Site icon Vistara News

ಮಲ್ಲಕಂಭ, ಯೋಗಾಸನ ವಿಭಾಗ ಸೇರ್ಪಡೆ: ಭಾನುವಾರದಿಂದ ಖೇಲೊ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌

ಬೆಂಗಳೂರು: ದೇಶದ ಪ್ರತಿಷ್ಠಿತ ಕ್ರಿಡಾಕೂಟವಾಗಿ ರೂಪುಗೊಂಡಿರುವ ಖೇಲೊ ಇಂಡಿಯಾ ಯೂನಿವರ್ಸಿಟಿ ಗೇಮ್ಸ್-2021ರಲ್ಲಿ (Khelo India university games) ದೇಶೀಯ ಕ್ರೀಡೆಗಳಾದ ಮಲ್ಲಕಂಭ ಹಾಗೂ ಯೋಗಾಸನಗಳನ್ನೂ ಸೇರ್ಪಡೆ ಮಾಡಲಾಗಿದೆ.

ಭಾನುವಾರ ಸಂಜೆ ಕಂಠೀರವ ಕ್ರೀಡಾಂಗಣದಲ್ಲಿ ಎರಡನೇ ಆವೃತ್ತಿಯ ಖೇಲೋ ಇಂಡಿಯಾ ವಿವಿ ಗೇಮ್ಸ್‌ ಉದ್ಘಾಟನೆಗೊಳ್ಳಲಿದೆ. 2020ರಲ್ಲಿ ಒಡಿಶಾದಲ್ಲಿ ನಡೆದ ಕ್ರೀಡಾಕೂಟದಲ್ಲಿ (khelo india games 2020) 17 ಕ್ರೀಡೆಗಳನ್ನು ಅಳವಡಿಸಲಾಗಿತ್ತು. ಈ ಬಾರಿ ದೇಶೀಯ ಕ್ರೀಡೆಗಳಾದ ಮಲ್ಲಕಂಬ ಮತ್ತು ಯೋಗಾಸನ ಸೇರಿದಂತೆ ಒಟ್ಟು 20 ಕ್ರೀಡೆಗಳಲ್ಲಿ ಸ್ಪರ್ಧೆಗಳು ನಡೆಯಲಿವೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರ, ಭಾರತೀಯ ಕ್ರೀಡಾ ಪ್ರಾಧಿಕಾರ(SAI), ಜೈನ್‌ ವಿಶ್ವವಿದ್ಯಾನಿಲಯಗಳ ಸಹಭಾಗಿತ್ವದಲ್ಲಿ ಕ್ರೀಡಾಕೂಟ ನಡೆಯುತ್ತಿದೆ. ಕ್ರೀಡಾ ಕೇಂದ್ರಗಳು, ಮೈದಾನಗಳು ಈಗಾಗಲೆ ಸಜ್ಜಾಗಿವೆ. ಕ್ರೀಡಾಕೂಟದಲ್ಲಿ ದೇಶದೆಲ್ಲೆಡೆಯ 200 ವಿಶ್ವವಿದ್ಯಾನಿಲಯಗಳಿಂದ ಸುಮಾರು 4,500ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಈಜುಪಟು ಶ್ರೀಹರಿ ನಟರಾಜನ್, ಒಲಂಪಿಯನ್ ಶೂಟರ್‌ಗಳಾದ ದಿವ್ಯಾನೇಶ್ ಸಿಂಗ್, ಮನು ಬಾಕರ್, ಒಲಂಪಿಯನ್ ಅಥ್ಲೆಟಿಕ್ಸ್ ದೂತಿ ಚಾಂದ್ ಸೇರಿದಂತೆ ಹಲವು ಸ್ಟಾರ್ ಕ್ರೀಡಾಪಟುಗಳು ಪಾಲ್ಗೊಳ್ಳುತ್ತಿದ್ದಾರೆ. ಕರ್ನಾಟಕದ ಒಟ್ಟು 12 ವಿವಿಗಳಿಂದ 291 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಅಥ್ಲೆಟಿಕ್ಸ್‌, ಈಜು, ಕರಾಟೆ, ಯೋಗ, ಮಲ್ಲಕಂಬ ಕ್ರೀಡೆಗಳಲ್ಲಿ ಹೆಚ್ಚಿನ ಪದಕಗಳನ್ನು ನಿರೀಕ್ಷಿಸಲಾಗಿದೆ.

8 ಸಾವಿರ ಜನರಿಗೆ ಊಟೋಪಚಾರ

ಗೇಮ್ಸ್‌ನಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳು, ಅಧಿಕಾರಿಗಳು, ಸಹಾಯಕ ಸಿಬ್ಬಂದಿ ಸೇರಿದಂತೆ ಸುಮಾರು 8 ಸಾವಿರ ಜನರಿಗೆ ವಸತಿ ವ್ಯವಸ್ಥೆ, ಊಟದ ವ್ಯವಸ್ಥೆ ಮಾಡಲಾಗಿದೆ. ಜೈನ್‌ ವಿವಿ, ಶ್ರೀ ರವಿಶಂಕರ್ ಗುರೂಜಿಯವರ ಆರ್ಟ್ ಆಫ್‌ ಲಿವಿಂಗ್‌ ಹಾಗೂ ನಗರದ ಕೆಲ ಹೋಟೆಲ್‌ಗಳಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‌ಗಳಲ್ಲಿ 2000, ಜೈನ್ ವಿವಿ ಕ್ಯಾಂಪಸ್ 2800, ಆರ್ಟ್ ಲಿವಿಂಗ್ ಸೆಂಟರ್ ನಲ್ಲಿ 1500 ರೂಮ್‌ಗಳನ್ನು ಬುಕ್ ಮಾಡಲಾಗಿದೆ. ಕ್ರೀಡಾ ಕೇಂದ್ರಗಳಿಗೆ ಪ್ರಯಾಣಿಸಲು 2800 ಕಾರುಗಳು, ಬಿಎಂಟಿಸಿ ವತಿಯಿಂದ 110 ವೋಲ್ವೊ, 50 ಎಲೆಕ್ಟ್ರಿಕ್ ಬಸ್‌ ವ್ಯವಸ್ಥೆ ಕಲ್ಪಿಸಲಾಗಿದೆ.

ಉಪರಾಷ್ಟ್ರಪತಿಯವರಿಂದ ಉದ್ಘಾಟನೆ

ಭಾನುವಾರ ಸಂಜೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಂದ ಕ್ರೀಡಾಕೂಟ ಉದ್ಘಾಟನೆಯಾಗಲಿದೆ ಎಂದು ಕ್ರೀಡಾ ಸಚಿವ ಡಾ. ನಾರಾಯಣಗೌಡ ಮಾಹಿತಿ ನೀಡಿದ್ದಾರೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಅನುರಾಗ್ ಠಾಕೂರ್, ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಂತಾದವರು ಉಪಸ್ಥಿತರಿರಲಿದ್ದಾರೆ. ಮೇ 3ರಂದು ಜೈನ್‌ ಗ್ಲೋಬಲ್‌ ಕ್ಯಾಂಪಸ್‌ನಲ್ಲಿ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಾಗೂ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಮತ್ತಿತರ ಗಣ್ಯರು ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದು ನಾರಾಯಣಗೌಡ ತಿಳಿಸಿದ್ದಾರೆ.

ಕರ್ನಾಟಕದ ಸಾಂಸ್ಕೃತಿಕ ವೈಭವ ಅನಾವರಣ

ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕದ ಮತ್ತು ಭಾರತದ ಶ್ರೀಮಂತ ಸಾಂಸ್ಕೃತಿಕ ವೈಭವವನ್ನು ಪ್ರತಿನಿಧಿಸುವ ʼಸಾಂಸ್ಕೃತಿಕ ಕಾರ್ಯಕ್ರಮʼಗಳನ್ನು ಪ್ರದರ್ಶಿಸಲಾಗುವುದು. ಲೇಸರ್‌ ಲೈಟ್ ಪ್ರದರ್ಶನ, ಚಂದನ್‌ ಶೆಟ್ಟಿ ಮತ್ತು ತಂಡದವರಿಂದ ನೃತ್ಯ ಪ್ರದರ್ಶನವಿರಲಿದೆ. ಕರ್ನಾಟಕದ ಸಾಂಸ್ಕೃತಿಕ, ಜಾನಪದ ಕಲಾ ಪ್ರದರ್ಶನ ಹಾಗೂ ಭಾರತದ ವಿಭಿನ್ನ ಡೊಳ್ಳು ವಾದನ ನಡೆಯಲಿದೆ. ಮಲ್ಲಕಂಬ ಪ್ರದರ್ಶನ, ವಂದೇ ಮಾತರಂ ಗೀತೆಯೊಂದಿಗೆ ʼಸ್ವಾತಂತ್ರ್ಯ ಅಮೃತ ಮಹೋತ್ಸವʼದ ನೃತ್ಯ ಪ್ರದರ್ಶನ, ಕಿಂಗ್ಸ್‌ ಯುನೈಟೆಡ್‌ ನೃತ್ಯ ತಂಡದವರಿಂದ ʼಯುವ ಶಕ್ತಿಯ ಸಂದೇಶʼ ಸಾರುವ “ಆಕ್ರೋಬ್ಯಾಟಿಕ್‌” ಪ್ರದರ್ಶನ ಇರಲಿದೆ. ಕ್ರೀಡಾಕೂಟದ ಶುಭ ಸ್ಮರಣೆಯಲ್ಲಿ ಭಾರತೀಯ ಅಂಚೆ ಇಲಾಖೆಯ ವತಿಯಿಂದ ವಿಶೇಷವಾದ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಗುತ್ತಿದೆ.

ಕರೊನಾ ಮುಂಜಾಗ್ರತಾ ಕ್ರಮ

ಕೊರೋನಾ ಸೋಂಕು ಕಡಿಮೆ ಆಗಿದೆಯೇ ವಿನಃ ದೂರ ಆಗಿಲ್ಲ. ಆ ನಿಟ್ಟಿನಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಪ್ರತಿ ಕ್ರೀಡಾಪಟು ಎರಡು ಡೋಸ್‌ ಕೋವಿಡ್ ಲಸಿಕೆ ಪಡೆದಿರಬೇಕು ಎಂದು ನಾರಾಯಣಗೌಡ ತಿಳಿಸಿದ್ದಾರೆ. ಒಂದು ವೇಳೆ ಯಾವುದೇ ಕ್ರೀಡಾಪಟು, ಅಧಿಕಾರಿ, ಸಹಾಯಕ ಸಿಬ್ಬಂದಿಗೆ ಸೋಂಕು ದೃಢಪಟ್ಟರೆ ಅವರಿಗೆ ಕ್ಯಾಂಪಸ್‌ ಒಳಗಡೆಯೇ ಪ್ರತ್ಯೇಕ ಐಸೋಲೇಸನ್‌ ವ್ಯವಸ್ಥೆ ಮಾಡಲಾಗಿದೆ. ನಿರಂತರವಾಗಿ ಕೋವಿಡ್‌ ಟೆಸ್ಟ್ ನಡೆಸಲು ವ್ಯವಸ್ಥೆ ಮಾಡಲಾಗಿದೆ. ಸದಾ ವೈದ್ಯಕೀಯ ತಂಡವೂ ಕಾರ್ಯನಿರ್ವಹಿಸಲಿದೆ. ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಕ್ರೀಡಾಪಟುಗಳಿಗೂ ವೈದ್ಯಕೀಯ ವಿಮೆ ಮಾಡಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಇದನ್ನೂ ಓದಿ: IPL 2022 | ದುಬಾರಿ ದುಡ್ಡಿಗೆ ಮಾರಾಟವಾದವರು ಹೇಗೆ ಆಡಿದರು ನೋಡಿ !

261 ಚಿನ್ನದ ಪದಕಗಳು

ವಿಜೇತ ಕ್ರೀಡಾಪಟುಗಳಿಗೆ ಪದಕ ಪ್ರದಾನ ಮಾಡುವಾಗ ರಾಜ್ಯದ ಸಚಿವರು ಮತ್ತು ಇತರ ಗಣ್ಯರನ್ನು ಆಹ್ವಾನಿಸಿ ಪ್ರಶಸ್ತಿ ನೀಡಲಾಗುವುದು ಎಂದು ನಾರಾಯಣಗೌಡ ಮಾಹಿತಿ ನೀಡಿದರು. ಒಟ್ಟು 261 ಚಿನ್ನದ ಪದಕಗಳು, 261 ಬೆಳ್ಳಿಯ ಪದಕಗಳು 365 ಕಂಚಿನ ಪದಕಗಳನ್ನು ಕ್ರೀಡಾ ಸಾಧಕರಿಗೆ ಪುರಸ್ಕರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಖೇಲೋ ಇಂಡಿಯಾಗೆ ಬರುವವರಿಗೆ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯಿಂದ ರಾಜ್ಯದ ಪ್ರೇಕ್ಷಣೀಯ ಸ್ಥಳಗಳ ಪ್ರವಾಸದ ಪ್ಯಾಕೇಜ್ ಒದಗಿಸಲಾಗಿದೆ. ಸ್ತ್ರೀ ಶಕ್ತಿಗೆ ಹೆಚ್ಚಿನ ಉತ್ತೇಜನ ನೀಡುವ ಉದ್ದೇಶದಿಂದ ಈ ಬಾರಿಯ ಕ್ರೀಡಾಕೂಟದಲ್ಲಿ ಸ್ವಸಹಾಯ ಸಂಘಗಳ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸಚಿವ ನಾರಾಯಣಸ್ವಾಮಿ ತಿಳಿಸಿದರು.

Exit mobile version