ನವದೆಹಲಿ: ಟಿ20 ವಿಶ್ವಕಪ್(T20 World Cup) ಗೆಲುವಿನ ಬಳಿಕ ಟ್ರೋಫಿ ಎತ್ತಿ ಹಿಡಿಯುವಾಗ ನಾಯಕ ರೋಹಿತ್ ಶರ್ಮ ವಿಶೇಷ ರೀತಿಯಲ್ಲಿ ಹೆಜ್ಜೆ ಹಾಕಿ ಸಂಭ್ರಮಿಸಿದ್ದರು. ಈ ಬಗ್ಗೆ ಪ್ರಧಾನಿ ಮೋದಿ(Narendra Modi) ಕೇಳಿದಾಗ ಕುಲ್ದೀಪ್(Kuldeep Yadav) ನೀಡಿರುವ ಉತ್ತರ ಕೇಳಿ ಮೋದಿ ಸೇರಿ ಟೀಮ್ ಇಂಡಿಯಾ ಆಟಗರರು ನಗೆಗಡಲಲ್ಲಿ ತೇಲಿದರು. ಈ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ರೋಹಿತ್ ಬಳಿ ಮೋದಿ ಅವರು ಈ ರೀತಿ ಸಂಭ್ರಮಿಸಲು ಚಾಹಲ್ ಸಲಹೆ ನೀಡಿದರೇ? ಎಂದು ಕೇಳಿದರು. ಈ ವೇಳೆ ನಗುಮುಖದಿಂದಲೇ ರೋಹಿತ್, ‘ಹೌದು ಚಾಹಲ್ ಹಾಗೂ ಕುಲದೀಪ್ ಅವರು ಸಲಹೆ ನೀಡಿದ್ದರು’ ಎಂದು ತಿಳಿಸಿದರು. ಈ ವೇಳೆ ಕುಲದೀಪ್ ಅವರಲ್ಲಿ ನಿಮ್ಮ ನಾಯಕನನ್ನು ನೃತ್ಯ ಮಾಡುವಂತೆ ಹೇಳಲು ಹೇಗೆ ಧೈರ್ಯ ಬಂತು ಎಂದು ಪ್ರಧಾನಿ ಕೇಳಿದರು. ಇದಕ್ಕೆ ಉತ್ತರಿಸಿದ ಕುಲ್ದೀಪ್, ನಾನು ಹೇಳಿಕೊಟ್ಟಂತೆ ರೋಹಿತ್ ಅನುಕರಿಸಲಿಲ್ಲ ಎಂದು ಹೇಳಿದರು. ಈ ಮಾತು ಕೇಳಿ ಮೋದಿ ಜೋರಾಗಿ ನಕ್ಕರು.
ರೋಹಿತ್ ತಮ್ಮ ಅನುಭವ ಹಂಚಿಕೊಂಡ ವೇಳೆ ‘ಇದು ನಮ್ಮ ಪಾಲಿಗೆ ಮಹತ್ತರ ಕ್ಷಣವಾಗಿತ್ತು. ನಾವು ಇದಕ್ಕಾಗಿ ಬಹಳ ಸಮಯದಿಂದ ಕಾಯುತ್ತಿದ್ದೆವು. ಸಹಜವಾಗಿಯೇ ವೇದಿಕೆಯತ್ತ ನಡೆದುಕೊಂಡು ಹೋಗಬೇಡ. ಏನನ್ನಾದರೂ ವಿಭಿನ್ನವಾಗಿ ಪ್ರಯತ್ನಿಸು ಎಂದು ಸಹ ಆಟಗಾರರು ಸಲಹೆ ನೀಡಿದರು’ ಎಂದು ರೋಹಿತ್ ವಿವರಿಸಿದರು.
ಆಟಗಾರರೆಲ್ಲ ಪದಕ ಸ್ವೀಕರಿಸುತ್ತಿದ್ದ ವೇಳೆ ಕುಲ್ದೀಪ್ ಅವರು ರೋಹಿತ್ ಅವರಿಗೆ ಯಾವ ರೀತಿಯಲ್ಲಿ ಬಂದು ಕಪ್ ಎತ್ತಬೇಕು ಎಂದು ನಟನೆ ಮಾಡಿ ತೋರಿಸಿದ್ದರು. ಈ ವೇಳೆ ರೋಹಿತ್ ಓಕೆ ಓಕೆ.. ಎಂದು ಹೇಳಿದ್ದರು. ಬಳಿಕ ವಿಶ್ವಕಪ್ ಟ್ರೋಫಿಯೊಂದಿಗೆ ಫೋಟೊಗೆ ಫೋಸ್ ನೀಡಲು ಬರುವ ವೇಳೆ ಕುಲ್ದೀಪ್ ಹೇಳಿಕೊಟ್ಟಂತೆ ರೋಹಿತ್ ಅವರು ಅಂದು ಮೆಸ್ಸಿ ನಡೆದು ಬಂದು ಟ್ರೋಫಿಯನ್ನು ಎತ್ತಿ ಹಿಡಿದ ರೀತಿಯಲ್ಲೇ ವಿಶ್ವಕಪ್ ಟ್ರೋಫಿಯನ್ನು ಎತ್ತಿ ಸಂಭ್ರಮಿಸಿದ್ದರು. ಟೀಮ್ ಇಂಡಿಯಾ ಆಟಗಾರರು ಕೂಡ ಅರ್ಜೆಂಟೀನಾ ಫುಟ್ಬಾಲ್ ತಂಡದ ಆಟಗಾರರಂತೆ ಸಂಭ್ರಮಿಸಿದ್ದರು.
2022 ಕತಾರ್ನಲ್ಲಿ ನಡೆದ ಫಿಫಾ ಫುಟ್ಬಾಲ್ ವಿಶ್ವ ಕಪ್(Fifa World Cup 2022) ರೋಮಾಂಚನಕಾರಿ ಫೈನಲ್ ಪಂದ್ಯದಲ್ಲಿ ಲಿಯೋನೆಲ್ ಮೆಸ್ಸಿ(Lionel Messi) ನಾಯಕತ್ವದಲ್ಲಿ ಅರ್ಜೆಂಟೀನಾ ತಂಡ ಫ್ರಾನ್ಸ್ ತಂಡವನ್ನು ಮಣಿಸಿ 36 ವರ್ಷಗಳ ಬಳಿಕ ವಿಶ್ವ ಚಾಂಪಿಯನ್ ಆಗಿ ಹೊರಮೊಮ್ಮಿತ್ತು. ಲಿಯೋನೆಲ್ ಮೆಸ್ಸಿ ಅವರು ವಿಭಿನ್ನ ಶೈಲಿಯಲ್ಲಿ ನಡೆದು ಕೊಂಡು ಬಂದು ಕಪ್ ಎತ್ತಿ ಹಿಡಿಯುವ ಮೂಲಕ ಫೋಟೊಗೆ ಫೋಸ್ ಕೊಟ್ಟಿದ್ದರು.