Site icon Vistara News

IPL 2023 : ಲಕ್ನೊ ತಂಡದ ಹೆಡ್​ ಕೋಚ್​ ಆಗಲಿದ್ದಾರೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ

Justin Langer

ಲಖನೌ: ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮತ್ತು ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಐಪಿಎಲ್ ಫ್ರಾಂಚೈಸಿ ಲಕ್ನೋ ಸೂಪರ್ ಜೈಂಟ್ಸ್​ನ ಮುಂದಿನ ಮುಖ್ಯ ತರಬೇತುದಾರರಾಗಿ ಆಯ್ಕೆಯಾಗುವ ಸಾಧ್ಯತೆಗಳಿವೆ. 2023 ರ (IPL 2023) ಆವೃತ್ತಿಯ ಮುಕ್ತಾಯದ ನಂತರ ಫ್ರಾಂಚೈಸಿಯೊಂದಿಗಿನ ಎರಡು ವರ್ಷಗಳ ಒಪ್ಪಂದವು ಕೊನೆಗೊಂಡ ಕಾರಣ ಆಂಡಿ ಫ್ಲವರ್ ತಮ್ಮ ಸೇವೆಯಿಂದ ವಿಮುಖರಾಗಲಿದ್ದಾರೆ. ಹೀಗಾಗಿ ಅವರ ಉತ್ತರಾಧಿಕಾರಿಯ ಹುಡುಕಾಟದಲ್ಲಿದ್ದ ಫ್ರಾಂಚೈಸಿ ಆಸೀಸ್​ ಮಾಜಿ ಕ್ರಿಕೆಟಿಗನಿಗೆ ಮಣೆ ಹಾಕುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.

ಪ್ರಸ್ತುತ ಇಂಗ್ಲೆಂಡ್​​ನಲ್ಲಿ ನಡೆಯುತ್ತಿರುವ ಆ್ಯಶಸ್ ಸರಣಿಯ ವೀಕ್ಷಕ ವಿವರಣೆಗಾರ ತಂಡದ ಭಾಗವಾಗಿರುವ ಜಸ್ಟಿನ್ ಲ್ಯಾಂಗರ್ ಅವರನ್ನು ಎಲ್ಎಸ್​ಜಿ ಮ್ಯಾನೇಜ್ಮೆಂಟ್ ಸಂಪರ್ಕಿಸಿದೆ ಎಂದು ಕ್ರಿಕ್​ಬಜ್​ ವರದಿ ಮಾಡಿದೆ. ಹೊಸ ಬೆಳವಣಿಗೆಯ ಬಗ್ಗೆ ಪ್ರಾಂಚೈಸಿ ಮತ್ತು ಲ್ಯಾಂಗರ್ ಯಾವುದೇ ಮಾಹಿತಿ ನೀಡದ ಹೊರತಾಗಿಯೂ ಈ ಸುದ್ದಿಗೆ ರೆಕ್ಕೆ ಪುಕ್ಕಗಳು ಬಂದಿವೆ. ಲಕ್ನೋ ಮೂಲದ ಫ್ರಾಂಚೈಸಿ ಮಾಜಿ ಮುಖ್ಯ ಕೋಚ್ ಆಂಡಿ ಫ್ಲವರ್ ಅವರ ಉತ್ತರಾಧಿಕಾರಿಯಾಗಿ ಲ್ಯಾಂಗರ್ ಅವರನ್ನು ಆಯ್ಕೆ ಮಾಡಲು ಉತ್ಸುಕವಾಗಿದೆ ಎಂಬುದು ತಿಳಿದುಬಂದಿದೆ.

ಆಟಗಾರರು ಮತ್ತು ಕ್ರಿಕೆಟ್ ಆಸ್ಟ್ರೇಲಿಯಾದೊಂದಿಗಿನ ಭಿನ್ನಾಭಿಪ್ರಾಯದ ನಂತರ ಲ್ಯಾಂಗರ್ ಅವರು ಆಸ್ಟ್ರೇಲಿಯಾದ ಮುಖ್ಯ ಕೋಚ್ ಹುದ್ದೆಗೆ ರಾಜೀನಾಮೆ ನೀಡಿದ್ದರು. ಬಳಿಕ 52 ವರ್ಷದ ಈ ಆಟಗಾರ ಯಾವುದೇ ಕೋಚಿಂಗ್ ಹುದ್ದೆಗಳನ್ನು ವಹಿಸಿಕೊಂಡಿಲ್ಲ. ಇದೀಗ ಫ್ರಾಂಚೈಸಿ ಮತ್ತು ಮಾಜಿ ಮುಖ್ಯ ಕೋಚ್ ಮಾತುಕತೆಗೆ ಮುಂದಾಗಿದ್ದರೆ ಎಂದು ಮೂಲವು ಹೇಳಿದೆ. ಮುಂದಿನ ದಿನಗಳಲ್ಲಿ ಪ್ರಕಟಣೆಯನ್ನು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ: IPL 2023 : ಸಿಎಸ್​ಕೆ ಐಪಿಎಲ್​ನ ಅತ್ಯಂತ ಮೌಲ್ಯಯುತ ತಂಡ, ಆರ್​ಸಿಬಿಗೆ ಎಷ್ಟನೇ ಸ್ಥಾನ?

ವಿಶೇಷವೆಂದರೆ, ಸಂಜೀವ್ ಗೋಯೆಂಕಾ ಒಡೆತನದ ಫ್ರ್ಯಾಂಚೈಸ್ ಆಂಡಿ ಫ್ಲವರ್ ಅವರ ಅಡಿಯಲ್ಲಿ ತಮ್ಮ ಎರಡು ಋತುಗಳಲ್ಲಿ ಗಮನಾರ್ಹ ಯಶಸ್ಸನ್ನು ಕಂಡಿದೆ. ಎರಡೂ ಸಂದರ್ಭಗಳಲ್ಲಿ ನಾಕೌಟ್ ಹಂತಗಳಿಗೆ ಅರ್ಹತೆ ಪಡೆದಿದೆ. ಆದಾಗ್ಯೂ, ನಿರ್ಣಾಯಕ ಪಂದ್ಯಗಳಲ್ಲಿ ಆಟಗಾರರು ಸಂದರ್ಭಕ್ಕೆ ತಕ್ಕಂತೆ ಪ್ರದರ್ಶನ ನೀಡಿರಲಿಲ್ಲ.

ಸಿಎಸ್​ಕೆ ಬ್ರಾಂಡ್ ವಾಲ್ಯೂ ಹೆಚ್ಚಳ

ಎಂ.ಎಸ್.ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ದಾಖಲೆಯ 5ನೇ ಐಪಿಎಲ್ ಪ್ರಶಸ್ತಿ ಗೆದ್ದುಕೊಂಡಿದೆ. ಅದೇ ರೀತಿ ಸಿಎಸ್​ಕೆ ಈಗ ಐಪಿಎಲ್​ನ ಅತ್ಯಂತ ಮೌಲ್ಯಯುತ ಐಪಿಎಲ್ ಫ್ರಾಂಚೈಸಿ ಎಂಬ ಖ್ಯಾತಿ ಪಡೆದುಕೊಂಡಿದೆ. ಒಟ್ಟಾರೆಯಾಗಿ ಐಪಿಎಲ್ 2023 ಸ್ಟಾರ್ ಸ್ಪೋರ್ಟ್ಸ್ ಮತ್ತು ಜಿಯೋ ಸಿನೆಮಾದಲ್ಲಿ ದಾಖಲೆಯ ಸಂಖ್ಯೆಯ ವೀಕ್ಷಕರನ್ನು ಪಡೆಯುವ ಮೂಲಕ ಐಪಿಎಲ್​ ಈಗ 26,434 ಕೋಟಿ ರೂಪಾಯಿ ಮೌಲ್ಯವನ್ನು ಪಡೆದುಕೊಂಡಿದೆ. ಹೂಡಿಕೆ ಬ್ಯಾಂಕಿಂಗ್ ಕಂಪನಿ ಹೌಲಿಹಾನ್ ಲೋಕೆ ಈ ಹೊಸ ವರದಿಯನ್ನು ಪ್ರಕಟಿಸಿದೆ.

ಎಂಎಸ್ ಧೋನಿ ಅವರು ಸಿಎಸ್​ಕೆ ತಂಡದ ಪ್ರಗತಿಯ ಪ್ರೇರಕ ಅಂಶವಾಗಿದ್ದಾರೆ. ದೇಶಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಸಿಎಸ್​ಕೆ ತಂಡ ಆಡಿರುವ ಎಲ್ಲಾ ಪಂದ್ಯಗಳು ಪ್ರತಿ ಕ್ರೀಡಾಂಗಣದಲ್ಲಿ ಹೌಸ್​ಫುಲ್ ಆಗಿದ್ದವು. ಇದಲ್ಲದೆ, ಅವರ ಜನಪ್ರಿಯತೆಯ ಆಧಾರದ ಮೇಲೆ ಇತರ ಫ್ರಾಂಚೈಸಿಗಳ ಮೇಲಿನ ಪ್ರಾಯೋಜಕರಿಂದ ಹೆಚ್ಚಿನ ಮೊತ್ತವನ್ನು ಪಡೆಯಲು ಸಾಧ್ಯವಾಗಿದೆ.

ಹಿಂದಿನ ವರ್ಷ 146 ಮಿಲಿಯನ್ ಡಾಲರ್ (1,206 ಕೋಟಿ ರೂಪಾಯಿ) ಗಳಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿ 212 ಮಿಲಿಯನ್ ಡಾಲರ್ (1751 ಕೋಟಿ ರೂಪಾಯಿ) ಮೌಲ್ಯ ಗಳಿಸಿದೆ. ಸಿಎಸ್​ಕೆ ತಂಡ ಕಳೆದ ವರ್ಷದಿಂದ 45.2% ಬೆಳವಣಿಗೆಯನ್ನು ಕಂಡಿದೆ. ವಿರಾಟ್ ಕೊಹ್ಲಿ ಇರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು 195 ಮಿಲಿಯನ್ ಡಾಲರ್ ಗಳಿಕೆಯೊಂದಿಗೆ (1610 ಕೋಟಿ ರೂಪಾಯಿ) ಎರಡನೇ ಸ್ಥಾನದಲ್ಲಿದೆ. ಮುಂಬೈ ಇಂಡಿಯನ್ಸ್ 190 ಮಿಲಿಯನ್ ಡಾಲರ್ (1569 ಕೋಟಿ ರೂಪಾಯಿ) ಮೌಲ್ಯದೊಂದಿಗೆ ಮೂರನೇ ಸ್ಥಾನಕ್ಕೆ ಕುಸಿದಿದೆ.

ಎಂ.ಎಸ್.ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪಾಲ್ಗೊಂಡಿರುವ 14 ಆವೃತ್ತಿಗಳಲ್ಲಿ 10ನೇ ಬಾರಿ ಐಪಿಎಲ್ ಫೈನಲ್ ಪ್ರವೇಶಿಸಿದೆ. 2023ರ ಐಪಿಎಲ್ ಫೈನಲ್ ಪಂದ್ಯದಲ್ಲಿ ಸಿಎಸ್ಕೆ ತಂಡ ಗುಜರಾತ್ ಟೈಟನ್ಸ್ ವಿರುದ್ಧ 5 ವಿಕೆಟ್​ಗಳ ಜಯ ಸಾಧಿಸಿ ಟ್ರೋಫಿ ಗೆದ್ದಿತ್ತು.

Exit mobile version