Site icon Vistara News

Lausanne Diamond League: ಇಂದು ಲಾಸಾನ್ನೆ ಡೈಮಂಡ್‌ ಲೀಗ್‌ನಲ್ಲಿ ನೀರಜ್‌ ಸ್ಪರ್ಧೆ

Lausanne Diamond League:

Lausanne Diamond League: Neeraj Chopra faces high-quality field and injury concern at Lausanne Diamond League

ಲುಸಾನ್‌: 2 ವಾರಗಳ ಹಿಂದಷ್ಟೇ ಮುಕ್ತಾಯ ಕಂಡಿದ್ದ ಪ್ಯಾರಿಸ್ ಒಲಿಂಪಿಕ್ಸ್‌ ಕೂಟದಲ್ಲಿ ಐತಿಹಾಸಿಕ ಬೆಳ್ಳಿ ಪದಕ ಜಯಿಸಿದ್ದ ಭಾರತ ಸ್ಟಾರ್​ ಜಾವೆಲಿನ್​ ಎಸೆತಗಾರ ನೀರಜ್​ ಚೋಪ್ರಾ(Neeraj Chopra) ಅವರು ಮತ್ತೊಂದು ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಭಾಗವಹಿಸಲು ಸಜ್ಜಾಗಿದ್ದಾರೆ. ಇಂದು ತಡರಾತ್ರಿ ನಡೆಯುವ ಲಾಸನ್ ಡೈಮಂಡ್ ಲೀಗ್(Lausanne Diamond League)​ನಲ್ಲಿ ಸ್ಪರ್ಧಿಸಲಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್‌ 2024ರ ಕಂಚಿನ ವಿಜೇತೆ ಆಂಡರ್ಸನ್ ಪೀಟರ್ಸ್ (ಗ್ರೆನಡಾ), ಜಾಕುಬ್ ವಡ್ಲೆಜ್ (ಜೆಕ್ ರಿಪಬ್ಲಿಕ್) ಮತ್ತು ಜೂಲಿಯಸ್ ಯೆಗೊ (ಕೀನ್ಯಾ) ಅವರಿಂದ ನೀರಜ್​ಗೆ ತೀವ್ರ ಪೈಪೋಟಿ ಎದುರಾಗುವ ಸಾಧ್ಯತೆ ಇದೆ. ಪ್ಯಾರಿಸ್‌ನಲ್ಲಿ ಒಲಿಂಪಿಕ್ಸ್ ದಾಖಲೆಯೊಂದಿಗೆ ಚಿನ್ನದ ಪದಕ ಜಯಿಸಿ ಜಾಗತಿಕ ಮಟ್ಟದಲ್ಲಿ ಸಂಚಲನ ಮೂಡಿಸಿದ್ದ ಪಾಕಿಸ್ತಾನದ ಅರ್ಷದ್ ನದೀಮ್(Arshad Nadeem) ಈ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿಲ್ಲ.

2022ರಲ್ಲಿ ಡೈಮಂಡ್ ಲೀಗ್ ಚಾಂಪಿಯನ್ ಆಗಿದ್ದ ಚೋಪ್ರಾ ಕಳೆದ ವರ್ಷದ ಪ್ರದರ್ಶನವನ್ನು ಉತ್ತಮಪಡಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ. 2023ರಲ್ಲಿ ಎವ್‌ಜಿನಿಯಲ್ಲಿ ನಡೆದಿದ್ದ ಫೈನಲ್‌ನಲ್ಲಿ ಚೋಪ್ರಾ ಎರಡನೇ ಸ್ಥಾನ ಪಡೆದಿದ್ದರು. ಝೆಕ್ ರಿಪಬ್ಲಿಕ್‌ನ ಜೇಕಬ್ ವಡ್ಲೆಚ್ ಮೊದಲ ಸ್ಥಾನ ಪಡೆದಿದ್ದರು. ಸದ್ಯ ಡೈಮಂಡ್ ಲೀಗ್ ಅಂಕಪಟ್ಟಿಯಲ್ಲಿ 7 ಅಂಕದೊಂದಿಗೆ 4ನೇ ಸ್ಥಾನದಲ್ಲಿರುವ ಚೋಪ್ರಾ ಅವರು ಫೈನಲ್‌ನಲ್ಲಿ ಸ್ಥಾನ ಗಿಟ್ಟಿಸಲು ಸರಣಿಯಲ್ಲಿ ಅಗ್ರ-6ರೊಳಗೆ ಸ್ಥಾನ ಪಡೆಯಬೇಕಾಗಿದೆ. ಗಾಯದ ಕಳವಳದ ಹೊರತಾಗಿಯೂ ಚೋಪ್ರಾ ಅವರು ಒಲಿಂಪಿಕ್ಸ್ ನಂತರ ಸ್ವಿಟ್ಸರ್‌ಲ್ಯಾಂಡ್‌ನಲ್ಲಿ ತರಬೇತಿ ಆರಂಭಿಸಿದ್ದರು.

ಇದನ್ನೂ ಓದಿ Manu Bhaker-Neeraj Chopra: ನೀರಜ್​ ಚೋಪ್ರಾ ಜತೆ ಮದುವೆ ವದಂತಿ; ಸ್ಪಷ್ಟನೆ ನೀಡಿದ ಮನು ಭಾಕರ್​ ತಂದೆ

ಗಾಯದ ಮಧ್ಯೆಯೂ 26ರ ಹರೆಯದ ಚೋಪ್ರಾ ಪ್ಯಾರಿಸ್ ಒಲಿಂಪಿಕ್ಸ್ ಫೈನಲ್‌ನಲ್ಲಿ 89.45 ಮೀ.ದೂರಕ್ಕೆ ಜಾವೆಲಿನ್ ಎಸೆದು ಬೆಳ್ಳಿ ಪದಕ ಗೆದ್ದಿದ್ದರು. ಇದು ನೀರಜ್ ಅವರ ವರ್ಷದ ಎರಡನೇ ಡೈಮಂಡ್ ಲೀಗ್ ಪ್ರದರ್ಶನವಾಗಿದೆ. ಮೇ ತಿಂಗಳಲ್ಲಿ ನಡೆದ ದೋಹಾ ಡೈಮಂಡ್ ಲೀಗ್‌ನಲ್ಲಿ ಅವರು ಎರಡನೇ ಸ್ಥಾನ ಗಳಿಸಿದ್ದರು.

ಹಲವು ವರ್ಷಗಳಿಂದ 90 ಮೀಟರ್‌ ದೂರಕ್ಕೆ ಜಾವೆಲಿನ್‌ ಎಸೆಯುವುದಕ್ಕೆ ಸತತ ಪ್ರಯತ್ನ ನಡೆಸುತ್ತಿರುವ ನೀರಜ್​ ಇನ್ನು ಮುಂದೆ 90 ಮೀ. ಗುರಿಯನ್ನು ದೇವರಿಗೆ ಬಿಡುತ್ತೇನೆ ಎಂದು ಹೇಳಿದ್ದರು. ನೀರಜ್​ರ ಇದುವರೆಗಿನ ಶ್ರೇಷ್ಠ ನಿರ್ವಹಣೆ 89.94 ಮೀ. ದೂರ ಎಸೆದಿರುವುದು. ಈ ಎಸೆತವನ್ನು 2022ರ ಸ್ಟಾಕ್​ಹೋಮ್​ ಡೈಮಂಡ್​ ಲೀಗ್​ನಲ್ಲಿ ಎಸೆದಿದ್ದರು. 

ಪ್ಯಾರಿಸ್‌ ಒಲಿಂಪಿಕ್ಸ್‌ ಬಳಿಕ ನೀರಜ್​ ಅವರು ಜರ್ಮನಿಯಲ್ಲಿ ತೊಡೆಸಂಧು ನೋವಿಗೆ ಚಿಕಿತ್ಸೆ ಪಡೆಯಲಿದ್ದಾರೆ ಎನ್ನಲಾಗಿತ್ತು. ಇದೀಗ ಅವರಿಗೆ ವೈದ್ಯರು ಸದ್ಯಕ್ಕೆ ಶಸ್ತ್ರಚಿಕಿತ್ಸೆಯ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ನೀರಜ್​ ಡೈಮಂಡ್‌ ಲೀಗ್‌ನಲ್ಲಿ ಪಾಲ್ಗೊಳ್ಳಲು ಮುಂದಾಗಿದ್ದಾರೆ. ಮುಂದಿನ ತಿಂಗಳು ಸೆಪ್ಟೆಂಬರ್ 13 ಮತ್ತು 14ರಂದು ಬ್ರಸೆಲ್ಸ್‌ನಲ್ಲಿ ಕೊನೆಯ ಡೈಮಂಡ್‌ ಲೀಗ್‌ ನಡೆಯಲಿದೆ. ಇದಾದ ಬಳಿಕ ನೀರಜ್​ ಮತ್ತೆ ವೈದ್ಯರನ್ನು ಸಂಪರ್ಕಿಸಿ ಶಸ್ತ್ರಚಿಕಿತ್ಸೆ ಮಾಡಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಲೈವ್ ಸ್ಟೀಮಿಂಗ್


ಡೈಮಂಡ್ ಲೀಗ್​ನ ನೇರಪ್ರಸಾರ ಇಂದು (ಗುರುವಾರ) ರಾತ್ರಿ 11.30ಕ್ಕೆ ಆರಂಭವಾಗಲಿದೆ. ಭಾರತೀಯ ಕಾಲಮಾನ ಆಗಸ್ಟ್ 23 ರಂದು (12:22 AM) ಪ್ರಸಾರಗೊಳ್ಳಲಿದೆ. ಜಿಯೋ ಸಿನೆಮಾ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ವಿಕ್ಷೀಸಬಹುದು. ಟಿವಿ ನೇರ ಪ್ರಸಾರ ಸ್ಪೋರ್ಟ್ಸ್​ 18-3 ಚಾನೆಲ್‌ನಲ್ಲಿ ಲಭ್ಯವಿರುತ್ತದೆ.

Exit mobile version