ಬೆಂಗಳೂರು: ಕಳೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಹೆಲ್ಮೆಟ್ ಸಮಸ್ಯೆಯಿಂದಾಗಿ ಟೈಮ್ಡ್ ಔಟ್(‘timed out’ controversy) ಆದ ಶ್ರೀಲಂಕಾದ ಆಟಗಾರ ಏಂಜಲೋ ಮ್ಯಾಥ್ಯೂಸ್(Angelo Mathews) ಅವರು ನ್ಯೂಜಿಲ್ಯಾಂಡ್ ವಿರುದ್ಧ ಕಣಕ್ಕಿಳಿಯುವ ವೇಳೆ ಕೇನ್ ವಿಲಿಯಮ್ಸನ್(Kane Williamson) ಮತ್ತು ಟ್ರೆಂಟ್ ಬೌಲ್ಟ್ ಅವರು ಈ ಬಾರಿ ಹೆಲ್ಮೆಟ್ ಸರಿ ಇದೆಯೇ ಎಂದು ಕೇಳಿ ಕಿಚಾಯಿಸಿದ್ದಾರೆ. ಈ ವಿಡಿಯೊ ವೈರಲ್(viral video) ಆಗಿದೆ.
ಗುರುವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮ್ಯಾಥ್ಯೂಸ್ ಅವರು ಬ್ಯಾಟಿಂಗ್ಗೆ ಬಂದ ವೇಳೆ ಆರಮಭದಲ್ಲಿ ಬೌಲಿಂಗ್ ನಡೆಸುತ್ತಿದ್ದ ಟ್ರೆಂಟ್ ಬೌಲ್ಟ್ ಅವರು ನಗುತ್ತಲೇ ಹೆಲ್ಮೆಟ್ ಬಗ್ಗೆ ವಿಚಾರಿಸಿದ್ದಾರೆ. ಬಳಿಕ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ ಓಡೋಡಿ ಬಂದು ಈ ಬಾರಿ ಹೆಲ್ಮೆಟ್ ಸರಿಯಾಗಿದೆ ಅಲ್ಲವೇ ಎಂದು ಕೇಳಿದ್ದಾರೆ. ಮ್ಯಾಥ್ಯೂಸ್ ನಗುತ್ತಲೇ ಬ್ಯಾಟಿಂಗ್ ನಡೆಸಲು ಮುಂದಾದರು. ಅತ್ತ ಕಾಮೆಂಟ್ರಿ ಮಾಡುತ್ತಿದ್ದವರು ಕೂಡ ಈ ದೃಶ್ಯವನ್ನು ನಗುತ್ತಕಲೇ ಸುಂದರವಾಗಿ ವರ್ಣಿಸಿದ್ದಾರೆ.
ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದಿದ್ದ ಲಂಕಾ ಮತ್ತು ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಮ್ಯಾಥ್ಯೂಸ್ ಅವರು ಕ್ರೀಸ್‌ಗಿಳಿದ ವೇಳೆ ಹೆಲ್ಮೆಟ್ ಬದಲಿಸಲು ಸಮಯ ತೆಗೆದುಕೊಂಡಿದ್ದರು. ಇದೇ ವೇಳೆ ಬಾಂಗ್ಲಾದೇಶ ಆಟಗಾರರು ಅಂಪೈರ್ ಬಳಿ ಐಸಿಸಿ ನಿಯಮದಂತೆ ಟೈಮ್ ಔಟ್ ಅಫೀಲ್ ಮಾಡಿದರು. ಫೀಲ್ಡ್ ಅಂಪೈರ್ ಮರೈಸ್ ಎರಾಸ್ಮಸ್ ಬಾಂಗ್ಲಾ ಆಟಗಾರರ ಮನವಿಯನ್ನು ಮಾನ್ಯ ಮಾಡಿ ಮ್ಯಾಥ್ಯೂಸ್ಗೆ ಕ್ರೀಸ್ ಬಿಡುವಂತೆ ಹೇಳಿದರು. ಇದೇ ವೇಳೆ ಮ್ಯಾಥ್ಯೂಸ್ ಅವರು ತಮ್ಮ ಹೆಲ್ಮೆಟ್ ತುಂಡಾಗಿರುವುದನ್ನು ತೋರಿಸಿ ಮನವಿ ಮಾಡಿದರು. ಅಲ್ಲದೆ ಬಾಂಗ್ಲಾ ನಾಯಕ ಶಕೀಬ್ ಅವರ ಬಳಿಯೂ ನಡೆದ ಘಟನೆಯನ್ನು ವಿವರಿಸಿದರು. ಆದರೂ ಬಾಂಗ್ಲಾ ಆಟಗಾರರು ತಮ್ಮ ಮನವಿಯನ್ನು ಹಿಂಪಡೆಯಲಿಲ್ಲ. ಹೀಗಾಗಿ ಏಂಜೆಲೊ ಮ್ಯಾಥ್ಯೂಸ್ ಅವರು ಒಂದೂ ಎಸೆತ ಎದುರಿಸಿದೆ ಟೈಮ್ಡ್ ಔಟ್ ಆಗಿದ್ದರು. ಅಲ್ಲದೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಈ ರೀತಿ ಔಟ್ ಆದ ಮೊದಲ ಆಟಗಾರ ಎಂಬ ಕೆಟ್ಟ ದಾಖಲೆ ಪಟ್ಟಿಗೆ ಸೇರ್ಪಡೆಯಾಗಿದ್ದರು.
ಸೆಮಿ ಸನಿಹಕ್ಕೆ ಕಿವೀಸ್
ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ನ್ಯೂಜಿಲ್ಯಾಂಡ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಲಂಕಾ ತಂಡ 46.4 ಓವರ್ಗಳಲ್ಲಿ 171 ರನ್ಗಳಿಗೆ ಆಲ್ಔಟ್ ಆಯಿತು. ಗುರಿ ಬೆನ್ನಟ್ಟಿದ ನ್ಯೂಜಿಲ್ಯಾಂಡ್ ಇನ್ನೂ 160 ಬಾಕಿ ಇರುವಂತೆಯೇ 5 ವಿಕೆಟ್ ಕಳೆದುಕೊಂಡು 172 ರನ್ ಬಾರಿಸಿ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ ಕಿವೀಸ್ ಸೆಮಿಫೈನಲ್ ಪ್ರವೇಶವನ್ನು ಬಹುತೇಕ ಖಚಿತಪಡಿಸಿಕೊಡಿದೆ. ಆದರೆ, ಶನಿವಾರ ನಡೆಯಲಿರುವ ಇಂಗ್ಲೆಂಡ್ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಪಂದ್ಯದ ಫಲಿತಾಂಶದ ಬಳಿಕ ಈ ಬಗ್ಗೆ ಸ್ಪಷ್ಟತೆ ಸಿಗಲಿದೆ.
ಸಾಧಾರಣ ಗುರಿ ಬೆನ್ನಟ್ಟಿದ ನ್ಯೂಜಿಲ್ಯಾಂಡ್ ತಂಡ 25 ಓವರ್ಗಳ ಒಳಗೆ ಆಟ ಮುಗಿಸಿ ಗರಿಷ್ಠ ರನ್ರೇಟ್ನೊಂದಿಗೆ ಆಡಿತು. ಪೂರಕವಾಗಿ ಮೊದಲ ವಿಕೆಟ್ಗೆ 86 ರನ್ ಬಾರಿಸಿತು. ಆರಂಭಿಕ ಬ್ಯಾಟರ್ಗಳಾದ ಡೆವೋನ್ ಕಾನ್ವೆ (45) ಹಾಗೂ ರಚಿನ್ ರವೀಂದ್ರ (42) ಉತ್ತಮ ಆರಂಭ ತಂದುಕೊಟ್ಟರು. ಆದರೆ, ಈ ಇಬ್ಬರು ಬ್ಯಾಟಿಂಗ್ನಲ್ಲಿ ಇನ್ನಷ್ಟು ಬಿರುಸು ತರಲು ಹೋಗಿ ಔಟಾದರು. ಬಳಿಕ ಕೇನ್ ವಿಲಿಮ್ಸನ್ 14 ರನ್ ಕೊಡುಗೆ ಕೊಟ್ಟರು. ಡ್ಯಾರಿಲ್ ಮಿಚೆಲ್ ಗುರಿಯನ್ನು ಬೇಗ ಮುಟ್ಟುವ ಉದ್ದೇಶದಿಂದ 31 ಎಸೆತಕ್ಕೆ 43 ರನ್ ಬಾರಿಸಿದರು. ಮಾರ್ಕ್ ಚಾಪ್ಮನ್ ಅನಗತ್ಯ ರನ್ಔಟ್ಗೆ ಬಲಿಯಾದರು. ಕೊನೆಯಲ್ಲಿ ಗ್ಲೆನ್ ಫಿಲಿಪ್ಸ್ 17 ರನ್ ಬಾರಿಸಿ ತಂಡಕ್ಕೆ ಜಯ ತಂದುಕೊಟ್ಟರು.