ಮುಂಬಯಿ: ಟೀಮ್ ಇಂಡಿಯಾದ ಆಟಗಾರ, ಕನ್ನಡಿಗ ಕೆ.ಎಲ್. ರಾಹುಲ್(KL Rahul) ಅವರು ಬಲ ತೊಡೆಯ ಶಸ್ತ್ರಚಿಕಿತ್ಸೆ ಬಳಿಕ ಇದೀಗ ಊರುಗೋಲಿನ ಸಹಾಯದಿಂದ ನಡೆದಾಡಲು ಆರಂಭಿಸಿದ್ದಾರೆ. ರಾಹುಲ್ ಅವರು ಊರುಗೋಲಿನ ಸಹಾಯದಿಂದ ನಡೆದಾಡಿದ ಸುಂದರ ಫೋಟೊವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ಫೋಟೊ ವೈರಲ್ ಆಗಿದೆ.
ಕೆಲ ದಿನಗಳ ಹಿಂದಷ್ಟೇ ರಾಹುಲ್ ಅವರು ತಮಗೆ ಯಶಸ್ವಿಯಾಗಿ ನಡೆದ ಶಸ್ತ್ರಚಿಕಿತ್ಸೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. “ಎಲ್ಲರಿಗೂ ಹಾಯ್, ನನ್ನ ಬಲ ತೊಡೆಯ ಶಸ್ತ್ರಚಿಕಿತ್ಸೆ ಪೂರ್ಣಗೊಂದಿದೆ. ಇದನ್ನು ಯಶಸ್ವಿಗೊಳಿಸಿದ ವೈದ್ಯರಿಗೆ ಹಾಗೂ ವೈದ್ಯಕೀಯ ಸಿಬ್ಬಂದಿಗೆ ಧನ್ಯವಾದಗಳು. ಆದಷ್ಟು ಬೇಗ ತೇಚರಿಕೊಂಡು ತಂಡವನ್ನು ಸೇರುವ ವಿಶ್ವಾಸದಲ್ಲಿದ್ದೇನೆ, ಚೇತರಿಕೆಗೆ ಹಾರೈಸಿದ ಎಲ್ಲರಿಗೂ ಧನ್ಯವಾದ” ಎಂದು ಟ್ವೀಟ್ ಮಾಡಿದ್ದರು.
ರಾಹುಲ್ ಅವರು ಸ್ಟ್ರೀಟ್ ಒಂದರಲ್ಲಿ ಊರುಗೋಲಿನಿಂದ ನಡೆದಾಟುವ ಫೋಟೊ ಹಂಚಿಕೊಂಡು ತಮ್ಮ ಚೇತರಿಕೆಯ ಬಗ್ಗೆ ಬಿಗ್ ಅಪ್ಡೇಟ್ ನೀಡಿದ್ದಾರೆ. ರಾಹುಲ್ ಅವರ ಫೋಟೊ ಕಂಡ ಹಲವು ಮಾಜಿ ಮತ್ತು ಹಾಲಿ ಕ್ರಿಕೆಟಿಗರು ಸೇರಿ ಅನೇಕರು ಹಾರೈಸಿದ್ದು ಶೀಘ್ರದಲ್ಲೇ ಚೇತರಿಸಿಕೊಂಡು ಮೈದಾನಕ್ಕೆ ಇಳಿಯುವಂತಾಗಲಿ ಎಂದು ಹೇಳಿದ್ದಾರೆ.
ಇದನ್ನೂ ಓದಿ IPL 2023: ಸಿಂಗ್ಗಳ ಅಬ್ಬರಕ್ಕೆ ತತ್ತರಿಸಿದ ಡೆಲ್ಲಿ ಕ್ಯಾಪಿಟಲ್ಸ್
ಆರ್‌ಸಿಬಿ ಎದುರಿನ ಐಪಿಎಲ್ ಪಂದ್ಯದ ವೇಳೆ ಕ್ಷೇತ್ರರಕ್ಷಣೆ ನಡೆಸುತ್ತಿದ್ದಾಗ ರಾಹುಲ್ ತೊಡೆಯ ನೋವಿಗೆ ಸಿಲುಕಿ ಮೈದಾನದಲ್ಲಿ ಕುಸಿದು ಬಿದ್ದಿದ್ದರು. ತಕ್ಷಣ ಎದ್ದೇಳಲಾಗದೆ ನೋವಿನಲ್ಲಿ ನರಳಾಡಿದ್ದರು. ಇದು ಗಂಭೀರವಾಗಿ ಪರಿಣಮಿಸಿದ ಕಾರಣ ಐಪಿಎಲ್ ಸೇರಿದಂತೆ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಬಹುನಿರೀಕ್ಷಿತ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಿಂದಲ್ಲೂ ಹೊರಬಿದ್ದರು. ಅವರ ಸ್ಥಾನಕ್ಕೆ ಬಿಸಿಸಿಐ ಇಶಾನ್ ಕಿಶನ್ ಅವರನ್ನು ಬದಲಿ ಆಟಗಾರನಾಗಿ ತಂಡಕ್ಕೆ ಸೇರ್ಪಡೆಗೊಳಿಸಿದೆ. 31 ವರ್ಷದ ರಾಹುಲ್ ಏಷ್ಯಾ ಕಪ್ ವೇಳೆ ಭಾರತ ತಂಡವನ್ನು ಕೂಡಿಕೊಳ್ಳುವ ಸಾಧ್ಯತೆ ಇದೆ.
ಹೈದರಾಬಾದ್ ವಿರುದ್ಧ ಶನಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ತನ್ನ ತಂಡ ಲಕ್ನೋ ಗೆಲುವು ದಾಖಲಿಸಿದಕ್ಕೆ ತಂಡದ ಆಟಗಾರಿಗೆ ರಾಹುಲ್ ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಸ್ಫೋಟಕ ಬ್ಯಾಟಿಂಗ್ ನಡೆಸಿದ ನಿಕೋಲಸ್ ಪೂರಣ್ಗೆ ಶಬ್ಬಾಶ್ ಎಂದು ಹೊಗಳಿದ್ದಾರೆ. ಸದ್ಯ ರಾಹುಲ್ ಅವರ ಅನುಒಸ್ಥಿತಿಯಲ್ಲಿ ಲಕ್ನೋ ತಂಡವನ್ನು ಕೃಣಾಲ್ ಪಾಂಡ್ಯ ಮುನ್ನಡೆಸುತ್ತಿದ್ದಾರೆ. ಹೈದರಾಬಾದ್ ವಿರುದ್ಧದ ಗೆಲುವಿನ ಬಳಿಕ ಲಕ್ನೋ ಸದ್ಯ ನಾಲ್ಕನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ.