ಬೆಂಗಳೂರು: ಭಾರತದ ಹಿರಿಯ ಬ್ಯಾಟರ್, ಕರ್ನಾಟಕದ ಆಟಗಾರ ಕೆ.ಎಲ್ ರಾಹುಲ್ (KL Rahul) ಅವರು ಆರೋಗ್ಯ ಪುನಶ್ಚೇತನ, ಫಿಟ್‌ನೆಸ್ ಹಾಗೂ ಪ್ರಾಕ್ಟೀಸ್‌ಗಾಗಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (national cricket academy- NCA) ಸೇರಿಕೊಂಡಿದ್ದಾರೆ.
ಸೆಪ್ಟೆಂಬರ್‌ನಲ್ಲಿ ಶ್ರೀಲಂಕಾದಲ್ಲಿ ನಡೆಯಲಿರುವ ಏಷ್ಯಾ ಕಪ್ ಏಕದಿನ ಸರಣಿಗೆ ಹಾಗೂ ನಂತರದ ವಿಶ್ವಕಪ್ ಪಂದ್ಯಾಟಕ್ಕೆ ಮುಂಚಿತವಾಗಿ ಅವರು ಫಿಟ್‌ನೆಸ್ ಮರಳಿ ಗಳಿಸುವ ಉದ್ದೇಶ ಹೊಂದಿದ್ದಾರೆ. ಅವರಿಗೆ ತೊಡೆಯ ಶಸ್ತ್ರಚಿಕಿತ್ಸೆಯಾಗಿತ್ತು. ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿದ್ದ ರಾಹುಲ್, ಐಪಿಎಲ್ ಪಂದ್ಯಾಟದ ಸಮಯದಲ್ಲಿ ಗಾಯಗೊಂಡಿದ್ದರು. ಆಗ ಅವರಿಗೆ ತೊಡೆಯ ಶಸ್ತ್ರಚಿಕಿತ್ಸೆಯನ್ನು ಶಿಫಾರಸು ಮಾಡಲಾಗಿತ್ತು. ಬಳಿಕ ಪಂದ್ಯಾವಳಿಯಿಂದ ಹೊರಗುಳಿದಿದ್ದ ಅವರು ಬ್ರಿಟನ್‌ನಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆಗೆ ಒಳಗಾದರು. ಇದರಿಂದಾಗಿ ಅವರು ಐಪಿಎಲ್ ಹಾಗೂ ನಂತರದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಿಂದಲೂ ಹೊರಗುಳಿಯಬೇಕಾಯಿತು.
ಮಂಗಳವಾರ ಮರಳಿ ಬಂದಿರುವ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ NCA ಚಿತ್ರಗಳನ್ನು ಪೋಸ್ಟ್ ಮಾಡಿದ್ದು, ʼಮನೆʼ ಎಂದು ಕನ್ನಡದಲ್ಲಿ ಬರೆದುಕೊಂಡಿದ್ದಾರೆ.
ಮನೆ 🏡 pic.twitter.com/0BXpG03kdL
— K L Rahul (@klrahul) June 13, 2023
ಈ ನಡುವೆ ಅವರು ಬಾಗಲಕೋಟೆ ಜಿಲ್ಲೆಯ ಬಡ ವಿದ್ಯಾರ್ಥಿಗೆ ಧನಸಹಾಯ ಮಾಡಿ ಸುದ್ದಿಯಾಗಿದ್ದರು. ತಾಯಿ ಇಲ್ಲದ ಅನಾಥ ವಿದ್ಯಾರ್ಥಿ ಅಮೃತ್ ಮಾವಿನಕಟ್ಟಿ ಓದುವ ಕನಸಿಗೆ ನೀರೆರೆದು ಪೋಷಿಸಲು ಧನಸಹಾಯ ಮಾಡಿದ್ದರು.
ODI ಕ್ರಿಕೆಟ್‌ನಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ, ಏಕದಿನ ಪಂದ್ಯಾಟದಲ್ಲಿ ಭಾರತ ಕ್ರಿಕೆಟ್ ತಂಡದ ಅನಿವಾರ್ಯ ಆಟಗಾರನಾಗಿದ್ದಾರೆ. ಕಾರು ಅಪಘಾತದ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ರಿಷಭ್ ಪಂತ್ ಅನುಪಸ್ಥಿತಿಯಲ್ಲಿ ODI ಸೆಟ್‌ಅಪ್‌ನ ಪ್ರಮುಖ ಸದಸ್ಯರಾಗಿದ್ದಾರೆ. 31ರ ಹರೆಯದ ಅವರು 47 ಟೆಸ್ಟ್‌ಗಳಲ್ಲಿ 2,642 ರನ್, 54 ODIಗಳಲ್ಲಿ 1,986 ರನ್ ಮತ್ತು 72 T20Iಗಳಲ್ಲಿ 2,265 ರನ್, 14 ಅಂತಾರಾಷ್ಟ್ರೀಯ ಶತಕಗಳನ್ನು ಗಳಿಸಿದ್ದಾರೆ.
ಇದನ್ನೂ ಓದಿ: KL Rahul: ಅನಾಥ ವಿದ್ಯಾರ್ಥಿಗೆ ಕೆ.ಎಲ್. ರಾಹುಲ್ ನೆರವು; ಸಿಎ ಆಗುವ ಕನಸಿಗೆ ನೀರೆರೆದ ಕ್ರಿಕೆಟಿಗ