ಮುಂಬಯಿ: ವಿರಾಟ್ ಕೊಹ್ಲಿ(88), ಶುಭಮನ್ ಗಿಲ್(92) ಮತ್ತು ಶ್ರೇಯಸ್ ಅಯ್ಯರ್(82) ಅವರು ಬಾರಿಸಿದ ಸೊಗಸಾದ ಅರ್ಧಶತಕದ ನೆರವಿನಿಂದ ಭಾರತ ತಂಡ ಶ್ರೀಲಂಕಾ(IND vs SL) ವಿರುದ್ಧ 357 ರನ್ ಗಳಿಸಿ ಸವಾಲೊಡ್ಡಿದೆ. ಎದುರಾಳಿ ಲಂಕಾ ಗೆಲುವಿಗೆ 358 ರನ್ ಬಾರಿಸಬೇಕಿದೆ.
ಇಲ್ಲಿನ ವಾಂಖೆಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಭಾರತ ಮೊದಲ ಓವರ್ನ ದ್ವಿತೀಯ ಎಸೆತದಲ್ಲೇ ರೋಹಿತ್ ಅವರ ವಿಕೆಟ್ ಕಳೆದುಕೊಂಡರೂ ಆ ಬಳಿಕ ಎಚ್ಚರಿಕೆ ಆಟವಾಡಿ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 357 ರನ್ ಗಳಿಸಿತು. ಕೊಹ್ಲಿ ಮತ್ತು ಗಿಲ್ ಅವರ ಆಕರ್ಷಕ ಬ್ಯಾಟಿಂಗ್ ಜತೆಯಾಟ ಈ ಪಂದ್ಯದ ಮೊದಲ ಇನಿಂಗ್ಸ್ನ ಹೈಲೆಟ್ಸ್ ಆಗಿತ್ತು.
ಜೀವದಾನ ಪಡೆದು ಅರ್ಧಶತಕ ಬಾರಿಸಿದ ಗಿಲ್-ಕೊಹ್ಲಿ
ಇನಿಂಗ್ಸ್ ಆರಂಭಿಸಿದ ರೋಹಿತ್ ಅವರು ಮೊದಲ ಎಸೆತದಲ್ಲೇ ಬೌಂಡರಿ ಬಾರಿಸಿ ಅಪಾಯಕಾರಿಯಾಗುವ ಸೂಚನೆ ನೀಡಿದರು. ಆದರೆ ಅವರ ಈ ಬ್ಯಾಟಿಂಗ್ ಜೋಶ್ ಹೆಚ್ಚು ಕಾಲ ಉಳಿಯಲಿಲ್ಲ. ಮುಂದಿನ ಎಸೆತದಲ್ಲೇ ದಿಲ್ಶನ್ ಮಧುಶಂಕ ಅವರು ರೋಹಿತ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಆದರೆ ಆ ಬಳಿಕ ಬಂದ ವಿರಾಟ್ ಕೊಹ್ಲಿ ಅವರು ತಾಳ್ಮೆಯುತ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಸರೆಯಾದರು. ಗಿಲ್ ಕೂಡ ಆರಂಭಿಕ ಹಂತದಲ್ಲಿ ನಿಧಾನಗತಿಯ ಬ್ಯಾಟಿಂಗ್ಗೆ ಒತ್ತು ನೀಡಿದರು. ಇದೇ ವೇಳೆ ಕೊಹ್ಲಿ ಮತ್ತು ಗಿಲ್ ತಲಾ ಒಂದು ಜೀವದಾನ ಪಡೆದರು. ಕೊಹ್ಲಿ 10 ರನ್ ಗಳಿಸಿದ ವೇಳೆ ಕ್ಯಾಚ್ನಿಂದ ಪಾರಾದರೆ, ಗಿಲ್ 8 ರನ್ ವೇಳೆ ಜೀವದಾನ ಪಡೆದರು. ಉಭಯ ಆಟಗಾರರು ಈ ಲಾಭವನ್ನೆತ್ತಿ ಅರ್ಧಶತಕ ಬಾರಿಸಿ ಮಿಂಚಿದರು.
ಇದನ್ನೂ ಓದಿ Virat Kohli: ಕೊಹ್ಲಿಯ ಅರ್ಧಶತಕಕ್ಕೆ ಹಲವು ದಿಗ್ಗಜರ ವಿಶ್ವಕಪ್ ದಾಖಲೆ ಧೂಳೀಪಟ
ಬೃಹತ್ ಮೊತ್ತದ ಜತೆಯಾಟ
4 ರನ್ಗಳಿಂದ ಇನಿಂಗ್ಸ್ ಆರಂಭಿಸಿದ ವಿರಾಟ್ ಕೊಹ್ಲಿ ಮತ್ತು ಶುಭಮನ್ ಗಿಲ್ ಉತ್ತಮ ಜತೆಯಾಟ ನಿಭಾಯಿಸುವ ಮೂಲಕ ದ್ವಿತೀಯ ವಿಕೆಟ್ಗೆ ಬರೋಬ್ಬರಿ 189 ರನ್ ಒಟ್ಟು ಸೇರಿಸಿದರು. ವಿರಾಟ್ ಕೊಹ್ಲಿ ಅವರು 34 ರನ್ ಗಳಿಸುತ್ತಿದ್ದಂತೆ ಕ್ಯಾಲೆಂಡರ್ ವರ್ಷದಲ್ಲಿ 1000 ರನ್ ಪೂರ್ತಿಗೊಳಿಸಿದರು. ಇದೇ ವೇಳೆ ಸಚಿನ್ ಅವರ ದಾಖಲೆಯನ್ನು ಮುರಿದರು. ಸಚಿನ್ ಅವರು ಒಟ್ಟು ಕ್ಯಾಲೆಂಡರ್ ವರ್ಷದಲ್ಲಿ 7 ಬಾರಿ ಸಾವಿರ ರನ್ ಬಾರಿಸಿದ್ದರು. ಇದೀಗ ವಿರಾಟ್ ಅವರು 8 ಬಾರಿ ಈ ಸಾಧನೆ ಮಾಡಿ ಸಚಿನ್ ಅವರ ದಾಖಲೆಯನ್ನು ಮುರಿದಿದ್ದಾರೆ.
ಮೂರು ರನ್ ಅಂತರದಲ್ಲಿ ಕೊಹ್ಲಿ-ಗಿಲ್ ಔಟ್
ಶತಕ ಬಾರಿಸಲು ಜಿದ್ದಿಗೆ ಬಿದ್ದು ತಾ ಮುಂದು, ನಾ ಮುಂದು ಎಂದು ಬ್ಯಾಟಿಂಗ್ ನಡೆಸುತ್ತಿದ್ದ ವೇಳೆ ಶುಭಮನ್ ಗಿಲ್ ಅವರು 92 ರನ್ ಗಳಿಸಿ ಸುಲಭ ಕ್ಯಾಚ್ ನೀಡಿ ವಿಕೆಟ್ ಕೈಚೆಲ್ಲಿದರು. ಕೇವಲ 8 ರನ್ಗಳ ಅಂತರದಿಂದ ಶತಕ ವಂಚಿತರಾದರು. ಗಿಲ್ ವಿಕೆಟ್ ಪತನಗೊಂಡ 3 ರನ್ ಅಂತರದಲ್ಲಿ ವಿರಾಟ್ ಕೊಹ್ಲಿ ಕೂಡ ವಿಕೆಟ್ ಕೈಚೆಲ್ಲಿದರು. ಉಭಯ ಆಟಗಾರರ ವಿಕೆಟ್ ಕೂಡ ದಿಲ್ಶನ್ ಮಧುಶಂಕ ಪಾಲಾಯಿತು. ಅಲ್ಲಿಗೆ ಆರಂಭಿಕ ಮೂರು ವಿಕೆಟ್ ಕೂಡ ಮಧುಶಂಕ ಖಾತೆಗೆ ಸೇರಿತು.
ಮತ್ತೊಮ್ಮೆ ಎಡವಿದ ವಿರಾಟ್
ಅತ್ಯಂತ ತಾಳ್ಮೆಯಿಂದ ಬ್ಯಾಟಿಂಗ್ ನಡೆಸುತ್ತಿದ್ದ ಕೊಹ್ಲಿ ಈ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಅವರ ಸಾರ್ವಕಾಲಿಕ ಏಕದಿನ ಕ್ರಿಕೆಟ್ನ 49 ಶತಕವನ್ನು ಸರಿದೂಗಿಸಲಿದ್ದಾರೆ ಎಂದು ಅಭಿಮಾನಿಗಳು ನಿರೀಕ್ಷೆ ಮಾಡಿದ್ದರು. ಆದರೆ ಕೊಹ್ಲಿ 88 ರನ್ ಗಳಿಸಿದ ವೇಳೆ ಕವರ್ ಪಾಯಿಂಟ್ನಲ್ಲಿ ನಿಂತಿದ್ದ ಪಾತುಂಮ್ ನಿಸ್ಸಾಂಕ ಅವರಿಗೆ ಸುಲಭ ಕ್ಯಾಚ್ ನೀಡಿ ಔಟಾದರು. ವಿರಾಟ್ ಅವರ ವಿಕೆಟ್ ಬೀಳುತ್ತಿದ್ದಂತೆ ಒಂದು ಕ್ಷಣ ವಾಂಖೆಡೆ ಸ್ಟೇಡಿಯಂ ನಿಶ್ಯಬ್ದವಾಯಿತು.
ವಿಸ್ಫೋಟಕ ಬ್ಯಾಟಿಂಗ್ ನಡೆಸಿದ ಅಯ್ಯರ್
ಶುಭಮನ್ ಗಿಲ್ ವಿಕೆಟ್ ಪತನದ ಬಳಿಕ ಆಡಲಿಳಿದ ಶ್ರೇಯಸ್ ಅಯ್ಯರ್ ಅವರು ಆರಂಭದಿಂದಲೇ ವಿಸ್ಫೋಟಕ ಬ್ಯಾಟಿಂಗ್ ನಡೆಸಿ ಗಮನಸೆಳೆದರು. ತವರಿನ ಮೈದಾನದಲ್ಲಿ ಆಡಿದ ಎಲ್ಲ ಅನುಭವವನ್ನು ಇಲ್ಲಿ ಹೊರ ಹಾಕಿದರು. ಲಂಕಾ ಬೌಲರ್ಗಳ ಮೇಲೆರಗಿದ ಅವರು ಸಿಕ್ಸರ್ ಮತ್ತು ಬೌಂಡರಿಗಳ ಸುರಿಮಳೆ ಸುರಿಸಿದರು. ಆದರೆ ಇವರು ಕೂಡ ಶತಕ ಬಾರಿಸುವ ಅವಕಾಶದಿಂದ ವಂಚಿತರಾದರು. 56 ಎಸೆತಗಳಿಂದ 3 ಬೌಂಡರಿ ಮತ್ತು 6 ಸಿಕ್ಸರ್ ಬಾರಿಸಿ 82 ರನ್ಗೆ ವಿಕೆಟ್ ಒಪ್ಪಿಸಿದರು. ಸಿಕ್ಸರ್ ಬಾರಿಸುವ ಯತ್ನದಲ್ಲಿ ಎಡವಿ ತೀಕ್ಷಣ ಅವರಿಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು.
ಕಳೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಸಿಡಿದಿದ್ದ ಸೂರ್ಯಕುಮಾರ್ ಈ ಪಂದ್ಯದಲ್ಲಿ 12 ರನ್ಗೆ ಆಟ ಮುಗಿಸಿದರು. ಕನ್ನಡಿಗ ರಾಹುಲ್ 19 ಎಸತ ಎದುರಿಸಿ 2 ಬೌಂಡರಿ ನೆರವಿನಿಂದ 21 ರನ್ ಬಾರಿಸಿದರು. ಅಂತಿಮ ಹಂತದಲ್ಲಿ ಶಕ್ತಿ ಮೀರಿ ಬ್ಯಾಟಿಂಗ್ ಪ್ರದರ್ಶನ ತೋರಿದ ಜಡೇಜ 35 ರನ್ ಗಳಿಸಿದರು. ಇವರ ಈ ಬ್ಯಾಟಿಂಗ್ ಸಾಹಸದಿಂದ ಭಾರತ 350ರ ಗಡಿ ದಾಟಿತು. ಶ್ರೀಲಂಕಾ ಪರ ದಿಲ್ಶನ್ ಮಧುಶಂಕ 80 ರನ್ ವೆಚ್ಚದಲ್ಲಿ 5 ವಿಕೆಟ್ ಕಿತ್ತರು.