Site icon Vistara News

Virat Kohli : ಬಾಲ್ಯದ ಗುರುವಿನ ಪಾದ ಮುಟ್ಟಿ ನಮಸ್ಕರಿಸಿದ ಕೊಹ್ಲಿ; ಅಭಿಮಾನಿಗಳ ಮೆಚ್ಚುಗೆ

Virat Kohli

Virat Kohli

ನವದೆಹಲಿ: ಐಪಿಎಲ್​ 16ನೇ ಆವೃತ್ತಿಯ 50ನೇ ಪಂದ್ಯಕ್ಕೆ ಮೊದಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಬ್ಯಾಟರ್​ ವಿರಾಟ್ ಕೊಹ್ಲಿ (Virat Kohli) ತಮ್ಮ ಬಾಲ್ಯದ ತರಬೇತುದಾರ ರಾಜ್​ಕುಮಾರ್​ ಶರ್ಮಾ ಅವರ ಪಾದಗಳನ್ನು ಮುಟ್ಟಿ ನಮಸ್ಕರಿಸಿದರು. ಈ ಮೂಲಕ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾದರು. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯಕ್ಕೆ ರಾಜ್​ಕುಮಾರ್​ ಶರ್ಮಾ ಅವರು ಮೈದಾನದಲ್ಲಿದ್ದರು. ಬಳಿಕ ಅವರಿಬ್ಬರೂ ಸಾಕಷ್ಟು ಹೊತ್ತು ಮಾತುಕತೆಯಲ್ಲಿ ತೊಡಗಿದ್ದರು.

ಇಂಡಿಯನ್ ಪ್ರೀಮಿಯರ್ ಲೀಗ್​ನ ಅಧಿಕೃತ ಟ್ವಿಟರ್ ಹ್ಯಾಂಡಲ್ ವಿರಾಟ್​ ತಮ್ಮ ಗುರುವಿನ ಕಾಲಿಗೆ ಬೀಳುವ ವಿಡಿಯೊವನ್ನು ಶೇರ್​ ಮಾಡಲಾಗಿದೆ. ಅಂದು ಸ್ಮರಣೀಯ ಭೇಟಿ. ಬಾಲ್ಯದ ಕೋಚ್ ಎದುರು ಸಿಕ್ಕಾಗ, ಎಂದು ಟ್ವೀಟ್​ನಲ್ಲಿ ಬರೆಯಲಾಗಿದೆ.

ವಿರಾಟ್​ ಕೊಹ್ಲಿಯ ಕ್ರಿಕೆಟ್​​ಗೆ ಬಾಲ್ಯದಲ್ಲಿ ಸಾಣೆ ಹಿಡಿದವರು ರಾಜ್ ಕುಮಾರ್ ಶರ್ಮಾ. ಇತ್ತೀಚೆಗೆ ಅವರು ಸಂದರ್ಶನವೊಂದರಲ್ಲಿ ಕೊಹ್ಲಿಯ ಸಾಧನೆಯ ಹಾದಿಯನ್ನು ತೆರೆದಿಟ್ಟಿದ್ದರು. ರಾಜ್​ಕುಮಾರ್​ ಅವರ ಮಾರ್ಗದರ್ಶನದಲ್ಲಿ, ಕೊಹ್ಲಿ ಮೊದಲು ದೆಹಲಿ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದರ. 2008ರಲ್ಲಿ ನಡೆದ 19 ವರ್ಷದೊಳಗಿನವರ ವಿಶ್ವ ಕಪ್​ನಲ್ಲಿ ಅಂಡರ್ -19 ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದರು. ಅದೇ ವರ್ಷ, ಕೊಹ್ಲಿಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ಆಯ್ಕೆ ಮಾಡಿತ್ತು. ಜತೆಗೆ ಶ್ರೀಲಂಕಾ ಪ್ರವಾಸದ ವೇಳೆ ಭಾರತ ತಂಡಕ್ಕೂ ಆಯ್ಕೆಯಾಗಿದ್ದರು.

ಪ್ರಸ್ತುತ ವಿರಾಟ್​ ಕೊಹ್ಲಿ ಕ್ರಿಕೆಟ್​ ಇತಿಹಾಸದ ಶ್ರೇಷ್ಠ ಬ್ಯಾಟ್ಸ್​ಮನ್​ಗಳಲ್ಲಿ ಒಬ್ಬರು. ಇಂಥ ಆಟಗಾರನಿಗೆ ತರಬೇತಿ ನೀಡಿರುವ ರಾಜ್​ಕುಮಾರ್ ಅವರು ದೆಹಲಿಯ ತಮ್ಮ ಅಕಾಡೆಮಿಯಲ್ಲಿ ಯುವಕರಿಗೆ ತರಬೇತಿ ನೀಡುವುದನ್ನು ಮುಂದುವರಿಸಿದ್ದಾರೆ. ಅಲ್ಲದೆ, ಕ್ರಿಕೆಟ್​ ವಿಶ್ಲೇಷಕರೂ ಆಗಿದ್ದಾರೆ.

ಪಂದ್ಯದಲ್ಲಿ ಸೋತ ಆರ್​ಸಿಬಿ

ಐಪಿಎಲ್​ 16ನೇ ಆವೃತ್ತಿಯ 50ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಅಚ್ಚರಿಯ ಪ್ರದರ್ಶನ ನೀಡಿತು. ಆ ತಂಡದ ಬ್ಯಾಟರ್​ಗಳ ಅಬ್ಬರಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 7 ವಿಕೆಟ್​ಗಳಿಂದ ಮಣಿಯಿತು. ಇದರೊಂದಿಗೆ ಎಲ್ಲ ತಂಡಗಳ ಎದುರು ಸೋತ ಡೆಲ್ಲಿ ವಿರುದ್ಧವೂ ಸೋಲು ಕಂಡ ಆರ್​ಸಿಬಿ ತಂಡ ಟೀಕೆಗೆ ಒಳಗಾಯಿತು. ಡೆಲ್ಲಿ ತಂಡದ ಬ್ಯಾಟರ್​​ ಪಿಲಿಫ್​ ಸಾಲ್ಟ್​ (87) ಗೆಲುವಿನ ರೂವಾರಿ ಎನಿಸಿಕೊಂಡರು. ಹಾಲಿ ಆವೃತ್ತಿಯಲ್ಲಿ ಇದು ಅವರ ಅದ್ಭುತ ಪ್ರದರ್ಶನ ಎನಿಸಿಕೊಂಡಿತು. ಅತ್ತ ಆರ್​ಸಿಬಿಯ ಬೌಲರ್​ಗಳು ಸತ್ವ ರಹಿತ ಪ್ರದರ್ಶನ ನೀಡಿದ ಕಾರಣ ಸೋಲಿನ ಸುಳಿಗೆ ಸಿಲುಕಬೇಕಾಯಿತು. ಅದೂ ಅಲ್ಲದೆ, ಪ್ಲೇಆಫ್​ ಹಂತಕ್ಕೆರುವ ಹಾದಿಯನ್ನು ಕಠಿಣಗೊಳಿಸಿತು.

ಅರುಣ್​ಜೇಟ್ಲಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ಆರ್​ಸಿಬಿ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಬೌಲಿಂಗ್​ಗೆ ನೆರವಾಗುತ್ತಿದ್ದ ಪಿಚ್​ನಲ್ಲಿ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿದ ಆರ್​ಸಿಬಿ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 181 ರನ್​ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ. 16.4 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು 187 ರನ್​ ಬಾರಿಸಿ ಸುಲಭ ಗೆಲುವು ಸಾಧಿಸಿತು. ಇದರೊಂದಿಗೆ ತವರಿನ ಸ್ಟೇಡಿಯಮ್​ನಲ್ಲಿ ವಿರಾಟ್​ ಕೊಹ್ಲಿ (55 ರನ್​) ಅರ್ಧ ಶತಕ ಹಾಗೂ ಮಧ್ಯಮ ಕ್ರಮಾಂಕದಲ್ಲಿ ಮಹಿಪಾಲ್​ ಲಾಮ್ರೋರ್​ (54) ಸ್ಫೋಟಕ ಬ್ಯಾಟಿಂಗ್ ವ್ಯರ್ಥಗೊಂಡಿತು.

ಇದು ಹಾಲಿ ಆವೃತ್ತಿಯ ಐಪಿಎಲ್​ನಲ್ಲಿ ವಿರಾಟ್​ ಕೊಹ್ಲಿಯ 6ನೇ ಅರ್ಧ ಶತಕವಾಗಿದೆ. ಮಧ್ಯಮ ಕ್ರಮಾಂಕದಲ್ಲಿ ಮಹಿಪಾಲ್​ ಲಾಮ್ರೋರ್​ (54) ಸ್ಫೋಟಕ ಬ್ಯಾಟಿಂಗ್ ನಡೆಸಿ ಅರ್ಧ ಶತಕ ಬಾರಿಸುವುದರೊಂದಿಗೆ ಸ್ಪರ್ಧಾತ್ಮಕ ಮೊತ್ತ ಪೇರಿಸಲು ತಂಡಕ್ಕೆ ನೆರವಾದರು.

ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಭರ್ಜರಿ ಆರಂಭ ಪಡೆಯಿತು. ಡೇವಿಡ್​ ವಾರ್ನರ್​ (22) ಹಾಗೂ ಫಿಲ್​ ಸಾಲ್ಟ್ ಮೊದಲ ವಿಕೆಟ್​ಗೆ 60 ರನ್ ಬಾರಿಸಿದರು. ನಂತರ ಬಂದ ಮಿಚೆಲ್ ಮಾರ್ಷ್​ 26 ರನ್​ ಪೇರಿಸಿದರು. ರೀಲಿ ರೊಸ್ಸೊ 35 ರನ್​ ಕಲೆ ಹಾಕುವ ಮೂಲಕ ಅಜೇಯರಾಗಿ ಉಳಿದರು.

Exit mobile version