ಲಖನೌ: ಆರ್ಸಿಬಿ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಲಖನೌ ತಂಡದ ಮೆಂಟರ್ ಗೌತಮ್ ಗಂಭೀರ್ ಮೈದಾನದಲ್ಲೇ ವಾಗ್ಯುದ್ಧಕ್ಕೆ ಇಳಿದದ್ದು ದೊಡ್ಡ ಸುದ್ದಿಯಾಗಿತ್ತು. ಐಪಿಎಲ್ ಆಡಳಿತ ಮಂಡಳಿ ಅವರಿಬ್ಬರಿಗೆ ದಂಡ ವಿಧಿಸಿದ್ದೂ ಆಯಿತು. ಆದರೆ, ಜಗಳಕ್ಕೆ ಕಾರಣವೇನು ಮತ್ತು ಅವರು ಬೈದಾದಿಕೊಂಡಿದ್ದೇನು ಎಂಬುದು ಬಹಿರಂಗವಾಗಿರಲಿಲ್ಲ. ಆದರೆ, ಪ್ರತ್ಯಕ್ಷದರ್ಶಿಯೊಬ್ಬರ ಹೇಳಿಕೆ ಮೇಲೆ ಕೊಹ್ಲಿ ಮತ್ತು ಗಂಭೀರ್ ಏನೆಲ್ಲ ಮಾತುಗಳನ್ನು ಆಡಿದರು ಎಂಬುದನ್ನು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಅವರ ವರದಿ ಹೀಗಿದೆ.
ಪಂದ್ಯದ ಅಂತಿಮ ಕ್ಷಣದಲ್ಲಿ ಲಖನೌ ತಂಡದ ಪರ ಬ್ಯಾಟಿಂಗ್ ಮಾಡುತ್ತಿದ್ದ ನವಿನ್ ಉಲ್ ಹಕ್ ಹಾಗೂ ವಿರಾಟ್ ಕೊಹ್ಲಿಯ ನಡುವೆ ಗಲಾಟೆ ಉಂಟಾಗಿತ್ತು. ಅವರಿಬ್ಬರೂ ಗುರಾಯಿಸಿ ನೋಡಿ ಕಚ್ಚಾಡಿಕೊಂಡಿದ್ದರು. ಪಂದ್ಯ ಮುಗಿದು ಪರಸ್ಪರ ಹಸ್ತಲಾಘವ ಮಾಡುವ ವೇಳೆ ಮತ್ತೆ ಅವರು ಮಾತಿನ ಚಕಮಕಿ ನಡೆಸಿದ್ದರು. ಇದರಿಂದ ಸಿಟ್ಟಿಗೆದ್ದ ಗಂಭೀರ್ ಕೊಹ್ಲಿಯ ಬಗ್ಗೆ ಏನೂ ಹೇಳಲು ಹೋದರು. ಈ ವೇಳೆ ಮಾತಿನ ಚಕಮಕಿ ಉಂಟಾಯಿತು.
ಪಂದ್ಯ ಮುಗಿದ ಬಳಿಕ ವಿರಾಟ್ ಕೊಹ್ಲಿ ಬಳಿಗೆ ಹೋದ ಲಕ್ನೊ ತಂಡದ ಬ್ಯಾಟರ್ ಕೈಲ್ ಮೇಯರ್ಸ್ ನೀವ್ಯಾಕೆ ನವೀನ್ ಜತೆ ಜಗಳವಾಡಿದ್ದು ಎಂದು ಕೇಳಿದ್ದಾರೆ. ವಿರಾಟ್ ಕೊಹ್ಲಿ ವಿಷಯವನ್ನು ವಿವರಿಸಿ ಹೇಳುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಗೌತಮ್ ಗಂಭೀರ್ ಕೈಲ್ ಮೇಯರ್ಸ್ ಅವರನ್ನು ಕೊಹ್ಲಿಯ ಬಳಿಯಿಂದ ಎಳೆದುಕೊಂಡು ಹೋಗುತ್ತಾರೆ. ಆಗ ವಿರಾಟ್ ಕೊಹ್ಲಿ ಏನೂ ಹೇಳುತ್ತಾರೆ.
ಇದನ್ನೂ ಓದಿ : IPL 2023: ನಿಧಾನಗತಿ ಬೌಲಿಂಗ್: ವಿರಾಟ್ ಕೊಹ್ಲಿಗೆ 24 ಲಕ್ಷ ರೂ. ದಂಡ
ಕೊಹ್ಲಿ ಗೊಣಗಿದ್ದನ್ನು ಕೇಳಿದ ಗೌತಮ್ ಗಂಭೀರ್, ಏನು ಹೇಳಿದೆ? ಮತ್ತೊಮ್ಮೆ ಜೋರಾಗಿ ಹೇಳು ಎಂದು ಹತ್ತಿರ ಬರುತ್ತಾರೆ. ನಾನು ಏನೂ ಹೇಳದೇ ಇರುವಾಗ ನನ್ನನ್ನು ಬಂದು ಪ್ರಶ್ನಿಸುವುದು ಯಾಕೆ ಎಂದು ವಿರಾಟ್ ಕೊಹ್ಲಿ ಮರು ಪ್ರಶ್ನೆ ಹಾಕುತ್ತಾರೆ. ಈ ವೇಳೆ ಗಂಭೀರ್, ನೀನು ನನ್ನ ತಂಡದ ಆಟಗಾರರಿಗೆ ನಿಂದಿಸಿದ್ದೀಯಾ. ಅಂದರೆ ನೀನು ನನ್ನ ಕುಟುಂಬದ ಸದಸ್ಯರಿಗೆ ನಿಂದಿಸಿದ ಹಾಗೆ. ಅದನ್ನು ನಾನು ಪ್ರಶ್ನಿಸಿದ್ದೇನೆ ಎಂದ ಹೇಳುತ್ತಾರೆ.. ಈ ವೇಳೆ ವಿರಾಟ್ ಕೊಹ್ಲಿ , ಆಟಗಾರರು ನಿನ್ನ ಕುಟುಂಬದ ಸದಸ್ಯರು ಎಂದಾದರೆ ಅವರನ್ನು ಮೊದಲು ಸಂಭಾಳಿಸುವುಕ್ಕೆ ಕಲಿಯಿರಿ ಎಂದು ಪ್ರತ್ಯುತ್ತರ ನೀಡುತ್ತಾರೆ.
ಕೊಹ್ಲಿ ಮಾತಿಗೆ ಕೆಂಡಾಮಂಡಲರಾದ ಗೌತಮ್ ಗಂಭೀರ್, ನಾನು ನಿನ್ನಿಂದ ಕಲಿಯುವುದು ಏನೂ ಇಲ್ಲ. ನಾನೇನು ನಿನ್ನಿಂದ ಕಲಿಯಬೇಕಾ ಎಂದು ಹೇಳುತ್ತಾರೆ. ಅಷ್ಟರಲ್ಲಿ ಆಟಗಾರರು, ಅಂಪೈರ್ಗಳು ಸೇರಿ ಜಗಳ ಬಿಡಿಸುತ್ತಾರೆ.
ಭಾರಿ ಪ್ರಮಾಣದ ದಂಡ
ಅಂತೆಯೇ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್‌ಗೆ ನಿನ್ನೆಯ ಪಂದ್ಯದ ಫುಲ್ ಸಂಭಾವನೆ ಕಡಿತ ಮಾಡಲಾಗಿದೆ. ನಿನ್ನೆ ಆಡಿದ್ದಕ್ಕೆ ಅವರಿಬ್ಬರಿಗೆ ಸಂಬಳವೇ ಇಲ್ಲ. ಅಂದ ಹಾಗೆ ಕೊಹ್ಲಿ ಒಂದು ಪಂದ್ಯಕ್ಕೆ 1.07 ಕೋಟಿ ರೂಪ ಪಡೆದರೆ, ಗಂಭೀರ್ 25 ಲಕ್ಷ ರೂಪಾಯಿ ಪಡೆದುಕೊಳ್ಳುತ್ತಾರೆ. ಇದೇ ವೇಲೆ ಲಖನೌ ಸೂಪರ್ ಜಯಂಟ್ಸ್ ತಂಡದ ಆಟಗಾರ ಹಾಗೂ ಅಫಘಾನಿಸ್ತಾನದ ವೇಗಿ ನವೀನ್ ಉಲ್ ಹಕ್ಗೂ ಶೇಕಡಾ 50 ಸಂಬಳ ಕಡಿತ ಮಾಡಲಾಗಿದೆ. ಅವರು 1.79 ಲಕ್ಷ ರೂಪಾಯಿ ಪಾವತಿಸಬೇಕಾಗಿದೆ.
ಪಂದ್ಯದ ರೆಫರಿ ಈ ಮೂವರಿಗೂ ದಂಡ ವಿಧಿಸಿದ್ದು ಇಂಥ ಘಟನೆಗಳನು ಮುಂದುವರಿಯಬಾರದೂ ಎಂದು ಹೇಳಿದ್ದಾರೆ. ಮೂವರೂ ತಮ್ಮ ತಪ್ಪುಗಳನ್ನು ಒಪ್ಪಿಕೊಂಡು ದಂಡ ಕಟ್ಟಲಿದ್ದಾರೆ. ಐಪಿಎಲ್ ಕೋಡ್ ಆಫ್ ಕಂಡಕ್ಟ್ ಎರಡನೇ ಹಂತದ ಅಪರಾಧವೆಸಗಿದ ಕಾರಣ ಕೊಹ್ಲಿ ಹಾಗೂ ಗಂಭೀರ್‌ಗೆ ದುಬಾರಿ ದಂಡ ವಿಧಿಸಲಾಗಿದೆ.
“ಲಖನೌದ ಅಟಲ್ ಬಿಹಾರಿ ವಾಜಪೇಯಿ ಏಕನಾ ಮೈದಾನದಲ್ಲಿ ನಡೆದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಟಾಟಾ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಐಪಿಎಲ್ ನಿಯಮ ಉಲ್ಲಂಘಿಸಿದ ಕಾರಣ ಲಖನೌ ಸೂಪರ್ ಜಯಂಟ್ಸ್ ಮೆಂಟರ್ ಗೌತಮ್ ಗಂಭೀರ್‌ಗೆ ಪಂದ್ಯದ ಶುಲ್ಕದಲ್ಲಿ ಶೇ. 100 ರಷ್ಟು ದಂಡವನ್ನು ವಿಧಿಸಲಾಗಿದೆ,” ಎಂದು ಐಪಿಎಲ್ ಪ್ರಕಟಣೆ ಹೊರಡಿಸಿದೆ.