Site icon Vistara News

ಅಯೋಧ್ಯೆಗೆ ಭೇಟಿ ನೀಡಿ ಶ್ರೀರಾಮನ ದರ್ಶನ ಪಡೆಯಲಿದ್ದೇನೆ ಎಂದ ದಕ್ಷಿಣ ಆಫ್ರಿಕಾದ ಸ್ಟಾರ್​ ಕ್ರಿಕೆಟಿಗ

keshav maharaj

ನವದೆಹಲಿ: ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ಭವ್ಯ ರಾಮಮಂದಿರದ (Ram Mandir) ಲೋಕಾರ್ಪಣೆಗೆ ದಿನಗಣನೆ ಆರಂಭವಾಗಿದೆ. ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ರಾಮಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಿದ್ದಾರೆ. ಇದಕ್ಕಾಗಿ ದೇಶದ ಸಾವಿರಾರು ಗಣ್ಯರು, ಸಾಧು-ಸಂತರು, ಸಾಧಕರು, ಕರ ಸೇವಕರನ್ನು ಆಹ್ವಾನಿಸಲಾಗುತ್ತಿದೆ. ಇದೀಗ ಭಾರತ ಮೂಲದ ದಕ್ಷಿಣ ಆಫ್ರಿಕಾ ಕ್ರಿಕೆಟಿಗ ಕೇಶವ್​ ಮಹರಾಜ್(Keshav Maharaj) ರಾಮಮಂದಿರಕ್ಕೆ ಭೇಟಿ ಕೊಡುತ್ತೇನೆ ಎಂದಿದ್ದಾರೆ.

ಹೌದು, ಆಂಜನೇಯನ ಪರಮ ಭಕ್ತನಾಗಿರುವ ದಕ್ಷಿಣ ಆಫ್ರಿಕಾ ತಂಡದ ಸ್ಟಾರ್​ ಸ್ಪಿನ್ನರ್​ ಕೇಶವ್​ ಮಹಾರಾಜ್ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರ ಲೋಕಾರ್ಪಣೆಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದು, ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ಭೇಟಿ ನೀಡುವುದು ನನ್ನ ಈ ವರ್ಷದ ಪ್ರಮುಖ ಗುರಿ ಎಂದಿದ್ದಾರೆ.

keshav maharaj bat om


“ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ವೇಳೆ ನಾನು ಅಯೋಧ್ಯೆಯಲ್ಲಿ ಇರಲು ಸಾಧ್ಯವಾಗುವುದಿಲ್ಲ. ಆದರೆ ನಾನು ಖಂಡಿತಾ ಅಯೋಧ್ಯೆಗೆ ಹೋಗಿ ಶ್ರೀರಾಮನ ದರ್ಶನ ಪಡೆಯುತ್ತೇನೆ” ಎಂದು ಕೇಶವ ಮಹಾರಾಜ್ ಹೇಳಿದ್ದಾರೆ.

ಕೇಶವ ಮಹಾರಾಜ್‌ ಅವರು ಬ್ಯಾಟಿಂಗ್​ ನಡೆಸಲು ಮೈದಾನಕ್ಕೆ ಬಂದಾಗಲೆಲ್ಲ ‘ರಾಮ್ ಸಿಯಾ ರಾಮ್’ ಹಾಡನ್ನು ಸ್ಟೇಡಿಯಂನಲ್ಲಿ ಜೋರಾಗಿ ಹಾಕಲಾಗುತ್ತದೆ. ಈ ಹಾಡನ್ನು ಕೇಳಿದರೆ ತನಗೆ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಎಂದು ಹಿಂದೊಮ್ಮೆ ಸಂದರ್ಶನದಲ್ಲಿ ಅವರು ಹೇಳಿದ್ದರು.

ಇದನ್ನೂ ಓದಿ Viral Video: ‘ರಾಮ್ ಸಿಯಾ ರಾಮ್’ ಕುರಿತು ಸಂಭಾಷಣೆ ನಡೆಸಿದ ರಾಹುಲ್-ಮಹಾರಾಜ್

keshav maharaj bat om


ಕೇಶವ್​ ಮಹಾರಾಜ್​ ಮೂಲತಃ ಭಾರತೀಯರಾಗಿದ್ದು, ಆಫ್ರಿಕಾದಲ್ಲಿ ನೆಲೆಸಿದ್ದಾರೆ. ಆದರೆ ಅವರು ಭಾರತಕ್ಕೆ ಬಂದಾಗಲೆಲ್ಲಾ ಕುಟುಂಬ ಸಮೇತರಾಗಿ ಇಲ್ಲಿನ ದೇವಸ್ಥಾನಗಳಿಗೆ ಭೇಟಿ ನೀಡುತ್ತಾರೆ. ಕಳೆದ ವರ್ಷ ಭಾರತದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್​ ಟೂರ್ನಿಯ ವೇಳೆ ಮಹರಾಜ್​ ಕೇರಳದ ದೇವಸ್ಥಾನವೊಂದಕ್ಕೆ ಭಟಿ ನೀಡಿ ಪೂಜೆ ಸಲ್ಲಿಸಿದ್ದರು. ಈ ಫೋಟೊಗಳು ವೈರಲ್​ ಆಗಿತ್ತು. ಇದಲ್ಲದೆ ತಮ್ಮ ಬ್ಯಾಟ್ ಮೇಲೆ ಓಂ ಎಂದು ಬರೆದುಕೊಂಡಿದ್ದಾರೆ.

ರಾಮ ಮಂದಿರ ಉದ್ಘಾಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಸಚಿನ್‌!


ಟೀಮ್​ ಇಂಡಿಯಾದ ಮಾಜಿ ಕ್ರಿಕೆಟಿಗ, ಭಾರತ ರತ್ನ ಸಚಿನ್​ ತೆಂಡೂಲ್ಕರ್(Sachin Tendulkar)​ ಅವರಿಗೂ ರಾಮಮಂದಿರ ಉದ್ಘಾಟನೆಯ ಆಹ್ವಾನವನ್ನು ನೀಡಲಾಗಿದೆ. ಸಚಿನ್​ ಈ ಆಹ್ವಾನವನ್ನು ಸಂತಸದಿಂದಲೇ ಸ್ವೀಕರಿಸಿದ್ದು ಸಮಾರಂಭದಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ. ಅಯೋಧ್ಯೆಯಲ್ಲಿ ನಡೆಯುವ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ 6,000ಕ್ಕೂ ಹೆಚ್ಚು ಗಣ್ಯರು ಪಾಲ್ಗೊಳ್ಳುವ ನಿರೀಕ್ಷೆಯಿದೆ.


ಸೆಪ್ಟೆಂಬರ್​ನಲ್ಲಿ ವಾರಣಾಸಿಯಲ್ಲಿ ಶಂಕುಸ್ಥಾಪನೆಗೊಂಡ ಅಂತಾರಾಷ್ಟ್ರೀಯ(international cricket stadium in Varanasi) ಕ್ರಿಕೆಟ್ ಸ್ಟೇಡಿಯಂನ ಸಮಾರಂಭದಲ್ಲಿ ಸಚಿನ್​ ತೆಂಡೂಲ್ಕರ್​ ಅವರು ಗಣ್ಯ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದರು. ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಭಾರತೀಯ ಕ್ರಿಕೆಟ್​ ಮಂಡಳಿಯ ವತಿಯಿಂದ ಸಚಿನ್​ ತೆಂಡೂಲ್ಕರ್​ ಅವರು “ನವೋ” ಎಂದು ಬರೆದ ಟೀಮ್​ ಇಂಡಿಯಾ ಜೆರ್ಸಿಯನ್ನು ನೀಡಿ ಗೌರವಿಸಿದ್ದರು. 

Exit mobile version