ಬೆಂಗಳೂರು: ವಿರಾಟ್ ಕೊಹ್ಲಿ ಹಾಲಿ ಆವೃತ್ತಿಯ ಐಪಿಎಲ್ನಲ್ಲಿ (IPL 2023) ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇದುವರೆಗೆ ಆಡಿರುವ ಆರು ಪಂದ್ಯಗಳಲ್ಲಿ ನಾಲ್ಕು ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಈ ಮೂಲಕ ಮತ್ತೊಮ್ಮೆ ವಿರಾಟ್ ಕೊಹ್ಲಿ ಘರ್ಜಿಸಲು ಆರಂಭಿಸಿದ್ದಾರೆ. ಏತನ್ಮಧ್ಯೆ,, ಗುರುವಾರ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಎರಡೆರಡು ದಾಖಲೆಗಳನ್ನು ಮಾಡಿದ್ದಾರೆ. ಈ ಮೂಲಕ ಅವರು ಬ್ಯಾಟಿಂಗ್ ಕಿಂಗ್ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ವಿರಾಟ್ ಕೊಹ್ಲಿ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಕಡಿಮೆ ರನ್ರೇಟ್ನೊಂದಿಗೆ ಆಡಿರುವ ಹೊರತಾಗಿಯೂ 59 ರನ್ ಬಾರಿಸಿ ತಂಡಕ್ಕೆ ದೊಡ್ಡ ಮೊತ್ತ ಪೇರಿಸಲು ನೆರವಾಗಿದ್ದಾರೆ. ಅವರ ಇನಿಂಗ್ಸ್ನಲ್ಲಿ 5 ಫೋರ್ಗಳು ಹಾಗೂ ಏಕೈಕ ಸಿಕ್ಸರ್ ಸೇರಿಕೊಂಡಿವೆ. ಐದು ಪೋರ್ಗಳನ್ನು ಬಾರಿಸುವುದರೊಂದಿಗೆ ವಿರಾಟ್ ಕೊಹ್ಲಿ ಐಪಿಎಲ್ನಲ್ಲಿ 600 ಫೋರ್ಗಳ ಸಾಧನೆ ಮಾಡಿದರು. ಈ ಮೈಲುಗಲ್ಲು ದಾಟಿದ ಮೂರನೇ ಆಟಗಾರ ಎಂಬ ಖ್ಯಾತಿಯನ್ನು ಪಡೆದುಕೊಂಡರು.
ಅಂದ ಹಾಗೆ ಈ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಡೇವಿಡ್ ವಾರ್ನರ್ ಅವರು ಹೊಂದಿದ್ದಾರೆ. ಅವರೂ ಹಾಲಿ ಆವೃತ್ತಿಯಲ್ಲೇ ಈ ದಾಖಲೆ ಮಾಡಿದ್ದಾರೆ. ಏಪ್ರಿಲ್ 11ರಂದು ನಡೆದ ಮುಂಬಯಿ ಇಂಡಿಯನ್ಸ್ ವಿರುದ್ಧದ ಪಂದ್ಯದ ವೇಳೇ ವಾರ್ನರ್ ಈ ಸಾಧನೆ ಮಾಡಿದ್ದಾರೆ. ಅಂದಿನ ಪಂದ್ಯದಲ್ಲಿ ವಾರ್ನರ್ ಆರು ಫೋರ್ಗಳನ್ನು ಬಾರಿಸಿದ್ದರು ಹಾಗೂ ಒಟ್ಟಾರೆ ತಮ್ಮ ಫೋರ್ಗಳ ಸಂಖ್ಯೆಯನ್ನು 604ಕ್ಕೆ ಏರಿಸಿದ್ದರು. ಇದೀಗ ಅವರ 608 ಫೋರ್ಗಳೊಂದಿಗೆ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ.
ಪಂಜಾಬ್ ಕಿಂಗ್ಸ್ ತಂಡದ ಹಾಲಿ ನಾಯಕ ಶಿಖರ್ ಧವನ್ ಐಪಿಎಲ್ ಫೋರ್ಗಳ ವಿಚಾರದಲ್ಲಿ ಅಗ್ರ ಸ್ಥಾನಿ. ಅವರು ಈ ಇಬ್ಬರು ಆಟಗಾರರಿಗಿಂತ ಸಾಕಷ್ಟು ಮುಂದಿದ್ದು ಒಟ್ಟು 730 ಫೋರ್ಗಳು ಅವರ ಖಾತೆಯಲ್ಲಿದೆ. ಮುಂಬಯಿ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದು, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಬ್ಯಾಟರ್ ಸುರೇಶ್ ರೈನಾ ಐದನೇ ಸ್ಥಾನದಲ್ಲಿದ್ದಾರೆ.
100ಕ್ಕೂ ಅಧಿಕ ಸಲ 30 ಪ್ಲಸ್ ಸ್ಕೋರ್ ದಾಖಲೆ
ಕೊಹ್ಲಿ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇತಿಹಾಸದಲ್ಲಿ 100 ಬಾರಿ ಮೂವತ್ತು ಪ್ಲಸ್ ಸ್ಕೋರ್‌ಗಳನ್ನು ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದೇ ವೇಳೆ ಐಪಿಎಲ್ನಲ್ಲಿ 600 ಬೌಂಡರಿಗಳನ್ನು ಸಿಡಿಸಿ ಮತ್ತೊಂದು ಮೈಲಿಗಲ್ಲನ್ನು ಸ್ಥಾಪಿಸಿದರು. ಈ ಬಲಗೈ ಬ್ಯಾಟರ್ 556 ದಿನಗಳ ನಂತರ ತಂಡವನ್ನು ಮುನ್ನಡೆಸುವ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಅವರು ಕೊನೆಯದಾಗಿ ಅಕ್ಟೋಬರ್ 11, 2021 ರಂದು ತಂಡದ ನಾಯಕರಾಗಿದ್ದರು.
ಇದನ್ನೂ ಓದಿ : HSBC INDIA : ಎಚ್‌ಎಸ್‌ಬಿಸಿ ಇಂಡಿಯಾ ಬ್ರಾಂಡ್ ರಾಯಭಾರಿಯಾಗಿ ವಿರಾಟ್ ಕೊಹ್ಲಿ ನೇಮಕ
ವಿರಾಟ್ ಕೊಹ್ಲಿ 100 ಬಾರಿ 30 ಪ್ಲಸ್ ರನ್ ಬಾರಿಸಲು 221 ಇನಿಂಗ್ಸ್ಗಳನ್ನು ತೆಗೆದುಕೊಂಡಿದ್ದಾರೆ. ಭಾರತದವರೇ ಆಗಿರುವ ಶಿಖರ್ ಧವನ್ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಅವರು 91 ಬಾರಿ 30 ಪ್ಲಸ್ ಸ್ಕೋರ್ ಬಾರಿಸಿದ್ದು ಅದಕ್ಕಾಗಿ 209 ಇನಿಂಗ್ಸ್ಗಳನ್ನು ತೆಗೆದುಕೊಂಡಿದ್ದಾರೆ. ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಮೂರನೇ ಸ್ಥಾನದಲ್ಲಿದ್ದು 167 ಇನಿಂಗ್ಸ್ಗಳಲ್ಲಿ 90 ಬಾರಿ ಈ ಸಾಧನೆ ಮಾಡಿದ್ದಾರೆ. ರೋಹಿತ್ ಶರ್ಮಾ 85 ಬಾರಿ 30 ಪ್ಲಸ್ ರನ್ ಬಾರಿಸಿದ್ದು 227 ಇನಿಂಗ್ಸ್ಗಳಲ್ಲಿ ಆಡಿದ್ದಾರೆ. ಸುರೇಶ್ ರೈನಾ ಐದನೇ ಸ್ಥಾನದಲ್ಲಿದ್ದು 200 ಇನಿಂಗ್ಸ್ಗಳಲ್ಲಿ 77 ಬಾರಿ 30 ಪ್ಲಸ್ ರನ್ ಪೇರಿಸಿದ್ದಾರೆ.