ಕೋಲ್ಕೊತಾ: ಮುಂಬಯಿ ಮೂಲದ ಬಲಗೈ ಬ್ಯಾಟರ್ ಶ್ರೇಯಸ್ ಅಯ್ಯರ್ ಅವರ ಗಾಯದ ಸಮಸ್ಯೆ ಕುರಿತು ಇನ್ನೂ ಸ್ಪಷ್ಟತೆ ಇಲ್ಲ. ಅವರು ಯಾವಾಗ ಸಂಪೂರ್ಣ ಫೀಟ್ ಆಗಿ ಆಡುವರು ಎಂಬುದೂ ಗೊತ್ತಿಲ್ಲ. ಹೀಗಾಗಿ ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಎಡಗೈ ಬ್ಯಾಟರ್ ನಿತೀಶ್ ರಾಣಾಗೆ ಕೆಕೆಆರ್ ತಂಡದ ನಾಯಕತ್ವ ನೀಡಲಾಗಿದೆ. 2022ರಲ್ಲಿ ಶ್ರೇಯಸ್ ಅಯ್ಯರ್ ತಂಡದ ನಾಯಕರಾಗಿದ್ದರು. ಆದರೆ, ಅವರು ಈ ಬಾರಿ ಯಾವಾಗ ತಂಡ ಸೇರಿಕೊಳ್ಳುತ್ತಾರೆ ಎಂಬ ಬಗ್ಗೆ ಮಾಹಿತಿ ಇಲ್ಲದ ಕಾರಣ ತಾತ್ಕಾಲಿಕ ನಾಯಕರಾಗಿ ನಿತೀಶ್ ರಾಣಾಗೆ ಅವಕಾಶ ನೀಡಲಾಗಿದೆ.
ನಿತೀಶ್ ರಾಣಾ 2018ರಿಂದ ಕೋಲ್ಕೊತಾ ನೈಟ್ ರೈಡರ್ಸ್ ತಂಡದ ಪರವಾಗಿ ಆಡುತ್ತಿದ್ದಾರೆ. ಎಡಗೈ ಬ್ಯಾಟರ್ ಪ್ರತಿಯೊಂದು ಆವೃತ್ತಿಯಲ್ಲೂ 300ಕ್ಕೂ ಅಧಿಕ ರನ್ ಬಾರಿಸಿದ್ದಾರೆ. ಅದೇ ರೀತಿ ಅವರಿಗೆ ದೇಶಿಯ ಕ್ರಿಕೆಟ್ನಲ್ಲಿ ಡೆಲ್ಲಿ ತಂಡ ನಾಯಕತ್ವ ವಹಿಸಿದ ಅನುಭವವಿದೆ. ಅದೇ ರೀತಿ ಶ್ರೀಲಂಕಾ ವಿರುದ್ಧದ ತವರಿನ ಸರಣಿಯ ವೇಳೆ ನಿತೀಶ್ ರಾಣಾ ಭಾರತ ತಂಡಕ್ಕೆ ಆಯ್ಕೆಯಾಗಿದ್ದರು.
ಶ್ರೇಯಸ್ ಅಯ್ಯರ್ ಬಾರ್ಡರ್ ಗವಾಸ್ಕರ್ ಟ್ರೋಫಿಯ ನಾಲ್ಕನೇ ಪಂದ್ಯದ ವೇಳೆಗೆ ಬೆನ್ನು ನೋವಿಗೆ ಒಳಗಾಗಿದ್ದರು. ಹೀಗಾಗಿ ಕೋಲ್ಕೊತಾ ನೈಟ್ ರೈಡರ್ಸ್ ತಂಡಕ್ಕೆ ನಾಯಕರನ್ನು ಆಯ್ಕೆ ಮಾಡಲು ಸಾಧ್ಯವಾಗಿರಲಿಲ್ಲ. ವಿದೇಶಿ ಆಟಗಾರರಾದ ಆ್ಯಂಡ್ರೆ ರಸೆಲ್, ಸುನೀಲ್ ನರೈನ್ ಹಾಗೂ ನ್ಯೂಜಿಲ್ಯಾಂಡ್ನ ವೇಗದ ಬೌಲರ್ ಟಿಮ್ ಸೌಥಿ ಕೋಲ್ಕೊತಾ ತಂಡದಲ್ಲಿದ್ದಾರೆ. ಆದರೆ ಅವರಿಗೆ ನಾಯಕತ್ವ ನೀಡದೆ ರಾಣಾಗೆ ವಹಿಸಲಾಗಿದೆ.
ಶ್ರೇಯಸ್ ಅಯ್ಯರ್ ಸದ್ಯಕ್ಕೆ ಲಭ್ಯವಿಲ್ಲದ ಹೊರತಾಗಿಯೂ ಟೂರ್ನಿಯ ಕೊನೇ ಹಂತದಲ್ಲಿ ಸುಧಾರಿಸಿಕೊಂಡು ತಂಡ ಸೇರಬಹುದು ಎಂಬ ವಿಶ್ವಾಸವನ್ನು ಕೆಕೆಆರ್ ಮ್ಯಾನೇಜ್ಮೆಂಟ್ ಹೊಂದಿದೆ. ಹೀಗಾಗಿ ರಾಣಾಗೆ ತಾತ್ಕಾಲಿಕ ನಾಯಕತ್ವ ವಹಿಸಿದೆ. ನಾಯಕತ್ವ ಬದಲಾವಣೆ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ. ಶ್ರೇಯಸ್ ಬೇಗ ಗುಣಮುಖರಾಗಿ ತಂಡ ಸೇರಿಕೊಳ್ಳುವ ವಿಶ್ವಾಸವಿದೆ. ಅದೇ ರೀತಿ ನಿತೀಶ್ ರಾಣಾ ಅವರ ನೇತೃತ್ವದಲ್ಲಿ ತಂಡ ಅತ್ಯುತ್ತಮ ಪ್ರದರ್ಶನ ನೀಡಲಿದ ಎಂದು ಹೇಳಿದ್ದಾರೆ.
ಹೆಡ್ಕೋಚ್ ಚಂದ್ರಕಾಂತ್ ಪಾಟೀಲ್ ಹಾಗೂ ತಂಡದ ಹಿರಿಯ ತರಬೇತಿ ಸಿಬ್ಬಂದಿಯ ನೆರವಿನಿಂದ ನಿತೀಶ್ ರಾಣಾ ಉತ್ತಮ ಸಾಧನೆ ಮಾಡುವ ವಿಶ್ವಾಸ ನಮಗಿದೆ ಎಂಬುದಾಗಿ ಪ್ರಕಟಣೆಯಲ್ಲಿ ಬರೆದಿದ್ದಾರೆ. ಕೋಲ್ಕೊತಾ ನೈಟ್ ರೈಡರ್ಸ್ ತಂಡ ಏಪ್ರಿಲ್ 1ರಂದು ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಬಳಗಕ್ಕೆ ಎದುರಾಗಲಿದೆ.