Site icon Vistara News

Junior Asia Cup hockey: ಇಂದು ಭಾರತ-ಪಾಕ್​ ಫೈನಲ್​ ಕದನ

India vs Pakistan hockey final

ಸಲಾಲ (ಒಮಾನ್‌): ಇಲ್ಲಿ ನಡೆಯುತ್ತಿರುವ ಜೂನಿಯರ್‌ ಏಷ್ಯಾ ಕಪ್‌ ಹಾಕಿ(Junior Asia Cup hockey) ಟೂರ್ನಿಯಲ್ಲಿ ಭಾರತ ತಂಡ ಕೊರಿಯಾವನ್ನು 9-1 ಅಂತರದಿಂದ ಮಣಿಸಿ ಫೈನಲ್‌ಗೆ ಲಗ್ಗೆ ಇಟ್ಟಿತು. ಇಂದು ನಡೆಯುವ ಫೈನಲ್​ ಕದನದಲ್ಲಿ ಸಂಪ್ರದಾಯಿಕ ಬದ್ಧ ಎದುರಾಳಿ ಪಾಕಿಸ್ತಾನದ ಸವಾಲನ್ನು ಎದುರಿಸಲಿದೆ.

ಟೂರ್ನಿಯ ಪ್ರತಿ ಪಂದ್ಯದಲ್ಲೂ ಪ್ರಾಬಲ್ಯ ಸಾಧಿಸುತ್ತಾ ಬಂದಿರುವ ಭಾರತ ಬುಧವಾರ ನಡೆದ ಸೆಮಿಫೈನಲ್​ ಪಂದ್ಯದಲ್ಲಿ ಕೊರಿಯಾ ವಿರುದ್ಧ ಅಮೋಘ ಪ್ರದರ್ಶನ ತೋರಿತು. ಬಾಬಿ ಸಿಂಗ್ ಧಾಮಿ ಸೆಮಿಫೈನಲ್‌ನಲ್ಲಿ ಮೂರು ಗೋಲು ಗಳಿಸಿ ಮಿಂಚಿದ್ದಾರೆ. ಸದ್ಯ ಸುನಿತ್ ಲಾಕ್ರಾ, ಅರ್ಜಿತ್ ಸಿಂಗ್ ಹುಂದಾಲ್, ಅಂಗದ್ ಬೀರ್ ಸಿಂಗ್, ಉತ್ತಮ್ ಸಿಂಗ್, ವಿಷ್ಣುಕಾಂತ್ ಸಿಂಗ್ ಮತ್ತು ಶಾರದಾನಂದ್ ತಿವಾರಿ ಉತ್ತಮ ಫಾರ್ಮ್​ನಲ್ಲಿರುವುದು ಭಾರತ ತಂಡಕ್ಕೆ ಪ್ಲಸ್​ ಪಾಯಿಂಟ್​.

ಏಷ್ಯನ್ ಚಾಂಪಿಯನ್ ಭಾರತ ತನ್ನ ನಾಲ್ಕನೇ ಪ್ರಶಸ್ತಿಯ ನಿರೀಕ್ಷೆಯಲ್ಲಿದೆ. 2015 ರ ಫೈನಲ್‌ನಲ್ಲಿ ಪಾಕಿಸ್ತಾನವನ್ನು 6-2 ಅಂತರದಲ್ಲಿ ಸೋಲಿಸಿ ಭಾರತ ಚಿನ್ನದ ಪದಕಕ್ಕೆ ಕೊರಳೊಡ್ಡಿತ್ತು. ಇಂದು ನಡೆಯುವ ಉಭಯ ತಂಡಗಳ ಫೈನಲ್​ ಪಂದ್ಯ ಭಾರತೀಯ ಕಾಲಮಾನ ರಾತ್ರಿ 9:30 ಕ್ಕೆ ಆರಂಭವಾಗಲಿದೆ.

ಲೀಗ್ ಹಂತದ ಮುಖಾಮುಖಿಯಲ್ಲಿ ಇತ್ತಂಡಗಳು 1-1 ಗೋಲ್​ಗಳ ಅಂತರದಿಂದ ಪಂದ್ಯವನ್ನು ಡ್ರಾ ಗೊಳಿಸಿತ್ತು. ಹೀಗಾಗಿ ಫೈನಲ್​ ಪಂದ್ಯವೂ ತೀವ್ರ ಪೈಪೋಟಿಯಿಂದ ಕೂಡಿರುವು ಸಾಧ್ಯತೆ ಅಧಿಕವಾಗಿದೆ. ಲೀಗ್​ ಹಂತದ “ಎ’ ವಿಭಾಗದಲ್ಲಿ ಭಾರತ ಮತ್ತು ಪಾಕಿಸ್ಥಾನ ತಂಡಗಳೆರಡೂ ಅಜೇಯ ಅಭಿಯಾನ ಕಾಯ್ದುಕೊಂಡು ಬಂದಿದ್ದವು. ಆದರೆ ಗೋಲ್​ಗಳ ಅಂತರದಲ್ಲಿ ಭಾರತ ಅಗ್ರಸ್ಥಾನ ಪಡೆದರೆ ಪಾಕ್​ ದ್ವಿತೀಯ ಸ್ಥಾನ ಪಡೆದಿತ್ತು.

ಇದನ್ನೂ ಓದಿ Thailand Open: ಸೈನಾ, ಕಿರಣ್‌ ಜಾರ್ಜ್‌ ಮುನ್ನಡೆ; ಸಿಂಧು, ಶ್ರೀಕಾಂತ್‌, ಪ್ರಣೀತ್​ಗೆ ಸೋಲು

ಮೂರು ಬಾರಿ ಮುಖಾಮುಖಿ

ಭಾರತ ಹಾಗೂ ಪಾಕಿಸ್ತಾನ ತಂಡಗಳು ಈ ಹಿಂದೆ ಮೂರು ಬಾರಿ ಜೂನಿಯರ್ ಏಷ್ಯಾಕಪ್‌ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದವು. 1996 ರಲ್ಲಿ ಪಾಕಿಸ್ತಾನ ತಂಡ ಚಾಂಪಿಯನ್ ಆಗಿದ್ದರೆ, ಭಾರತ 2004 ರಲ್ಲಿ ಮೊದಲ ಗೆಲುವು ದಾಖಲಿಸಿತ್ತು. 2015 ರಲ್ಲಿ ಮಲೇಷ್ಯಾದಲ್ಲಿ ನಡೆದ ಕೊನೆಯ ಆವೃತ್ತಿಯಲ್ಲಿ ಭಾರತ ತಂಡ ಪಾಕ್​ ಆಘಾತವಿಕ್ಕಿ ಪ್ರಶಸ್ತಿ ಗೆದ್ದಿತ್ತು. ಕೋವಿಡ್​ ಕಾರಣದಿಂದಾಗಿ 2021 ರ ಆವೃತ್ತಿಯನ್ನು ಮುಂದೂಡಲಾಗಿತ್ತು.

Exit mobile version