Site icon Vistara News

Lausanne Diamond League: ಡೈಮಂಡ್​ ಲೀಗ್​ನಲ್ಲಿ ಚಿನ್ನ ಗೆದ್ದ ನೀರಜ್​ ಚೋಪ್ರಾ

Lausanne Diamond League in neeraj chopra

ಲೌಸಾನ್ನೆ: ಭಾರತದ ಸ್ಟಾರ್​ ಜಾವೆಲಿನ್​ ಎಸೆತಗಾರ ನೀರಜ್​ ಚೋಪ್ರಾ(Neeraj Chopra) ಅವರು ಲೌಸನ್ನೆಯಲ್ಲಿ ನಡೆದ ಡೈಮಂಡ್​ ಲೀಗ್​ನಲ್ಲಿ(Lausanne Diamond League) 87.66 ಮೀಟರ್‌ ದೂರಕ್ಕೆ ಜಾವೆಲಿನ್ ಎಸೆದು ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಗಾಯದ ಸಮಸ್ಯೆಯಿಂದ ಒಂದು ತಿಂಗಳ ವಿಶ್ರಾಂತಿ ಬಳಿಕ ಕಣಕ್ಕಿಳಿದಿದ್ದ ಅವರು ಇಲ್ಲಿ ಶ್ರೇಷ್ಠ ಪ್ರದರ್ಶನ ತೋರುವ ಮೂಲಕ ಈ ವರ್ಷದ ಎರಡನೇ ಡೈಮಂಡ್​ ಲೀಗ್​ನಲ್ಲಿ ಸ್ವರ್ಣ ಗೆದ್ದ ಸಾಧನೆ ಮಾಡಿದರು. ಆದರೆ ಲಾಂಗ್​ ಜಂಪರ್​ ಮುರಳಿ ಶ್ರೀಶಂಕರ್(Murali Sreeshankar) 5ನೇ ಸ್ಥಾನಕ್ಕೆ ತೃಪ್ತಿಪಟ್ಟರು.

ನೀರಜ್‌ ಚೋಪ್ರಾ ಇದೇ ಮೇ 5ರಂದು ದೋಹಾದಲ್ಲಿ ನಡೆದಿದ್ದ ಡೈಮಂಡ್‌ ಲೀಗ್‌ನಲ್ಲಿ(Diamond League) ಚಿನ್ನದ ಪದಕ ಗೆದ್ದಿದ್ದರು. ಈ ಕೂಟದಲ್ಲಿ ಅವರು ತಮ್ಮ 4ನೇ ಅತ್ಯುತ್ತಮ ದೂರದ(88.67 ಮೀ.) ಸಾಧನೆಯೊಂದಿಗೆ ಗುರುತಿಸಿಕೊಂಡಿದ್ದರು. ಬಳಿಕ ಸ್ನಾಯು ಸೆಳೆತಕ್ಕೆ ಸಿಲುಕಿದ ಕಾರಣ ವಿಶ್ರಾಂತಿ ಪಡೆದಿದ್ದರು. ಹೀಗಾಗಿ ಮೇ 29ರಂದು ನೆದರ್ಲೆಂರ್ಡ್ಸ್​ನಲ್ಲಿ ನಡೆದಿದ್ದ ಎಫ್ಬಿಕೆ ಗೇಮ್ಸ್‌ ಮತ್ತು ಜೂನ್​ 13ರಂದು ಫಿನ್​ಲೆಂಡ್‌ನ‌ಲ್ಲಿ ನಡೆದ ಪಾವೋ ನುರ್ಮಿ ಟೂರ್ನಿಯಿಂದ ಹೊರಗುಳಿದಿದ್ದರು.

ಶುಕ್ರವಾರ ತಡರಾತ್ರಿ ನಡೆದ ಲೌಸನ್ನೆ ಚರಣರದ ಡೈಮಂಡ್​ ಲೀಗ್​ನಲ್ಲಿ(Lausanne Diamond League) ಮೊದಲ ಎಸೆದಲ್ಲಿ ಪೌಲ್​ ಆದರು. ಜರ್ಮನಿಯ ಜೂಲಿಯನ್ ವೆಬ್ಬರ್ ಆರಂಭಿಕ ಮುನ್ನಡೆ ಪಡೆದರು. ಎರಡನೇ ಎಸೆತದಲ್ಲಿ ಲಯ ಕಂಡುಕೊಂಡ ನೀರಜ್‌, 83.52 ಮೀಟರ್ ಎಸೆದು ಮೂರನೇ ಸ್ಥಾನ ಪಡೆದರು. ಜೆಕ್ ಗಣರಾಜ್ಯದ ಜಾಕುಬ್ ವಡ್ಲೆಜ್ ತಮ್ಮ ಮೂರನೇ ಪ್ರಯತ್ನದಲ್ಲಿ 85.04 ಮೀಟರ್​ ಪ್ರಯತ್ನದೊಂದಿಗೆ ಎರಡನೇ ಸ್ಥಾನಕ್ಕೆ ಬಂದರು.

ಛಲ ಬಿಡದ ನೀರಜ್​ ಐದನೇ ಪ್ರಯತ್ನದಲ್ಲಿ 87.66 ಮೀಟರ್‌ ದೂರ ಎಸೆದು ಅಗ್ರಸ್ಥಾನವನ್ನು ಪಡೆದುಕೊಂಡರು. ಜರ್ಮನಿಯ ಜೂಲಿಯನ್ ವೆಬ್ಬರ್​ ಮತ್ತು ಜೆಕ್ ಗಣರಾಜ್ಯದ ಜಕುಬ್ ವಡ್ಲೆಜ್, ತಮ್ಮ ಅಂತಿಮ ಪ್ರಯತ್ನಗಳಲ್ಲಿ ಕ್ರಮವಾಗಿ 87.03 ಮೀ. ಹಾಗೂ 86.13 ಮೀ. ದಾಖಲಿಸಿದರು. ಇದರಿಂದ ಚೋಪ್ರಾ ನಿರಾಸದಾಯಕ ಗೆಲುವು ಸಾಧಿಸಿದರು.

ಇದನ್ನೂ ಓದಿ CWG- 2022 | ಕಾಮನ್ವೆಲ್ತ್‌ನಲ್ಲಿ ಮೊದಲ ಬೆಳ್ಳಿ ಪದಕ ಗೆದ್ದ ಭಾರತದ ಲಾಂಗ್‌ಜಂಪರ್‌ ಮುರಳಿ ಶ್ರೀಶಂಕರ್‌

ಭಾರತರ ಮತ್ತೊಂದು ಬರವಸೆಯಾಗಿದ್ದ ಲಾಂಗ್​ ಜಂಪ್​ ಸ್ಪರ್ಧೆಯಲ್ಲಿ ಮುರಳಿ ಶ್ರೀಶಂಕರ್‌ ಅವರು ಪದಕ ಗೆಲ್ಲುವಲ್ಲಿ ವಿಫಲರಾದರು. ಅವರು 7.88 ಮೀಟರ್‌ ಜಿಗಿತದೊಂದಿಗೆ ಐದನೇ ಸ್ಥಾನ ಪಡೆದರು. ಬಹಾಮಾಸ್‌ನ ಲಕ್ವಾನ್ ನೈರ್ನ್ 8.11 ಮೀ ಜಿಗಿದು ಅಗ್ರಸ್ಥಾನ ಪಡೆದರೆ, ಗ್ರೀಸ್‌ನ ಮಿಲ್ಟಿಯಾಡಿಸ್ ಟೆಂಟೊಗ್ಲೋ 8.07 ಮೀಟರ್‌ ಜಿಗಿದು ಎರಡನೇ ಸ್ಥಾನದಲ್ಲಿದ್ದಾರೆ. ಜಪಾನ್‌ನ ಯೂಕಿ ಹಶಿಯೋಕಾ ಮೂರನೇ (7.98 ಮೀ) ಸ್ಥಾನ ಪಡೆದರು.

ಕಳೆದ ಪ್ಯಾರಿಸ್‌ ಡೈಮಂಡ್‌ ಲೀಗ್‌ ಲಾಂಗ್‌ಜಂಪ್‌ನಲ್ಲಿ 8.09 ಮೀ. ದೂರದ ಸಾಧನೆಯೊಂದಿಗೆ ತೃತೀಯ ಸ್ಥಾನಿಯಾಗಿದ್ದ ಮುರಳಿ ಶ್ರೀಶಂಕರ್‌ ಇಲ್ಲಿ ಪದಕ ಗೆದ್ದುವಲ್ಲಿ ವಿಫಲರಾದರು. ಲೌಸನ್ನೆ ಬಳಿಕ ಡೈಮಂಡ್‌ ಲೀಗ್‌ ಸರಣಿ ಮೊನಾಕೊ (ಜುಲೈ 21), ಜ್ಯೂರಿಚ್‌ನಲ್ಲಿ (ಆಗಸ್ಟ್​ 31) ಮುಂದುವರಿಯುತ್ತದೆ. ಗ್ರ್ಯಾಂಡ್‌ ಫಿನಾಲೆ ಅಮೆರಿಕದ ಯೂಜಿನ್‌ನಲ್ಲಿ ಸೆಪ್ಟೆಂಬರ್​ 16, 17ರಂದು ನಡೆಯಲಿದೆ.

Exit mobile version