ಚೆನ್ನೈ: ಇಲ್ಲಿನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ನಾಯಕ ನಿತೀಶ್ ರಾಣಾ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಮತ್ತೊಮ್ಮೆ ದಂಡದ ಬಿಸಿ ಅನುಭವಿಸಿದ್ದಾರೆ. ಅವರಿಗೆ ಐಪಿಎಲ್ ಆಡಳಿತ ಮಂಡಳಿ 24 ಲಕ್ಷ ರೂಪಾಯಿ ದಂಡ ವಿಧಿಸಿದೆ. ಅದೇ ರೀತಿ ತಂಡದ ಇತರ ಆಟಗಾರರಿಗೂ ತಲಾ 6 ಲಕ್ಷ ರೂಪಾಯಿ ದಂಡವನ್ನು ಪಾವತಿ ಮಾಡುವಂತೆ ಸೂಚಿಸಲಾಗಿದೆ.
ಐಪಿಎಲ್ 2023ರ ಆವೃತ್ತಿಯಲ್ಲಿ ಚೆನ್ನೈನಲ್ಲಿ ನಡೆದ ಕೊನೇ ಪಂದ್ಯ ಅದಾಗಿತ್ತು. ಪಂದ್ಯದಲ್ಲಿ ಬಿರುಸಿನ ಅರ್ಧ ಶತಕ ಬಾರಿಸಿದ ರಾಣಾ ಸಿಎಸ್ಕೆ ವಿರುದ್ಧ ಗೆಲವು ಸಾಧಿಸಲು ತಂಡಕ್ಕೆ ನೆರವಾಗಿದ್ದರು. ಈ ಮೂಲಕ ನಾಲ್ಕ ಬಾರಿಯ ಚಾಂಪಿಯನ್ ಕೆಕೆಆರ್ ಐಪಿಎಲ್ನ ಪ್ಲೇಆಫ್ ರೇಸ್ನಲ್ಲಿ ಉಳಿದುಕೊಂಡಿತ್ತು. ಈ ಗೆಲುವಿನಲ್ಲಿ ಎಡಗೈ ಬ್ಯಾಟರ್ ರಿಂಕು ಸಿಂಗ್ (57) ಅವರ ಕೊಡುಗೆಯೂ ಇದೆ. ಆದರೆ, ಗೆಲುವಿನ ನಡುವೆಯೂ ಕೆಕೆಆರ್ ತಂಡ ನಿಧಾನಗತಿಯ ಬೌಲಿಂಗ್ ಕಾಯ್ದುಕೊಂಡಿತ್ತು. ಈ ತಪ್ಪಿಗಾಗಿ ರಾಣಾಗೆ ದಂಡ ವಿಧಿಸಲಾಗಿದೆ.
” ನಿಧಾನಗತಿಯ ಓವರ್ ರೇಟ್ ತಪ್ಪುಗಳಿಗೆ ಸಂಬಂಧಿಸಿದ ಐಪಿಎಲ್ನ ನಿಯಮದ ಅಡಿಯಲ್ಲಿ, ಕೆಕೆಆರ್ ತಂಡ ಎರಡನೇ ಬಾರಿ ಈ ತಪ್ಪು ಮಾಡುತ್ತಿದೆ. ಹೀಗಾಗಿ ನಾಯಕ ನಿತೀಶ್ ರಾಣಾ ಅವರಿಗೆ 24 ಲಕ್ಷ ರೂ.ಗಳ ದಂಡ ವಿಧಿಸಲಾಗಿದೆ. ಅಲ್ಲದೆ, ಇಂಪ್ಯಾಕ್ಟ್ ಸೇರಿದಂತೆ ಪ್ಲೇಯಿಂಗ್ ಇಲೆವೆನ್ನ ಪ್ರತಿಯೊಬ್ಬ ಸದಸ್ಯನಿಗೂ 6 ಲಕ್ಷ ರೂ.ಅಥವಾ ಪಂದ್ಯದ ಶುಲ್ಕದ 25 ಪ್ರತಿಶತದಷ್ಟು ದಂಡ ವಿಧಿಸಲಾಗಿದೆ ಎಂದು ಐಪಿಎಲ್ ಹೇಳಿಕೆಯಲ್ಲಿ ತಿಳಿಸಿದೆ.
ಹಿಂದೆಯೂ ಬಿದ್ದಿತ್ತು ದಂಡ
ವಿಶ್ವದ ಶ್ರೀಮಂತ ಟಿ 20 ಪಂದ್ಯಾವಳಿಯಾಗಿರುವ ಐಪಿಎಲ್ನ ಹಾಲಿ ಆವೃತ್ತಿಯಲ್ಲಿ ನಿತೀಶ್ ರಾಣಾಗೆ ಈ ಹಿಂದೆಯೂ ದಂಡ ಬಿದ್ದಿತ್ತು. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಆ ತಂಡದ ಬೌಲರ್ ರಿತಿಕ್ ಶೋಕಿನ್ ವಿರುದ್ಧ ಮೈದಾನದಲ್ಲೇ ಜಗಳವಾಡಿದ್ದರು. ಅದಕ್ಕಾಗಿ ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘನೆ ಆರೋಪದಡಿ ರಾಣಾಗೆ ದಂಡ ವಿಧಿಸಲಾಗಿತ್ತು. ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.21 ರ ಅಡಿಯಲ್ಲಿ ರಾಣಾ ಲೆವೆಲ್ 1 ಅಪರಾಧವನ್ನು ಒಪ್ಪಿಕೊಂಡಿದ್ದರು. ಆ ವೇಳೆ ಕೆಕೆಆರ್ ನಾಯಕನಿಗೆ ಪಂದ್ಯದ ಶುಲ್ಕದ ಶೇಕಡಾ 25ರಷ್ಟು ದಂಡ ವಿಧಿಸಲಾಗಿತ್ತು.
ಇದನ್ನೂ ಓದಿ ವ: ವWTC Final 2023 : ಭಾರತ, ಆಸ್ಟ್ರೇಲಿಯಾ ನಡುವಿನ ಡಬ್ಲ್ಯುಟಿಸಿ ಫೈನಲ್ ಪಂದ್ಯದಿಂದ ಹೊಸ ನಿಯಮ ಜಾರಿ
ಈ ಪಂದ್ಯದ ಬಗ್ಗೆ ಹೇಳುವುದಾದರೆ ಕೆಕೆಆರ್ ನಾಯಕ ರಾಣಾ ತ್ವರಿತ ಅರ್ಧಶತಕ (57*) ಗಳಿಸಿದರೆ, ರಿಂಕು ಸಿಂಗ್ 43 ಎಸೆತಗಳಲ್ಲಿ 54 ರನ್ ಗಳಿಸಿದರು. ಎಲ್ಲಾ 3 ವಿಭಾಗಗಳು ಉತ್ತಮವಾಗಿ ಕಾರ್ಯನಿರ್ವಹಿಸಿದರೆ, ನಮ್ಮ ಅವಕಾಶಗಳು ಉತ್ತಮವಾಗಿವೆ ಎಂದು ಹೇಳಿದ್ದರು. ಅಂತೆಯೇ ಅವರ ತಂಡ ಗೆಲುವು ಸಾಧಿಸಿತ್ತು. ಈ ವೇಳೆಯೂ ಮಾತನಾಡಿದ ನಿತೀಶ್ ರಾಣಾ, ನಮ್ಮ ಗೆಲುವಿನ ಶ್ರೇಯಸ್ಸು ಚಂದ್ರಕಾಂತ್ ಪಂಡಿತ್ ಅವರಿಗೆ ಸಲ್ಲುತ್ತದೆ ಎಂದ ಹೇಳಿದರು. ಪ್ರತಿಯೊಂದು ತಂಡವೂ ತವರಿನ ಸ್ಟೇಡಿಯಮ್ಗಳಲ್ಲಿ ತಮ್ಮದೇ ಆದ ಅನುಕೂಲಗಳನ್ನು ಹೊಂದಿವೆ. ಅಂತೆಯೇ ಚೆನ್ನೈ ಕೂಡ ಹೊಂದಿತ್ತು ನಾವು ಉತ್ತಮವಾಗಿ ಆಡಿದೆವು ಎಂದು ಹೇಳಿದ್ದಾರೆ.