ಅಹಮದಾಬಾದ್: ಈ ಬಾರಿಯ ಐಪಿಎಲ್ನ(IPL 2024) ಬಲಿಷ್ಠ ತಂಡಗಳಾದ ಕೆಕೆಆರ್ ಮತ್ತು ಸನ್ರೈಸರ್ಸ್ ಹೈದರಾಬಾದ್ ನಡುವಣ ಮೊದಲ ಕ್ವಾಲಿಫೈಯರ್(KKR vs SRH Qualifier 1) ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ನಾಳೆ ನಡೆಯುವ ಇತ್ತಂಡಗಳ ಈ ಕಾದಾಟಕ್ಕೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂ(Narendra Modi Stadium) ಅಣಿಯಾಗಿದೆ. ಯಾರೇ ಗೆದ್ದರೂ ನೇರವಾಗಿ ಫೈನಲ್ಗೆ ಎಂಟ್ರಿಕೊಡಲಿದ್ದಾರೆ. ಈ ತಂಡ ಯಾವುದು ಎಂಬುದು ನಾಳಿನ ಪಂದ್ಯದ ಕೌತುಕ.
ಬಲಾಬಲ
ಉಭಯ ತಂಡಗಳ ಐಪಿಎಲ್ ಇತಿಹಾಸ ನೋಡುವಾಗ ಕೆಕೆಆರ್ ಬಲಿಷ್ಠವಾಗಿದೆ. ಇದುವರೆಗೆ 26 ಪಂದ್ಯಗಳನ್ನು ಆಡಿ 17 ಪಂದ್ಯಗಳಲ್ಲಿ ಕೆಕೆಆರ್ ಗೆಲುವು ಸಾಧಿಸಿದೆ. ಹೈದರಾಬಾದ್ ಕೇವಲ 9 ಪಂದ್ಯ ಮಾತ್ರ ಗೆದ್ದಿದೆ. ಈ ಆವೃತ್ತಿಯಲ್ಲಿಯೂ ಆಡಿದ ಪಂದ್ಯದಲ್ಲೂ ಹೈದರಾಬಾದ್ ಸೋಲು ಕಂಡಿತ್ತು. ಉಭಯ ತಂಡಗಳ ನಡುವೆ ಒಂದು ಸೂಪರ್ ಓವರ್ ಪಂದ್ಯ ಕೂಡ ನಡೆದಿತ್ತು. 2020ರಲ್ಲಿ ಅಬುಧಾಬಿಯಲ್ಲಿ ನಡೆದಿದ್ದ ಪಂದ್ಯ ಇದಾಗಿತ್ತು. ಈ ಪಂದ್ಯದಲ್ಲಿ ಕೆಕೆಆರ್ ಜಯಿಸಿತ್ತು. ಈ ಲೆಕ್ಕಾಚಾರವನ್ನು ನೋಡುವಾಗ ನಾಳಿನ ಪಂದ್ಯದಲ್ಲಿಯೂ ಕೆಕೆಆರ್ ಗೆಲುವಿನ ಫೇವರಿಟ್ ಆಗಿದೆ.
ಸೋತರೆ ಮತ್ತೊಂದು ಅವಕಾಶ
ಇತ್ತಂಡಗಳ ನಡುವಿನ ಪಂದ್ಯದಲ್ಲಿ ಯಾರೇ ಸೋತರೂ ಕೂಡ ಅವರಿಗೆ ಮತ್ತೊಂದು ಕ್ವಾಲಿಫೈಯರ್ ಪಂದ್ಯವನ್ನಾಡುವ ಅವಕಾಶವಿದೆ. ಎಲಿಮಿನೇಟರ್ ಪಂದ್ಯದ ವಿಜೇತರನ್ನು ಎದುರಿಸಲಿದೆ. ಹೀಗಾಗಿ ಸೋತರೂ ಮತ್ತೊಂದು ಪಂದ್ಯ ಆಡಿ ಅಲ್ಲಿ ಗೆದ್ದರೆ ಫೈನಲ್ ಪ್ರವೇಶಿಸಬಹುದು. ನಾಳಿನ ಪಂದ್ಯದಲ್ಲಿ ಗೆದ್ದ ತಂಡ ನೇರವಾಗಿ ಫೈನಲ್ ಟಿಕೆಟ್ ಪಡೆಯಲಿದೆ.
ಇದನ್ನೂ ಓದಿ IPL 2024: ಪ್ಲೇ ಆಫ್ ಪಂದ್ಯಗಳಿಗೆ ಮೀಸಲು ದಿನ ಇದೆಯೇ? ಮಳೆ ಬಂದರೆ ಫಲಿತಾಂಶ ನಿರ್ಧಾರ ಹೇಗೆ?
ಮಳೆ ಭೀತಿ
ಅಹಮದಾಬಾದ್ನಲ್ಲಿ ಮಳೆಯಿಂದ ಒಂದು ಲೀಗ್ ಪಂದ್ಯ ರದ್ದಾಗಿತ್ತು. ಇದು ಕೆಕೆಆರ್ ಮತ್ತು ಗುಜರಾತ್ ನಡುವಣ ಪಂದ್ಯವಾಗಿತ್ತು. ಮಳೆಯಿಂದ ಟಾಸ್ ಕೂಡ ಆಗದೆ ರದ್ದಾಗಿತ್ತು. ಇದೀಗ ನಾಳೆ ನಡೆಯುವ ಕ್ವಾಲಿಫೈಯರ್ ಪಂದ್ಯಕ್ಕೂ ಮಳೆಯ ಭೀತಿ ಇದೆ. ಒಂದೊಮ್ಮೆ ಮಳೆ ಬಂದರೂ ಕೂಡ ಚಿಂತಿಸುವ ಅಗತ್ಯವಿಲ್ಲ. ಮೀಸಲು ದಿನ ಇದೆ.
ಪಿಚ್ ರಿಪೋರ್ಟ್
ವಿಶ್ವದ ಅತಿ ದೊಡ್ಡ ಕ್ರೀಡಾಂಗಣ, ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ನೇರ ಬೌಂಡರಿಗಳಿಗೆ ಸರಾಸರಿ 75 ಮೀಟರ್ ಮತ್ತು ಚದರ ಗಡಿಗಳಿಗೆ 60 ಮೀಟರ್ ಉದ್ದವನ್ನು ಹೊಂದಿದೆ. ಇಲ್ಲಿ ಇದುವರೆಗೆ 33 ಐಪಿಎಲ್ ಪಂದ್ಯಗಳು ನಡೆದಿದ್ದು 15 ಬಾರಿ ಮೊದಲು ಬ್ಯಾಟಿಂಗ್ ಮಾಡಿದ ತಂಡ, 18 ಬಾರಿ ಚೇಸಿಂಗ್ ನಡೆಸಿದ ತಂಡಗಳು ಗೆದ್ದಿವೆ. ಇಲ್ಲಿ ದಾಖಲಾದ ಗರಿಷ್ಠ ಒತ್ತ 233 ರನ್. ಮುಂಬೈ ಮತ್ತು ಗುಜರಾತ್ ನಡುವಣ ಪಂದ್ಯದಲ್ಲಿ ಈ ಮೊತ್ತ ದಾಖಲಾಗಿತ್ತು.
ಸಂಭಾವ್ಯ ತಂಡಗಳು
ಸನ್ರೈಸರ್ಸ್ ಹೈದರಾಬಾದ್: ಟ್ರಾವಿಸ್ ಹೆಡ್, ನಿತೀಶ್ ರೆಡ್ಡಿ, ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ಅಬ್ದುಲ್ ಸಮದ್, ಶಹಬಾಜ್ ಅಹ್ಮದ್, ಸನ್ವಿರ್ ಸಿಂಗ್, ಪ್ಯಾಟ್ ಕಮ್ಮಿನ್ಸ್ (ನಾಯಕ), ಭುವನೇಶ್ವರ್ ಕುಮಾರ್, ಜಯದೇವ್ ಉನದ್ಕತ್, ವಿಜಯಕಾಂತ್ ವ್ಯಾಸಕಾಂತ್, ಟಿ. ನಟರಾಜನ್.
ಕೆಕೆಆರ್: ರಹಮಾನುಲ್ಲಾ ಗುರ್ಬಾಜ್, ಸುನಿಲ್ ನರೈನ್, ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್ (ನಾಯಕ), ರಿಂಕು ಸಿಂಗ್, ನಿತೀಶ್ ರಾಣಾ, ಆಂಡ್ರೆ ರಸೆಲ್, ರಮಣ್ದೀಪ್ ಸಿಂಗ್, ಮಿಚೆಲ್ ಸ್ಟಾರ್ಕ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ.