Site icon Vistara News

Viral Video: ಕಬಡ್ಡಿ ಆಡುತ್ತಿದ್ದಾಗಲೇ ಹೋಯ್ತು ಆಟಗಾರನ ಜೀವ; ಮನ ಕಲಕುವ ದೃಶ್ಯ ಇದು

Kabaddi Player died

ಚೆನ್ನೈ: ಕಬಡ್ಡಿ ಆಟಗಾರನೊಬ್ಬ ಆಟವಾಡುತ್ತಿದ್ದಾಗಲೇ, ಅಲ್ಲೇ ಕಬಡ್ಡಿ ಕೋರ್ಟ್‌ನಲ್ಲೇ ಮೃತಪಟ್ಟಿದ್ದಾನೆ. ಆತನ ಉಸಿರು ನಿಲ್ಲುವ ಕೊನೇ ಕ್ಷಣದ ವಿಡಿಯೋ ವೈರಲ್‌ (Viral Video) ಆಗಿದ್ದು ಮನಕಲಕುವಂತೆ ಇದೆ. ಮೃತ ಆಟಗಾರನನ್ನು ವಿಮಲ್‌ ರಾಜ್‌ ಎಂದು ಗುರುತಿಸಲಾಗಿದ್ದು, 21 ವರ್ಷದ ಹುಡುಗ. ತಮಿಳುನಾಡಿನ ಕದಂಪುಳಿಯಾರ್‌ ಹಳ್ಳಿಯವನು. ಸೇಲಂ ಬಳಿಯ ಖಾಸಗಿ ಕಾಲೇಜೊಂದರಲ್ಲಿ ಬಿಎಸ್‌ಸಿ ಎರಡನೇ ವರ್ಷದಲ್ಲಿ ಓದುತ್ತಿದ್ದ.

ವಿಮಲ್‌ ರಾಜ್‌ಗೆ ಕಬಡ್ಡಿ ಹುಚ್ಚು. ಸೇಲಂನಲ್ಲಿರುವ ಒಂದು ಕಬಡ್ಡಿ ಅಕಾಡೆಮಿಯಲ್ಲಿ ಈತನೂ ಇದ್ದ. ಈ ಕಬಡ್ಡಿ ಅಕಾಡೆಮಿಯಿಂದ ಜುಲೈ 24ರಂದು ರಾತ್ರಿ, ಮಾಂಡಿಕುಪ್ಪಂ ಎಂಬಲ್ಲಿ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿತ್ತು. ಇದರಲ್ಲಿ ವಿಮಲ್‌ ರಾಜ್‌ ಕೂಡ ಭಾಗವಹಿಸಿದ್ದ. ಎರಡು ತಂಡಗಳ ನಡುವೆ ಪಂದ್ಯ ನಡೆಯುತ್ತಿತ್ತು. ವಿಮಲ್‌ ರಾಜ್‌ ತಂಡದ ಕಡೆಯಿಂದ ಒಬ್ಬರು ರೈಡ್‌ಗೆ ಹೋಗಬೇಕಿತ್ತು. (ಅಂದರೆ, ಒಬ್ಬ ಆಟಗಾರ ಎದುರಾಳಿಯ ತಂಡವಿರುವ ಕೋರ್ಟ್‌ಗೆ ಹೋಗಿ ಕಬಡ್ಡಿ ಎಂದು ಉಚ್ಚರಿಸುತ್ತ ಅಲ್ಲಿನ ಯಾರನ್ನಾದರೂ ಔಟ್‌ ಮಾಡಬೇಕು. ಈ ವೇಳೆ ಇವನನ್ನೇ ಎದುರಾಳಿಗಳು ಹಿಡಿದರೆ ಈತನೇ ಔಟ್‌ ಆಗುತ್ತಾನೆ). ಆಗ ವಿಮಲ್‌ ರಾಜ್‌ ಹೋಗಿದ್ದ. ಆತ ಎದುರಾಳಿಗಳನ್ನು ಮುಟ್ಟಿ, ಅವರ ಕೈಗೆ ಸಿಗದಂತೆ ಎತ್ತರಕ್ಕೆ ಹಾಕಿ, ಮಧ್ಯದ ಲೈನ್‌ ಬಳಿ ಬಿದ್ದಿದ್ದಾನೆ. ಆದರೆ ಎದುರಾಳಿ ತಂಡದ ಆಟಗಾರ ವಿಮಲ್‌ ರಾಜ್‌ನನ್ನು ಹಿಡಿಯಲು ಹೋಗಿ ಆತನ ಎದೆಗೆ ತನ್ನ ಮೊಣಕಾಲು ತಾಗಿಸಿದ್ದಾನೆ. ಅಷ್ಟೇ ಅಲ್ಲ, ಅವನ ಮೈಮೇಲೆ ಹತ್ತಿ ಕುಳಿತಿದ್ದಾನೆ. ಇದರಿಂದಾಗಿ ವಿಮಲ್‌ ಅಸ್ವಸ್ಥನಾಗಿದ್ದ. ನಂತರ ಮೇಲೆಳಲು ಪ್ರಯತ್ನಿಸಿ, ಸಾಧ್ಯವಾಗದೆ ಅಲ್ಲಿಯೇ ಕುಸಿದು ಬಿದ್ದಿದ್ದಾನೆ. ಸಹ ಆಟಗಾರರು ಅವನನ್ನು ಆಸ್ಪತ್ರೆಗೆ ದಾಖಲಿಸಿದ್ದರೂ, ಅಷ್ಟರಲ್ಲೇ ಜೀವ ಹೋಗಿಯಾಗಿತ್ತು. ಈ ದೃಶ್ಯದ ವಿಡಿಯೋ ವೈರಲ್‌ ಆಗಿದೆ.

ಮುತಾಂಡಿಕುಪ್ಪರಂ ಪೊಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ವಿಮಲ್‌ ರಾಜ್‌ ಮೃತದೇಹವನ್ನು ಪೋಸ್ಟ್‌ಮಾರ್ಟಮ್‌ಗೆ ಕಳಿಸಲಾಗಿದೆ. ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ನೋಡಿದ ಅನೇಕರು ನೋವು ವ್ಯಕ್ತಪಡಿಸಿದ್ದಾರೆ. ಇಲ್ಲಿದೆ ನೋಡಿ, ಯುವ ಆಟಗಾರನ ಸಾವಿನ ಮನಮರುಗುವ ದೃಶ್ಯ..

ಇದನ್ನೂ ಓದಿ: ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ ಉದಯ್‌ ಚೌಟ ಇನ್ನಿಲ್ಲ!

Exit mobile version