ಬೆಂಗಳೂರು: ತಮ್ಮ ಮಗನ ಸಾವಿಗೆ ಆಯೋಜಕರೇ ಕಾರಣ ಎಂದು Kickboxing ಪಟು ನಿಖಿಲ್ ಸುರೇಶ್ ಅವರ ಪೋಷಕರು ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬೆಂಗಳೂರಿನ ಕೆಂಗೇರಿಯಲ್ಲಿ ಜುಲೈ ೧೦ರಂದು ನಡೆದ Kickboxing ರಾಜ್ಯ ಮಟ್ಟದ ಸ್ಪರ್ಧೆಯ ವೇಳೆ ಮೈಸೂರಿನ ಸ್ಪರ್ಧಿ ನಿಖಿಲ್ ಸುರೇಶ್ ಎದುರಾಳಿಯ ಹೊಡೆತಕ್ಕೆ ರಿಂಗ್‌ನಲ್ಲಿಯೇ ಕುಸಿದು ಬಿದ್ದು, ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಬುಧವಾರ ನಿಖಿಲ್ ತಂದೆ ಸುರೇಶ್ ಅವರು ಬೆಂಗಳೂರಿನ ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಅಕಾಡೆಮಿ ಆಫ್ ಮಾರ್ಷಲ್ ಸೈನ್ಸ್ ತಂಡದೊಂದಿಗೆ ನನ್ನ ಪುತ್ರ ಬೆಂಗಳೂರಿನಲ್ಲಿ ನಡೆಯುವ ಸ್ಪರ್ಧೆಗೆ ತೆರಳಿದ್ದ. ಜುಲೈ ೧೦ರಂದು ಬೆಂಗಳೂರಿನಿಂದ ಫೋನ್ ಬಂದಿದ್ದು, ನಿಖಿಲ್ ಸ್ಪರ್ಧೆಯ ವೇಳೆ ಗಾಯಗೊಂಡಿದ್ದಾನೆ ಎಂದು ಮಾಹಿತಿ ಬಂದಿದೆ. ಅಂದು ಸಂಜೆ ಅಕಾಡೆಮಿಯ ಕೆಲವರು ನಮ್ಮ ಮನೆಗೆ ಬಂದು ಆಸ್ಪತ್ರೆಗೆ ದಾಖಲಾಗಿರುವ ಮಾಹಿತಿ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸುರಕ್ಷತೆ ವೈಫಲ್ಯದ ಅನುಮಾನ?
ಘಟನೆ ಬಗ್ಗೆ ಆಯೋಜಕರು ಹಾಗೂ ಮುಖ್ಯ ಕೋಚ್ ನವೀನ್ ರವಿಶಂಕರ್ ಬಳಿ ವಿಚಾರಿಸಿದಾಗ, ಸ್ಪರ್ಧೆಯ ವೇಳೆ ತಲೆಗೆ ಪೆಟ್ಟಾಗಿತ್ತು ಎಂದು ಹೇಳಿದ್ದಾರೆ. ಆದರೆ, ಮಗನ ಸಾವಿಗೆ ಅವರ ನಿರ್ಲಕ್ಷ್ಯವೇ ಕಾರಣ. ಸ್ಪರ್ಧೆಯನ್ನು ಜಿಮ್ ಒಂದರ ಐದನೇ ಮಹಡಿಯಲ್ಲಿ ಆಯೋಜಿಸಲಾಗಿತ್ತು. ರಿಂಗ್ ಕೆಳಗೆ ತೆಳುವಾದ ಮ್ಯಾಟ್ ಹಾಕಿದ್ದ ಕಾರಣ ನಿಖಿಲ್ ತಲೆಗೆ ಪೆಟ್ಟಾಗಿದೆ. ಅಂತೆಯೇ ಸ್ಥಳದಲ್ಲಿ ತುರ್ತು ಚಿಕಿತ್ಸೆ ನೀಡಲು ಪ್ಯಾರಾ ಮೆಡಿಕಲ್ ಸಿಬ್ಬಂದಿ ಇರಲಿಲ್ಲ. ಐದನೇ ಮಹಡಿಯಿಂದ ಗಾಯಗೊಂಡ ನಿಖಿಲ್‌ನನ್ನು ಕರೆದುಕೊಂಡು ಬಂದು ಆಸ್ಪತ್ರೆಗೆ ಸೇರಿಸಲು ತಡ ಮಾಡಲಾಗಿದೆ. ಆಂಬ್ಯುಲೆನ್ಸ್ ಇಲ್ಲದ ಕಾರಣ ಖಾಸಗಿ ವಾಹನದಲ್ಲಿ ನಾಗರಬಾವಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ರೀತಿಯೂ ಆಸ್ಪತ್ರೆಗೆ ತಲುಪಲು ತಡವಾಗಿದೆ. ಇವೆಲ್ಲ ಕಾರಣಕ್ಕೆ ಪುತ್ರ ಮೃತಪಟ್ಟಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: Kickboxing Death | ಬೆಂಗಳೂರಿನಲ್ಲಿ ಒಂದೇ ಏಟಿಗೆ ರಿಂಗ್‌ನಲ್ಲೇ ಬಾಕ್ಸರ್ ಸಾವು