ಬೆಂಗಳೂರು: ಕಿರ್ಗಿಸ್ತಾನದ ಬಿಶ್ಕೇಕ್‌ನಲ್ಲಿ ನಡೆಯುತ್ತಿರುವ Asian wrestling championships ಕೂಟದಲ್ಲಿ ಕರ್ನಾಟಕದ ಮುಧೋಳ ಮೂಲದ ಕುಸ್ತಿಪಟು ನಿಂಗೆಪ್ಪ ಗೆನೆಣ್ಣನವರ್ ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ್ದಾರೆ.
17 ವರ್ಷದೊಳಗಿನ ವಿಭಾಗದ ೪೮ ವಿಭಾಗದಲ್ಲಿ ಸ್ಪರ್ಧಿಸಿ ನಾಲ್ಕು ದೇಶಗಳ ಕುಸ್ತಿಪಟುಗಳನ್ನು ಸೋಲಿಸಿದ ಬಾಗಲಕೋಟೆ ಜಿಲ್ಲೆಯ ರಬಕವಿಬನಹಟ್ಟಿ ತಾಲೂಕಿನ ಹಳಿಂಗಳಿ ಮೂಲದ ಪೈಲ್ವಾನ್, ಚಿನ್ನದ ಪದಕ ಬೇಟೆಯಾಡಿದ್ದಾರೆ. ಫೈನಲ್‌ನಲ್ಲಿ ಅವರು ಇರಾನ್‌ನ ನವಾಜಿ ಅಲಿ ಎಂಬುವರನ್ನು ಸೋಲಿಸಿ ಪ್ರಶಸ್ತಿ ಗೆದ್ದಿದ್ದಾರೆ.
ಜೂನ್ ೧೭ರಿಂದ ಆರಂಭವಾಗಿರುವ ಕುಸ್ತಿ ಚಾಂಪಿಯನ್‌ಷಿಪ್ ಜೂನ್ ೨೬ರವರೆಗೆ ನಡೆಯಲಿದ್ದು, ಭಾರತದ ಹಲವು ಯುವ ಕುಸ್ತಿಪಟುಗಳು ಸ್ಪರ್ಧೆಯಲ್ಲಿದ್ದಾರೆ.
ಕೃಷಿಕರ ಕುಟುಂಬದ ಕುಡಿ
ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದಿರುವ ನಿಂಗಪ್ಪ ಅವರು ಕೃಷಿ ಕಾರ್ಮಿಕರ ಕುಟುಂಬದ ಕುಡಿ. ತಂದೆ ತಾಯಿ ಇಬ್ಬರು ಕೃಷಿ ಕಾರ್ಮಿಕರಾಗಿದ್ದು, ಬೇರೆಯವರ ಕೃಷಿ ಜಮೀನಿನಲ್ಲಿ ಕೃಷಿ ಕಾರ್ಯದಲ್ಲಿ ತೊಡಗಿದ್ದಾರೆ. ಸದ್ಯ ಮುಧೋಳ ನಗರದಲ್ಲಿ ನಿಂಗಪ್ಪ ಅವರ ಕುಟುಂಬ ನೆಲೆಸಿದೆ. ನಿಂಗಪ್ಪ ಅವರು ಮುಧೋಳ ಜೈ ಹನುಮಾನ್ ವ್ಯಾಯಾಮ ಶಾಲೆಯಲ್ಲಿ ಏಳು ವರ್ಷ ತರಬೇತಿ ಪಡೆದುಕೊಂಡಿದ್ದು, ರಾಜ್ಯ ಮಟ್ಟದ ಕುಸ್ತಿಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ರಾಜಸ್ಥಾನದಲ್ಲಿ ನಡೆದ ರಾಷ್ಟ್ರಮಟ್ಟದ ಕುಸ್ತಿಯಲ್ಲಿ ತೃತೀಯ ಸ್ಥಾನ ಪಡೆದು ಗಮನ ಸೆಳೆದಿರುವ ನಿಂಗಪ್ಪ ಅವರು ಹರಿಯಾಣದ ಭಾರತೀಯ ಕುಸ್ತಿ ಒಕ್ಕೂಟದ ತರಬೇತಿ ಶಿಬಿರಕ್ಕೆ ಆಯ್ಕೆಯಾಗಿದ್ದಾರೆ. ಅಲ್ಲಿ ಎರಡು ವರ್ಷಗಳಿಂದ ತರಬೇತಿ ಪಡೆಯುತ್ತಿರುವ ಅವರು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗಿಯಾಗುತ್ತಿದ್ದಾರೆ.
ಇದೀಗ ೧೦ನೇ ತರಗತಿಯಲ್ಲಿ ಓದುತ್ತಿರುವ ನಿಂಗಪ್ಪ ಗೆನೆಣ್ಣವರ, ಬಡತನದಲ್ಲಿ ಬೆಳೆದು ಅಂತಾರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಗೆಲ್ಲುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.