Site icon Vistara News

KKR vs DC: ಡೆಲ್ಲಿಗೆ ನೀರು ಕುಡಿಸಿದ ಸಾಲ್ಟ್​; ಪಂತ್​ ಪಡೆಯ ಪ್ಲೇ ಆಫ್ ಹಾದಿ ದುರ್ಗಮ

KKR vs DC

ಕೋಲ್ಕತ್ತಾ: ಫಿಲ್​ ಸಾಲ್ಟ್​(68) ಅವರ ಅರ್ಧಶತಕ ಮತ್ತು ವರುಣ್​ ಚಕ್ರವರ್ತಿಯ( 16 ರನ್​ಗೆ 3 ವಿಕೆಟ್) ಸ್ಪಿನ್​ ಮೋಡಿಗೆ ಬೆದರಿದ ಡೆಲ್ಲಿ ಕ್ಯಾಪಿಟಲ್ಸ್(Delhi Capitals)​ ತಂಡ ಕೋಲ್ಕತ್ತಾ ನೈಟ್​ ರೈಡರ್ಸ್(KKR vs DC)​ ವಿರುದ್ಧ 7 ವಿಕೆಟ್​ ಅಂತರದ ಸೋಲಿಗೆ ತುತ್ತಾಗಿದೆ. ಸೋಲಿನಿಂದ ಪಂತ್​ ಪಡೆಯ ಪ್ಲೇ ಆಫ್​ ಪಯಣ ಕೂಡ ದುರ್ಗಮಗೊಂಡಿದೆ. ಇನ್ನುಳಿದ 3 ಪಂದ್ಯಗಳನ್ನು ಕೂಡ ಗೆಲ್ಲಬೇಕಾದ ಒತ್ತಡಕ್ಕೆ ಸಿಲುಕಿದೆ. ಜತೆಗೆ ಉಳಿದ ತಂಡಗಳ ಪ್ರದರ್ಶನವೂ ಡೆಲ್ಲಿ ಪ್ಲೇ ಆಫ್ ಹಾದಿಯ ಮೇಲೆ ಪರಿಣಾಮ ಬೀರಲಿದೆ.

ಐತಿಹಾಸಿಕ ಕ್ರಿಕೆಟ್​ ಸ್ಟೇಡಿಯಂ ಈಡನ್​ ಗಾರ್ಡನ್ಸ್​ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಡೆಲ್ಲಿ​ ನಾಟಕೀಯ ಕುಸಿತ ಕಂಡು ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 153 ರನ್​ ಬಾರಿಸಿತು. ಸಾಧಾರಣ ಗುರಿಯನ್ನು ಬೆನ್ನಟ್ಟಿದ ಕೋಲ್ಕತ್ತಾ ನೈಟ್​ ರೈಡರ್ಸ್(Kolkata Knight Riders) 16.3​ ಓವರ್​ಗಳಲ್ಲಿ 3 ವಿಕೆಟ್​ ಕಳೆದುಕೊಂಡು 157 ರನ್​ ಬಾರಿಸಿ ಗೆಲುವಿನ ನಗೆ ಬೀರಿತು. ಇದು ಕೆಕೆಆರ್​ಗೆ 9ನೇ ಪಂದ್ಯದಲ್ಲಿ ಒಲಿದ 6ನೇ ಗೆಲುವಾಗಿದೆ. ಸದ್ಯ 12 ಅಂಕದೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನಿಯಾಗಿ ಕಾಣಿಸಿಕೊಂಡಿದೆ.

ಜೀವದಾನ ಪಡೆದು ಅರ್ಧಶತಕ ಬಾರಿಸಿದ ಸಾಲ್ಟ್​


ಚೇಸಿಂಗ್​ ವೇಳೆ ಫಿಲ್​ ಸಾಲ್ಟ್​ 17 ರನ್​ ಗಳಿಸಿದ್ದ ವೇಳೆ ಖಲೀಲ್​ ಅಹ್ಮದ್​ ಎಸೆದ ಮೊದಲ ಓವರ್​ನ ಮೊದಲ ಎಸೆತದಲ್ಲಿ ಲಿಜಾಡ್ ವಿಲಿಯಮ್ಸ್ ಅವರಿಂದ ಕ್ಯಾಚ್​ ಕೈಚೆಲ್ಲಿ ಜೀವದಾನ ಪಡೆದರು. ಇದರ ಸಂಪೂರ್ಣ ಲಾಭವೆತ್ತಿದ ಸಾಲ್ಟ್​ ಆಕ್ರಮಣಕಾರಿ ಬ್ಯಾಟಿಂಗ್​ ಮೂಲಕ ಕೇವಲ 26 ಎಸೆತಗಳಲ್ಲಿ ಅರ್ಧಶತಕ ಪೂರ್ತಿಗೊಳಿಸಿದರು. ವಿಲಿಯಮ್ಸ್ ಕಳಪೆ ಫೀಲ್ಡಿಂಗ್​ ಜತೆಗೆ ಬೌಲಿಂಗ್​ನಲ್ಲಿಯೂ ಸರಿಯಾಗಿ ದಂಡಿಸಿಕೊಂಡರು. ಮೂರು ಓವರ್​ಗೆ 38 ರನ್​ ಹೊಡೆಸಿಕೊಂಡರು.

ಬಿರುಸಿನ ಬ್ಯಾಟಿಂಗ್​ ಮೂಲಕ ರನ್​ ಕಲೆಹಾಕುವ ಸುನೀಲ್​ ನರೈನ್​ ಈ ಪಂದ್ಯದಲ್ಲಿ ವಿಫಲರಾದರು. 10 ಎಸೆತಗಳಿಂದ 15 ರನ್​ಗೆ ಸೀಮಿತರಾಗಿ ಅಕ್ಷರ್​ ಪಟೇಲ್​ಗೆ ವಿಕೆಟ್​ ಒಪ್ಪಿಸಿದರು. ಬ್ಯಾಟಿಂಗ್​ ಭಡ್ತಿ ಪಡೆದು ಬಂದ ರಿಂಕು ಸಿಂಗ್​ 11 ಎಸೆತಗಳಿಂದ 11 ರನ್​ ಗಳಿಸಿ ನಿರಾಸೆ ಮೂಡಿಸಿದರು. ಈ ವಿಕೆಟ್​ ಪತನಗೊಂಡು 4 ರನ್​ ಆಗುವಷ್ಟರಲ್ಲಿ ಫಿಲ್​ ಸಾಲ್ಟ್​​ ವಿಕೆಟ್​ ಕೂಡ ಬಿತ್ತು. ಸಾಲ್ಟ್​ 33 ಎಸೆತಗಳಿಂದ 68 ರನ್​ ಚಚ್ಚಿದರು. ಅವರ ಈ ಬ್ಯಾಟಿಂಗ್​ ಇನಿಂಗ್ಸ್​ನಲ್ಲಿ 5 ಸೊಗಸಾದ ಸಿಕ್ಸರ್​ ಮತ್ತು 7 ಬೌಂಡರಿ ಸಿಡಿಯಿತು.

ಅಂತಿಮವಾಗಿ ನಾಯಕ ಶ್ರೇಯಸ್​ ಅಯ್ಯರ್(33*)​ ಮತ್ತು ವೆಂಕಟೇಶ್​ ಅಯ್ಯರ್​(26*) ರನ್​ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಜೋಡಿ ನಾಲ್ಕನೇ ವಿಕೆಟ್​ಗೆ ಮುರಿಯದ 57 ರನ್​ಗಳ ಜತೆಯಾಟ ಕೂಡ ನಡೆಸಿತು. ಇದೇ ವೇಳೆ ಶ್ರೇಯಸ್ ಅಯ್ಯರ್​ ಐಪಿಎಲ್​ನಲ್ಲಿ 3 ಸಾವಿರ ರನ್​ ಪೂರ್ತಿಗೊಳಿಸಿದ ಮೈಲಿಗಲ್ಲು ನೆಟ್ಟರು. ಡೆಲ್ಲಿ ಪರ ಅಕ್ಷರ್​ ಪಟೇಲ್​ 2 ವಿಕೆಟ್​ ಪಡೆದರು.

ಇದನ್ನೂ ಓದಿ LSG vs MI: ಲಕ್ನೋ ಸವಾಲಿಗೆ ಮುಂಬೈ ಸಜ್ಜು; ಸೋತರೆ ಪಾಂಡ್ಯ ಪಡೆಯ ಪ್ಲೇ ಆಫ್​ ಹಾದಿ ಕಠಿಣ

ಮಾನ ಉಳಿಸಿದ ಕುಲ್​ದೀಪ್​


ಮೊದಲು ಬ್ಯಾಟಿಂಗ್​ ನಡೆಸಿದ ಡೆಲ್ಲಿ ತಂಡ ನಾಟಕೀಯ ಕುಸಿತ ಕಂಡು ಇನ್ನೇನು 100ರ ಒಳಗಡೆ ಗಂಟು-ಮೂಟೆ ಕಟ್ಟುತ್ತದೆ ಎನ್ನುವಷ್ಟರಲ್ಲಿ 9ನೇ ಕ್ರಮಾಂಕದಲ್ಲಿ ಆಡಲಿಳಿದ ಕುಲ್​ದೀಪ್​ ಯಾದವ್​ ಕೆಕೆಆರ್​ ಬೌಲಿಂಗ್​ ದಾಳಿಯನ್ನು ಸಮರ್ಥವಾಗಿ ಎದುರಿಸಿ ನಿಂತು ಅಜೇಯ 35 ರನ್​ ಬಾರಿಸಿದರು. ತಂಡದ ಒರ ಇವರದ್ದೇ ಗರಿಷ್ಠ ಮೊತ್ತದ ಗಳಿಕೆ. ಕುಲ್​ದೀಪ್​ ಅವರ ಈ ಬ್ಯಾಟಿಂಗ್​ ಇನಿಂಗ್ಸ್​ನಿಂದ ಡೆಲ್ಲಿ 150ರ ಗಡಿ ದಾಟಿ ಮಾನ ಉಳಿಸಿಕೊಂಡಿತು.

ಪೃಥ್ವಿ ಶಾ ಎಂದಿನಂತೆ ಒಂದೆಡರು ಬೌಂಡರಿಗೆ ಸೀಮಿತರಾಗಿ 13 ರನ್​ಗೆ ವಿಕೆಟ್​ ಒಪ್ಪಿಸಿದರು. ಇದರ ಬೆನ್ನಲೇ ಅಪಾಯಕಾರಿ ಜೇಕ್ ಫ್ರೇಸರ್-ಮ್ಯಾಕ್‌ಗುರ್ಕ್(12), ಶಾಯ್​ ಹೋಪ್​(6), ಅಭಿಷೇಕ್​ ಪೋರೆಲ್​(18), ಅಕ್ಷರ್​ ಪಟೇಲ್​(15) ಮತ್ತು ಟ್ರಿಸ್ಟಾನ್ ಸ್ಟಬ್ಸ್(4) ರನ್​ ಗಳಿಸಿ ಪೆವಿಲಿಯನ್​ ಪರೇಡ್ ನಡೆಸಿದರು. ನಾಯಕ ಪಂತ್​ 2 ಬೌಂಡರಿ ಮತ್ತು 1 ಸಿಕ್ಸರ್​ ಸಿಡಿಸಿ 27 ರನ್​ ಬಾರಿಸಿದರು.

ಕೆಕೆಆರ್​ ಪರ ಸ್ಪಿನ್ನರ್ ವರುಣ್ ಚಕ್ರವರ್ತಿ ತಮ್ಮ ಸ್ಪಿನ್​ ಜಾದು ಮೂಲಕ ಕೇವಲ 16 ರನ್​ಗೆ 3 ವಿಕೆಟ್​ ಕಿತ್ತು ಡೆಲ್ಲಿಗೆ ಆಘಾತವಿಕ್ಕಿದರು. ಉಳಿದಂತೆ ಹರ್ಷಿತ್​ ರಾಣಾ ಮತ್ತು ವೈಭವ್ ಅರೋರಾ ತಲಾ 2 ವಿಕೆಟ್​ ಉರುಳಿಸಿದರು. ಸುನೀಲ್​ ನರೈನ್​ ಮತ್ತು ಸ್ಟಾರ್ಕ್​ ತಲಾ 1 ವಿಕೆಟ್​ ಪಡೆದರು.

Exit mobile version