ನವ ದೆಹಲಿ: ಐಪಿಎಲ್ 2023ನೇ (IPL 2023) ಆವೃತ್ತಿಯ 50ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೀನಾಯ ಏಳು ವಿಕೆಟ್ ಸೋಲಿಗೆ ಒಳಗಾಗಿತ್ತು. ಆದಾಗ್ಯೂ ಮೊದಲು ಬ್ಯಾಟ್ ಮಾಡಿದ್ದ ಆರ್ಸಿಬಿ ಪರ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅರ್ಧ ಶತಕ ಬಾರಿಸಿದ್ದರು. ಆದರೆ, ಅವರ ನಿಧಾನಗತಿಯ ಬ್ಯಾಟಿಂಗ್ ವೈಖರಿ ಬಗ್ಗೆ ಸಿಕ್ಕಾಪಟ್ಟೆ ಟೀಕೆಗಳು ವ್ಯಕ್ತಗೊಂಡಿವೆ. ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೊಹ್ಲಿ 46 ಎಸೆತಗಳಲ್ಲಿ 55 ರನ್ ಗಳಿಸಿದ್ದರು. ಈ ರೀತಿಯ ಆಟದ ವೈಖರಿಯನ್ನು ಸನ್ರೈಸರ್ಸ್ ಹೈದರಾಬಾದ್ ತಂಡದ ಮಾಜಿ ಕೋಚ್ ಟೀಕಿಸಿದ್ದಾರೆ.
ಆರಂಭಿಕ ಬ್ಯಾಟರ್ ಆಗಿರುವ ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಶೈಲಿ ಆಧುನಿಕ ಕ್ರಿಕೆಟ್ಗೆ ಹೊಂದುವುದಿಲ್ಲ ಎಂಬುದಾಗಿ ಅವರು ಹೇಳಿದ್ದಾರೆ. ಟಿ20 ಮಾದರಿಯಲ್ಲಿ ಬ್ಯಾಟಿಂಗ್ ವಿಭಾಗವನ್ನು ಮುನ್ನಡೆಸುವ ಅಗತ್ಯವೇ ಇಲ್ಲ. ಬದಲಾಗಿ 150 ಪ್ಲಸ್ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಬೇಕು. ಹೀಗಾಗಿ ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಹೊಸ ಮಾದರಿಯ ಕ್ರಿಕೆಟ್ಗೆ ಸರಿ ಹೊಂದುವುದಿಲ್ಲ ಎಂದು ಅವರು ಹೇಳಿದ್ದಾರೆ.
ವಿರಾಟ್ ಕೊಹ್ಲಿಯ ಬ್ಯಾಟಿಂಗ್ ವೈಖರಿ ಚರ್ಚೆಗೆ ಕಾರಣವಾಗುತ್ತಿದೆ. ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಶೈಲಿಯೇ ಹಾಗಿದೆ. ಅವರ ವೃತ್ತಿಜೀವನದ ಸ್ಟ್ರೈಕ್ ರೇಟ್ 130ರ ಆಸುಪಾಸಿನಲ್ಲಿದೆ. ಹೀಗಾಗಿ ಅವರು ದೊಡ್ಡ ಮೊತ್ತವನ್ನು ಪೇರಿಸುವ ನಿಟ್ಟಿನಲ್ಲಿ ಸ್ಟ್ರೈಕ್ ರೇಟ್ ಹೆಚ್ಚಿಸಿಕೊಳ್ಳಬೇಕು ಎಂದು ಟಾಮ್ ಮೂಡಿ ಇಎಸ್ಫಿಎನ್ ಕ್ರಿಕ್ಇನ್ಫೋಗೆ ಹೇಳಿದ್ದಾರೆ.
“ವಿರಾಟ್ ಕೊಹ್ಲಿ ಉತ್ತಮ ಜತೆಯಾಟ ನೀಡುವ ಭರವಸೆಯೊಂದಿಗೆ ಬ್ಯಾಟಿಂಗ್ ಮಾಡಿದ್ದರೂ ಅದು ಸಾಧ್ಯವಾಗುತ್ತಿಲ್ಲ. ಆದರೆ, ಅಂಥ ಫಲಿತಾಂಶವನ್ನು ನಿರೀಕ್ಷೆ ಮಾಡುವುದು ಸಾಧ್ಯವಿಲ್ಲ. ಇಂಪ್ಯಾಕ್ಟ್ ಪ್ಲೇಯರ್ ರೂಲ್ಸ್ ಬಂದ ಬಳಿಕದಿಂದ ದೊಡ್ಡ ಮೊತ್ತವನ್ನು ಪೇರಿಸಿದ ಬಳಿಕವಷ್ಟೇ ಗೆಲುವು ಸಾಧ್ಯವಿಲ್ಲ. ಹೀಗಾಗಿ ತಂಡವೊಂದು 200 ಪ್ಲಸ್ ರನ್ ಬಾರಿಸಿದರೆ ಗೆಲ್ಲುತ್ತದೆ. ಅದರೆ, ಕೊಹ್ಲಿಯ ಬ್ಯಾಟಿಂಗ್ ಅದಕ್ಕೆ ಪೂರಕವಾಗಿ ಇರಲಿಲ್ಲ, ಎಂದು 57 ವರ್ಷದ ಮಾಜಿ ಆಟಗಾ ಹೇಳಿದ್ದಾರೆ.
ಆರ್ಸಿಬಿಗೆ ಸೋಲಿನ ನಿರಾಸೆ
ಅರುಣ್ಜೇಟ್ಲಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ಆರ್ಸಿಬಿ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಬೌಲಿಂಗ್ಗೆ ನೆರವಾಗುತ್ತಿದ್ದ ಪಿಚ್ನಲ್ಲಿ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿದ ಆರ್ಸಿಬಿ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 181 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ. 16.4 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 187 ರನ್ ಬಾರಿಸಿ ಸುಲಭ ಗೆಲುವು ಸಾಧಿಸಿತು. ಇದರೊಂದಿಗೆ ತವರಿನ ಸ್ಟೇಡಿಯಮ್ನಲ್ಲಿ ವಿರಾಟ್ ಕೊಹ್ಲಿ (55 ರನ್) ಅರ್ಧ ಶತಕ ಹಾಗೂ ಮಧ್ಯಮ ಕ್ರಮಾಂಕದಲ್ಲಿ ಮಹಿಪಾಲ್ ಲಾಮ್ರೋರ್ (54) ಸ್ಫೋಟಕ ಬ್ಯಾಟಿಂಗ್ ವ್ಯರ್ಥಗೊಂಡಿತು.
ಇದನ್ನೂ ಓದಿ: IPL 2023: ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಅಣ್ತಮ್ಮ ಫೈಟ್; ಮೈದಾನದಲ್ಲಿ ಅಕ್ಕರೆಯ ಹೊಳೆ
ಇದು ಹಾಲಿ ಆವೃತ್ತಿಯ ಐಪಿಎಲ್ನಲ್ಲಿ ವಿರಾಟ್ ಕೊಹ್ಲಿಯ 6ನೇ ಅರ್ಧ ಶತಕವಾಗಿದೆ. ಮಧ್ಯಮ ಕ್ರಮಾಂಕದಲ್ಲಿ ಮಹಿಪಾಲ್ ಲಾಮ್ರೋರ್ (54) ಸ್ಫೋಟಕ ಬ್ಯಾಟಿಂಗ್ ನಡೆಸಿ ಅರ್ಧ ಶತಕ ಬಾರಿಸುವುದರೊಂದಿಗೆ ಸ್ಪರ್ಧಾತ್ಮಕ ಮೊತ್ತ ಪೇರಿಸಲು ತಂಡಕ್ಕೆ ನೆರವಾದರು.
ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಭರ್ಜರಿ ಆರಂಭ ಪಡೆಯಿತು. ಡೇವಿಡ್ ವಾರ್ನರ್ (22) ಹಾಗೂ ಫಿಲ್ ಸಾಲ್ಟ್ ಮೊದಲ ವಿಕೆಟ್ಗೆ 60 ರನ್ ಬಾರಿಸಿದರು. ನಂತರ ಬಂದ ಮಿಚೆಲ್ ಮಾರ್ಷ್ 26 ರನ್ ಪೇರಿಸಿದರು. ರೀಲಿ ರೊಸ್ಸೊ 35 ರನ್ ಕಲೆ ಹಾಕುವ ಮೂಲಕ ಅಜೇಯರಾಗಿ ಉಳಿದರು.