀನಾ ಅವರು ಮೋದಿ ಅವರ ಅಭಿಮಾನಿಯೂ ಆಗಿದ್ದಾರೆ.
ಈ ಔತಣಕೂಟದಲ್ಲಿ ಪ್ರಮುಖ ಭಾರತೀಯ ಮೂಲದ ಉದ್ಯಮಿಗಳಾದ, ಸುಂದರ್ ಪಿಚೈ(Sundar Pichai), ಅಂಜಲಿ ಪಿಚೈ ದಂಪತಿ, ಸತ್ಯ ನಾಡೆಲ್ಲಾ, ಇಂದ್ರಾ ನೂಯಿ, ಆಪಲ್ ಸಿಇಒ ಟಿಮ್ ಕುಕ್ ಸಹ ಅತಿಥಿಯಾಗಿದ್ದರು. ಇವರ ಜತೆಗೆ ವಿದೇಶಾಂಗ ಸಚಿವ ಡಾ.ಎಸ್ ಜೈಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ವಿದೇಶಾಂಗ ಕಾರ್ಯದರ್ಶಿ ವಿನಯ್ ಮೋಹನ್ ಕ್ವಾತ್ರಾ ಸೇರಿದಂತೆ ಭಾರತ ಸರ್ಕಾರದ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಜೂನ್ 21ರಿಂದ 24ರ ವರೆಗೆ ಅಮೆರಿಕ ಪ್ರವಾಸದಲ್ಲಿದ್ದ ಮೋದಿ ಜೂನ್ 21ರಂದು ನ್ಯೂಯಾರ್ಕ್ನ ವಿಶ್ವಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದರು. ಜೂನ್ 22ರಂದು ಶ್ವೇತಭವನದಲ್ಲಿ ವಿಧ್ಯುಕ್ತ ಸ್ವಾಗತ ಸ್ವೀಕರಿಸಿದ್ದರು.
ಇದನ್ನೂ ಓದಿ Modi Egypt Visit: ಮೋದಿಗೆ ಮತ್ತೊಂದು ಗರಿ; ಈಜಿಪ್ಟ್‌ನ ಅತ್ಯುನ್ನತ ‘ಆರ್ಡರ್ ಆಫ್ ದಿ ನೈಲ್’ ಪ್ರಶಸ್ತಿ ಪ್ರದಾನ
ಅದೇ ದಿನ ಹೈಟೆಕ್ ಹ್ಯಾಂಡ್‌ಶೇಕ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ಪ್ರತಿಭೆ ಮತ್ತು ತಂತ್ರಜ್ಞಾನದ ಒಗ್ಗೂಡುವಿಕೆಯಿಂದ ಉಭಯ ದೇಶಗಳ ಉಜ್ವಲ ಭವಿಷ್ಯ ಸಾಧ್ಯವಾಗಲಿದೆʼʼ ಎಂದಿದ್ದರು. ʼʼಭಾರತ ಮತ್ತು ಯುಎಸ್ ನಡುವಿನ ಸಹಕಾರವು ಎರಡೂ ದೇಶಗಳ ಜನರಿಗೆ ಮಾತ್ರವಲ್ಲದೆ ಇಡೀ ಜಗತ್ತಿಗೆ ಸಂಬಂಧಿಸಿದೆ. ನಮ್ಮ ಪಾಲುದಾರಿಕೆಯು ಹವಾಮಾನ ಬದಲಾವಣೆಯನ್ನು ನಿಭಾಯಿಸುವುದು, ಬ್ರಹ್ಮಾಂಡವನ್ನು ಅನ್ವೇಷಿಸುವುದು, ಜನರನ್ನು ಬಡತನದಿಂದ ಮೇಲೆತ್ತುವುದು, ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವುದು ಮುಂತಾದ ಕ್ಷೇತ್ರಗಳಿಗೂ ವ್ಯಾಪಿಸಿದೆʼʼ ಎಂದು ಅಮೆರಿಕ ಅಧ್ಯಕ್ಷ ಬೈಡೆನ್ ನುಡಿದಿದ್ದರು.
ವಿಶೇಷ ಟಿ-ಶರ್ಟ್ ಉಡುಗೊರೆ ನೀಡಿದ್ದ ಬೈಡೆನ್
ಟಿ-ಶರ್ಟ್‌ನಲ್ಲಿ ʼದಿ ಫ್ಯೂಚರ್ ಈಸ್ ಎಐʼ (The Future is AI) ಎಂದು ಬರೆದಿದೆ. ಅದರ ಕೆಳಗಡೆ ʼAmerica & Indiaʼ ಎಂದು ಕೂಡ ಬರೆಯಲಾಗಿದೆ. ಮೋದಿಯವರು ಗುರುವಾರ US ಕಾಂಗ್ರೆಸ್‌ನಲ್ಲಿ ಮಾಡಿದ ಭಾಷಣದಲ್ಲಿ ಇದನ್ನು ಉಲ್ಲೇಖಿಸಿದ್ದರು. “ಕಳೆದ ಕೆಲವು ವರ್ಷಗಳಲ್ಲಿ, ಕೃತಕ ಬುದ್ಧಿಮತ್ತೆಯಲ್ಲಿ (AI) ಅನೇಕ ಪ್ರಗತಿಗಳು ಆಗಿವೆ. ಅದೇ ಸಮಯದಲ್ಲಿ ಇನ್ನೂ ಹೆಚ್ಚಿನ ಬೆಳವಣಿಗೆ ಆಗಿರುವ ಮತ್ತೊಂದು ಸಹಭಾಗಿತ್ವ ಎಂದರೆ AI- ಅಮೆರಿಕ ಮತ್ತು ಭಾರತʼʼ ಎಂದಿದ್ದರು. ಅದನ್ನೇ ಬರೆಸಿದ ಟಿ-ಶರ್ಟನ್ನು ಬೈಡೆನ್ ಮೋದಿಯವರಿಗೆ ಉಡುಗೊರೆಯಾಗಿ ನೀಡಿದ್ದರು.