Site icon Vistara News

KL Rahul: ಕೊಲ್ಲೂರು ಶ್ರೀ ಮೂಕಾಂಬಿಕೆ ದರ್ಶನ ಪಡೆದ ಕ್ರಿಕೆಟಿಗ ಕೆ.ಎಲ್​ ರಾಹುಲ್​

KL Rahul visited Sri Mookambika Temple

ಕೊಲ್ಲೂರು: ಟೀಮ್​ ಇಂಡಿಯಾದ ಸ್ಟಾರ್​ ಕ್ರಿಕೆಟಿಗ, ಕನ್ನಡಿಗ ಕೆಎಲ್ ರಾಹುಲ್(KL Rahul)​ ಅವರು ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲಕ್ಕೆ(Sri Mookambika Temple) ಭೇಟಿ ಶ್ರೀ ದೇವಿಯ ದರ್ಶನ ಪಡೆದಿದ್ದಾರೆ. ಮಂಗಳವಾರ ರಾತ್ರಿ ರಾಹುಲ್​ ಕೊಲ್ಲೂರಿಗೆ(kollur sri mookambika) ಆಗಮಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ದೇಗುಲದ ವತಿಯಿಂದ ಕೆ.ಎಲ್.ರಾಹುಲ್ ಅವರನ್ನು ಗೌರವಿಸಲಾಯಿತು. ಕಾರ್ಯನಿರ್ವಾಹಣಾಧಿಕಾರಿ ಪ್ರಶಾಂತ್ ಶೆಟ್ಟಿ, ಸಾರ್ವಜನಿಕ ಸಂಪರ್ಕಾಧಿಕಾರಿ ಜಯಕುಮಾರ್, ಅರ್ಚಕ ಸುರೇಶ್ ಭಟ್ ಈ ವೇಳೆ ಉಪಸ್ಥಿತರಿದ್ದರು. ರಾಹುಲ್​ ತಮ್ಮ ಕ್ರಿಕೆಟ್​ ಬಿಡುವಿನ ವೇಳೆ ಹಲವು ದೇವಾಲಯಕ್ಕೆ ಹೋಗುವ ಮೂಲಕ ವಿಶೇಷ ಪೀಜೆ ಸಲ್ಲಿಸುತ್ತಲೇ ಇರುತ್ತಾರೆ. ದಕ್ಷಿಣ ಆಫ್ರಿಕಾ ಪ್ರವಾಸದ ಬಳಿಕ ವಿಶ್ರಾಂತಿಯಲ್ಲಿದ್ದ ಕಾರಣ ಅವರು ಈ ಬಾರಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲಕ್ಕೆ ಭೇಟಿ ಶ್ರೀ ದೇವಿಯ ದರ್ಶನ ಪಡೆದಿದ್ದಾರೆ.

ಜನವರಿ 25ರಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್​ ವಿರುದ್ಧದ ತವರಿನ 5 ಪಂದ್ಯಗಳ ಟಸ್ಟ್​ ಸರಣಿಯಲ್ಲಿ ಸ್ಥಾನ ಪಡೆದಿರುವ ರಾಹುಲ್​ ಇನ್ನೇನು ಕೆಲ ದಿನಗಳಲ್ಲಿ ತಂಡ ಸೇರಿಕೊಂಡು ಅಭ್ಯಾಸದಲ್ಲಿ ನಿರತರಾಗಲಿದ್ದಾರೆ. ಭಾರತ ಪ್ರವಾಸದಲ್ಲಿ ಇಂಗ್ಲೆಂಡ್​ ಒಟ್ಟು 5 ಪಂದ್ಯಗಳ ಟೆಸ್ಟ್​ ಸರಣಿ ಆಡಲಿದೆ. ಸರಣಿಯ ಮೊದಲ ಪಂದ್ಯ ಜನವರಿ 25ರಿಂದ ಹೈದರಾಬಾದ್​ನಲ್ಲಿ ನಡೆಯಲಿದೆ. ಬಳಿಕದ 4 ಟೆಸ್ಟ್​ಗಳನ್ನು ಕ್ರಮವಾಗಿ ವಿಶಾಖಪಟ್ಟಣ (ಫೆ.2-6), ರಾಜ್​ಕೋಟ್​ (ಫೆ.15-19), ರಾಂಚಿ (ಫೆ. 23-27) ಮತ್ತು ಧರ್ಮಶಾಲಾದಲ್ಲಿ (ಮಾ.7-11) ಆಡಲಿದೆ.

ಕೀಪಿಂಗ್​ನಿಂದ ಮುಕ್ತ…


ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಟೆಸ್ಟ್ ಸರಣಿಯಲ್ಲಿ ಮೊದಲ ಬಾರಿಗೆ ವಿಕೆಟ್ ಕೀಪಿಂಗ್ ಮಾಡಿದ್ದ ಭಾರತದ ಅನುಭವಿ ಕ್ರಿಕೆಟಿಗ ಕೆ.ಎಲ್ ರಾಹುಲ್ ಅವರನ್ನು ಈ ಜವಾಬ್ದಾರಿಯಿಂದ ಮುಕ್ತಗೊಳಿಸಲಾಗಿದೆ ಎಂದು ವರದಿಯಾಗಿದೆ. ಸ್ಟಂಪ್‌ಗಳ ಹಿಂದೆ ತನ್ನ ಕೌಶಲ್ಯದಿಂದ ರಾಹುಲ್ ಅನೇಕರನ್ನು ಆಕರ್ಷಿಸಿದ್ದರೂ, ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅವರನ್ನು ವಿಕೆಟ್-ಕೀಪರ್ ಬ್ಯಾಟರ್ ಆಗಿ ಬಳಸಲಾಗುವುದಿಲ್ಲ ಎಂದು ವರದಿಯಾಗಿದೆ. ಆದರೆ ಏಕದಿನದಲ್ಲಿ ರಾಹುಲ್ ಕೀಪಿಂಗ್​ ಮುಂದುವರೆಸುವ ಸಾಧ್ಯತೆ ಇದೆ.

ಇದನ್ನೂ ಓದಿ IND vs AFG 3rd T20: ಮೂರನೇ ಟಿ20ಗೆ ಟೀಮ್​ ಇಂಡಿಯಾದಲ್ಲಿ ಮೂರು ಬದಲಾವಣೆ

“ರಾಹುಲ್ ಇನ್ನು ಮುಂದೆ ಸ್ಪೆಷಲಿಸ್ಟ್ ಬ್ಯಾಟರ್ ಆಗಿ ಆಡುತ್ತಾರೆ. ವಿದೇಶಿ ಟೆಸ್ಟ್‌ಗಳಲ್ಲಿ ವೇಗಿಗಳ ಬೌಲಿಂಗ್​ಗೆ ಕೀಪಿಂಗ್​ ನಡೆಸುವುದು ಸುಲಭ ಆದರೆ, ದೇಶಿ ಪಿಚ್​ನಲ್ಲಿ ಅದರಲ್ಲೂ ಸ್ಪಿನ್ನರ್‌ಗಳ ಎಸೆತಗಳಿಗೆ ಕೀಪಿಂಗ್ ನಡೆಸುವುದು ಸುಲಭವಲ್ಲ. ಚೆಂಡು ತಿರುವು ಪಡೆಯುವ ಕಾರಣ ಓರ್ವ ಸ್ಪೆಷಲಿಸ್ಟ್ ಕೀಪರ್​ ಅತ್ಯಗತ್ಯ. ಹೀಗಾಗಿ ರಾಹುಲ್​ ಅವರನ್ನು ಇನ್ನು ಮುಂದೆ ಸ್ಪೆಷಲಿಸ್ಟ್ ಬ್ಯಾಟರ್ ಆಗಿ ತಂಡಕ್ಕೆ ಆಯ್ಕೆ ಮಾಡಲಾಗುತ್ತದೆ” ಎಂದು ಬಿಸಿಸಿಐ ಮೂಲಗಳು ಕೆಲ ದಿನಗಳ ಹಿಂದೆ ತಿಳಿಸಿತ್ತು.

“ರಾಹುಲ್​ಗೆ ತಂಡದಲ್ಲಿ ಹಲವು ಪಾತ್ರಗಳನ್ನು ನೀಡಿ ಅವರನ್ನು ಒತ್ತಡಕ್ಕೆ ಸಿಲುಕಿಸುವುದು ನಮಗೆ ಇಷ್ಟವಿಲ್ಲ, ಅವರ ತಂಡದ ಬ್ಯಾಟಿಂಗ್​ ಆಸ್ತಿಯಾಗಿದ್ದಾರೆ. ಸ್ಟಂಪ್‌ಗಳ ಹಿಂದೆ ನಿಂತಿರುವಾಗ ಅವರು ಗಾಯಗೊಂಡರೆ ತಂಡಕ್ಕೆ ದೊಡ್ಡ ನಷ್ಟ. ಹೀಗಾಗಿ ಇಂಗ್ಲೆಂಡ್​ ಸರಣಿಯಲ್ಲಿ ರಾಹುಲ್​ ಕೇವಲ ಬ್ಯಾಟಿಂಗ್​ ಮಾತ್ರ ಮಾಡಲಿದ್ದಾರೆ. ಭರತ್ ಮತ್ತು ಜುರೆಲ್ ನಮ್ಮ ವಿಕೆಟ್‌ಕೀಪರ್‌ಗಳಾಗಿರುತ್ತಾರೆ” ಎಂದು ಬಿಸಿಸಿಐ ಮೂಲಗಳು ತಿಳಿಸಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿತ್ತು.

Exit mobile version