ಯೆಯೊಸು: ಭಾರತದ ತಾರಾ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್(Satwiksairaj Rankireddy) ಹಾಗೂ ಚಿರಾಗ್ ಶೆಟ್ಟಿ(Chirag Shetty) ಅವರು ಚೊಚ್ಚಲ ಬಾರಿಗೆ ಕೊರಿಯಾ ಓಪನ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ(Korea Open 2023 Final) ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ಈ ಸಾಧನೆಯೊಂದಿಗೆ ವರ್ಷದ ಮೂರನೇ ಬಿಡಬ್ಲ್ಯುಎಫ್ ವಿಶ್ವ ಟೂರ್ ಪ್ರಶಸ್ತಿ ಗೆದ್ದ ದಾಖಲೆ ಬರೆದಿದ್ದಾರೆ.
ಭಾನುವಾರ ನಡೆದ ಅತ್ಯಂತ ಜಿದ್ದಾಜಿದ್ದಿನ ಮೂರು ಗೇಮ್‌ಗಳ ಫೈನಲ್ ಹಣಾಹಣಿಯಲ್ಲಿ ಮೂರನೇ ಶ್ರೇಯಾಂಕದ ಭಾರತೀಯ ಜೋಡಿ ವಿಶ್ವ ನಂ.1, ಇಂಡೋನೇಷ್ಯಾದ ಫಜರ್ ಅಲ್ಫಿಯಾನ್-ಮುಹಮ್ಮದ್ ರಿಯಾನ್(Fajar Alfian and Muhammad Rian Ardianto) ಜೋಡಿಗೆ 17-21, 21-13, 21-14 ಅಂತರದಿಂದ ಆಘಾತವಿಕ್ಕಿ ಪ್ರಶಸ್ತಿಗೆ ಕೊರಳೊಡ್ಡಿದರು. ಇತ್ತೀಚೆಗಷ್ಟೇ ಇಂಡೋನೇಷ್ಯಾ ಸೂಪರ್ 1000 ಹಾಗೂ ಸ್ವಿಸ್ ಓಪನ್ ಸೂಪರ್ 500 ಟೂರ್ನಿ ಗೆದ್ದಿದ್ದ ಸಾತ್ವಿಕ್ ಮತ್ತು ಚಿರಾಗ್ ಶೆಟ್ಟಿ ಜೋಡಿ ತಮ್ಮ ಖ್ಯಾತಿಗೆ ತಕ್ಕಂತೆ ಪ್ರದರ್ಶನ ತೋರುವ ಮೂಲಕ ಕೊರಿಯಾ ಓಪನ್ ಟೂರ್ನಿಯನ್ನೂ ಗೆದ್ದು ಬೀಗಿದ್ದಾರೆ. ಅವರ ಈ ಶ್ರೇಷ್ಠ ಸಾಧನೆ ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಪದಕ ಬರವಸೆಯೊಂದನ್ನು ಮೂಡಿಸಿದೆ.
ಮೊದಲ ಗೇಮ್ನಲ್ಲಿ ಸೋಲು ಕಂಡಾಗ ಭಾರತೀಯ ಜೋಡಿಗೆ ಸೋಲು ಎದುರಾಗುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಆತ್ಮವಿಶ್ವಾಸ ಕಳೆದುಕೊಳ್ಳದ ಭಾರತೀಯ ಜೋಡಿ ದ್ವಿತೀಯ ಗೇಮ್ನಲ್ಲಿ ಬಲಿಷ್ಠ ಹೊಡೆತಗಳ ಮೂಲಕ ಎದುರಾಳಿಗಳಿಗೆ ನೀರು ಕುಡಿಸಿ ಪಂದ್ಯವನ್ನು ಸಮಬಲಕ್ಕೆ ತಂದರು. ಅಂತಿಮ ಮತ್ತು ನಿರ್ಣಾಯಕ ಗೇಮ್ನಲ್ಲಿಯೂ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿ ಪಂದ್ಯದಲ್ಲಿ ಮೇಲುಗೈ ಸಾಧಿಸಿ ಈ ಟೂರ್ನಿಯಲ್ಲಿ ಚೊಚ್ಚಲ ಪ್ರಶಸ್ತಿ ಜಯಿಸಿದರು.
ಇದನ್ನೂ ಓದಿ Swiss Open: ಸ್ವಿಸ್ ಓಪನ್ ಬ್ಯಾಡ್ಮಿಂಟನ್: ಚಿನ್ನ ಗೆದ್ದ ಚಿರಾಗ್-ಸಾತ್ವಿಕ್ ಜೋಡಿ
Picture time folks…
— India_AllSports (@India_AllSports) July 23, 2023
Our boys on the victory podium after winning Korea Open Doubles title ❤️ #KoreaOpen2023 pic.twitter.com/KLyl1q3689
ಶನಿವಾರ ನಡೆದ ಪುರುಷರ ಡಬಲ್ಸ್‌ನ ಸೆಮಿಫೈನಲ್ ಕಾದಾಟದಲ್ಲಿ ಸಾತ್ವಿಕ್ ಮತ್ತು ಚಿರಾಗ್ ಜೋಡಿ 2021ರ ವಿಶ್ವ ಚಾಂಪಿಯನ್ ಆಗಿರುವ ಚೀನಾದ ಎರಡನೇ ಶ್ರೇಯಾಂಕದ ವೀ ಕೆಂಗ್ ಲಿಯಾಂಗ್ ಮತ್ತು ಚಾಂಗ್ ವಾಂಗ್ ಅವರನ್ನು 21-15, 24-22 ನೇರ ಗೇಮ್ಗಳಿಂದ ಹಿಮ್ಮೆಟಿಸಿದ್ದರು. ಇದಕ್ಕೂ ಮುನ್ನ ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್ನಲ್ಲಿ ಜಪಾನ್‌ನ ಟಕುರೊ ಹಾಕಿ ಮತ್ತು ಯುಗೊ ಕೊಬಯಾಶಿ ವಿರುದ್ಧ ನೇರ ಗೇಮ್‌ಗಳ ಜಯ ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದ್ದರು.