Site icon Vistara News

Virat Kohli: ಮೊದಲ ಟಿ20 ಪಂದ್ಯಕ್ಕೆ ಕೊಹ್ಲಿ ಅಲಭ್ಯ; ಖಚಿತಪಡಿಸಿದ ಕೋಚ್​

Dravid Press Conference

ಮೊಹಾಲಿ: ಅಫಘಾನಿಸ್ತಾನ ವಿರುದ್ಧದ ತವರಿನ ಮೂರು ಪಂದ್ಯಗಳ ಟಿ20 ಸರಣಿ ಶುಕ್ರವಾರದಿಂದ ಆರಂಭಗೊಳ್ಳಲಿದೆ. ಸರಿ ಸುಮಾರು 14 ತಿಂಗಳ ಬಳಿಕ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಲು ಸಜ್ಜಾಗಿದ್ದ ವಿರಾಟ್​ ಕೊಹ್ಲಿ(Virat Kohli) ಮೊದಲ ಪಂದ್ಯಕ್ಕೆ(India vs Afghanistan, 1st T20I) ಅಲಭ್ಯರಾಗಿದ್ದಾರೆ. ಕೊಹ್ಲಿ ಗೈರನ್ನು ತಂಡದ ಕೋಚ್​ ರಾಹುಲ್​ ದ್ರಾವಿಡ್(Rahul Dravid)​ ಖಚಿತಪಡಿಸಿದ್ದಾರೆ.

ಸರಣಿ ಆರಂಭಕ್ಕೂ ಒಂದು ದಿನ ಮೊದಲು ಅಂದರೆ ಗುರುವಾರ ಮೊಹಾಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೋಚ್ ದ್ರಾವಿಡ್ ಅವರು ಕೊಹ್ಲಿಯ ಅನುಪಸ್ಥಿತಿಯನ್ನು ತಿಳಿಸಿದ್ದಾರೆ. ವೈಯಕ್ತಿಕ ಕಾರಣಗಳಿಂದ ವಿರಾಟ್ ಕೊಹ್ಲಿ ಮೊದಲ ಟಿ20 ಪಂದ್ಯದಲ್ಲಿ ಆಡಲು ಸಾಧ್ಯವಾಗುವುದಿಲ್ಲ. ಆದರೆ, ಎರಡನೇ ಮತ್ತು ಮೂರನೇ ಟಿ20 ಪಂದ್ಯಗಳಿಗೆ ಲಭ್ಯರಾಗಲಿದ್ದಾರೆ ಎಂದು ದ್ರಾವಿಡ್​ ಖಚಿತಪಡಿಸಿದ್ದಾರೆ.

ವಿರಾಟ್​ ಕೊಹ್ಲಿ ಅವರು ಕೊನೆಯ ಬಾರಿ ಭಾರತ ಪರ ಟಿ20 ಕ್ರಿಕೆಟ್​ ಆಡಿದ್ದು 2022ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟಿ20 ವಿಶ್ವಕಪ್​ ಟೂರ್ನಿಯಲ್ಲಿ. ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್‌ನಲ್ಲಿ ಆಡಿದ ಬಳಿಕ ಕೊಹ್ಲಿ ಭಾರತ ಪರ ಆಡಿಲ್ಲ. ರೋಹಿತ್​ ಸೇರಿ ಕೊಹ್ಲಿಯನ್ನು ಕೇವಲ ಏಕದಿನ ಮತ್ತು ಟೆಸ್ಟ್​ ಸರಣಿಗೆ ಮಾತ್ರ ಬಿಸಿಸಿಐ ಪರಿಗಣನೆಗೆ ತೆಗೆದುಕೊಳ್ಳುತ್ತಿತ್ತು. ಟಿ20 ವಿಶ್ವಕಪ್​ಗೂ ಇವರನ್ನು ಆಯ್ಕೆ ಮಾಡುವುದು ಅನುಮಾನ ಎನ್ನಲಾಗಿತ್ತು. ಆದರೆ, ಅಫಫಾನಿಸ್ತಾನ ಸರಣಿಯಲ್ಲಿ ಅವಕಾಶ ನೀಡುವ ಮೂಲಕ ಕೊಹ್ಲಿ ಮತ್ತು ರೋಹಿತ್​ ಜೂನ್​ನಲ್ಲಿ ನಡೆಯುವ ಟಿ20 ವಿಶ್ವಕಪ್​ ಆಡಲಿದ್ದಾರೆ ಎನ್ನುವ ಸ್ಪಷ್ಟ ಉತ್ತರ ಲಭಿಸಿದೆ.

ಸದ್ಯದ ಮಾಹಿತಿ ಪ್ರಕಾರ ಕೊಹ್ಲಿ ಮುಂಬೈನಲ್ಲಿದ್ದಾರೆ ಎನ್ನಲಾಗಿದೆ. ದ್ವಿತೀಯ ಪಂದ್ಯದ ವೇಳೆ ತಂಡ ಸೇರದಿದ್ದಾರೆ ಎಂದು ಕೋಚ್​ ಹೇಳಿದ್ದಾರೆ. ಸರಣಿಯ ದ್ವಿತೀಯ ಪಂದ್ಯ ಜನವರಿ 14ರಂದು ಇಂದೋರ್​ನ ಹೋಲ್ಕರ್​ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯಲಿದೆ.

ಸರಣಿಯಿಂದ ಹೊರಬಿದ್ದ ರಶೀದ್​ ಖಾನ್​


ಅನುಭವಿ ಆಟಗಾರ ರಶೀದ್​ ಖಾನ್​(Rashid Khan) ಫಿಟ್​ ಆಗದ ಕಾರಣ ಭಾರತ ಎದುರಿನ ಟಿ20 ಸರಣಿಯಿಂದ ಹೊರಬಿದ್ದಿದ್ದಾರೆ. ರಶೀದ್ ಖಾನ್​ 2 ತಿಂಗಳ ಹಿಂದೆ ಬೆನ್ನಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಸಂಪೂರ್ಣವಾಗಿ ಚೇತರಿಕೆ ಕಾಣದಿದ್ದರೂ ಅವರುನ್ನು ಭಾರತ ವಿರುದ್ಧದ ಸರಣಿಗೆ ಆಯ್ಕೆ ಮಾಡಲಾಗಿತ್ತು. ಆದರೆ, ಆಡುವುದು ಅನುಮಾನ ಎನ್ನಲಾಗಿತ್ತು. ಇದೀಗ ಅಂತಿಮವಾಗಿ ಅವರು ಸರಣಿಯಿಂದ ಹಿಂದೆ ಹಿಂದೆ ಸರಿದಿದ್ದಾರೆ. ಮೊಹಾಲಿಯಲ್ಲಿ ಬುಧವಾರ ನಡೆದ ಪೂರ್ವ ಸುದ್ದಿಗೋಷ್ಠಿಯಲ್ಲಿ ರಶೀದ್ ಅನುಪಸ್ಥಿತಿಯನ್ನು ನಾಯಕ ಇಬ್ರಾಹಿಂ ಜದ್ರಾನ್ ದೃಢಪಡಿಸಿದರು.

ರಶೀದ್​ ಖಾನ್​ ಗಾಯದಿಂದ ಚೇತರಿಕೆ ಕಂಡರೂ ಕೂಡ ಸಂಪೂರ್ಣವಾಗಿ ಫಿಟ್ ಆಗಿಲ್ಲ. ಅವರ ಅಲಭ್ಯತೆಯಲ್ಲಿಯೂ ತಂಡದಲ್ಲಿ ಸಮರ್ಥ ಆಟಗಾರರಿದ್ದಾರೆ. ನಾವು ವಿಶ್ವದ ಅತ್ಯುತ್ತಮ ಸ್ಪಿನ್ನರ್​ಗಳನ್ನು ಹೊಂದಿದ್ದೇವೆ ನಮ್ಮಲ್ಲಿ ವೇಗದ ಬೌಲರ್​ಗಳೂ ಕೂಡ ಇದ್ದಾರೆ. ಬ್ಯಾಟಿಂಗ್ ಕೌಶಲ್ಯಗಳನ್ನು ಸುಧಾರಿಸುವುದು ನಮ್ಮ ಗುರಿಯಾಗಿದೆ ಎಂದು ನಾಯಕ ಜದ್ರಾನ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಏಕದಿನ ವಿಶ್ವಕಪ್​ ಬಳಿಕ ರಶೀದ್ ಎಲ್ಲ ಮಾದರಿಯ ಸ್ಪರ್ಧಾತ್ಮಕ ಕ್ರಿಕೆಟ್​ನಿಂದ ದೂರ ಉಳಿದಿದ್ದರು. ರಶೀದ್ ಅನುಪಸ್ಥಿತಿಯಲ್ಲಿ ಅಫಘಾನಿಸ್ತಾನ ಇತ್ತೀಚೆಗೆ ಯುಎಇ ವಿರುದ್ಧ ಟಿ20 ಸರಣಿ ಆಡಿತ್ತು. ಇದನ್ನು 2-1 ಅಂತರದಿಂದ ಗೆದ್ದು ಸರಣಿ ಗೆಲುವು ಸಾಧಿಸಿತ್ತು.

Exit mobile version