Site icon Vistara News

KL Rahul: ರಾಹುಲ್ ಆರ್​ಸಿಬಿಗೆ ಬರಲ್ಲ; ಔತಣ ಕೂಟಕ್ಕೆ ಕರೆದು ತಬ್ಬಿಕೊಂಡ ಸಂಜೀವ್ ಗೋಯೆಂಕಾ

KL Rahul

ಲಕ್ನೋ: ಸನ್​ರೈಸರ್ಸ್​ ಹೈದರಾಬಾದ್(Sunrisers Hyderabad)​​ ವಿರುದ್ಧ ಲಕ್ನೋ ಸೂಪರ್​ ಜೈಂಟ್ಸ್(Lucknow Super Giants)​ 10 ವಿಕೆಟ್​ಗಳ ಹೀನಾಯ ಸೋಲು ಕಂಡ ಬೇಸರದಲ್ಲಿ ಸಿಟ್ಟಿಗೆದ್ದ ಫ್ರಾಂಚೈಸಿ ಮಾಲಿಕ ಸಂಜೀವ್ ಗೋಯೆಂಕಾ(Sanjiv Goenka) ಮೈದಾನದಲ್ಲೇ ನಾಯಕ ಕೆ.ಎಲ್​ ರಾಹುಲ್(KL Rahul)​ ಜತೆ ಜಗಳವಾಡಿದ್ದರು. ಈ ಘಟನೆ ಬಳಿಕ ಅನೇಕ ಮಾಜಿ ಆಟಗಾರರು ಗೋಯೆಂಕಾ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಘಟನೆಗೆ ಸಂಬಂಧಿಸಿ ರಾಹುಲ್​ ಲಕ್ನೋ ತಂಡ ತೊರೆಯಲಿದ್ದಾರೆ, ಆರ್​ಸಿಬಿ ಸೇರಲಿದ್ದಾರೆ, ತಂಡದ ಆಟಗಾರರೊಂದಿಗೆ ಪ್ರಯಾಣಿಸದೆ ಪ್ರತ್ಯೇಕವಾಗಿ ಪ್ರಯಾಣಿಸಿದ್ದಾರೆ ಹೀಗೆ ಹಲವು ವಿಚಾರಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿತ್ತು. ಇದೀಗ ಈ ಎಲ್ಲ ಊಹಾಪೋಹಕ್ಕೆ ತೆರೆ ಬಿದ್ದಂತೆ ಕಾಣುತ್ತಿದೆ.

ಸಂಜೀವ್ ಗೋಯೆಂಕಾ ಅವರು ರಾಹುಲ್​ ಅವರನ್ನು ಮನೆಗೆ ಡಿನ್ನರ್​ಗೆ ಕರೆದು ತಬ್ಬಿಕೊಂಡಿರುವ ಫೋಟೊ ಒಂದು ವೈರಲ್​ ಆಗಿದೆ. ಈ ಮೂಲಕ ನಮ್ಮ ಮಧ್ಯೆ ಯಾವುದೇ ಮುನಿಸು ಇಲ್ಲ ಎನ್ನುವ ಸಂದೇಶ ನೀಡಿದಂತಿದೆ. ಸದ್ಯ ವೈರಲ್​ ಆಗುತ್ತಿರುವ ಫೋಟೊದಲ್ಲಿ ರಾಹುಲ್​ ಅವರನ್ನು ಗೋಯೆಂಕಾ ತಬ್ಬಿಕೊಂಡಿರಿವಂತೆ ಕಾಣುತ್ತಿದೆ. ರಾಹುಲ್​ ಕೂಡ ನಗುಮುಗದಿಂದಲೇ ಕಾಣಿಸಿಕೊಂಡಿದ್ದಾರೆ. ಆದರೆ, ಗೋಯೆಂಕಾ ಅವರ ಮುಖ ಮಾತ್ರ ಸ್ಪಷ್ಟವಾಗಿ ಗೋಚರಿಸಿಲ್ಲ. ರಾಹುಲ್​ ಪತ್ನಿ ಅಥಿಯಾ ಶೆಟ್ಟಿ ಕೂಡ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಸ್ಟೋರಿ ಹಾಕಿದ್ದು “ಚಂಡಮಾರುತದ ನಂತರ ಶಾಂತ” ಎಂದು ಬರೆದುಕೊಂಡಿದ್ದಾರೆ. ಹೀಗಾಗಿ ರಾಹುಲ್​ ಮತ್ತು ಗೋಯೆಂಕಾ ನಡುವಿನ ಮುನಿಸು ಶಮನವಾದಂತೆ ಕಾಣುತ್ತಿದೆ.

ಕಳೆದ ಹೈದರಾಬಾದ್​ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್​ ಮಾತ್ರವಲ್ಲದೆ, ಬೌಲಿಂಗ್​ನಲ್ಲಿಯೂ ಲಕ್ನೋ ಅತ್ಯಂತ ಕಳಪೆ ಪ್ರದರ್ಶನ ತೋರಿತ್ತು. ಕನಿಷ್ಠ 1 ವಿಕೆಟ್​ ಕೂಡ ಕೀಳಲಾಗದ ಘೋರ ವೈಫಲ್ಯ ಕಂಡಿತ್ತು. ಈ ಹೀನಾಯ ಸೋಲಿನಿಂದ ಸಿಟ್ಟಿಗೆದ್ದ ಸಂಜೀವ್ ಗೋಯೆಂಕಾ ನಾಯಕ ರಾಹುಲ್ ಅವರೊಂದಿಗೆ ಕೋಪದಲ್ಲಿ ಮಾತನಾಡುತ್ತಿರುವಂತೆ ಕಂಡುಬಂದಿತ್ತು. ಇವರಿಬ್ಬರ ನಡುವಣ ಮಾತುಕತೆ ಏನು ಎಂಬುದು ಸ್ಪಷ್ಟವಾಗಿ ಕೇಳಿಸಿಲ್ಲವಾಗಿದ್ದರೂ, ಈ ದೃಶ್ಯ ನೋಡುವಾಗ ಇದು ಅಸಮಾಧಾನದ ನುಡಿ ಎಂದು ತಿಳಿದು ಬಂದಿತ್ತು.

ಗೋಯೆಂಕಾ ಮಾತಿಗೆ ರಾಹುಲ್ ಪ್ರತಿಕ್ರಿಯೆ ನೀಡಲು ಮುಂದಾದರೂ ಕೂಡ ಇದನ್ನು ಗೋಯೆಂಕಾ ಒಪ್ಪಿಕೊಳ್ಳದೆ ಏನೋ ಬೈಯುತ್ತಿರುವಂತೆ ದೃಶ್ಯದಲ್ಲಿ ಕಂಡುಬಂದಿತ್ತು. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುಗಿತ್ತು. ಈ ಘಟನೆಯಿಂದ ರಾಹುಲ್​ ನೊಂದಿದ್ದಾರೆ ಎನ್ನಲಾಗಿತ್ತು. ಪಂದ್ಯದಲ್ಲಿ ಟಾಸ್​ ಗೆದ್ದು ಆಮೆ ಗತಿಯ ಬ್ಯಾಟಿಂಗ್​ ನಡೆಸಿದ ಲಕ್ನೋ ಸೂಪರ್​ ಜೈಂಟ್ಸ್​ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್​ಗೆ 165 ರನ್​ ಬಾರಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಹೈದರಾಬಾದ್​ ಯಾವುದೇ ವಿಕೆಟ್​ ನಷ್ಟವಿಲ್ಲದೆ ಕೇವಲ 9.4 ಓವರ್​ಗಳಲ್ಲಿ 167 ರನ್​ ಬಾರಿಸಿ ಭರ್ಜರಿ 10 ವಿಕೆಟ್​ ಅಂತರದ ಗೆಲುವು ಸಾಧಿಸಿತು. ಲಕ್ನೋ ಬೌಲರ್​ಗಳನ್ನು ನಿರ್ದಾಕ್ಷಿಣ್ಯವಾಗಿ ಮನಬಂದಂತೆ ದಂಡಿಸಿದ ಹೆಡ್ ಮತ್ತು ಅಭಿಷೇಕ್​​ ಸ್ಟೇಡಿಯಂನ ಮೂಲೆ ಮೂಲೆಗೂ ಚೆಂಡನ್ನು ಬಾರಿಸಿದ್ದರು.

ಇದನ್ನೂ ಓದಿ IPL 2024: ಮಾಲೀಕನ ಜತೆ ಜಗಳ, ತಂಡದ ಬಸ್​ ಬಿಟ್ಟು ಸ್ವಂತ ಖರ್ಚಲ್ಲಿ ಪ್ರಯಾಣಿಸಿದ ಕೆ. ಎಲ್​ ರಾಹುಲ್​

ಇಂದು ನಡೆಯುವ ಪಂದ್ಯದಲ್ಲಿ ಲಕ್ನೋ ಸೂಪರ್​ ಜೈಂಟ್ಸ್​ ತಂಡ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಆಡಲಿದೆ. ಪ್ಲೇ ಆಫ್​ ರೇಸ್​ನಲ್ಲಿ ಉಳಿಯಬೇಕಿದ್ದರೆ ಲಕ್ನೋಗೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಡೆಲ್ಲಿ ವಿರುದ್ಧ ಗೆದ್ದರೆ ಮಾತ್ರ ಸಾಲದು ಅಂತಿಮ ಪಂದ್ಯದಲ್ಲಿ ಮುಂಬೈ ವಿರುದ್ಧವೂ ಗೆಲುವು ಅತ್ಯಗತ್ಯ.

Exit mobile version