ಮುಂಬಯಿ: ಟೀಮ್ ಇಂಡಿಯಾದ ಘಾತಕ ಬೌಲಿಂಗ್ ದಾಳಿಗೆ ನೆಲಕಚ್ಚಿದ ಶ್ರೀಲಂಕಾ, ಕೇವಲ 55 ರನ್ಗೆ ಸರ್ವಪತನ ಕಂಡು ಹೀನಾಯ ಸೋಲು ಕಂಡಿತ್ತು. ಇದೇ ಪಂದ್ಯದಲ್ಲಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ(virat kohli) ಅವರಿಗೆ ಬೌಲಿಂಗ್ ನೀಡುವಂತೆ ಪ್ರೇಕ್ಷಕರು ವಿಶೇಷವಾಗಿ ಮನವಿ ಮಾಡಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಭಾರತ ನೀಡಿದ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಶ್ರೀಲಂಕಾ ತಂಡಕ್ಕೆ ಜಸ್ಪ್ರೀತ್ ಬುಮ್ರಾ ಮೊದಲ ಎಸೆತದಲ್ಲೇ ಶಾಕ್ ನೀಡಿದರು. ಪಾಥುಮ್ ನಿಸ್ಸಾಂಕ ಅವರನ್ನು ಎಲ್ಬಿಡಬ್ಲ್ಯು ಬಲೆಗೆ ಬೀಳಿಸಿದರು. ಮುಂದಿನ ಓವರ್ನಲ್ಲಿ ಸಿರಾಜ್ ಅವರು ಬ್ಯಾಕ್ ಟು ಬ್ಯಾಕ್ ವಿಕೆಟ್ ಕಿತ್ತು ಭಾರತಕ್ಕೆ ಮುನ್ನಡೆ ತಂದು ಕೊಟ್ಟರು. ಬಳಿಕ ಶಮಿ ಅವರು ಕೂಡ ವಿಕೆಟ್ ಬೇಟೆಯಾಡ ತೊಡಗಿದರು. ಈ ವೇಳೆ ಗ್ಯಾಲರಿಯಲ್ಲಿ ಕುಳಿತ್ತಿದ್ದ ವಿರಾಟ್ ಕೊಹ್ಲಿ ಅವರ ಅಭಿಮಾನಿಗಳು ಜೋರಾಗಿ ಹಿಂದಿಯಲ್ಲಿ “ಕೊಹ್ಲಿ ಕೊ ಬೌಲಿಂಗ್ ದೋ….ಕೊಹ್ಲಿ ಕೊ ಬೌಲಿಂಗ್ ದೋ” ಎಂಬ ಹಾಡನ್ನು ಹಾಡುವ ಮೂಲಕ ಅವರಿಗೆ ಬೌಲಿಂಗ್ ನೀಡುವಂತೆ ಆಗ್ರಹಿಸಿದ್ದಾರೆ. ಅಭಿಮಾನಿಗಳು ಈ ರೀತಿ ಕೂಗುವಾಗ ಚಂಡೆ ಮತ್ತು ವಾದ್ಯಗಳು ಕೂಡ ಇದಕ್ಕೆ ಸಾಥ್ ನೀಡಿದವು. ಈ ವಿಡಿಯೊ ವೈರಲ್ ಆಗಿದೆ.
ಇದನ್ನೂ ಓದಿ Mohammed Shami: ಒಂದೇ ಪಂದ್ಯದಲ್ಲಿ ಹಲವು ದಾಖಲೆ ಬರೆದ ಮೊಹಮ್ಮದ್ ಶಮಿ
ಅಭಿಮಾನಿಗಳು ವಿರಾಟ್ ಅವರಿಗೆ ಬೌಲಿಂಗ್ ನೀಡುವಂತೆ ಆಗ್ರಹಿಸಲು ಒಂದು ಕಾರಣವಿದೆ. ಕೊಹ್ಲಿ ಅವರು ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಗಾಯಗೊಂಡು ಪಂದ್ಯದಿಂದ ಹೊರ ನಡೆದಾಗ ಪಾಂಡ್ಯ ಅವರ ಓವರನ್ನು ಕೊಹ್ಲಿ ಪೂರ್ಣಗೊಳಿಸಿದ್ದರು. ಮೂರು ಎಸೆತ ಎಸೆದು ಗಮನಸೆಳೆದಿದ್ದರು.
ಬೌಲಿಂಗ್ ಅನುಭವ ಹೊಂದಿದ್ದಾರೆ
ವಿರಾಟ್ ಕೊಹ್ಲಿ ಕೂಡ ಬೌಲಿಂಗ್ ಅನುಭವವನ್ನು ಹೊಂದಿದ್ದಾರೆ. 2015ರ ವಿಶ್ವಕಪ್ನಲ್ಲಿ ಆಸೀಸ್ ವಿರುದ್ಧ ಮತ್ತು ಇದಕ್ಕೂ ಮುನ್ನ 2011ರಲ್ಲಿ ನಡೆದಿದ್ದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಬೌಲಿಂಗ್ ನಡೆಸಿದ್ದರು. ಇಲ್ಲಿ ತಲಾ ಓವರ್ ಬೌಲಿಂಗ್ ನಡೆಸಿ ವಿಕೆಟ್ ಪಡೆಯದಿದ್ದರೂ ಉತ್ತಮ ರನ್ ಕಂಟ್ರೋಲ್ ಮಾಡಿದ್ದರು. ಅಲ್ಲದೆ ಕಳೆದ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಅವರ ಓವರ್ ಕೂಡ ಕೊಹ್ಲಿಯೇ ಪೂರ್ಣಗೊಳಿಸಿದ್ದರು. ಏಕದಿನದಲ್ಲಿ ಕೊಹ್ಲಿ 4 ವಿಕೆಟ್, ಟಿ20 ಮತ್ತು ಐಪಿಎಲ್ನಲ್ಲಿಯೂ ತಲಾ 4 ವಿಕಟ್ ಪಡೆದ ಸಾಧನೆ ಮಾಡಿದ್ದಾರೆ. ಹೀಗಾಗಿ ಕೊಹ್ಲಿಗೆ ಬೌಲಿಂಗ್ ನೀಡುವಂತೆ ಅಭಿಮಾನಿಗಳು ಆಗ್ರಹಿಸಿದ್ದಾರೆ.
ಇದನ್ನೂ ಓದಿ IND vs SL: ವ್ಹಾವ್…ಶ್ರೀಲಂಕಾ ವಿರುದ್ಧ ಟೀಮ್ ಇಂಡಿಯಾದ ದಾಖಲೆಯ ಗೆಲುವು ಸಂಭ್ರಮಿಸಿದ ಕೇಂದ್ರ ಸಚಿವ
ಸೆಮಿಗೆ ಲಗ್ಗೆಯಿಟ್ಟ ಭಾರತ
ಇಲ್ಲಿನ ವಾಂಖೆಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ಗುರುವಾರ ನಡೆದಿದ್ದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಭಾರತ, ವಿರಾಟ್ ಕೊಹ್ಲಿ (88), ಶುಭಮನ್ ಗಿಲ್(92) ಮತ್ತು ಶ್ರೇಯಸ್ ಅಯ್ಯರ್(82) ಅವರು ಬಾರಿಸಿದ ಸೊಗಸಾದ ಅರ್ಧಶತಕದ ನೆರವಿನಿಂದ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 357 ರನ್ ಗಳಿಸಿತು. ಬೃಹತ್ ಮೊತ್ತವನ್ನು ಕಂಡು ಆರಂಭದಲ್ಲೇ ಬೆದರಿದ ಲಂಕಾ, ನಾಟಕೀಯ ಕುಸಿತ ಕಂಡು 19.4 ಓವರ್ಗಳಲ್ಲಿ 55 ರನ್ಗೆ ಆಲೌಟ್ ಆಗಿ ಹೀನಾಯ ಸೋಲಿಗೆ ತುತ್ತಾಯಿತು. ಭಾರತ ತಂಡ ಈ ಗೆಲುವಿನೊಂದಿಗೆ ಸೆಮಿಫೈನಲ್ಗೆ ಲಗ್ಗೆಯಿಟ್ಟಿತು.