ಹೊಸದಿಲ್ಲಿ : ಅಖಿಲ ಭಾರತ ಫುಟ್ಬಾಲ್ ಒಕ್ಕೂಟಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಮೋಹನ್ ಬಗಾನ್ ತಂಡದ ಮಾಜಿ ಗೋಲ್‌ಕೀಪರ್ ಕಲ್ಯಾಣ್ ಚೌಬೆ ಗೆಲುವು ಸಾಧಿಸಿದ್ದು, ಸಂಸ್ಥೆಯ ೮೫ ವರ್ಷಗಳ ಇತಿಹಾಸದಲ್ಲಿ ಉನ್ನತ ಸ್ಥಾನ ಅಲಂಕರಿಸಿದ ಮೊದಲ ಕ್ರೀಡಾಪಟು ಎನಿಸಿಕೊಂಡಿದ್ದಾರೆ.
ಈಸ್ಟ್ ಬೆಂಗಾಲ್ ತಂಡದ ಪರವಾಗಿಯೂ ಆಡಿದ್ದ ೪೫ ವರ್ಷದ ಕಲ್ಯಾಣ್ ಚೌಬೆ ಅವರು ತಮ್ಮ ಪ್ರತಿಸ್ಪರ್ಧಿ ಭಾರತ ಫುಟ್ಬಾಲ್ ತಂಡದ ದಿಗ್ಗಜ ಭೈಚುಂಗ್ ಭುಟಿಯಾ ಅವರನ್ನು ೩೩-೧ ಮತಗಳಿಂದ ಸೋಲಿಸಿಗೆ ಅಧ್ಯಕ್ಷ ಸ್ಥಾನ ಅಲಂಕರಿಸಿದರು. ರಾಜ್ಯ ಫುಟ್ಬಾಲ್ ಸಂಸ್ಥೆಗಳಲ್ಲಿ ಕಲ್ಯಾಣ್ ಚೌಬೆ ಅವರಿಗೆ ಹೆಚ್ಚು ಬೆಂಬಲಿಗರು ಇದ್ದ ಕಾರಣ ಈ ಫಲಿತಾಂಶವನ್ನು ನಿರೀಕ್ಷಿಸಲಾಗಿತ್ತು. ಆದಾಗ್ಯೂ ಅಖಿಲ ಭಾರತ ಫುಟ್ಬಾಲ್ ಒಕ್ಕೂಟದಲ್ಲಿದ್ದ ರಾಜಕಾರಣಿಗಳ ರಾಜ್ಯಭಾರ ಕೊನೆಗೊಂಡಿದೆ.
ಬಿಜೆಪಿ ಸದಸ್ಯರೂ ಆಗಿರುವ ಕಲ್ಯಾಣ್ ಚೌಬೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ ಕೃಷ್ಣನಗರ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. ಅವರು ಭಾರತ ತಂಡದ ಪರ ಒಂದೇ ಒಂದು ಪಂದ್ಯವನ್ನು ಆಡಿಲ್ಲ. ಆದರೆ, ಸಾಕಷ್ಟು ಬಾರಿ ತಂಡಕ್ಕೆ ಆಯ್ಕೆಗೊಂಡಿದ್ದರು. ಭುಟಿಯಾ ಹಾಗೂ ಚೌಬೆ ಒಂದು ಕಾಲದಲ್ಲಿ ಈಸ್ಟ್ ಬೆಂಗಾಲ್ ತಂಡದ ಸಹ ಆಟಗಾರರಿದ್ದರು.
ಎನ್ ಎ ಹ್ಯಾರಿಸ್ ಉಪಾಧ್ಯಕ್ಷ
ಕರ್ನಾಟಕ ಫುಟ್ಬಾಲ್ ಒಕ್ಕೂಟದ ಅಧ್ಯಕ್ಷ ಹಾಗೂ ಕರ್ನಾಟಕದ ಕಾಂಗ್ರೆಸ್ ಶಾಸಕ ಎನ್. ಎ ಹ್ಯಾರಿಸ್ ಅವರು ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಅವರು ರಾಜಸ್ಥಾನ ಫುಟ್ಬಾಲ್ ಒಕ್ಕೂಟದ ಮಾನ್ವೆಂದ್ರ ಸಿಂಗ್ ಅವರು ಸೋಲಿಸಿದರು.
ಅರುಣಾಚಲ ಪ್ರದೇಶದ ಕಿಪಾ ವಿಜಯ್ ಖಜಾಂಚಿಯಾಗಿ ಆಯ್ಕೆಗೊಂಡರು. ಉಳಿದಂತೆ ಬೇರೆ ಬೇರೆ ಹುದ್ದೆಗಳಿಗೆ ನಾಮಪತ್ರ ಸಲ್ಲಿಕೆ ಮಾಡಿದ್ದ ೧೪ ಮಂದಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ಇದನ್ನೂ ಓದಿ | ವಿಸ್ತಾರ Explainer | FIFA ban: ಪ್ರಫುಲ್ ಪಟೇಲ್ ಕಳ್ಳಾಟಕ್ಕೆ ಫಿಫಾದ ಕಾಲ್ಚೆಂಡಾದ ಭಾರತೀಯ ಫುಟ್ಬಾಲ್