Site icon Vistara News

IND vs PAK | ಪಾಕ್‌ ವಿರುದ್ಧದ ಗೆಲುವಿನ ಕೊನೇ ಓವರ್‌ ಥ್ರಿಲ್‌ ಹೀಗಿತ್ತು, ಇದೊಂದು ಸ್ಮರಣೀಯ ಇನಿಂಗ್ಸ್‌

ind vs pak

ಮೆಲ್ಬೋರ್ನ್‌ : ಪಾಕಿಸ್ತಾನ ತಂಡದ ವಿರುದ್ಧ ಭಾರತ (IND vs PAK)ಕಳೆದ ವರ್ಷದ ವಿಶ್ವ ಕಪ್‌ ಸೋಲಿಗೆ ಸೇಡು ತೀರಿಸಿಕೊಂಡಿದೆ. ಕೊನೇ ಓವರ್‌ನಲ್ಲಿ ಗೆಲುವಿಗೆ ಬೇಕಾಗಿದ್ದ ೧೬ ರನ್‌ ಬಾರಿಸಿ ೪ ವಿಕೆಟ್‌ಗಳ ವಿಜಯ ಸಾಧಿಸಿದೆ. ಇದರೊಂದಿಗೆ ಇತ್ತೀಚೆಗೆ ನಡೆದ ಏಷ್ಯಾ ಕಪ್‌ನ ಸೂಪರ್-೧೨ ಹಂತದ ಪರಾಜಯಕ್ಕೂ ಮುಯ್ಯಿ ತೀರಿಸಿಕೊಂಡಿತು. ಆದರೆ, ಈ ಗೆಲುವು ಭಾರತದ ಪಾಲಿಗೆ ಸುಲಭವಾಗಿರಲಿಲ್ಲ. ವಿರಾಟ್‌ ಕೊಹ್ಲಿ ಕೊನೇ ತನಕ ಹೋರಾಡಿ ತಂಡವನ್ನು ಗೆಲ್ಲಿಸಿ ಕೊಟ್ಟರು. ಅದರಲ್ಲೂ ಅಂತಿಮ ಓವರ್‌ನಲ್ಲಿ ಥ್ರಿಲ್ಲಿಂಗ್‌ ವಿಕ್ಟರಿ ಭಾರತಕ್ಕೆ ಲಭಿಸಿತು.

ಕೊನೇ ಓವರ್‌ನಲ್ಲಿ ಭಾರತ ಜಯಕ್ಕೆ ೧೬ ರನ್‌ ಬೇಕಾಗಿತ್ತು. ಪಾಕ್‌ನ ಬೌಲಿಂಗ್‌ ವಿಭಾಗದಲ್ಲಿ ಮೊಹಮ್ಮದ್‌ ನವಾಜ್‌ ಮಾತ್ರ ಉಳಿದಿದ್ದರು. ಅಂತೆಯೇ ಪಾಕ್‌ ಕ್ಯಾಪ್ಟನ್‌ ಅವರ ಕೈಗೆ ಚೆಂಡಿತ್ತರು. ಮೊದಲ ಎಸೆತವನ್ನು ಎದುರಿಸಿದ ಹಾರ್ದಿಕ್ ಪಾಂಡ್ಯ ದೊಡ್ಡ ಹೊಡೆದ ಬಾರಿಸಲು ಹೋಗಿ, ಯಾಮಾರಿದರು. ಚೆಂಡು ಅವರ ಬ್ಯಾಟ್‌ನ ಮೇಲ್ಬದಿ ಸವರಿ ಅಲ್ಲೇ ಮೇಲಕ್ಕೆದ್ದು ನಾಯಕ ಬಾಬರ್‌ ಕೈ ಸೇರಿತು. ಇನ್ನೂ ಐದು ಎಸೆತಗಳಲ್ಲಿ ಭಾರತಕ್ಕೆ ೧೬ ಬೇಕಾಯಿತು. ಈ ವೇಳೆ ಕ್ರೀಸ್‌ಗೆ ಬಂದ ದಿನೇಶ್‌ ಕಾರ್ತಿಕ್ ೧ ರನ್ ಬಾರಿಸಿ ವಿರಾಟ್ ಕೊಹ್ಲಿಗೆ ಸ್ಟ್ರೈಕ್‌ ಕೊಟ್ಟರು. ಮುಂದಿನ ಎಸೆತದಲ್ಲಿ ಎರಡು ರನ್ ಬಾರಿಸಿದ ಕೊಹ್ಲಿ ಮತ್ತೆ ಸ್ಟ್ರೈಕ್‌ ಪಡೆದುಕೊಂಡರು. ಈ ವೇಳೆ ಭಾರತಕ್ಕೆ ೩ ಎಸೆತಕ್ಕೆ ೧೩ ರನ್‌ ಬೇಕಾಯಿತು.

ನವಾಜ್‌ ಅವರ ಮುಂದಿನ ಎಸೆತ ವಿರಾಟ್‌ ಕೊಹ್ಲಿಯ ಸೊಂಟ ಮಟ್ಟಕ್ಕಿಂತ ಮೇಲಿತ್ತು. ಅದಕ್ಕೆ ವಿರಾಟ್‌ ಕೊಹ್ಲಿ ಸಿಕ್ಸರ್‌ ಬಾರಿಸಿದರು. ಅಂಪೈರ್‌ಗಳು ನೋ ಬಾಲ್‌ ಎಂದರು. ಪಾಕ್‌ ಅಟಗಾರರ ದಮ್ಮಯ್ಯ ಹೊಡೆದರೂ ಅಂಪೈರ್‌ಗಳು ನಿರ್ಧಾರ ಬದಲಿಸಲಿಲ್ಲ. ಹೀಗಾಗಿ ಭಾರತಕ್ಕೆ ೭ ರನ್‌ ಹಾಗೂ ಜತೆಗೊಂದು ಫ್ರೀ ಹಿಟ್‌ ಲಭಿಸಿತು. ಮುಂದಿನ ಎಸೆತವನ್ನು ನವಾಜ್‌ ವೈಡ್‌ ಹಾಕಿದರು. ಹೀಗಾಗಿ ಭಾರತಕ್ಕೆ ೩ ಎಸೆತದಲ್ಲಿ ಐದು ರನ್‌ ಬೇಕಾಯಿತು. ನವಾಜ್‌ ಎಸೆದ ಮುಂದಿನ ಎಸೆತದಲ್ಲಿ ವಿರಾಟ್‌ ಕೊಹ್ಲಿ ಬೌಲ್ಡ್ ಆದರು. ಆದರೆ, ವಿಕೆಟ್‌ಗೆ ತಗುಲಿದ ಚೆಂಡು ಬೌಂಡರಿ ಲೈನ್‌ ಕಡೆಗೆ ಹೊರಟು ಹೋಯಿತು. ಕೊಹ್ಲಿ ಹಾಗೂ ದಿನೇಶ್‌ ಕಾರ್ತಿಕ್‌ ಮೂರು ರನ್‌ ಕಸಿದರು. ಹೀಗಾಗಿ ಕೊನೇ ೨ ಎಸೆತಗಳಲ್ಲಿ ಭಾರತದ ಗೆಲುವಿಗೆ ೨ ರನ್ ಬೇಕಾಯಿತು. ಈ ವೇಳೆ ಭಾರತಕ್ಕೆ ಮತ್ತೊಂದು ಆಘಾತ ಎದುರಾಯಿತು.

ವೈಡ್‌ ಎಸೆತವೊಂದು ದಿನೇಶ್‌ ಕಾರ್ತಿಕ್‌ ಪ್ಯಾಡ್‌ಗೆ ಸವರಿ ವಿಕೆಟ್‌ ಕೀಪರ್ ರಿಜ್ವಾನ್‌ ಕೈ ಸೇರಿತು. ಅವರು ಕಾರ್ತಿಕ್‌ ಅವರನ್ನು ರನ್‌ಔಟ್‌ ಮಾಡಿದರು. ಹೀಗಾಗಿ ಭಾರತದ ಗೆಲುವಿಗೆ ೧ ಎಸೆತದಲ್ಲಿ ೨ ರನ್ ಬೇಕಾಯಿತು. ಕ್ರೀಸ್‌ಗೆ ಬಂದ ಅಶ್ವಿನ್‌ ಅವರನ್ನು ಯಾಮಾರಿಸಲು ಮುಂದಾದ ನವಾಜ್‌ ವೈಡ್‌ ಹಾಕಿದರು. ಈ ವೇಳೆ ಭಾರತಕ್ಕೆ ಒಂದು ಎಸೆತದಲ್ಲಿ ಒಂದು ರನ್‌ ಬೇಕಾಯಿತು. ಅಂತಿಮವಾಗಿ ಆರ್‌. ಅಶ್ವಿನ್‌ ಒಂದು ರನ್‌ ಬಾರಿಸಿ ಗೆಲುವು ತಂದುಕೊಟ್ಟರು.

ಅದಕ್ಕಿಂತ ಮೊದಲು ಹ್ಯಾರಿಸ್‌ ರವೂಫ್‌ ಎಸೆದ ಇನಿಂಗ್ಸ್‌ನ ೧೯ನೇ ಓವರ್‌ನ ಕೊನೇ ಎರಡು ಎಸೆತದಲ್ಲಿ ೨ ಸಿಕ್ಸರ್ ಬಾರಿಸಿದ್ದರು.

ಇದನ್ನೂ ಓದಿ | IND vs PAK | ಚೇಸ್‌ ಮಾಸ್ಟರ್‌ ವಿರಾಟ್‌ ಕೊಹ್ಲಿಯ ಸಾಮರ್ಥ್ಯ ಮತ್ತೊಮ್ಮೆ ಸಾಬೀತು

Exit mobile version