Site icon Vistara News

ಕ್ರಿಕೆಟ್​ ದೇವರು ಸಚಿನ್​ ತೆಂಡೂಲ್ಕರ್​ ವಿಶ್ವದಾಖಲೆ ಮೇಲೆ ಕಣ್ಣಿಟ್ಟ ಕಿಂಗ್​ ಕೊಹ್ಲಿ

virat kohli practice session

ಮುಂಬಯಿ: ಈಗಾಗಲೇ ಕ್ರಿಕೆಟ್​ ದೇವರು ಎಂದು ಕರೆಯಲ್ಪಡುವ ಸಚಿನ್​ ತೆಂಡೂಲ್ಕರ್(sachin tendulkar)​ ಅವರ ಹಲವು ದಾಖಲೆಗಳನ್ನು ಮುರಿದಿರುವ ವಿರಾಟ್​ ಕೊಹ್ಲಿ(Virat Kohli) ಇದೀಗ ಮತ್ತೊಂದು ವಿಶ್ವ ದಾಖಲೆಯನ್ನು ಮುರಿಯುವ ಸನಿಹದಲ್ಲಿದ್ದಾರೆ. ಏಷ್ಯಾ ಕಪ್​ ಕ್ರಿಕೆಟ್(Asia Cup 2023)​ ಟೂರ್ನಿಯಲ್ಲಿ 102 ರನ್​ ಬಾರಿಸಿದರೆ, ಸಚಿನ್​ ಅವರ ವಿಶ್ವ ದಾಖಲೆಯೊಂದು ಪತನಗೊಳ್ಳಲಿದೆ.

ವಿಶ್ವದಾಖಲೆಗೆ ಸನಿಹ

ವಿರಾಟ್​ ಕೊಹ್ಲಿ ಅವರು ಏಷ್ಯಾಕಪ್​ನಲ್ಲಿ ಒಟ್ಟಾರೆ 102 ರನ್​ ಬಾರಿಸಿದರೆ ಏಕದಿನ ಮಾದರಿಯಲ್ಲಿ 13 ಸಾವಿರ ರನ್​ ಪೂರ್ತಿಗೊಳಿಸಲಿದ್ದಾರೆ. ಇದೇ ವೇಳೆ ಸಚಿನ್​ ಅವರ ಹೆಸರಿನಲ್ಲಿದ ದಾಖಲೆ ಮುರಿಯಲಿದ್ದಾರೆ. ಅತಿ ಕಡಿಮೆ ಏಕದಿನ ಪಂದ್ಯಗಳಲ್ಲಿ ವೇಗವಾಗಿ 13 ಸಾವಿರ ರನ್​ ಗಳಿಸಿದ ವಿಶ್ವದ ಮೊದಲ ಆಟಗಾರ ಎಂಬ ಹಿರಿಮೆಗೆ ಪಾತ್ರರಾಗಲಿದ್ದಾರೆ. ಈ ಮೂಲಕ ಸಚಿನ್​ ಅವರ ದಾಖಲೆ ಮುರಿಯಲಿದ್ದಾರೆ. ಸಚಿನ್​ ಅವರು 321 ಪಂದ್ಯಗಳನ್ನು ಆಡುವ ಮೂಲಕ ಈ ದಾಖಲೆ ಬರೆದಿದ್ದರು. ಸದ್ಯ ಕಿಂಗ್​ ಕೊಹ್ಲಿ 275 ಏಕದಿನ ಪಂದ್ಯ ಆಡಿ 12,898 ರನ್​ ಗಳಿಸಿದ್ದಾರೆ. ಸಚಿನ್​ ಮಾತ್ರವಲ್ಲದೆ ಆಸೀಸ್​ ಮಾಜಿ ನಾಯಕ ರಿಕಿ ಪಾಂಟಿಂಗ್​, ಲಂಕಾದ ಕುಮಾರ ಸಂಗಕ್ಕರ ಮತ್ತು ಸನತ್​ ಜಯಸೂರ್ಯ ದಾಖಲೆಯೂ ಪತನಗೊಳ್ಳಲಿದೆ.

ಏಷ್ಯಾಕಪ್​ನಲ್ಲಿಯೂ ದಾಖಲೆ ನಿರ್ಮಿಸಲು ಅವಕಾಶ

ವಿರಾಟ್ ಕೊಹ್ಲಿ ಏಷ್ಯಾಕಪ್ ಟೂರ್ನಿಯಲ್ಲಿ ಈವರೆಗೆ ಕೇವಲ 11 ಪಂದ್ಯಗಳನ್ನು ಆಡಿದ್ದಾರೆ. ಒಟ್ಟು 613 ರನ್ ಬಾರಿಸಿದ್ದಾರೆ. 2012ರ ಏಷ್ಯಾಕಪ್ ಟೂರ್ನಿಯ ಪಾಕ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಸಿಡಿಲಬ್ಬರ ಬ್ಯಾಟಿಂಗ್​ ನಡೆಸಿ 183 ರನ್ ಬಾರಿಸಿ ಪಾಕ್​ಗೆ ವಿರಾಟ ದರ್ಶನ ತೋರಿಸಿದ್ದರು. 2014ರಲ್ಲಿ ಧೋನಿ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಿದ್ದರೂ ಫೈನಲ್​ ತಲುಪಿಸುವಲ್ಲಿ ವಿಫಲರಾಗಿದ್ದರು. ಕೋಹ್ಲಿ ಅವರು ಈ ಬಾರಿ ಉತ್ತಮ ಬ್ಯಾಟಿಂಗ್​ ಫಾರ್ಮ್​ನಲ್ಲಿದ್ದು 35 ರನ್​ ಬಾರಿಸಿದರೆ ಮಾಜಿ ನಾಯಕ ಮಹೇಂದ್ರ ಸಿಂಗ್​ ಅವರ ರನ್​ ದಾಖಲೆಯನ್ನು ಮುರಿದು ಈ ಟೂರ್ನಿಯಲ್ಲಿ ಅತ್ಯಧಿಕ ರನ್​ ಗಳಿಸಿದ ಭಾರತೀಯರ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಲಿದ್ದಾರೆ. ಒಂದೊಮ್ಮೆ ವಿರಾಟ್​ ಅವರು 358 ರನ್​ ಬಾರಿಸಿದರೆ ಸಚಿನ್​ ಅವರ ಸರ್ವಕಾಲಿಕ 971 ರನ್​ ದಾಖಲೆ ಪತನಗೊಳ್ಳಲಿದೆ. ಹೀಗೆ ಕೊಹ್ಲಿಗೆ ಎರಡು ದಿಗ್ಗಜ ಆಟಗಾರರ ದಾಖಲೆಯನ್ನು ಮುರಿಯುವ ಅವಕಾಶವಿದೆ.

ಇದನ್ನೂ ಓದಿ Asia Cup 2023: ಪಾಕ್​ ವಿರುದ್ಧದ ಪಂದ್ಯಕ್ಕೆ ರಣತಂತ್ರ ರೂಪಿಸಿದ ರೋಹಿತ್​ ಶರ್ಮ

ಅತ್ಯಧಿಕ ವೈಯಕ್ತಿಕ ರನ್​ ದಾಖಲೆಯಲ್ಲೂ ಕೊಹ್ಲಿ ಮೇಲುಗೈ

ಏಷ್ಯಾಕಪ್​ ಟೂರ್ನಿಯಲ್ಲಿ ಪಂದ್ಯವೊಂದರಲ್ಲಿ ಅತ್ಯಧಿಕ ವೈಯಕ್ತಿಕ ರನ್​ ಗಳಿಸಿದ ದಾಖಲೆ ವಿರಾಟ್​ ಕೊಹ್ಲಿ ಹೆಸರಿನಲ್ಲಿದೆ. ಸಾರಸ್ಯವೆಂದರೆ ಕಿಂಗ್​ ಕೊಹ್ಲಿ 2012ರಲ್ಲಿ ಪಾಕಿಸ್ತಾನ ವಿರುದ್ಧವೇ 183ರನ್​ ಬಾರಿಸಿದ್ದರು. ಈ ಸಾಧನೆಯ ಪಟ್ಟಿಯಲ್ಲಿ ಬಾಬರ್​ಗೆ(151) ದ್ವಿತೀಯ ಸ್ಥಾನ. ಮೂರನೇ ಸ್ಥಾನ ಯೂನಿಸ್​ ಖಾನ್​(144), ನಾಲ್ಕನೇ ಸ್ಥಾನ ಬಾಂಗ್ಲಾದ ಮುಸ್ಫಿಕರ್​ ರಹಿಂ(144) ಪಡೆದಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ನಡುವಣ ಮೊದಲ ಏಷ್ಯಾಕಪ್​ ಮುಖಾಮುಖಿ ಸೆಪ್ಟೆಂಬರ್​ 2ರಂದು ಶ್ರೀಲಂಕಾದ ಕ್ಯಾಂಡಿಯಲ್ಲಿ ನಡೆಯಲಿದೆ. ಈ ಪಂದ್ಯದ ವೀಕ್ಷಣೆಗಾಗಿ ಕ್ರಿಕೆಟ್​ ಅಭಿಮಾನಿಗಳು ಚಾತಕ ಪಕ್ಷಿಯಂತೆ ಕಾದು ಕುಳಿತಿದ್ದಾರೆ.

Exit mobile version