Site icon Vistara News

Argentina football Team: ಕೇರಳಕ್ಕೆ ಬರಲಿದೆ ಮೆಸ್ಸಿ ಸಾರಥ್ಯದ ಅರ್ಜೆಂಟೀನಾ ತಂಡ; ಭಾರತ ವಿರುದ್ಧ ಸೌಹಾರ್ದ ಪಂದ್ಯ

argentina fans kerala

ತಿರುವನಂತಪುರ: ಕತಾರ್​ ಫಿಫಾ ವಿಶ್ವ ಕಪ್​ ವಿಜೇತ ಲಿಯೋನೆಲ್ ಮೆಸ್ಸಿ(Lionel Messi) ನೇತೃತ್ವದ ಅರ್ಜೆಂಟೀನಾ ತಂಡವು(Argentina football Team) ಕೇರಳಕ್ಕೆ ಬರಲಿದ್ದು ಭಾರತ ತಂಡದ ಜತೆ ಸೌಹಾರ್ದ ಪಂದ್ಯದಲ್ಲಿ ಪಾಲ್ಗೊಳ್ಳಲಿದೆ ಎಂದು ಕೇರಳ(Kerala) ಸರ್ಕಾರ ತಿಳಿಸಿದೆ. ಕೆಲ ದಿನಗಳ ಹಿಂದಷ್ಟೇ ಭಾರತದಲ್ಲಿ ಸ್ನೇಹಾರ್ಥ ಪಂದ್ಯವನ್ನಾಡುವ ಅರ್ಜೆಂಟೀನಾ ತಂಡದ ಪ್ರಸ್ತಾವವನ್ನು ಅಖಿಲ ಭಾರತ ಫುಟ್ಬಾಲ್ ಫೆಡರೇಷನ್(All India Football Federation) ತಿರಸ್ಕರಿಸಿತ್ತು. ಇದರಿಂದ ಭಾರತದ ಮೆಸ್ಸಿ ಅಭಿಮಾನಿಗಳು ಬೇಸರಗೊಂಡಿದ್ದರು. ಇದೀಗ ಅಭಿಮಾನಿಗಳ ಬಯಕೆಯನ್ನು ಕೇರಳ ಸರ್ಕಾರ ಈಡೇರಿಸಲು ಮುಂದಾಗಿದೆ.

ಭಾರತದಲ್ಲಿ ಸೌಹಾರ್ದ ಪಂದ್ಯ ಆಡುವ ಕುರಿತು ಅರ್ಜೆಂಟೀನಾ ಫುಟ್ಬಾಲ್​ ಫೆಡರೇಶನ್​ ಪ್ರಸ್ತಾವ ಸಲ್ಲಿಸಿತ್ತು. ಆದರೆ ಇದನ್ನು ಅಖಿಲ ಭಾರತ ಫುಟ್ಬಾಲ್ ಫೆಡರೇಷನ್‌ ತಿರಸ್ಕರಿಸಿತ್ತು. ಇದೇ ವಿಚಾರವಾಗಿ ಸ್ಪಷ್ಟಣೆ ನೀಡಿದ್ದ ವ್ಯವಸ್ಥಾಪಕ ಕಾರ್ಯದರ್ಶಿ ಶಾಜಿ ಪ್ರಭಕರನ್‌, ಅರ್ಜೆಂಟೀನಾ ತಂಡವು ಭಾರತೀಯ ಫುಟ್ಬಾಲ್ ಆಡಳಿತ ಸಂಸ್ಥೆಯ ಬಳಿ ಸ್ನೇಹಾರ್ಥ ಪಂದ್ಯ ಆಡುವ ಪ್ರಸ್ತಾವವನ್ನು ಮುಂದಿಟ್ಟಿತ್ತು. ಆದರೆ ಭಾರತ ಹಾಗೂ ಅರ್ಜೆಂಟೀನಾ ತಂಡಗಳ ನಡುವಿನ ಪಂದ್ಯ ಆಯೋಜನೆಗೆ ಭಾರಿ ಹಣದ ಅವಶ್ಯಕತೆ ಇರುವುದರಿಂದಾಗಿ, ಅರ್ಜೆಂಟೀನಾದ ಮನವಿಯನ್ನು ತಿರಸ್ಕರಿಸಿರುವುದಾಗಿ ತಿಳಿಸಿದ್ದರು.

ಆದರೆ ಇದೀಗ ಕೇರಳ ಸರ್ಕಾರ ಈ ಪಂದ್ಯವನ್ನು ನಡೆಸಲು ಮುಂದಾಗಿದೆ. ಗುರುವಾರ ಕೇರಳ ಸಿಎಂ ಪಿಣರಾಯ್​ ವಿಜಯನ್​(Pinarayi Vijayan) ಅವರು ಮೆಸ್ಸಿ ಅವರ ಜೆರ್ಸಿಯನ್ನು ಹಿಡಿದು ಅರ್ಜೆಂಟೀನಾ ತಂಡ ಕೇರಳಕ್ಕೆ ಬರುವ ವಿಚಾರವನ್ನು ತಿಳಿಸಿದ್ದರು. ಇದೇ ವಿಚಾರವಾಗಿ ಮಾತನಾಡಿದ ಕೇರಳದ ಕ್ರೀಡಾ ಸಚಿವ ವಿ.ಅಬ್ದುರಹಿಮಾನ್(V. Abdurahiman), ಮೆಸ್ಸಿ ಸಾರಥ್ಯದ ಅರ್ಜೆಂಟೀನಾ ತಂಡ ಭಾರತಕ್ಕೆ ಬರುವುದು ಬಹುತೇಕ ಖಚಿತವಾಗಿ ಈಗಾಗಲೇ ಎಲ್ಲ ಮಾತುಕತೆಗಳು ಮುಕ್ತಾಯಗೊಂಡಿದೆ. ಪಂದ್ಯಕ್ಕೆ ಖರ್ಚಾಗುವ ಎಲ್ಲ ಹಣವನ್ನು ಕೇರಳ ಸರ್ಕಾರವೇ ನೋಡಿಕೊಳ್ಳಲಿದೆ ಎಂದು ಹೇಳಿದ್ದಾರೆ. ಆದರೆ ಪಂದ್ಯ ಯಾವಾಗ ಮತ್ತು ಎಲ್ಲಿ ನಡೆಯಲಿದೆ ಎನ್ನುವುದು ಇನಷ್ಟೇ ತಿಳಿದು ಬರಬೇಕಿದೆ.

ಇದನ್ನೂ ಓದಿ Lionel Messi : ವಿಶ್ವ ಕಪ್​ ವಿಜೇತ ಅರ್ಜೆಂಟೀನಾ ತಂಡದ ಸಹ ಸದಸ್ಯರಿಗೆ ಚಿನ್ನದ ಐಪೋನ್ ಕೊಡಿಸಿದ ನಾಯಕ ಮೆಸ್ಸಿ!

ಕೇರಳದಲ್ಲಿ ಫುಟ್ಬಾಲ್​ ಕ್ರೇಜ್​ ಕ್ರಿಕೆಟ್​ಗಿಂತ ಹೆಚ್ಚು. ಅದರಲ್ಲೂ ಮೆಸ್ಸಿ ಅವರಿಗಂತೂ ಹೆಚ್ಚಿನ ಅಭಿಮಾನಿಗಳು ಇದ್ದಾರೆ. ಕಳೆದ ಕತಾರ್​ ಫಿಫಾ ವಿಶ್ವ ಕಪ್​ ವೇಳೆ ಸಾಗರದ ಆಳದಲ್ಲಿ ಮೆಸ್ಸಿಯ ಕಟೌಟ್ ನಿಲ್ಲಿಸಿದ್ದು ಭಾರಿ ಸುದ್ದಿಯಾಗಿತ್ತು. ಅರ್ಜೆಂಟೀನಾ ತಂಡಕ್ಕೆ ಬೆಂಬಲ ಸೂಚಿಸಿದ್ದಕ್ಕಾಗಿ ಸ್ವತಃ ಮೆಸ್ಸಿ ಅವರೇ ಟ್ವೀಟ್​ ಮೂಲಕ ಕೇರಳದ ಜನತೆಗೆ ಧನ್ಯವಾದ ತಿಳಿಸಿದ್ದರು. ಇದೀಗ ನೆಚ್ಚಿನ ಆಟಗಾರ ತಮ್ಮ ತವರಿಗೆ ಬರುತ್ತಿದ್ದಾರೆ ಎನ್ನುವ ವಿಷಯ ತಿಳಿದಿರುವ ಕೇರಳದ ಜನತೆಯಲ್ಲಿ ಸಂಭ್ರಮ ಮನೆ ಮಾಡಿದೆ.

Exit mobile version