Site icon Vistara News

ICC World Cup 2023 : ಬಿಸಿಸಿಐಗೆ ಕಾನೂನು ಸಮಸ್ಯೆ; ನೋಟಿಸ್​ ಜಾರಿ ಮಾಡಿದ ಕೋಲ್ಕೊತಾ ಪೊಲೀಸ್​

BCCI Logo

ಕೋಲ್ಕತಾ: ಈಡನ್ ಗಾರ್ಡನ್ಸ್​​ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಐಸಿಸಿ ವಿಶ್ವಕಪ್ ಕ್ರಿಕೆಟ್ ಪಂದ್ಯದ (ICC World Cup 2023) ಟಿಕೆಟ್ ಬ್ಲ್ಯಾಕ್​ನಲ್ಲಿ ಮಾರಾಟ ಮಾಡಿರುವ ಪ್ರಕರಣಗಳು ಪತ್ತೆಯಾಗಿವೆ. (ಹೆಚ್ಚಿನ ಬೆಲೆಗೆ ಟಿಕೆಟ್​ಗಳನ್ನು ಮಾರಾಟ ಮಾಡಿರುವುದು) ಈ ಆತಂಕದ ಮಧ್ಯೆ ಕೋಲ್ಕತ್ತಾ ಪೊಲೀಸರು ಈ ಬಗ್ಗೆ ಕಾನೂನ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷರಾಗಿರುವ ರೋಜರ್ ಬಿನ್ನಿ ಅವರಿಗೆ ನೋಟಿಸ್ ಕಳುಹಿಸಿದ್ದ ವಿಶ್ವ ಕಪ್​ನ ಟಿಕೆಟ್ ಗಳನ್ನು ಹೇಗೆ ಮಾರಾಟ ಮಾಡಲಾಗುತ್ತಿದೆ ಎಂಬ ಬಗ್ಗೆ ಮಾಹಿತಿ ನೀಡುವಂತೆ ಕೋರಿದ್ದಾರೆ.

ಶನಿವಾರ ಸಂಜೆ ಬಿನ್ನಿ ಅವರಿಗೆ ನೋಟಿಸ್ ಕಳುಹಿಸಲಾಗಿದೆ. ಟಿಕೆಟ್ ಮಾರಾಟಕ್ಕೆ ಸಂಬಂಧಿಸಿದ ದಾಖಲೆಗಳು ಮತ್ತು ವಿವರಗಳನ್ನು ಒದಗಿಸುವಂತೆ ಕೇಳಲಾಗಿದೆ. ಈ ದಾಖಲೆಗಳನ್ನು ಕೋಲ್ಕೊತಾದ ಮೈದಾನ್ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿಗೆ ಸಲ್ಲಿಸಬೇಕು. ಅವರು ಟಿಕೆಟ್ ವಂಚನೆಯ ವರದಿಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಪೊಲೀಸರ ಈ ವಿನಂತಿಯು ಟಿಕೆಟ್ ಮಾರಾಟದಲ್ಲಿ ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳುವ ಮತ್ತು ಯಾವುದೇ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಯುವ ಗುರಿಯನ್ನು ಹೊಂದಿದೆ ಎಂದು ನೋಟಿಸ್​ನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ:

ICC World Cup 2023 : ಬಾಲ್​ ಆಫ್​​ ದಿ ಟೂರ್ನಮೆಂಟ್, ಬೌಲ್ಡ್​ ಪರೀಕ್ಷಿಸಲು ರಿವ್ಯೂ!

ವೈಯಕ್ತಿಕವಾಗಿ ಅಥವಾ ತಮ್ಮ ಸಂಸ್ಥೆಯ ಯಾವುದೇ ಸಮರ್ಥ ವ್ಯಕ್ತಿಯ ಮೂಲಕ ಟಿಕೆಟ್ ಮಾರಾಟಕ್ಕೆ ಸಂಬಂಧಿಸಿದ ದಾಖಲೆಗಳು ಮತ್ತು ಮಾಹಿತಿಯನ್ನು ಮೈದಾನ್ ಪಿಎಸ್​​ನ ತನಿಖಾಧಿಕಾರಿಗೆ ಮಂಗಳವಾರ ಕೆಲಸದ ಸಮಯದಲ್ಲಿ ಒದಗಿಸುವಂತೆ ಬಿಸಿಸಿಐ ಅಧ್ಯಕ್ಷರಿಗೆ ನೋಟಿಸ್ ಕಳುಹಿಸಲಾಗಿದೆ” ಎಂದು ಪೊಲೀಸ್​ ಅಧಿಕಾರಿ ಪಿಟಿಐಗೆ ತಿಳಿಸಿದ್ದಾರೆ.

ಬಿಸಿಸಿಐಗೆ ಟಿಕೆಟ್ ಹಂಚಿಕೆ ಏಕೆ ಸಮಸ್ಯೆ?

ಟಿಕೆಟ್ ಬ್ಲ್ಯಾಕ್​ನಲ್ಲಿ ಮಾರಾಟ ಮಾಡಿದ ಪ್ರಕರಣದಲ್ಲಿ ಕೋಲ್ಕತಾ ಪೊಲೀಸರು ಈವರೆಗೆ 19 ಜನರನ್ನು ಬಂಧಿಸಿದ್ದು, ಅವರಿಂದ 108 ಟಿಕೆಟ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಇದಲ್ಲದೆ, ಅವರು ಟಿಕೆಟ್ ಮೋಸಕ್ಕೆ ಸಂಬಂಧಿಸಿದ ಏಳು ಪ್ರಕರಣಗಳನ್ನು ದಾಖಲಿಸಿದ್ದಾರೆ. ಅಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಮತ್ತು ಕ್ರಿಕೆಟ್ ಟಿಕೆಟ್ ಗಳ ಕಾಳಸಂತೆಯನ್ನು ನಿಗ್ರಹಿಸಲು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.

ಟಿಕೆಟ್ ಸಂಗ್ರಹ ಮಾಡಿಟ್ಟುಕೊಳ್ಳುವುದು ಅಭಿಮಾನಿಗಳು ಟಿಕೆಟ್​ಗಳಿಗೆ ಅನಗತ್ಯ ಬೆಲೆಯನ್ನು ಪಾವತಿಸಲು ಕಾರಣವಾಗುತ್ತದೆ. ಹೆಚ್ಚಿನ ದರದಲ್ಲಿ ಟಿಕೆಟ್​​ಗಳನ್ನು ಖರೀದಿಸಲು ಸಾಧ್ಯವಾಗುವವರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಪೊಲೀಸರ ಈ ಕ್ರಮ ಮತ್ತು ಬಿಸಿಸಿಐ ಅಧ್ಯಕ್ಷರಿಗೆ ನೋಟಿಸ್ ನೀಡಿರುವುದು ಈ ಬಹು ನಿರೀಕ್ಷಿತ ಕ್ರಿಕೆಟ್ ಪಂದ್ಯದ ಟಿಕೆಟಿಂಗ್ ಪ್ರಕ್ರಿಯೆಯ ಸಮಗ್ರತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಬದ್ಧತೆಯನ್ನು ಪ್ರದರ್ಶಿಸುತ್ತದೆ.‘

ನನಗೆ ಟಿಕೆಟ್ ಬೇಡ ಎಂದು ಗವರ್ನರ್​

ವಿಶ್ವಕಪ್​ನ ಅತ್ಯಂತ ಬಲಿಷ್ಠ ತಂಡಗಳಾದ ಭಾರತ ಮತ್ತು ದಕ್ಷಿಣ ಆಫ್ರಿಕಾ(IND vs SA) ವಿರುದ್ಧದ ಪಂದ್ಯವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರವಾಗಿದ್ದಾರೆ. ಇತ್ತಂಡಗಳ ಈ ಪಂದ್ಯ ಇನ್ನೇನು ಕೆಲವೇ ಕ್ಷಣದಲ್ಲಿ ಆರಂಭಗೊಳ್ಳಲಿದೆ. ಆದರೆ ಪಶ್ಚಿಮ ಬಂಗಾಳದ ಗವರ್ನರ್(Governor of West Bengal) ಸಿ. ವಿ. ಆನಂದ ಬೋಸ್(C. V. Ananda Bose) ಅವರು ತಮಗೆ ನೀಡಿದ ಪಂದ್ಯದ ನಾಲ್ಕು ಟಿಕೆಟ್​ಗಳನ್ನು ಹಿಂದಿರುಗಿಸಿದ್ದಾರೆ.

ರಾಜಭವನದಲ್ಲಿ ಜನತಾ ಕ್ರೀಡಾಂಗಣ
ಕಾಳಸಂತೆಯಲ್ಲಿ ಟಿಕೆಟ್​ಗಳು ಬಾರಿ ಮೊತ್ತಕ್ಕೆ ಮಾರಾಟವಾಗುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಗವರ್ನರ್ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ರಾಜಭವನದಲ್ಲಿ ಜನತಾ ಕ್ರೀಡಾಂಗಣವನ್ನು ತೆರೆದು ಇಲ್ಲಿ ದೊಡ್ಡ ಪರದೆಯೊಂದನ್ನು ಹಾಕಿ ಜನರೊಂದಿಗೆ ಪಂದ್ಯವನ್ನು ವೀಕ್ಷಿಸಲು ನಿರ್ಧರಿಸಿದ್ದಾರೆ. ಈ ವಿಚಾರವನ್ನು ರಾಜಭವನದ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

Exit mobile version