ಮುಂಬಯಿ : ಅಗಸ್ತ್ಯ ಪಾಂಡ್ಯ ಎಂದರೆ ಮತ್ಯಾರೂ ಅಲ್ಲ, ಭಾರತ ತಂಡದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಪುತ್ರ. ಈಗ ಬಂದಿರುವ ಕವಿರ್ ಪಾಂಡ್ಯ ಯಾರು ಗೊತ್ತೇ? ಹಾರ್ದಿಕ್ ಪಾಂಡ್ಯ ಅವರ ಅಣ್ಣ ಕೃಣಾಲ್ ಪಾಂಡ್ಯನ ಮಗ. ಹೌದು, ಕೃಣಾಲ್ ಪಾಂಡ್ಯ ಹಾಗೂ ಪಂಕುರಿ ದಂಪತಿಗೆ ಗಂಡು ಮಗು ಹುಟ್ಟಿದೆ. ಅದಕ್ಕವರು ಕವಿರ್ ಕೃಣಾಲ್ ಪಾಂಡ್ಯ ಎಂದು ಹೆಸರಿಟ್ಟಿದ್ದಾರೆ. ಹೀಗಾಗಿ ಅಗಸ್ತ್ಯನಿಗೊಬ್ಬ ತಮ್ಮ ಕವಿರ್ ಎಂದು ಹೇಳಬಹುದು.
ಕೃಣಾಲ್ ಅವರು ತಾವು ಚೊಚ್ಚಲ ಮಗುವಿನ ಅಪ್ಪನಾಗಿರುವ ಬಗ್ಗೆ ಟ್ವೀಟ್ ಮಾಹಿತಿ ನೀಡಿದ್ದಾರೆ. ತಾವು ಹಾಗೂ ಹಾಗೂ ಪತ್ನಿ ಪಂಕುರಿ ಶಿಶುವನ್ನು ಹಿಡಿದುಕೊಂಡಿರುವ ಚಿತ್ರವನ್ನು ಅವರು ಪೋಸ್ಟ್ ಮಾಡಿದ್ದು, ಪಾಂಡ್ಯಾ ಬ್ರದರ್ಸ್ ಅಭಿಮಾನಿಗಳು ಶುಭಾಶಯಗಳ ಮಹಾಪೂರವನ್ನೇ ಹರಿಸಲು ಆರಂಭಿಸಿದ್ದಾರೆ.
ಐಪಿಎಲ್‌ನ ಲಖನೌ ಸೂಪರ್ ಜಯಂಟ್ಸ್ ತಂಡದ ಆಲ್‌ರೌಂಡರ್ ಕೃಣಾಲ್ ಟ್ವಿಟರ್‌ನಲ್ಲಿ ಮಗುವಿನ ಚಿತ್ರವನ್ನು ಪ್ರಕಟಿಸುವ ಜತೆಗೆ ಹೆಸರನ್ನೂ ಬರೆದಿದ್ದಾರೆ. ಮಗುವಿಗೆ ಕವಿರ್ ಕೃಣಾಲ್ ಪಾಂಡ್ಯ ಎಂದು ಹೆಸರಿಟ್ಟಿರುವುದಾಗಿ ಹೇಳಿಕೊಂಡಿದ್ದಾರೆ.
೨೦೧೭ರ ಡಿಸೆಂಬರ್‌ನಲ್ಲಿ ಪಂಕುರಿ ಹಾಗೂ ಕೃಣಾಲ್ ಪಾಂಡ್ಯ ವಿವಾಹವಾಗಿದ್ದರು. ಕೃಣಾಲ್ ಪಾಂಡ್ಯ ಐಪಿಎಲ್ ಪಂದ್ಯಗಳನ್ನು ಆಡುತ್ತಿದ್ದ ಸಂದರ್ಭದಲ್ಲಿ ಪಂಕುರಿ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ಹುರಿದುಂಬಿಸುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದ್ದವು.
ಕೃಣಾಲ್ ಪಾಂಡ್ಯ ಅವರು ಹಲವು ಪಂದ್ಯಗಳಲ್ಲಿ ಭಾರತ ತಂಡವನ್ನೂ ಪ್ರತಿನಿಧಿಸಿದ್ದಾರೆ. ೨೦೨೧ರ ಜುಲೈನಲ್ಲಿ ಭಾರತ ತಂಡ ಶ್ರೀಲಂಕಾ ಪ್ರವಾಸ ಮಾಡಿದ್ದ ವೇಳೆ ಕೃಣಾಲ್ ಆಡುವ ಬಳಗದಲ್ಲಿ ಅವಕಾಶ ಪಡೆದುಕೊಂಡಿದ್ದರು. ೨೦೧೮ರಲ್ಲಿ ಟೀಮ್ ಇಂಡಿಯಾಗೆ ಪದಾರ್ಪಣೆ ಮಾಡಿರುವ ಅವರು ಒಟ್ಟಾರೆ ೫ ಏಕದಿನ ಹಾಗೂ ೧೯ ಟಿ೨೦ ಪಂದ್ಯಗಳಲ್ಲಿ ಆಡಿದ್ದಾರೆ.
ಐಪಿಎಲ್‌ನಲ್ಲಿ ಮುಂಬಯಿ ಇಂಡಿಯನ್ಸ್ ತಂಡದ ಪರ ಆಡುತ್ತಿದ್ದ ಕೃಣಾಲ್ ಪಾಂಡ್ಯ ಎರಡು ಬಾರಿ ಚಾಂಪಿಯನ್‌ಪಟ್ಟ ಗಳಿಸಿದ್ದರು. ಅಂತೆಯೇ ೧೫ನೇ ಆವೃತ್ತಿಯಲ್ಲಿ ಲಖನೌ ಸೂಪರ್ ಜಯಂಟ್ಸ್ ತಂಡದ ಕಾಯಂ ಸದಸ್ಯರಾಗಿದ್ದರು. ಲಖನೌ ತಂಡ ಅಂತಿಮ ನಾಲ್ಕರ ಘಟ್ಟಕ್ಕೆ ಏರುವಲ್ಲಿ ಕೃಣಾಲ್ ಕೊಡುಗೆಯೂ ಇದೆ.
ಕೃಣಾಲ್ ಪಾಂಡ್ಯ ಅವರು ಇತ್ತೀಚೆಗೆ ಇಂಗ್ಲೆಂಡ್‌ನ ಕ್ರಿಕೆಟ್ ಕ್ಲಬ್ ವಾರ್ವಿಕ್‌ಶೈರ್ ತಂಡದ ಪರ ಆಡಿದ್ದರು. ರಾಯಲ್ ಇಂಗ್ಲೆಂಡ್ ಕಪ್‌ಗಾಗಿ ಅವರು ಇಂಗ್ಲೆಂಡ್‌ನ ಕ್ಲಬ್ ಜತೆ ಒಪ್ಪಂದ ಮಾಡಿಕೊಂಡಿದ್ದರು.
ಕೃಣಾಲ್ ಪಾಂಡ್ಯ ಹಾಗೂ ಸಹೋದರ ಹಾರ್ದಿಕ್ ಪಾಂಡ್ಯ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಚಟುವಟಿಕೆಯಿಂದ ಇರುತ್ತಾರೆ. ಹಾರ್ದಿಕ್ ಮತ್ತು ನತಾಶಾ ಸ್ಟಾಂಕೊವಿಕ್ ದಂಪತಿಗೆ ಅಗಸ್ತ್ಯ ಎಂಬ ಪುತ್ರನಿದ್ದಾನೆ.
ಇದನ್ನೂ ಓದಿ | ಹಾರ್ದಿಕ್ ಪಾಂಡ್ಯ ಯಾಕೆ Team India ನಾಯಕರಾಗಬೇಕು? ಅವರ ಸಾಮರ್ಥ್ಯಗಳೇನು?