ಪುಣೆ: ನಾಪತ್ತೆಯಾಗಿದ್ದ ಟೀಮ್ ಇಂಡಿಯಾ ಕ್ರಿಕೆಟಿಗ ಕೇದಾರ್ ಜಾಧವ್ ಅವರ ತಂದೆಯನ್ನು(Kedar Jadhav Father Missing) ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಮೂಲಕ ಆತಂಕದಲ್ಲಿದ್ದ ಕೇದಾರ್ ಜಾಧವ್ ನಿಟ್ಟುಸಿರು ಬಿಡುವಂತಾಗಿದೆ.
ಸೋಮವಾರ ಪುಣೆಯ ಕೊತ್ರೋಡ್ನಿಂದ ಕೇದಾರ್ ಅವರ ತಂದೆ 75 ವರ್ಷದ ಮಹದೇವ್ ಜಾಧವ್(Mahadev Jadhav) ಅವರು ನಾಪತ್ತೆಯಾಗಿದ್ದರು. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು. ದೂರು ದಾಖಲಿಸಿ ಹುಡುಕಾಟ ಆರಂಭಿಸಿದ ಪೊಲೀಸರು ಕೊನೆಗೂ ಮಹದೇವ್ ಅವರನ್ನು ಪತ್ತೆ ಮಾಡಿದ್ದಾರೆ.
ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ತನಿಖೆ ನಡೆಸಿದಾಗ ಮಹದೇವ್ ಅವರು ಕರ್ವೆ ನಗರ್ನಲ್ಲಿ ಪತ್ತೆಯಾಗಿದ್ದಾರೆ. ಅಲ್ಲದೆ ಅವರು ಮರೆವಿನ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ವರದಿಯ ಪ್ರಕಾರ ಬೆಳಗ್ಗೆ ಸೆಕ್ಯುರಿಟಿ ಗಾರ್ಡ್ಗೆ ತಪ್ಪು ಮಾಹಿತಿ ನೀಡಿ ಮಹದೇವ್ ಅವರು ತಮ್ಮ ಮನೆಯಿಂದ ಹೊರಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ Team India : ಕೇದರ್ ಜಾಧವ್ ತಂದೆ ಕಣ್ಮರೆ, ಹುಡುಕಾಟ ಆರಂಭಿಸಿದ ಪುಣೆ ಪೊಲೀಸರು
ಸೋಮವಾರ ನಾಪತ್ತೆಯಾದಿದ್ದ ಮಹದೇವ್ ಜಾಧವ್ ಅವರ ಭಾವಚಿತ್ರವನ್ನು ಸುತ್ತಮುತ್ತಲಿನ ಪ್ರದೇಶಕ್ಕೆ ಕಳುಹಿಸಿಕೊಡಲಾಗಿತ್ತು. ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆದ ಕಾರಣ ಮನೆಯವರಲ್ಲಿ ಕೊಂಚ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಆದರೆ ಇದೀಗ ಮಹದೇವ್ ಜಾಧವ್ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ. ತಂದೆಯನ್ನು ಹುಡುಕಿ ಕೊಡುವಲ್ಲಿ ಸಹಕರಿಸಿದ ಎಲ್ಲರಿಗೂ ಕೇದಾರ್ ಜಾಧವ್ ಧನ್ಯವಾದ ತಿಳಿಸಿದ್ದಾರೆ.