ಬೆಂಗಳೂರು: ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟಿ 20 ಸರಣಿಗೆ (INDvsAFG) ಆಯ್ಕೆ ಮಾಡಲಾಗಿರುವ ಭಾರತ ತಂಡದಿಂದ ಭಾರತದ ವಿಕೆಟ್ ಕೀಪರ್ ಕೆಎಲ್ ರಾಹುಲ್ (KL Rahul) ಅವರನ್ನು ಹೊರಗಿಡಲಾಗಿದೆ. ಇದು ಅವರ ಅಭಿಮಾನಿಗಳಿಗೆ ಬೇಸರ ಉಂಟು ಮಾಡಿದೆ. ನಾಯಕ ರೋಹಿತ್ ಶರ್ಮಾ (Rohit Sharma) ನೇತೃತ್ವದ ಬಲಿಷ್ಠ ತಂಡದಲ್ಲಿ ವಿರಾಟ್ ಕೊಹ್ಲಿ (Virat kohli) ಸೇರಿದಂತೆ ಇತರ ಹಿರಿಯ ಆಟಗಾರರು ಇದ್ದಾರೆ. ಆದರೆ, ಟಿ0 ವಿಶ್ವ ಕಪ್ (T20 World Cup 2024) ಹಿನ್ನೆಲೆಯಲ್ಲಿ ರೂಪಿಸುತ್ತಿರುವ ತಂಡದಲ್ಲಿ ರಾಹುಲ್ಗೆ ಸ್ಥಾನ ಇಲ್ಲದಿರುವುದು ಅಚ್ಚರಿ ಮೂಡಿಸಿದೆ.
ಆಯ್ಕೆದಾರರು ಕೆಎಲ್ ರಾಹುಲ್ ಅವರನ್ನು ತಂಡದಿಂದ ಕಡೆಗಣಿಸಿ ಸಂಜು ಸ್ಯಾಮ್ಸನ್ ಮತ್ತು ಜಿತೇಶ್ ಶರ್ಮಾ ಅವರನ್ನು ಹೆಸರಿಸಿದ್ದಾರೆ. ಕರ್ನಾಟಕದ ಆಟಗಾರ ಕಳೆದ ಕೆಲವು ತಿಂಗಳುಗಳಿಂದ ಭಾರತದ ಆಲ್-ಫಾರ್ಮ್ಯಾಟ್ ವಿಕೆಟ್ ಕೀಪರ್ ಆಗಿದ್ದರೂ, ಟಿ20 ಐ ತಂಡದಲ್ಲಿ ಅವರಿಗೆ ಸ್ಥಾನ ನೀಡದಿರುವುದು ವಿವಾದಕ್ಕೆ ಕಾರಣವಾಗಿದೆ.
ರಾಹುಲ್ ಟಿ20ಯಲ್ಲಿ ಉತ್ತಮ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದಾರೆ. 72 ಟಿ20 ಪಂದ್ಯಗಳಲ್ಲಿ 37.75ರ ಸರಾಸರಿಯಲ್ಲಿ 2265 ರನ್ ಗಳಿಸಿದ್ದಾರೆ. ರಾಹುಲ್ ಈಗ ಟಿ20 ಐ ಪಂದ್ಯಗಳಲ್ಲಿ ಆಡಿ ಒಂದು ವರ್ಷಕ್ಕಿಂತ ಸ್ವಲ್ಪ ಹೆಚ್ಚು ಸಮಯವಾಗಿದೆ 2022ರ ನವೆಂಬರ್ನಲ್ಲಿ ಅಡಿಲೇಡ್ನಲ್ಲಿ ನಡೆದ ಟಿ20 ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೊನೆಯ ಟಿ20 ಪಂದ್ಯವನ್ನಾಡಿದ್ದರು.
2024ರ ಟಿ20 ವಿಶ್ವಕಪ್ ಮೇಲೆ ಭಾರತದ ಕಣ್ಣು ನೆಟ್ಟಿದೆ. ಟೂರ್ನಿಗೆ ಸಜ್ಜಾಗುತ್ತಿರುವ ತಂಡದ ಸಿದ್ಧತೆ ಅಫಘಾನಿಸ್ತಾನ ವಿರುದ್ಧದ ಸರಣಿಯೊಂದಿಗೆ ಆರಂಭವಾಗಲಿದೆ. ರಿಷಭ್ ಪಂತ್ ಮರಳುವ ನಿಖರ ಸಮಯ ಇನ್ನೂ ತಿಳಿದಿಲ್ಲವಾದ್ದರಿಂದ ಕೆಎಲ್ ಏಕದಿನ ಮತ್ತು ಟೆಸ್ಟ್ ಪಂದ್ಯಗಳಲ್ಲಿ ಭಾರತಕ್ಕಾಗಿ ವಿಕೆಟ್ಕೀಪರ್ ಗ್ಲವ್ಸ್ ಧರಿಸುತ್ತಿದ್ದಾರೆ. ಆದಾಗ್ಯೂ, ಟಿ20 ವಿಷಯಕ್ಕೆ ಬಂದಾಗ, ರಾಹುಲ್ಗೆ ಅವಕಾಶ ಸಿಕ್ಕಿಲ್ಲ.
ಮರಳಿದ ರೋಹಿತ್, ವಿರಾಟ್
ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ (Virat kohli) ಹಾಗೂ ಹಾಲಿ ನಾಯಕ ರೋಹಿತ್ ಶರ್ಮಾ (Rohit Sharma ) ಟಿ20 ಕ್ರಿಕೆಟ್ಗೆ (T20 circket) ವಾಪಸಾಗಿದ್ದಾರೆ. ಈ ಮೂಲಕ ಇಬ್ಬರೂ 2024ರ ಟಿ 20 ವಿಶ್ವಕಪ್ಗಾಗಿ ಕೆರಿಬಿಯನ್ ದ್ವೀಪ ಮತ್ತು ಯುಎಸ್ಎಗೆ ತೆರಳುತ್ತಾರೆ ಎಂಬ ಸ್ಪಷ್ಟ ಸೂಚನೆ ಸಿಕ್ಕಿದೆ.
ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ ಮತ್ತು ಋತುರಾಜ್ ಗಾಯಕ್ವಾಡ್ ಗಾಯದ ಕಾರಣ ಸರಣಿಯಿಂದ ಹೊರಗುಳಿದಿದ್ದಾರೆ. ಇದೇ ವೇಳೆ ಕೇರಳದ ಬ್ಯಾಟರ್ ಸಂಜು ಸ್ಯಾಮ್ಸನ್ಗೆ ಮತ್ತೊಂದು ಬಾರಿ ತಂಡದ ಬಾಗಿಲು ತೆರೆದಿದೆ. ವೇಗದ ಬೌಲರ್ಗಳಾದ ಜಸ್ ಪ್ರಿತ್ ಬುಮ್ರಾ ಹಾಗೂ ಸಿರಾಜ್ಗೆ ವಿಶ್ರಾಂತಿ ನೀಡಲಾಗಿದೆ. ಮೊಹಮ್ಮದ್ ಶಮಿಯೂ ತಂಡದ ಭಾಗವಾಗಿಲ್ಲ. ಮಿಗಿಲಾಗಿ ವಿಕೆಟ್ ಕೀಪಿಂಗ್ಗೆ ಜಿತೇಶ್ ಶರ್ಮಾ ಅವರನ್ನು ಆಯ್ಕೆ ಮಾಡಲಾಗಿದೆ.
ಸ್ಪಿನ್ ಆಲ್ರೌಂಡರ್ ಸ್ಥಾನಕ್ಕೆ ಅಕ್ಷರ್ ಪಟೇಲ್ ಮತ್ತು ವಾಷಿಂಗ್ಟನ್ ಸುಂದರ್ ಅವರಿಗೆ ಆದ್ಯತೆ ನೀಡಿರುವುದರಿಂದ ರವೀಂದ್ರ ಜಡೇಜಾ ಅವರನ್ನು ಟಿ 20 ಪಂದ್ಯಗಳಿಗೆ ಕಡೆಗಣಿಸಲಾಗಿದೆ. ರೋಹಿತ್ ಶರ್ಮಾ ಅವರೊಂದಿಗೆ ಗಿಲ್ ಮತ್ತು ಯಶಸ್ವಿ ಜೈಸ್ವಾಲ್ ಇಬ್ಬರು ಆರಂಭಿಕರಾಗಿದ್ದರೆ. ಜಿತೇಶ್ ಶರ್ಮಾ ವಿಕೆಟ್ ಕೀಪರ್ ಆಗಿ ಇಶಾನ್ ಕಿಶನ್ಗಿಂತ ಮುಂಚಿತವಾಗಿ ತಂಡದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.
ದಕ್ಷಿಣ ಆಫ್ರಿಕಾ ಟಿ 20 ಪಂದ್ಯಗಳಲ್ಲಿ ತಂಡದಿಂದ ಅವಕಾಶ ಪಡೆಯದ ಶಿವಂ ದುಬೆ ಕೂಡ ಪುನರಾಗಮನ ಮಾಡಿದ್ದಾರೆ. ಕೆರಿಬಿಯನ್ ಸರಣಿಯ ನಂತರ ಟಿ 20 ಪಂದ್ಯಗಳಲ್ಲಿ ಸಾಧಾರಣ ಪ್ರದರ್ಶನದ ಹೊರತಾಗಿಯೂ ತಿಲಕ್ ವರ್ಮಾ ಅವರಿಗೆ ಮತ್ತೊಂದು ಅವಕಾಶ ನೀಡಲಾಗಿದೆ.
ಇದನ್ನೂ ಓದಿ : Mohammed Shami : ಇಂಗ್ಲೆಂಡ್ ವಿರುದ್ಧ ಮೊದಲೆರಡು ಟೆಸ್ಟ್ಗೆ ವೇಗದ ಬೌಲರ್ ಅಲಭ್ಯ
ಬೌಲಿಂಗ್ ವಿಭಾಗದಲ್ಲಿ ಯಜುವೇಂದ್ರ ಚಹಲ್ ಅವರನ್ನು ರವಿ ಬಿಷ್ಣೋಯ್ ಹಿಂದಿಕ್ಕಿದ್ದಾರೆ. ಅನುಭವಿ ವೇಗಿಗಳಾದ ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಅವರನ್ನು ಸಹ ಆಯ್ಕೆ ಮಾಡಲಾಗಿಲ್ಲ. ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆದಾರರು ಯುವ ವೇಗಿಗಳಾದ ಅರ್ಶ್ದೀಪ್ ಸಿಂಗ್, ಅವೇಶ್ ಖಾನ್ ಮತ್ತು ಮುಖೇಶ್ ಕುಮಾರ್ ಅವರೊಂದಿಗೆ ಆಡಲು ನಿರ್ಧರಿಸಿದ್ದಾರೆ.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಎಸ್ ಗಿಲ್, ವೈ ಜೈಸ್ವಾಲ್, ವಿರಾಟ್ ಕೊಹ್ಲಿ, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಕುಲದೀಪ್ ಯಾದವ್, ಅರ್ಷ್ದೀಪ್ ಸಿಂಗ್, ಅವೇಶ್ ಖಾನ್, ಮುಖೇಶ್ ಕುಮಾರ್.