ಲಖನೌ: ಲಕ್ನೊ ಸೂಪರ್ ಜಯಂಟ್ಸ್ ತಂಡದ ನಾಯಕ ಕೆ. ಎಲ್ ರಾಹುಲ್ ಹಾಲಿ ಆವೃತ್ತಿಯ ಐಪಿಎಲ್ನಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳಲಾಗಿದೆ. ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಅವರು ಫೀಲ್ಡಿಂಗ್ ಮಾಡುವಾಗ ಬಿದ್ದು ತೊಡೆ ನೋವಿಗೆ ಒಳಗಾಗಿದ್ದರು. ಹೀಗಾಗಿ ಅವರಿಗೆ ಆಟ ಮುಂದುವರಿಸಲು ಸಾಧ್ಯವಾಗಿರಲಿಲ್ಲ. ಇದೀಗ ಅವರು ಮುಂದಿನ ಪಂದ್ಯದಲ್ಲಿ ಪಾಲ್ಗೊಳ್ಳುವುದು ಅನುಮಾನ ಎನಿಸಿದೆ. ಇದೇ ವೇಳೆ ಲಕ್ನೊ ತಂಡದ ವೇಗದ ಬೌಲರ್ ಜಯದೇವ್ ಉನಾದ್ಕಟ್ ಅವರಿಗೂ ಆಗಿರುವ ಭುಜ ನೋವಿನ ಸಮಸ್ಯೆ ಗಂಭೀರವಾಗಿದ್ದು ಅವರೂ ಮುಂದಿನ ಪಂದ್ಯಗಳಲ್ಲಿ ಆಡುವುದಿಲ್ಲ ಎಂದು ಮೂಲಗಳು ತಿಳಿಸಿವೆ.
ತೊಡೆ ನೋವಿನ ಸಮಸ್ಯೆಗೆ ಒಳಗಾಗಿರುವ ರಾಹುಲ್ ಮುಂಬಯಿಗೆ ಹೋಗಿ ತಪಾಸಣೆಗೆ ಒಳಗಾಗಲಿದ್ದಾರೆ. ಸ್ಕ್ಯಾನ್ ಮಾಡಿಸಿಕೊಂಡ ಬಳಿಕ ಅವರು ಮುಂದಿನ ತೀರ್ಮಾನ ಕೈಗೊಳ್ಳಲಿದ್ದಾರೆ. ರಾಹುಲ್ ಅವರು ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನ ಫೈನಲ್ ಪಂದ್ಯದಲ್ಲಿ ಆಡಲಿರುವ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. ಒಂದು ವೇಳೆ ಗಾಯದ ಸಮಸ್ಯೆ ಗಂಭೀರವಾಗಿದ್ದರೆ ಅವರು ಆ ಟೂರ್ನಿಗೆ ಲಭ್ಯರಾಗುವರೇ ಎಂಬುದನ್ನು ಬಿಸಿಸಿಐ ಅಧಿಕಾರಿಗಳು ಪರಿಶೀಲನೆ ನಡೆಸುವ ಸಾಧ್ಯತೆಗಳಿವೆ ಎಂದು ಪಿಟಿಐ ವರದಿ ಮಾಡಿದೆ.
ಕೆ. ಎಲ್ ರಾಹುಲ್ ಆರ್ಸಿಬಿ ವಿರುದ್ಧದ ಪಂದ್ಯದ ವೇಳೆ ಚೆಂಡಿಗಾಗಿ ಓಡುವಾಗ ತೊಡೆ ನೋವಿನಿಂದ ಕುಸಿದು ಬಿದ್ದಿದ್ದರು. ತಕ್ಷಣದಲ್ಲಿ ಅವರಿಗೆ ಎದ್ದೇಳಲೂ ಸಾಧ್ಯವಾಗಿರಲಿಲ್ಲ. ಬಳಿಕ ಪೆವಿಲಿಯನ್ ಸೇರಿದ್ದ ಅವರು ಆಟ ಮುಂದುವರಿಸಿರಲಿಲ್ಲ. ಆದರೆ, ತಂಡ ಆಲ್ಔಟ್ ಆಗುವ ಸಂದರ್ಭದ ಬಂದಾಗಿ 10ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬಂದಿದ್ದರು.
ಕೆ. ಎಲ್ ರಾಹುಲ್ ಈಗ ಲಕ್ನೊ ಸೂಪರ್ ಜಯಂಟ್ಸ್ ತಂಡದ ಜತೆಯೇ ಇದ್ದಾರೆ. ಗುರುವಾರ ಅವರು ತಂಡದಿಂದ ಹೊರಕ್ಕೆ ನಡೆಯಲಿದ್ದಾರೆ. ಬಿಸಿಸಿಐ ವೈದ್ಯಕೀಯ ತಂಡದ ನೇತೃತ್ವದಲ್ಲಿ ಅವರು ಸ್ಕ್ಯಾನ್ಗೆ ಒಳಗಾಗಲಿದ್ದಾರೆ. ಇದೇ ವೇಳೆ ಜಯದೇವ್ ಉನಾದ್ಕಟ್ ಅವರ ಗಾಯದ ಸಮಸ್ಯೆಯನ್ನೂ ಬಿಸಿಸಿಐ ನಿರ್ವಹಣೆ ಮಾಡಲಿದೆ ಎಂಬುದಾಗಿ ಪಿಟಿಐ ವರದಿ ಮಾಡಿದೆ.
ಇದನ್ನೂ ಓದಿ : Virat kohli : ವಿರಾಟ್ ಕೊಹ್ಲಿಯನ್ನು ಮೊದಲ ಬಾರಿ ಹೊಗಳಿದ ಗೌತಮ್ ಗಂಭೀರ್!
ಈ ಮಾದರಿ ಗಾಯಗಳು ಉಂಟಾದಾಗ 24ರಿಂದ 40 ಗಂಟೆಗಳ ತನಕ ಊತ ಇರುತ್ತದೆ. ಅದು ಕಡಿಮೆಯಾದ ಬಳಿಕ ಸ್ಕ್ಯಾನ್ ಮಾಡಬಹುದು. ಅಂತೆಯೇ ರಾಹುಲ್ ಅವರಿಗೆ ಆಗಿರುವ ಗಾಯದ ಸಮಸ್ಯೆ ಬಳಿಕ ಊತ ಉಂಟಾಗಿದೆ.. ಕಡಿಮೆಯಾದ ಬಳಿಕ ಸ್ಕ್ಯಾನ್ ಮಾಡಲಾಗುವುದು ಎಂದು ತಂಡದ ಮೂಲಗಳು ತಿಳಿಸಿವೆ.
ರಾಹುಲ್ ಲಕ್ನೊ ತಂಡದ ಕಾಯಂ ಸದಸ್ಯ. ಹೀಗಾಗಿ ಅವರ ಅಲಭ್ಯತೆಯಿಂದ ತಂಡಕ್ಕೆ ನಷ್ಟವಾಗಿದೆ ಎಂದು ಲಕ್ನೊ ತಂಡದ ಮೂಲಗಳು ತಿಳಿಸಿವೆ. ಇದೇ ವೇಳೆ ಜಯದೇವ್ ಉನಾದ್ಕಟ್ಗೆ ಗಾಯದ ಸಮಸ್ಯೆ ಉಂಟಾಗಿರುವುದು ಕೂಡ ತಂಡದ ಪಾಲಿಗೆ ಹಿನ್ನಡೆ ಮೂಲಗಳು ತಿಳಿಸಿವೆ.