Site icon Vistara News

karim benzema | ಅಂತಾರಾಷ್ಟ್ರೀಯ ಫುಟ್ಬಾಲ್​ಗೆ ವಿದಾಯ ಘೋಷಿಸಿದ ಫ್ರಾನ್ಸ್‌ ಸ್ಟಾರ್‌ ಆಟಗಾರ ಕರೀಂ ಬೆಂಜೆಮಾ!

Karim Benzema

ಪ್ಯಾರಿಸ್: ಫ್ರಾನ್ಸ್​ ತಂಡದ ಸ್ಟಾರ್​ ಫುಟ್ಬಾಲ್​ ಆಟಗಾರ ಕರೀಂ ಬೆಂಜೆಮಾ (Karim Benzema) ಅವರು ಅಂತಾರಾಷ್ಟ್ರೀಯ ಫುಟ್ಬಾಲ್​​ಗೆ ವಿದಾಯ ಘೋಷಿಸಿದ್ದಾರೆ. ಕತಾರ್​ ಫಿಫಾ ವಿಶ್ವಕಪ್​ ಫೈನಲ್‌ ಪಂದ್ಯದಲ್ಲಿ ಫ್ರಾನ್ಸ್‌ ಸೋಲು ಕಂಡ ಹಿನ್ನೆಲೆಯಲ್ಲಿ ಅವರು ನಿವೃತ್ತಿ ಘೋಷಿಸಿದ್ದಾರೆ.

ಕತಾರ್​ ಫಿಫಾ ವಿಶ್ವ ಕಪ್ ಟೂರ್ನಿಯಲ್ಲಿ ಬೆಂಜೆಮಾ ಅವರನ್ನು ಫ್ರಾನ್ಸ್​ ತಂಡದ ಪ್ರಮುಖ ಆಟಗಾರ ಎಂದು ಭಾವಿಸಲಾಗಿತ್ತು. ಆದರೆ ಕೂಟ ಆರಂಭಕ್ಕೆ ಮುನ್ನವೇ ಅಭ್ಯಾಸದ ವೇಳೆ ಗಾಯಗೊಂಡು ವಿಶ್ವ ಕಪ್​ನಿಂದ ಹೊರಬಿದ್ದಿದ್ದರು. ಫೈನಲ್​ನಲ್ಲಿ ಅರ್ಜೆಂಟೀನಾ ವಿರುದ್ಧ ತಂಡ ಸೋಲು ಕಂಡ ಬಳಿಕ ಅವರು ಅಂತಾರಾಷ್ಟ್ರೀಯ ಫುಟ್ಬಾಲ್​ಗೆ ವಿದಾಯ ಹೇಳಿದ್ದಾರೆ. ಆದರೆ ಕ್ಲಬ್​ ಪರ ಆಟ ಮುಂದುವರಿಸುವುದಾಗಿ ತಿಳಿಸಿದ್ದಾರೆ.

“ಮುಂದಿನ ವಿಶ್ವಕಪ್​ಗೆ ಇನ್ನು ಕೆಲವು ವರ್ಷಗಳಿವೆ. ಆ ವೇಳೆಗೆ ನನ್ನ ದೇಹ ಯಾವ ರೀತಿ ಸ್ಪಂದಿಸುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ. ಆದ್ದರಿಂದ ಯುವ ಆಟಗಾರರಿಗೆ ತಂಡದಲ್ಲಿ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ನಾನು ಈ ಕಠಿಣ ನಿರ್ಧಾರ ಕೈಗೊಂಡಿದ್ದೇನೆ” ಎಂದು ವಿದಾಯದ ಬಳಿಕ ಕರೀಂ ಬೆಂಜೆಮಾ ತಿಳಿಸಿದ್ದಾರೆ.

ಕರೀಂ ಬೆಂಜೆಮಾ 2007ರಲ್ಲಿ ಅಂತಾರಾಷ್ಟ್ರೀಯ ಫುಟ್ಬಾಲ್​​ಗೆ ಪ್ರವೇಶ ಮಾಡಿದ್ದರು. 2008 ಮತ್ತು 2012ರ ಯುರೋ ಕಪ್​ ಹಾಗೂ 2014ರ ವಿಶ್ವ ಕಪ್​ ಟೂರ್ನಿಯಲ್ಲಿ ಆಡಿದ್ದರು. 2014ರ ವಿಶ್ವ ಕಪ್​ನಲ್ಲಿ ಫ್ರಾನ್ಸ್​ ಪರ ಅತಿಹೆಚ್ಚು ಗೋಲು ಬಾರಿಸಿದ ಸಾಧನೆ ಮಾಡಿದ್ದರು. ಬಳಿಕ ವಿವಾದದ ಸುಳಿಯಲ್ಲಿ ಸಿಲುಕಿ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದರಿಂದ 2018ರ ವಿಶ್ವ ಕಪ್​ ಟೂರ್ನಿಯಲ್ಲಿ ಆಡಿರಲಿಲ್ಲ. ಆದರೆ 2022ರ ವಿಶ್ವಕಪ್​ನಲ್ಲಿ ಆಡುವ ಅವಕಾಶ ಸಿಕ್ಕರೂ ಗಾಯದ ಸಮಸ್ಯೆಯಿಂದ ಅಂತಿಮ ಕ್ಷಣದಲ್ಲಿ ಈ ಅವಕಾಶದಿಂದ ವಂಚಿತರಾದರು.

ರಿಯಲ್ ಮ್ಯಾಡ್ರಿಡ್‌ ತಂಡದ ಕರೀಂ ಬೆಂಜೆಮಾ ಇತ್ತೀಚೆಗಷ್ಟೇ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಫುಟ್ಬಾಲ್‌ನ ಅತ್ಯುನ್ನತ ಬ್ಯಾಲನ್​ ಡಿ ಓರ್ ಪ್ರಶಸ್ತಿ ಗೆದ್ದಿದ್ದರು.

ಇದನ್ನೂ ಓದಿ | FIFA World Cup | ಅರ್ಜೆಂಟೀನಾ ಗೋಲ್​ ಕೀಪರ್​ ವರ್ತನೆಗೆ ಅಭಿಮಾನಿಗಳ ಬೇಸರ

Exit mobile version