ಬಾಂಗ್ಲಾದೇಶ ವಿರುದ್ಧದ ಏಕ ದಿನ ವಿಶ್ವ ಕಪ್ (ICC world cup 2023) ಪಂದ್ಯದಲ್ಲಿ ಭಾರತ ತಂಡ 7 ವಿಕೆಟ್ ಸುಲಭ ವಿಜಯ ದಾಖಲಿಸಿದೆ. ಇದು ಭಾರತ ತಂಡ ಪಾಲಿಗೆ ವಿಶ್ವ ಕಪ್ನಲ್ಲಿ ಸತತ ನಾಲ್ಕನೇ ಜಯ. ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ನಂತರ ಅಫಘಾನಿಸ್ತಾನ ಅದಾದ ನಂತರ ಬದ್ಧ ವೈರಿ ಪಾಕಿಸ್ತಾನ ತಂಡವನ್ನು ಸೋಲಿಸಿತ್ತು. ಇದೀಗ ಬಾಂಗ್ಲಾ ವಿರುದ್ಧವೂ ಜಯಭೇರಿ ಬಾರಿಸಿದೆ. ಆದರೆ, ಅಕ್ಟೋಬರ್ 19ರಂದು ನಡೆದ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧದ ಗೆಲುವಿಗಿಂತ ಕೊನೇ ಹಂತದಲ್ಲಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat kohli) ಬಾರಿಸಿದ ಶತಕವೇ ರೋಮಾಂಚಕಾರಿಯಾಗಿತ್ತು. ಅವರ ಈ ಶತಕದ ಇನಿಂಗ್ಸ್ನ ಅಂತ್ಯ ಅತ್ಯಂತ ನಾಟಕೀಯವಾಗಿಯೂ ಇತ್ತು.
ವಿರಾಟ್ ಕೊಹ್ಲಿ ಪಾಲಿಗೆ ಇದು 48ನೇ ಏಕ ದಿನ ಕ್ರಿಕೆಟ್ ಶತಕ. ಅವರೀಗ ಗರಿಷ್ಠ ಶತಕ ಬಾರಿಸಿರುವ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರಿಗಿಂತ ಒಂದು ಶತಕ ಹಿಂದಿದ್ದಾರೆ. ಕೆಲವೇ ದಿನಗಳಲ್ಲಿ ಅವರು ಅವರ ದಾಖಲೆಯನ್ನೂ ಮುರಿಯಬಹುದು. ಏತನ್ಮಧ್ಯೆ, 97 ಎಸೆತಗಳಲ್ಲಿ ಅಜೇಯ 103 ರನ್ ಬಾರಿಸುವ ಮೊದಲು ಕೊಹ್ಲಿ ಈ ಸಾಧನೆಗಾಗಿ ಸಾಕಷ್ಟು ಶ್ರಮ ವಹಿಸಿದರು. ಅಂದರೆ, ಮತ್ತೊಂದು ತುದಿಯಲ್ಲಿ ಬ್ಯಾಟ್ ಮಾಡುತ್ತಿದ್ದ ಕೆ. ಎಲ್ ರಾಹುಲ್ ಅವರ ಸಂಪೂರ್ಣ ಬೆಂಬಲದೊಂದಿಗೆ ಶತಕದ ಸಾಧನೆ ಮಾಡಿದರು. ಜತೆಗೆ ಅಭಿಮಾನಿಗಳ ತಲೆಗೆ ರನ್ ಲೆಕ್ಕಾಚಾರದ ಹುಳ ಬಿಟ್ಟರು.
ಕೊಹ್ಲಿಯ ಸೆಂಚುರಿ ಹಾದಿ ಹೀಗಿದೆ
ಶ್ರೇಯಸ್ ಅಯ್ಯರ್ 19 ರನ್ಗೆ ಔಟಾದ ಬಳಿಕ ಆಡಲು ಬಂದ ಕೆ. ಎಲ್ ರಾಹುಲ್ ಉತ್ತಮವಾಗಿಯೇ ಬ್ಯಾಟ್ ಬೀಸಿದರು. ಹೀಗಾಗಿ 35ನೇ ಓವರ್ಗೆ ಭಾರತ 3 ವಿಕೆಟ್ ನಷ್ಟಕ್ಕೆ 209 ರನ್ ಬಾರಿಸಿತ್ತು. ಕೊಹ್ಲಿ 68 ಹಾಗೂ ರಾಹುಲ್ 18 ರನ್ ಬಾರಿಸಿದರು. ಭಾರತ ಗೆಲುವಿಗೆ 48 ರನ್ ಬೇಕಾಗಿತ್ತು. ಅದರಲ್ಲಿ ಕೊಹ್ಲಿ ಶತಕಕ್ಕೆ ಕೇವಲ 32 ರನ್ಗಳು ಸಾಕಿದ್ದ ಕಾರಣ ಶತಕ ಖಚಿತ ಎಂದು ಹೇಳಲಾಗಿತ್ತು. ಆದರೆ, 36ನೇ ಓವರ್ನಲ್ಲಿ ಕೆ. ಎಲ್ ರಾಹುಲ್ ಒಮ್ಮೆಲೇ ಅಬ್ಬರಿಸಿದರು. ಶೊರಿಫುಲ್ ಇಸ್ಲಾಂ ಓವರ್ನ 3 ಹಾಗೂ ನಾಲ್ಕನೇ ಎಸೆತಕ್ಕೆ ಒಂದು ಸಿಕ್ಸರ್ ಹಾಗೂ ಒಂದು ಫೋರ್ ಸಿಡಿಸಿದರು. ಆ ಓವರ್ ಅಂತ್ಯಕ್ಕೆ ಭಾರತ 3 ವಿಕೆಟ್ಗೆ 223 ರನ್ ಬಾರಿಸಿತು. ಕೊಹ್ಲಿಗೆ ಆ ಓವರ್ನಲ್ಲಿ ಒಂದೇ ರನ್ ಬಾರಿಸಲು ಸಾಧ್ಯವಾಗಿತ್ತು. ರಾಹುಲ್ 12 ರನ್ ಬಾರಿಸಿದ್ದರು. ಭಾರತ ಗೆಲುವಿಗೆ 34 ರನ್ ಬೇಕಾಯಿತು. ಕೊಹ್ಲಿ ಶತಕಕ್ಕೆ 30 ರನ್ ಬೇಕಾಯಿತು.
37ನೇ ಓವರ್ನಲ್ಲಿ ಕೊಹ್ಲಿ ಹಾಗೂ ರಾಹುಲ್ ತಲಾ 3 ರನ್ ಬಾರಿಸಿದರು. ಈ ವೇಳೆ ಕೊಹ್ಲಿಯ ಸ್ಕೋರ್ 73 ಹಾಗೂ ರಾಹುಲ್ ಸ್ಕೋರ್ 33 ಆಯಿತು. ಭಾರತ ಗೆಲುವಿಗೆ 28 ರನ್ ಬೇಕಾಗಿತ್ತು ಹಾಗೂ ಕೊಹ್ಲಿಯ ಶತಕಕ್ಕೆ 27 ರನ್ ಬೇಕಾಯಿತು. 38ನೇ ಓವರ್ನ ಮೊದಲೆರಡು ಎಸೆತಗಳಿಗೆ ಕೊಹ್ಲಿ ಹಾಗೂ ರಾಹುಲ್ ತಲಾ ಒಂದು ರನ್ ಕದ್ದರು. ಇದರಿಂದಾಗಿ ಭಾರತ ಗೆಲುವಿಗೆ 26 ಹಾಗೂ ಕೊಹ್ಲಿಯ ಶತಕಕ್ಕೆ 26 ರನ್ ಬೇಕಾಯಿತು. ಅದೇ ಓವರ್ನ ಐದನೇ ಎಸೆತಕ್ಕೆ ಕೊಹ್ಲಿ ಸಿಕ್ಸರ್ ಸಿಡಿಸಿದರು. ಮುಂದುವರಿದ ಅವರು ಹಸನ್ ಎಸೆದ ಓವರ್ನ ಕೊನೇ ಎಸೆತದಲ್ಲಿ ಒಂದು ರನ್ ಕದ್ದು. ಅಲ್ಲಿಗೆ ಭಾರತದ ಗೆಲುವಿಗೆ 19 ರನ್ ಬೇಕಾಯಿತು. ಕೊಹ್ಲಿ 81ಕ್ಕೆ ಏರಿ ಶತಕಕ್ಕೆ 19 ರನ್ಗಳ ಕೊರತೆಯಲ್ಲಿದ್ದರು. ರಾಹುಲ್ 34 ರನ್ ಗಳಿಸಿದರು.
39ನೇ ಓವರ್ ಆರಂಭವಾದಾಗ ಕೊಹ್ಲಿ ಶತಕ ಬಾರಿಸುವ ಪಣ ತೊಟ್ಟರು. ನಸುಮ್ ಅವರ ಮೊದಲ ಎಸೆತಕ್ಕೆ ಫೋರ್ ಬಾರಿಸಿದರೆ, 4ನೇ ಎಸೆತಕ್ಕೆ ಸಿಕ್ಸರ್ ಬಾರಿಸಿದರು. ಅವರಿಗಿನ್ನು ಶತಕ ಬಾರಿಸಲು 9 ರನ್ ಮಾತ್ರ ಬೇಕಿತ್ತು. ತಂಡದ ಗೆಲುವಿಗೂ ಅಷ್ಟೇ ಮೊತ್ತ ಸಾಕಾಗಿತ್ತು. ಆ ಓವರ್ನ ಮೂರನೇ ಎಸೆತಕ್ಕೆ ರನ್ ಗಳಿಸುವ ಅವಕಾಶ ಇದ್ದರೂ ಅವರು ಪ್ರಯತ್ನಿಸಲಿಲ್ಲ. ಕೊಹ್ಲಿಯ ಶತಕದ ಸಾಧನೆಯೇ ಅವರಿಬ್ಬರ ದೃಢ ನಿಶ್ಚಯವಾಗಿತ್ತು.
40ನೇ ಓವರ್ನಲ್ಲೂ ಒಂದೇ ಗುರಿ. ಕೊಹ್ಲಿಯ ಶತಕ. ಹಸನ್ ಮಹಮೂದ್ ಅವರ ಎಸೆತಗಳಿಗೆ ದೊಡ್ಡ ಶಾಟ್ಗಳನ್ನು ಹೊಡೆಯಲು ಕೊಹ್ಲಿಗೆ ಸಾಧ್ಯವಾಗಲಿಲ್ಲ. ಜತೆಗೊಂದು ವೈಡ್ ಕೂಡ ಬಿತ್ತು. ಕೊಹ್ಲಿ 3 ಮತ್ತು ಐದನೇ ಎಸೆತಕ್ಕೆ ವೇಗವಾಗಿ 2 ರನ್ಗಳನ್ನು ಓಡಿದರು. ಕೊನೇ ಎಸೆತಕ್ಕೆ 1 ರನ್ ಪಡೆದು ಮತ್ತೆ ಸ್ಟ್ರೈಕ್ ತಮ್ಮದಾಗಿಸಿಕೊಂಡರು. ಈ ಓವರ್ ಅಂತ್ಯಕ್ಕೆ ಭಾರತ 3 ವಿಕೆಟ್ಗೆ 255 ರನ್ ಬಾರಿಸಿತು. ಕೊಹ್ಲಿ ಶತಕಕ್ಕೆ 3 ರನ್ ಹಾಗೂ ಭಾರತದ ಗೆಲುವಿಗೆ 2 ರನ್ ಸಾಕಾಯಿತು. ಈ ವೇಳೆ ಗೆಲುವಿಗಿಂತ ಶತಕ ಬಾರಿಸುವ ಒತ್ತಡ ಕೊಹ್ಲಿಯ ಮೇಲೆ ಹೆಚ್ಚಾಯಿತು.
ಈ ಸುದ್ದಿಗಳನ್ನೂ ಓದಿ
IND vs BAN: ಹಾರ್ದಿಕ್ ಪಾಂಡ್ಯಗೆ ಗಾಯ; ಟೀಮ್ ಇಂಡಿಯಾಕ್ಕೆ ಆತಂಕ
KL Rahul : ಜಿಂಕೆಯಂತೆ ಚಂಗನೆ ನೆಗೆದು ಅದ್ಭುತ್ ಕ್ಯಾಚ್ ಹಿಡಿದ ಕೆ. ಎಲ್ ರಾಹುಲ್
Shubhman Gill : ಗಿಲ್ ಬಾರಿಸಿದ ಸೂಪರ್ ಸಿಕ್ಸರ್ಗೆ ಚಿಯರ್ಸ್ ಹೇಳಿದ ಸಾರಾ
41ನೇ ಓವರ್ನ ಮೊದಲ ಎಸೆತದಲ್ಲಿ ರನ್ ಬರಲಿಲ್ಲ. ಎರಡನೇ ಎಸೆತಕ್ಕೂ ರನ್ ಬರಲಿಲ್ಲ. ಮೂರನೇ ಎಸೆತ ಫುಲ್ಟಾಸ್ ಎಸೆತವನ್ನು ಡೀಪ್ ಮಿಡ್ವಿಕೆಟ್ ಕಡೆಗೆ ಸಿಕ್ಸರ್ ಬಾರಿಸಿದರು. ಕೊಹ್ಲಿ ಮೈದಾನದಲ್ಲೇ ಘರ್ಜಿಸಿದರು. ಭಾರತಕ್ಕೂ ಜಯ ಸಿಕ್ಕಿತು. ಆದರೆ ಈ ಶತಕಕ್ಕೆ ಮೊದಲು ನಾಟಕೀಯ ಅಂಪೈರಿಂಗ್ ನಿರ್ಧಾರವೊಂದು ಪ್ರಕಟವಾಯಿತು.
ವೈಡ್ ಕೊಡದ ರಿಚರ್ಡ್ ಕೆಟಲ್ಬರ್ಗ್
Umpire didn't give this a wide so Kohli can complete his century. Have some shame @BCCI 😭😂#INDvBANpic.twitter.com/LInZw5db69
— 𝐙𝐞𝐞𝐬𝐡𝐚𝐧 (@ItsMeeZeee) October 19, 2023
41 ಓವರ್ ವೇಳೆಗೆ ಇಂಗ್ಲೆಂಡ್ನವರಾದ ರಿಚರ್ಡ್ ಕೆಟಲ್ಬರ್ಗ್ ಮೇನ್ ಅಂಪೈರ್ ಆಗಿದ್ದರು. ಈ ವೇಳೆ ಕೊಹ್ಲಿ ಶತಕಕ್ಕೆ 3 ರನ್ ಅಗತ್ಯವಿತ್ತು. ತಂಡದ ಜಯಕ್ಕೆ 2 ರನ್ ಬೇಕಾಯಿತು. ಬೌಲರ್ ನಸುಮ್ ಮೊದಲ ಎಸೆತವನ್ನು ಲೆಗ್ಸ್ಟಂಪ್ ಕಡೆಗೆ ಎಸೆದರು ಕೊಹ್ಲಿ ಮುಂದಕ್ಕೆ ಜರುಗಿದರು ಹಾಗೂ ಚೆಂಡು ವಿಕೆಟ್ಕೀಪರ್ ಕೈ ಸೇರಿತು. ಚುಟುಕು ಕ್ರಿಕೆಟ್ನಲ್ಲಿ ಲೆಗ್ಸೈಡ್ನಲ್ಲಿ ಹಾಕುವ ಎಸೆತಗಳು ವೈಡ್. ಆದರೆ ಕೆಟಲ್ಬರ್ಗ್ ಆ ಎಸೆತವನ್ನು ವೈಡ್ ಎಂದು ಘೋಷಿಸಲಿಲ್ಲ. ಹೀಗಾಗಿ ಭಾರತಕ್ಕೆ ಬೇಕಾಗಿರುವ 2 ರನ್ಗಳ ಸವಾಲು ಹಾಗೆಯೇ ಉಳಿಯಿತು. ಅಚ್ಚರಿಯೆಂದರೆ ಟಿವಿ ನೇರ ಪ್ರಸಾರದ ಕಾಮೆಂಟೇಟರ್ಗಳು ಸೇರಿದಂತೆ ಎಲ್ಲರೂ ಅದು ವೈಡ್ ಎಸೆತ ಎಂದು ಹೇಳಿದ್ದರು. ಟಿವಿ ಸ್ಕೋರ್ ಬೋರ್ಡ್ನಲ್ಲಿಯೂ ಒಂದು ರನ್ ಜಾಸ್ತಿಯಾಯಿತು. ಆದರೆ ಕೆಟಲ್ಬರ್ಗ್ ಅವರ ಕಿರುನಗೆ ಮಾತ್ರ ಬೀರಿ ಸುಮ್ಮನಾದರು. ಕೊನೆಗೆ ಸ್ಕೋರ್ ಬೋರ್ಡ್ನಲ್ಲಿ ಒಂದು ರನ್ ಕಡಿಮೆಯಾಯಿತು. ಅಂತಿಮವಾಗಿ ಕೊಹ್ಸಿ ಸಿಕ್ಸರ್ ಬಾರಿಸಿದರು. ಕೆಟಲ್ಬರ್ಗ್ ಅವರ ನಿರ್ಧಾರ ಸೋಶಿಯಲ್ ಮೀಡಿಯಾಗಳಲ್ಲಿ ಟೀಕೆಗಳಿಗೂ ಒಳಗಾಯಿತು. ಭಾರತ ತಂಡಕ್ಕೆ ಅಂಪೈರ್ಗಳು ನೆರವಾಗುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದವು.
ಕೊಹ್ಲಿ ಆ ಎಸೆತಕ್ಕೆ ಸಾಕಷ್ಟು ಮುಂದೆ ಬಂದಿದ್ದರು. ಹೀಗಾಗಿ ಅದು ವೈಡ್ ಎಸೆತ ಅಲ್ಲ ಎಂಬುವ ವಾದಗಳೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾದವು. ಏನೇ ಆದರೂ ಸಣ್ಣ ಮೊತ್ತದ ಪಂದ್ಯ ಕೊಹ್ಲಿಯ ಸೆಂಚುರಿಯಿಂದಾಗಿ ರೋಮಾಂಚಕವಾಗಿ ಪರಿವರ್ತನೆಗೊಂಡಿತು.