Site icon Vistara News

Ranji Trophy : ಕರ್ನಾಟಕ ತಂಡಕ್ಕೆ 6 ರನ್​ಗಳ ಆಘಾತಕಾರಿ ಸೋಲು

Ranji Karnataka

ವಿಸ್ತಾರ ನ್ಯೂಸ್​​​ ಬೆಂಗಳೂರು

ರಣಜಿ ಟ್ರೋಫಿ (Ranji Trophy) ಎಲೈಟ್​ ಸಿ ಗುಂಪಿನ ಪಂದ್ಯದಲ್ಲಿ ಮಯಾಂಕ್​ ಅಗರ್ವಾಲ್​ ನೇತೃತ್ವದ ಕರ್ನಾಟಕ ತಂಡ ಆಘಾತಕಾರಿ ಸೋಲು ಅನುಭವಿಸಿದೆ. ಗೆಲ್ಲುವ ಪಂದ್ಯದಲ್ಲಿ ಹೀನಾಯ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಕಳಪೆ ದಾಖಲೆಯೊಂದನ್ನು ಸೃಷ್ಟಿಸಿದೆ. ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದ ನಾಲ್ಕನೇ ದಿನ ಕರ್ನಾಟಕ ತಂಡದ ಗೆಲುವಿಗೆ 109 ರನ್​ಗಳು ಬೇಕಾಗಿದ್ದವು. ಆದರೆ, 103 ರನ್​ಗಳಿಗೆ ಆಲ್​ಔಟ್ ಆಗುವ ಮೂಲಕ ಹೀನಾಯ ಸೋಲಿಗೆ ಒಳಗಾಗಿದೆ.

ಗುರಿಯನ್ನು ಬೆನ್ನಟ್ಟಿದ ಕರ್ನಾಟಕ ತಂಡದ ಒಂದು ಹಂತದಲ್ಲಿ ಮೊದಲ ವಿಕೆಟ್​ಗೆ 50 ರನ್ ಬಾರಿಸಿತ್ತು. ಈ ಹಂತದಲ್ಲಿ ಗೆಲುವು ಮಯಾಂಕ್​ ಅಗರ್ವಾಲ್​ ನೇತೃತ್ವದ ತಂಡದ ಕೈಯಲ್ಲಿತ್ತು. ಆದರೆ, ಗುಜರಾತ್​ನ ಸ್ಪಿನ್ನರ್ ಸಿದ್ಧಾರ್ಥ್​ ದೇಸಾಯಿ ದಾಳಿಗೆ ನಲುಗಿದ ಕರ್ನಾಟಕ ಉಳಿದ 10 ವಿಕೆಟ್​ಗಳನ್ನು 53 ರನ್​ ಗಳಿಸುವಷ್ಟರಲ್ಲಿ ಕಳೆದುಕೊಳ್ಳುವ ಮೂಲಕ ಆಘಾತಕ್ಕೆ ಒಳಗಾಯಿತು.

ಇನ್ನೇನು ಕರ್ನಾಟಕ ತಂಡ ರಣಜಿ ಟ್ರೋಫಿ ಪಂದ್ಯದಲ್ಲಿ ಗೆದ್ದೇ ಬಿಟ್ಟಿತು ಎನ್ನುವ ಪಂದ್ಯದಲ್ಲಿ ಸೋತು ಅವಮಾನಕ್ಕೆ ಒಳಗಾಗಿದೆ. ಒಂದು ಹಂತದಲ್ಲಿ ಎಲ್ಲವೂ ಕನ್ನಡಿಗರ ಪರವಾಗಿ ಸಾಗಿತ್ತು. ಆ ಮೂಲಕ ಗುಜರಾತ್ ತಂಡ ಸತತ ಎರಡು ಗೆಲುವುಗಳೊಂದಿಗೆ ರಣಜಿ ಟ್ರೋಫಿ 2023-24ರ ಸಿ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿದೆ.

ಎರಡನೇ ಇನ್ನಿಂಗ್ಸ್‌ನಲ್ಲಿ 7 ವಿಕೆಟ್‌ ಪಡೆದು ಸಿದ್ದಾರ್ಥ್​ ದೇಸಾಯಿ ಮಿಂಚಿದರು. ಗೆಲುವಿಗೆ 110 ರನ್‌ಗಳ ರನ್‌ಗಳ ಅತ್ಯಲ್ಪ ಹಾಗೂ ಸುಲಭ ಗುರಿ ಪಡೆದ ಕರ್ನಾಟಕ ಕೇವಲ 103 ರನ್‌ಗಳಿಗೆ ಆಲೌಟ್‌ ಆಗಿದ್ದು ಹೋರಾಟದ ಕೊರತೆಯನ್ನು ಎತ್ತಿ ತೋರಿಸಿತು.

ಇದನ್ನೂ ಓದಿ : Rohit Sharma : ಎಂಸ್ ಧೋನಿ ದಾಖಲೆ ಸರಿಗಟ್ಟಿದ ಕ್ಯಾಪ್ಟನ್ ರೋಹಿತ್ ಶರ್ಮಾ

ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ ಆಡಿದ ಗುಜರಾತ್‌, ಕ್ಷಿತಿಜ್‌ ಕುಮಾರ್‌ ಮತ್ತು ಉಮಾಂಕ್‌ ಕುಮಾರ್‌ ಅರ್ಧಶತಕದ ಹೊರತಾಗಿಯೂ 264 ರನ್‌ಗಳಿಗೆ ಆಲೌಟ್‌ ಆಯ್ತು. ಕರ್ನಾಟಕ ಪರ ಕೌಶಿಲ್‌ 4 ವಿಕೆಟ್‌ ಪಡೆದರು. ಇದಕ್ಕೆ ಪ್ರತಿಯಾಗಿ ಮೊದಲ ಇನ್ನಿಂಗ್ಸ್‌ ಆಡಿದ ಕರ್ನಾಟಕ, ಭರ್ಜರಿ 374 ರನ್‌ ಕಲೆ ಹಾಕಿ ಭಾರಿ ಮುನ್ನಡೆ ಸಾಧಿಸಿತು. ಮೊದಲ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಶೂನ್ಯಕ್ಕೆ ಔಟಾಗಿದ್ದ ನಾಯಕ ಮಯಾಂಕ್‌ ಅಗರ್ವಾಲ್‌ (109), ಆಕರ್ಷಕ ಶತಕ ಸಿಡಿಸಿದರು. ಮನೀಶ್ ಪಾಂಡೆ 88 ರನ್‌ ಕೊಡುಗೆ ನೀಡಿದ್ದರು. 110 ರನ್‌ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್‌ ಆರಂಭಿಸಿದ ಗುಜರಾತ್‌ ಮತ್ತೆ ವೈಫಲ್ಯ ಕಂಡಿತು. ಮನನ್‌ ಮತ್ತು ಉಮಾಂಗ್‌ ಕುಮಾರ್‌ ತಲಾ ಅರ್ಧಶತಕದ ನೆರವಿಂದ ಅಂತಿಮವಾಗಿ 219 ರನ್‌ ಗಳಿಸಿ ಆಲೌಟ್‌ ಆಯ್ತು. ಆ ಮೂಲಕ 109 ರನ್‌ಗಳ ಅಲ್ಪ ಮುನ್ನಡೆ ಸಾಧಿಸಿತು.

ಕುಸಿದ ಕರ್ನಾಟಕ

ಸುಲಭ ಗುರಿ ಪಡೆದ ಕರ್ನಾಟಕ ಕೆಲವೇ ನಿಮಿಷಗಳಲ್ಲಿ ಗೆಲುವಿನ ನಗೆ ಬೀರುವ ವಿಶ್ವಾಸದಲ್ಲಿತ್ತು. ನಾಯಕ ಅಗರ್ವಾಲ್‌ ಮತ್ತು ದೇವದತ್‌ ಪಡಿಕಲ್‌ ಮೊದಲ ವಿಕೆಟ್‌ಗೆ 50 ರನ್‌ಗಳ ಜೊತೆಯಾಟವಾಡಿದರು. 19 ರನ್‌ ಗಳಿಸಿದ್ದ ಮಯಾಂಕ್‌ ಮತ್ತು 31 ರನ್ ಗಳಿಸಿ ಪಡಿಕಲ್‌ ಔಟಾಗುತ್ತಿದ್ದಂತೆಯೇ ಏಕಾಏಕಿ ತಂಡದ ಬ್ಯಾಟಿಂಗ್ ಬಲ ಕುಸಿಯಿತು.

ಸಿದ್ಧಾರ್ಥ್‌ ದೇಸಾಯಿ ಮಾರಕ ದಾಳಿಗೆ ಕರ್ನಾಟಕ ತಂಡದ ವಿಕೆಟ್‌ಗಳು ಉದುರಿದವು. ಶುಭಾಂಗ್‌ ಹೆಗ್ಡೆ 27 ರನ್ ಗಳಿಸಿದ್ದನ್ನು ಹೊರತುಪಡಿಸಿದರೆ ಬೇರೆ ಯಾರಿಂದಲೂ ಎರಡಂಕಿ ರನ್‌ ಕಲೆಹಾಕಲು ಸಾಧ್ಯವಾಗಲಿಲ್ಲ. ಕೊನೆಯವರಾಗಿ ಔಟಾದ ಬೌಲರ್‌ ಪ್ರಸಿದ್ಧ ಕೃಷ್ಣ, 1 ಸಿಕ್ಸರ್‌ ಸಹಿತ 7 ರನ್‌ ಗಳಿಸಿದರು. ತಂಡವನ್ನು ಗೆಲುವಿನ ದಡ ಸೇರಿಸುತ್ತಾರೆ ಎನ್ನುವಷ್ಟರಲ್ಲಿ ಬೌಲ್ಡ್ ಅದರು.

ಈ ಸೋಲಿನ ಬಳಿಕ ಕರ್ನಾಟಕ ತಂಡವು ಸಿ ಗುಂಪಿನ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕಿಳಿದಿದೆ. ಸತತ ಎರಡು ಗೆಲವು ಸಾಧಿಸಿದ ಗುಜರಾತ್‌ ಅಗ್ರಸ್ಥಾನಕ್ಕೆ ಬಡ್ತಿ ಪಡೆದಿದೆ. ಕರ್ನಾಟಕ ತಂಡವು ಮುಂದೆ ಜನವರಿ 19ರಿಂದ ಆರಂಭವಾಗಲಿರುವ ಪಂದ್ಯದಲ್ಲಿ ಗೋವಾ ತಂಡವನ್ನು ಎದುರಿಸಲಿದೆ.

Exit mobile version