ಮುಂಬಯಿ: ಮುಂಬರುವ ಐಪಿಎಲ್ (IPL 2023) ಟೂರ್ನಿಯು ಆಟಗಾರರ ಗಾಯದ ಸಮಸ್ಯೆಯಿಂದಾಗಿ ಸುದ್ದಿಯಲ್ಲಿದೆ. ಪ್ರಮುಖ ಆಟಗಾರರು ನಾನಾ ಬಗೆಯ ಗಾಯಗಳ ಕಾರಣಕ್ಕೆ ಅಲಭ್ಯತೆಯನ್ನು ಪ್ರಕಟಿಸಿದ್ದಾರೆ. ಅಂತೆಯೇ ಪಂಜಾಬ್ ಕಿಂಗ್ಸ್ ತಂಡದ ಪ್ರಮುಖ ಆಟಗಾರರೆನಿಸಿಕೊಂಡಿರುವ ಜಾನಿ ಬೇರ್ಸ್ಟೋವ್ ಕೂಡ ಈ ಬಾರಿ ಆಡುವುದಿಲ್ಲ. ಕಾಲಿನ ಮೂಳೆ ಮುರಿತಕ್ಕೆ ಒಳಗಾಗಿರುವ ಅವರು ಸಂಪೂರ್ಣವಾಗಿ ಫಿಟ್ ಎನಿಸಿಕೊಳ್ಳದ ಕಾರಣ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಅವರಿಗೆ ನಿರಾಕ್ಷೇಪಣಾ ಪತ್ರ ಕೊಟ್ಟಿಲ್ಲ. ಹೀಗಾಗಿ ಅವರಿಗೆ ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂದು ಇಎಸ್ಪಿಎನ್ ಕ್ರಿಕ್ ಇನ್ಫೋ ವರದಿ ಮಾಡಿದೆ. ಬೇರ್ಸ್ಟೋವ್ ಬದಲಿಗೆ ಆಸ್ಟ್ರೇಲಿಯಾದ ಯುವ ಬ್ಯಾಟರ್ ಮ್ಯಾಥ್ಯೂ ಶಾರ್ಟ್ಸ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ.
ಜಾನಿ ಬೇರ್ಸ್ಟೋವ್ ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಗಾಯಗೊಂಡಿದ್ದರು. ಆದರೆ, ಹಲವು ತಿಂಗಳ ಸುಧಾರಣೆ ಬಳಿಕ ಇತ್ತೀಚೆಗೆ ಯಾರ್ಕ್ಶೈರ್ನಲ್ಲಿ ನೆಟ್ಪ್ರಾಕ್ಟೀಸ್ ಮಾಡಿದ್ದರು. ಹೀಗಾಗಿ ಇಸಿಬಿಯ ಪ್ರತಿಕ್ರಿಯೆಗಾಗಿ ಬಿಸಿಸಿಐ ಕಾದಿತ್ತು. ಬೇರ್ಸ್ಟೋವ್ ಆಡಲು ಲಭ್ಯರಿರುತ್ತಾರೆ ಎಂಬ ನಿರೀಕ್ಷೆಯನ್ನು ಪಂಜಾಬ್ ಕಿಂಗ್ಸ್ ಕೂಡ ವ್ಯಕ್ತಪಡಿಸಿತ್ತು. ಇಸಿಬಿಯಿಂದ ಯಾವುದೇ ಪ್ರತಿಕ್ರಿಯೆ ಬರದ ಕಾರಣ, ಬದಲಿ ಆಟಗಾರನನ್ನು ಸೇರಿಸಿಕೊಳ್ಳುವಂತೆ ಬಿಸಿಸಿಐ, ಪಂಜಾಬ್ ಕಿಂಗ್ಸ್ ತಂಡಕ್ಕೆ ಸೂಚನೆ ಕೊಟ್ಟಿದೆ. ಹೀಗಾಗಿ ಇನ್ನೂ ಅಂತಾರಾಷ್ಟ್ರೀಯ ಪಂದ್ಯವನ್ನೇ ಆಡದ ಆಸ್ಟ್ರೇಲಿಯಾದ ಬ್ಯಾಟರ್ ಅನ್ನು ಹುಡುಕಿದ್ದಾರೆ.
ಇದನ್ನೂ ಓದಿ :IPL 2023 : ಐಪಿಎಲ್ ಫ್ರಾಂಚೈಸಿಗಳಿಗೆ ಗಾಯದ ಗೋಳು ; ಇದುವರೆಗೆ 10 ಆಟಗಾರರು ಔಟ್!
ವಿಕೆಟ್ಕೀಪರ್ ಬ್ಯಾಟರ್ ಜಾನಿ ಬೇರ್ಸ್ಟೋವ್ ಐಪಿಎಲ್ನಲ್ಲಿ ಉತ್ತಮ ಸಾಧನೆ ಹೊಂದಿದ್ದಾರೆ. ಆರಂಭಿಕ ಬ್ಯಾಟರ್ ಆಗಿ ಕಣಕ್ಕಿಳಿಯುವ ಅವರು ಪವರ್ಪ್ಲೇನಲ್ಲಿ ರನ್ ಗಳಿಸುವುದರಲ್ಲಿ ನಿಸ್ಸೀಮರು. ಹೀಗಾಗಿ ಪಂಜಾಬ್ ಕಿಂಗ್ಸ್ ತಂಡ ಅವರ ಸೇವೆಯ ನಿರೀಕ್ಷೆಯಲ್ಲಿತ್ತು. ಇದೀಗ ಅನುಭವಿ ಆಟಗಾರನ ಅಲಭ್ಯತೆಯಿಂದಾಗಿ ಪಂಜಾಬ್ ಬಳಗಕ್ಕೆ ಹಿನ್ನಡೆ ಉಂಟಾಗಿದೆ.
ಏನಾಗಿತ್ತು ಬೇರ್ಸ್ಟೋವ್ಗೆ?
ಕಳೆದ ವರ್ಷ ಸೆಪ್ಟೆಂಬರ್ 2ರಂದು ಬೇರ್ಸ್ಟೋವ್ ಅವರ ಕಾಲು ಮೂಳೆ ಮುರಿತವಾಗಿತ್ತು. ದಕ್ಷಿಣ ಆಫ್ರಿಕಾ ವಿರುದ್ಧದ ತವರಿನ ಸರಣಿಯ ಕೊನೇ ಪಂದ್ಯದ ಎರಡು ದಿನ ಮೊದಲು ಗೆಳೆಯರ ಜತೆ ಗಾಲ್ಫ್ ಆಡುವಾಗ ಎಡವಿ ಬಿದ್ದಿದ್ದರು. ಈ ವೇಳೆ ಅವರ ಕಾಲಿನ ಮೂಳೆ ಮುರಿತವಾಗುವ ಜತೆಗೆ ಮಂಡಿಗೂ ಏಟಾಗಿತ್ತು. ಕೆಲವು ದಿನಗಳ ಬಳಿಕ ಅವರು ಸರ್ಜರಿಗೆ ಒಳಗಾಗಿದ್ದರು. ಈ ಗಾಯದಿಂದಾಗಿ ಬೇರ್ಸ್ಟೋವ್ ಒಂದು ವರ್ಷದಿಂದ ಹಲವಾರು ಟೂರ್ನಿಗಳಲ್ಲಿ ಆಡುವ ಅವಕಾಶ ಕಳೆದುಕೊಂಡಿದ್ದಾರೆ. ಟಿ20 ವಿಶ್ವ ಕಪ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ನ್ಯೂಜಿಲ್ಯಾಂಡ್ ಹಾಗೂ ಬಾಂಗ್ಲಾದೇಶ ಪ್ರವಾಸದಲ್ಲಿ ಆಡುವ ಅವಕಾಶ ನಷ್ಟ ಮಾಡಿಕೊಂಡಿದ್ದರು. ಅದೇ ರೀತಿ ಐಎಲ್ಟಿಯಲ್ಲಿ ಅಬುಧಾಬಿ ನೈಟ್ರೈಡರ್ಸ್ ತಂಡದಲ್ಲೂ ಸ್ಥಾನ ಪಡೆದಿದ್ದರು.
ಬೇರ್ಸ್ಟೋವ್ ಅವರಲ್ಲದೆ ಐಪಿಎಲ್ನಲ್ಲಿ ಹಲವಾರು ಆಟಗಾರರು ಗಾಯದ ಸಮಸ್ಯೆಯಿಂದ ಆಡುವ ಅವಕಾಶ ಕಳೆದಕೊಂಡಿದ್ದಾರೆ. ವಿಲ್ ಜಾಕ್, ಜಸ್ಪ್ರಿತ್ ಬುಮ್ರಾ, ಶ್ರೇಯಸ್ ಅಯ್ಯರ್ ಸೇರಿದಂತೆ ಪ್ರಮುಖ ಆಟಗಾರರ ಅಲಭ್ಯತೆಯಿಂದಾಗಿ ಈ ಬಾರಿಯ ಐಪಿಎಲ್ನ ಕಳೆಗುಂದಲಿದೆ ಎಂದು ಹೇಳಲಾಗುತ್ತಿದೆ.