Site icon Vistara News

Shane Warne Birthday | ಲೆಜೆಂಡ್‌ ಶೇನ್‌ ವಾರ್ನ್‌, ಕಾಂಟ್ರವರ್ಸಿ ಸ್ಟಾರ್‌ ಕೂಡ ಹೌದು

shane warne birthday

ಬಾಲಕೃಷ್ಣ ನಾಯ್ಕ ಚಿಕ್ಕೋಳಿ

ಹೊಂಬಣ್ಣದ ಕೂದಲಿನ, ಹಳದಿಗಣ್ಣಿನ ದೈತ್ಯ ನಿಧಾನವಾಗಿ ಹೆಜ್ಜೆ ಹಾಕುತ್ತಾ ಬ್ಯಾಟರ್‌ಗಳತ್ತ ಚೆಂಡನ್ನು ತೇಲಿ ಬಿಡುವ ಶೈಲಿಯನ್ನು ನೋಡುವುದೇ ಕಣ್ಣಿಗೆ ಒಂದು ಹಬ್ಬತು. ಬೆರಳಂಚಿನಲ್ಲೆ ಚೆಂಡು ತಿರುಗಿಸಿ ದಿಗ್ಗಜ ಬ್ಯಾಟ್ಸ್‌ಮನ್‌ಗಳ ವಿಕೆಟ್ ಎಗರಿಸುತ್ತಿದ್ದ ಅವರು ಕ್ರಿಕೆಟ್ ಅಂಗಳದ ದೈತ್ಯ ಸಂಹಾರಿ ಎಂದೆ ಖ್ಯಾತಿ ಪಡೆದಿದ್ದರು.

ಮೈದಾನಕ್ಕಿಳಿದರೆ ಬದ್ಧ ವೈರಿಯಂತೆ ತೊಡೆ ತಟ್ಟಿ ಸೆಣಸುತಿದ್ದ ಅವರು ಮೈದಾನದ ಹೊರಗಡೆ ಮೋಜು ಮಸ್ತಿಯ ಗೆಳೆಯನಾಗಿದ್ದರು. ಈ ರೀತಿಯಾಗಿ ಅಪಾರ ಜೀವನ ಪ್ರೇಮಿಯಾಗಿದ್ದ ಅವರು ಕಳೆದ ಮಾರ್ಚ್‌4 ರಂದು ಥಾಯ್ಲೆಂಡ್‌ನಲ್ಲಿ ಹ್ರದಯಘಾತಕ್ಕೆ ಒಳಗಾಗಿ ಮೃತಪಟ್ಟರು. ಆಗ ಇಡೀ ಕ್ರಿಕೆಟ್ ಲೋಕವೇ ಕಂಬನಿ ಮಿಡಿದಿತ್ತು. ಮೈದಾನದಲ್ಲಿ ಜತೆಯಾಗಿ ಆಡದಿವರಷ್ಟೇ ಅಲ್ಲ, ಬದ್ದ ವೈರಿಗಳಂತೆ ಮೈದಾನದಲ್ಲಿ ಸೆಣಸಿದವರೂ ಅಂದು ಭಾವುಕರಾಗಿದ್ದರು.

ಮೊದಲು ಫುಟ್ಬಾಲ್ ಕಡೆ ಮೋಹ ಬೆಳೆಸಿಕೊಂಡಿದ್ದ ವಾರ್ನ್‌ ನಂತರ ಕ್ರಿಕೆಟ್‌ನತ್ತ ಹೆಜ್ಜೆ ಇಟ್ಟು ಆಸ್ಟೇಲಿಯಾದ ವಿಕ್ವೋರಿಯಾ ತಂಡದ ಪರ ಆಡುತಿದ್ದರು. ಕೇವಲ 7 ಪ್ರಥಮ ದರ್ಜೆ ಪಂದ್ಯ ಆಡಿದ ವಾರ್ನ್‌ 1992ರಲ್ಲಿ ಎಸ್‌ಸಿಜಿ ಯಲ್ಲಿ ನಡೆದ ಭಾರತದ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಅವರು ಪಡೆದ ಚೊಚ್ಚಲ ವಿಕೆಟ್ ರವಿ ಶಾಸ್ತ್ರಿ ಅವರದ್ದು. ಆದರೆ ಆ ಪಂದ್ಯದಲ್ಲಿ 150 ರನ್ ನೀಡಿ ತೀರಾ ದುಬಾರಿಯಾಗಿ ಕೇವಲ ಒಂದು ವಿಕೆಟ್ ಮಾತ್ರ ಕಬಳಿಸಿದರು.

ಕೊಲೊಂಬೊದಲ್ಲಿ ನಡೆದ ಟೆಸ್ಟ್‌ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾಕ್ಕೆ ಕೇವಲ 181 ರನ್ ಗುರಿ ನೀಡಿತ್ತು ಆಸ್ಟ್ರೇಲಿಯಾ ತಂಡ. ಆಗ ನಾಯಕ ಮಾರ್ಕ್‌ ಟೇಲರ್ ಚೆಂಡನ್ನು ನೀಡಿದ್ದು, ವಾರ್ನ್‌ ಕೈಗೆ. 5 ಓವರ್ ಎಸೆದು 11 ರನ್ ನೀಡಿ 3 ವಿಕೆಟ್ ಕಿತ್ತು ತಂಡಕ್ಕೆ 16 ರನ್‌ಗಳ ಗೆಲುವು ದೊರಕಿಸಿಕೊಟ್ಟರು ವಾರ್ನ್‌.

ಜುಲೈ 1993ರ ಆ್ಯಶಸ್ ಸರಣಿಯಲ್ಲಿ ತನ್ನ ಪ್ರಥಮ ಎಸೆತದಲ್ಲೆ ಇಂಗ್ಲೆಂಡ್ ತಂಡದ ನಾಯಕ ಮೈಕ್ ಗ್ಯಾಟಿಂಗ್ ವಿಕೆಟ್ ಎಗರಿಸಿದ್ದರು. ಆ ಎಸೆತವನ್ನು “ಬಾಲ್ ಆಪ್ ದಿ ಸೆಂಚುರಿ” ಎಂದೆ ಕರೆಯಲಾಗುತ್ತದೆ. ಅದ್ಭುತ ಲೆಗ್ ಬ್ರೇಕ್ ಅದಾಗಿದ್ದು, ಸ್ಕ್ವೇರ್ ರೂಪದಲ್ಲಿ ಆಫ್‌ ಸೈಡ್ ತಿರುವು ಪಡೆದುಕೊಂಡಿತು. ವೈಡ್ ಆಗಲಿದೆ ಎಂದುಕೊಂಡಿದ್ದ ಮೈಕ್ ಗ್ಯಾಟಿಂಗ್ ಮುಂದಕ್ಕೆ ಸರಿದರೆ, ಚೆಂಡು ಆಪ್ ಸ್ಟಂಪ್‌ ಎಗರಿಸಿತ್ತು. ಗ್ಯಾಟಿಂಗ್ ಅಷ್ಟೇ ಅಲ್ಲ, ನೋಡುಗರೆಲ್ಲರೂ ಒಂದು ಕ್ಷಣ ಅವಕ್ಕಾಗಿದ್ದರು. ಇಂದಿಗೂ ಆ ಎಸೆತ ನಮ್ಮನ್ನು ಮಂತ್ರಮುಗ್ಧಗೊಳಿಸುತ್ತದೆ. “ಆ ಎಸೆತ ನನ್ನ ಜೀವನವನ್ನೇ ಬದಲಿಸಿತು,” ಎಂದು ವಾರ್ನ್‌ ಅವರೇ ಹಲವು ಬಾರಿ ಹೇಳಿಕೊಂಡಿದ್ದಾರೆ. ಆ ಸರಣಿಯಲ್ಲಿ 34 ವಿಕೆಟ್ ಪಡೆದು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಂಚಲನ ಮೂಡಿಸಿದ್ದರು ವಾರ್ನ್‌.

1996ರ ವೀಲ್ಸ್ ವಲ್ಡ್ ಕಪ್ ಸೆಮಿಫೈನಲ್ ಪಂದ್ಯ. 207 ರನ್ ಗುರಿ ಬೆನ್ನಟ್ಟಿದ ವೆಸ್ಟ್ ಇಂಡಿಸ್ ಕೇವಲ 4 ವಿಕೆಟ್ ಕಳೆದುಕೊಂಡು 178 ರನ್ ಗಳಿಸಿತ್ತು. ಗೆಲುವಿಗೆ ಕೇವಲ 30 ರನ್ ಅಗತ್ಯವಿತ್ತು. ನಾಯಕ ಮಾರ್ಕ್‌ ಟೇಲರ್, ವಾರ್ನ್‌ ಅವರನ್ನು ದಾಳಿಗಿಳಿಸಿದರು. ಪ್ರಾರಂಭದಲ್ಲೆ ಕರ್ಟ್ನಿ ಬ್ರೌನೆ ವಿಕೆಟ್‌ ಪಡೆದು ಆಘಾತ ಕೊಟ್ಟ ವಾರ್ನ್, ಬಳಿಕ ಒಟ್ಟಿಸ್ ಗಿಬ್ಸನ್, ಜಿಮ್ಮಿ ಆಡಮ್ಸ್, ಮತ್ತು ಇಯಾನ್ ಬಿಷಪ್ ವಿಕೆಟ್ ಕಿತ್ತು ತಂಡವನ್ನು ಗೆಲ್ಲಿಸಿದರು. ವಿಂಡೀಸ್‌ ವಿಶ್ವ ಕಪ್ ಅಖಾಡದಿಂದ ಹೊರಕ್ಕೆ ಬಿತ್ತು. ಆಸ್ಟ್ರೇಲಿಯಾ ಅಚ್ಚರಿಯ ರೀತಿಯಲ್ಲಿ ಫೈನಲ್‌ಗೇರಿತು.

ಕ್ರಿಕೆಟ್‌ ಅಸಾಧ್ಯ ಎಂದಿದ್ದರು ವೈದ್ಯರು

1998ರಲ್ಲಿ ಭುಜದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ವಾರ್ನ್‌. ವೈದ್ಯರು ಇನ್ನು ಮುಂದೆ ಕ್ರಿಕೆಟ್ ಆಟ ಅಸಾಧ್ಯ ಎಂದಿದ್ದರು. ಆದರೆ ವಾರ್ನ್‌ ಬರೆದಿದ್ದು ಮಾತ್ರ ಇತಿಹಾಸ. 1999ರ ವಿಶ್ವ ಕಪ್ ಪಂದ್ಯಾವಳಿಯ ದಕ್ಷಿಣ ಆಫ್ರಿಕಾ ವಿರುದ್ಧ ಸೆಮಿಫೈನಲ್. ಕೇವಲ 213 ರನ್ ಗುರಿ ಬೆನ್ನಟ್ಟಿದ್ದ ದಕ್ಷಿಣ ಆಫ್ರಿಕಾ ವಿಕೆಟ್‌ ನಷ್ಟವಿಲ್ಲದೆ 48 ರನ್ ಗಳಿಸಿತ್ತು.ಈ ವೇಳೆ ದಾಳಿಗಿಳಿದ ವಾರ್ನ್‌ ಅವರು ಗ್ಯಾರಿ ಕಸ್ಟರ್ನ್‌, ಹರ್ಷೆಲ್‌ ಗಿಬ್ಸ್‌, ಹ್ಯಾನ್ಸಿ ಕ್ರೋನಿಯೆ ಹಾಗೂ ಅರ್ಧ ಶತಕ ಬಾರಿಸಿ ನೆಲಕಚ್ಚಿ ಆಡುತ್ತಿದ್ದ ಸವ್ಯಸಾಚಿ ಜಾಕ್‌ ಕಾಲಿಸ್ ಅವರನ್ನು ಔಟ್‌ ಮಾಡಿದರು. ದ. ಆಫ್ರಿಕಾ ತಂಡ 132 ರನ್‌ಗಳಿಗೆ ಸರ್ವಪತನಗೊಂಡಿತು. ವಾರ್ನ್‌ ೩೩ ರನ್‌ಗಳಿಗೆ ೪ ವಿಕೆಟ್‌ ಕಬಳಿಸಿದ್ದರು. ಅವರ ಸಾಧನೆಯ ಮೂಲಕ ಆಸ್ಟ್ರೇಲಿಯಾ ತಂಡ ವಿಶ್ವ ಕಪ್‌ ಗೆದ್ದಿತು.

ಟೆಸ್ಟ್ ಕ್ರಿಕೆಟ್‌ನಲ್ಲಿ ಪ್ರಥಮವಾಗಿ 600 ಮತ್ತು 700 ವಿಕೆಟ್‌ಗಳ ಮೈಲುಗಲ್ಲು ಸ್ಥಾಪಿಸಿದವರು ವಾರ್ನ್‌. 145 ಟೆಸ್ಟ್ ಆಡಿ 708 ವಿಕೆಟ್ ಪಡೆದಿದ್ದಾರೆ. ಒಟ್ಟು 194 ಏಕ ದಿನ ಪಂದ್ಯಗಳನ್ನಾಡಿ 293 ವಿಕೆಟ್ ಪಡೆದಿದ್ದಾರೆ, ಒಟ್ಟು 1001 ಅಂತಾರಾಷ್ಟ್ರೀಯ ವಿಕೆಟ್ ಪಡೆದು ಗರಿಷ್ಠ ವಿಕೆಟ್ ಪಡೆದ ಬೌಲ್‌ಗಳ ಪಟ್ಟಿಯಲ್ಲಿ ಎರಡನೆ ಸ್ಥಾನ ಪಡೆದಿದ್ದಾರೆ. ಗ್ಲೆನ್ ಮೆಗ್ರಾತ್, ಡೇಮಿಯನ್ ಫ್ಲೆಮಿಂಗ್, ಜಾಸನ್ ಗಿಲೆಸ್ಪಿ ಮತ್ತು ಬ್ರೆಟ್ಲಿ ಅವರನ್ನೊಳಗೊಂಡ ಬಲಾಡ್ಯ ಬೌಲಿಂಗ್ ಪಡೆ ಇರುವಾಗ ಶೇನ್ ವಾರ್ನ್‌ ಬರೋಬ್ಬರಿ 1001 ವಿಕೆಟ್ ಪಡೆದಿರುವುದು ಸಾಮಾನ್ಯ ಸಾಧನೆಯಲ್ಲ. ಶ್ರೀಲಂಕಾದ ಮುತ್ತಯ್ಯ ಮರಳೀಧರನ್ ಒಟ್ಟಾರೆ 1347 ವಿಕೆಟ್ ಪಡೆದು ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಸತತ 3 ಒಡಿಐನಲ್ಲಿ 4 ವಿಕೆಟ್ ಗೊಂಚಲು ಪಡೆದ ದಾಖಲೆ ವಾರ್ನ್‌ ಹೆಸರಿನಲ್ಲಿದೆ. ತನ್ನ ಕ್ರಿಕೆಟ್ ಜೀವನದಲ್ಲಿ 17 ಬಾರಿ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 3 ಬಾರಿ ಹ್ಯಾಟ್ರಿಕ್ ವಿಕೆಟ್‌ ಸಾಧನೆ ಮಾಡಿದ್ದಾರೆ.

2005ರ ಕ್ಯಾಲೆಂಡರ್‌ ವರ್ಷದಲ್ಲಿ ಅತಿ ಹೆಚ್ಚು ಅಂದರೆ 96 ವಿಕೆಟ್ ಪಡೆದ ದಾಖಲೆ ಇನ್ನೂ ವಾರ್ನ್‌ ಹೆಸರಲ್ಲೇ ಇದೆ. ಇವರು ಟೆಸ್ಟ್‌ನಲ್ಲಿ 38 ಬಾರಿ 5 ವಿಕೆಟ್ ಮತ್ತು ಹತ್ತು ಬಾರಿ 10 ವಿಕೆಟ್‌ಗಳ ಗೊಂಚಲು ಪಡೆದ ವಿಶ್ವದ 2ನೇ ಬೌಲರ್. 11 ಪಂದ್ಯಗಳಲ್ಲಿ ತಂಡದ ನಾಯಕತ್ವ ಜವಾಬ್ದಾರಿ ನಿರ್ವಹಿಸಿ 10 ಪಂದ್ಯಗಳಲ್ಲಿ ಜಯ ತಂದುಕೊಟ್ಟಿದ್ದರು. ಶತಮಾನದ ಐವರು ವಿಸ್ಡನ್ ಆಟಗಾರರಲ್ಲಿ (ಡಾನ್ ಬ್ರಾಡ್ಮನ್‌, ವಿವಿಯನ್ ರಿಚರ್ಡ್ಸ್‌, ಜಾಕ್ ಹಾಬ್ಸ್, ಗ್ಯಾರಿಫೀಲ್ಡ್ ಸೋಬರ್ಸ್) ವಾರ್ನ್‌ ಕೂಡ ಒಬ್ಬರು. 2013ರಲ್ಲಿ ಐಸಿಸಿ ಹಾಲ್ ಆಫ್ ಫೇಮ್‌ನಲ್ಲಿ ಕೂಡ ಸ್ಥಾನ ಪಡೆದಿರುತ್ತಾರೆ.

ಅವರ ಬೌಲಿಂಗ್‌ನಲ್ಲಿ ಕೌತುಕವಿತ್ತು, ವಿಸ್ಮಯವಿತ್ತು. ಕೆಲವು ಸಂದರ್ಭದಲ್ಲಿ ವಾರ್ನ್‌ ಎಸೆತಕ್ಕೆ ವಿಕೆಟ್‌ ಎಗರಿದಾಗಲೇ ಚೆಂಡಿನ ದಿಕ್ಕನ್ನು ಬ್ಯಾಟ್ಸ್‌ಮನ್‌ ಅರಿಯಬೇಕಿತ್ತು. ಬ್ಯಾಟರ್ ಅಷ್ಟೇ ಅಲ್ಲ, ವಿಕೆಟ್‌ಕೀಪರ್, ಪಿಚ್ ಹತ್ತಿರ ನಿಂತ ಫೀಲ್ಡರ್‌ಗಳೂ ಜಾಗರೂಕತೆಯಿಂದ ಇರಬೇಕಾಗಿತ್ತು. ಚೆಂಡು ಎತ್ತ ತಿರುವು ಪಡೆಯಲಿದೆ ಎಂದು ಗುರುತಿಸುವುದು ಬಹಳ ಕಷ್ಟವಾಗುತ್ತಿತು. ಈ ಚಮತ್ಕಾರಕ್ಕಾಗಿಯೇ ‘ಸ್ಪಿನ್ ಕಿಂಗ್ ‘ ಎಂದು ಕರೆಸಿಕೊಂಡಿದ್ದ ವಾರ್ನ್‌ ತಮ್ಮ ಆಟೋಬಯಾಗ್ರಫಿಗೆ ಇಟ್ಟ ಹೆಸರು ‘ನೋ ಸ್ಪಿನ್’.

ವಿವಾದಗಳಿಂದ ಸುದ್ದಿ

ಕ್ರಿಕೆಟ್ ಮೈದಾನದೊಳಗೆ ಅಮೋಘ ಬೌಲಿಂಗ್ ದಾಳಿಯಿಂದ ಸುದ್ದಿಯಾದರೆ ಮೈದಾನದ ಹೊರಗೂ ವಿವಾದಗಳಿಂದ ಆಗಾಗ ಸುದ್ದಿಯಾಗುತ್ತಲೆ ಇರುತಿದ್ದರು. ವಿಕೆಟ್ ಮತ್ತು ವಿವಾದ ಎರಡು ಅವರ ಹಿಂದೆ ಗಿರಕಿ ಹೊಡೆಯುತ್ತಲೆ ಇರುತಿತ್ತು. ಆಸ್ಟೇಲಿಯಾ ಕಂಡ ಯಶಸ್ವಿ ನಾಯಕರಾದ ಮಾರ್ಕ್‌ ಟೇಲರ್, ಸ್ಟೀವ್ ವಾ, ರಿಕಿ ಪಾಂಟಿಂಗ್ ಯಾರೇ ಇರಲಿ. ತಂಡ ಸೋಲಿನ ಅಂಚಿನಲ್ಲಿದ್ದಾಗ, ವಿಕೆಟ್ ಬೇಕಾದಾಗಲೆಲ್ಲ ಚೆಂಡನ್ನು ನೀಡುವುದು ಈ ಸ್ಪಿನ್ ಗಾರುಡಿಯ ಕೈಗೆ ಆಗಿತ್ತು. ನಾಯಕರು ಇಟ್ಟ ನಂಬಿಕೆಯನ್ನು ಯಾವತ್ತೂ ಹುಸಿಗೊಳಿಸಿರಲಿಲ್ಲ. ಹಾಗಂತ ಯಾವ ನಾಯಕನನ್ನು ಈತ ಸುಮ್ಮನೆ ಬಿಟ್ಟಿಲ್ಲ. ತಮ್ಮನ್ನು ತಂಡದಿಂದ ಕೈಬಿಟ್ಟ ಸಿಟ್ಟಿಗೆ ನಾಯಕ ಸ್ಟೀವ್ ವಾ ಅವರನ್ನು ” ದಿ ಶೆಲ್ಫಿಷ್‌ ಕ್ರಿಕೆಟರ್” ಎಂದು ಜರಿದಿದ್ದರು. ರಿಕಿ ಪಾಂಟಿಂಗ್ ತನ್ನ ಆಟೋಬಯಾಗ್ರಫಿಯಲ್ಲಿ ಗೆಳೆಯ ಮೈಕಲ್ ಕ್ಲಾರ್ಕ್‌ನನ್ನು ಟೀಕಿಸಿದ ಕಾರಣ ಅವರ ವಿರುದ್ಧವೇ ಮೇಲೆ ತಿರುಗಿ ಬಿದ್ದಿದ್ದರು. ಅದೇ ವಾರ್ನ್‌ ಆತ್ಮೀಯ ಗೆಳೆಯ ಮೈಕಲ್ ಕ್ಲಾರ್ಕ್‌ ಮದುವೆ ಸಂಭ್ರಮಕ್ಕೆ ಸಾಕ್ಷಿಯಾಗಲು 17,000 ಕಿ. ಮಿ ಪ್ರಯಾಣ ಬೆಳೆಸಿದ್ದರಂತೆ.

ಆರೋಪಗಳಿವೆ

2000ರಲ್ಲಿ ಬ್ರಿಟಿಷ್ ನರ್ಸ್‌ ಡೋನ್ನಾ ರೈಟ್‌ಗೆ ನಿರಂತರ ಅಶ್ಲೀಲ ಸಂದೇಶ ಕಳುಹಿಸಿದ ಕಾರಣ ಉಪನಾಯಕ ಪಟ್ಟದಿಂದ ಕೆಳಗಿಳಿಯಬೇಕಾಗಿ ಬಂದಿತ್ತು. 1994ರಲ್ಲಿ ಶ್ರೀಲಂಕಾ ಪ್ರವಾಸದಲ್ಲಿ ಕ್ರಿಕೆಟ್ ಪಿಚ್‌ನ ಸ್ಥಿತಿಗತಿ, ಹವಾಮಾನದ ಕುರಿತು ಬುಕ್ಕಿಗಳಿಗೆ ಮಾಹಿತಿ ನೀಡಿದ ಆರೋಪ ವಾರ್ನ್‌ ಹಾಗೂ ಮಾರ್ಕ್‌ ವಾ ಮೇಲಿತ್ತು. ನಂತರ ಅವರಿಗೆ ದಂಡನ್ನೂ ವಿಧಿಸಲಾಯಿತು .

ಒಮ್ಮೆ ಶ್ರೀಲಂಕಾದ ನಾಯಕ ರಣತುಂಗ ವಿರುದ್ಧ ಮಾದ್ಯಮದಲ್ಲಿ ತುಸು ಜೋರಾಗಿಯೆ ಹರಿಹಾಯ್ದ ಕಾರಣ ಐಸಿಸಿಯಿಂದ ದಂಡನೆಗೆ ಒಳಗಾಗಿದ್ದರು. 2003ರ ವಿಶ್ವ ಕಪ್ ಪಂದ್ಯಾವಳಿ ಮುನ್ನ ಡ್ರಗ್‌ ಸೇವನೆ ಆರೋಪದ ಮೇಲೆ ಆಸ್ಟ್ರೇಲಿಯಾ ತಂಡದಿಂದ ನಿಷೇಧಕ್ಕೆ ಒಳಗಾಗಿದ್ದರು.

ಕ್ರಿಕೆಟ್, ಸಿಗರೇಟ್, ಬಿಯರ್ ಇವರ ಜೀವನದ ಪ್ರಿಯ ವಸ್ತುಗಳಾಗಿದ್ದವು. ತುಸು ಹೆಚ್ಚೆ ಎನ್ನುವಷ್ಟು ಕುಡಿತದ ಅಭ್ಯಾಸವಿತ್ತು, ತನ್ನ ಖಾಸಾ ಗೆಳೆಯರಿಂದ ‘ಬಿಗ್ ಬೂಜರ್’ ಎಂದು ಕರೆಯಲ್ಪಟ್ಚಿದ್ದರು. ಚೈನ್ ಸ್ಮೋಕರ್‌ ಆಗಿದ್ದ ವಾರ್ನ್‌ ” I smoked, I drank, I bowled, no regrets ” ಎಂದು ಬಹಿರಂಗವಾಗಿಯೆ ಹೇಳಿಕೆ ನೀಡಿದ್ದರು.

ಹತ್ತು ಹಲವು ರಾದ್ದಾಂತಗಳ ಹೊರತಾಗಿಯೂ ನಮಗೆಲ್ಲ ವಾರ್ನ್‌ ಅಂದರೆ ತುಂಬಾ ಇಷ್ಟ, ಕಾರಣ ಅವರಲ್ಲೊಬ್ಬ ಅದ್ಬುತ ಕ್ರಿಕೆಟಿಗನಿದ್ದ. ಕ್ರಿಕೆಟ್ ಜಗತ್ತು ಕಂಡ ವಿಶ್ವ ಶ್ರೇಷ್ಠ ಸ್ಪಿನ್ನರ್ ಆಗಿದ್ದ. ವಾರ್ನ್‌ ಇದ್ದರೆ ಆಸ್ಟ್ರೇಲಿಯಾ ವಿರುದ್ದದ ಪಂದ್ಯದ ಖದರ್ ಬೇರೆಯೆ ಇರುತಿತ್ತು. ಅವರಿದ್ದರೆ ಮೈದಾನದಲ್ಲಿ ಜಿದ್ದು, ಕಿಚ್ಚು, ಹೋರಾಟ, ಗುದಮುರಿಗೆ, ನಗೆ ಚಟಾಕಿ ಎಲ್ಲವೂ ಇರುತಿತ್ತು. 2013 ರಲ್ಲಿ ಬಿಗ್‌ಬ್ಯಾಷ್‌ ಪಂದ್ಯವೊಂದರಲ್ಲಿ ಕೋಪಗೊಂಡ ವಾರ್ನ್‌ ವೆಸ್ಟ್‌ ಇಂಡೀಸ್ ಆಟಗಾರ ಸ್ಯಾಮುಯೆಲ್‌ರ ಶರ್ಟ್‌ ಎಳೆದು ಕಾದಾಟಕ್ಕೆ ನಿಂತಿದ್ದರು. ಭಾರತದ ವಿರುದ್ಧದ ಪಂದ್ಯವಾದರೆ ಸಚಿನ್ ಮತ್ತು ವಾರ್ನ್‌ ನಡುವಿನ ಕಾದಾಟ ಎಂದೆ ಪರಿಗಣಿಸಲಾಗುತಿತ್ತು. ವೆಸ್ಟ್ ಇಂಡೀಸ್ ವಿರುದ್ದವಾದರೆ ಬ್ರಿಯಾನ್ ಲಾರಾ ಮತ್ತು ವಾರ್ನ್‌ ನಡುವಿನ ಫೈಟ್‌ ಎಂದೆ ಬಿಂಬಿತವಾಗುತಿತ್ತು. ವಾರ್ನ್‌ ಕ್ರಿಕೆಟ್ ಜಗತ್ತಿನಲ್ಲಿ ಅಷ್ಟೊಂದು ಪ್ರಭಾವ ಬೀರಿದ್ದರು.

ಐಪಿಎಲ್‌ ವೀರ

ಚೊಚ್ಚಲ ಐಪಿಎಲ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ ತಂಡವನ್ನು ಮುನ್ನಡೆಸಿ ಕಿರೀಟ ತೊಡಿಸಿದ್ದರು ವಾರ್ನ್‌. ಇಂಗ್ಲೆಂಡ್ ಕೌಂಟಿಯಲ್ಲಿ ಹ್ಯಾಂಪ್‌ಶೈರ್‌ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದರು. ಬಿಗ್‌ಬ್ಯಾಷ್ ಲೀಗ್‌ನಲ್ಲಿ ಆಡಿದ್ದರು.
ಎದುರಾಳಿ ಬ್ಯಾಟರ್‌ನ ದೌರ್ಬಲ್ಯದ ಕುರಿತು ಚೆನ್ನಾಗಿ ತಂತ್ರ ರೂಪಿಸುತಿದ್ದ. ಆಸ್ಟೇಲಿಯಾದ ಉಳಿದ ಆಟಗಾರರಿಗಿಂತ ತೀರಾ ವಿಭಿನ್ನವಾಗಿ ಎದುರಾಳಿ ಬ್ಯಾಟ್ಸಮನ್‌ಗಳನ್ನು ನಾಟಕೀಯವಾಗಿ ಕೆಣಕುತ್ತಿದ್ದರು. 1999ರಲ್ಲಿ ಅಡಿಲೇಡ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಸೌರವ್ ಗಂಗೂಲಿ ಮತ್ತು ಸಚಿನ್ ತಲಾ ಅರ್ಧ ಶತಕ ಬಾರಿಸಿ ರಕ್ಷಣಾತ್ಮಕವಾಗಿ ಆಡುತ್ತಿದ್ದರು. ತಕ್ಷಣ ಗಂಗೂಲಿ ಬಳಿ ತೆರಳಿದ ವಾರ್ನ್‌ ಇನ್ನೊಂದು ತುದಿಯಲ್ಲಿದ್ದ ಸಚಿನ್‌ ತೆಂಡೂಲ್ಕರ್ ಅವರನ್ನು ತೋರಿಸಿ “ಪ್ರೇಕ್ಷಕರು ಮೈದಾನಕ್ಕೆ ಬಂದಿರುವುದು ನಿಮ್ಮ ಭರ್ಜರಿ ಹೊಡೆತಗಳನ್ನು ನೋಡುವುದಕ್ಕೆ,” ಎಂದಿದ್ದರು. ಆಕ್ರಮಣಕಾರಿ ಆಟಗಾರ ಸೌರವ್‌ ಗಂಗೂಳಿ ವಿಚಲಿತರಾಗಿ, ನಂತರದ ಎಸೆತವನ್ನು ಮುನ್ನುಗ್ಗಿ ಹೊಡೆಯಲು ಹೋಗಿ ಸ್ಟಂಪ್ಡ್‌ ಔಟ್‌ ಆಗುತ್ತಾರೆ. ಆ ಮೂಲಕ ” Master of the mind game ” ಎಂದು ಕರೆಯಲ್ಪಟ್ಟಿದ್ದರು. ಬ್ಯಾಟ್ಸಮನ್‌ಗಳ ವಿರುದ್ಧ ಗೂಗ್ಲಿ ಹಾಗೂ ಪ್ಲಿಪ್ಪರ್‌ ಅಸ್ತ್ರ ಬಳಸುತ್ತಿದ್ದರು ವಾರ್ನ್‌.

2011 ರ ವಿಶ್ವ ಕಪ್ ಪಂದ್ಯಾವಳಿಯಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯ ಟೈ ಆಗಲಿದೆ ಎಂದು ಪಂದ್ಯ ಆರಂಭದ ಕೆಲವೇ ಗಂಟೆಗಳ ಮೊದಲು ಟ್ವೀಟ್‌ ಮಾಡಿದ್ದರು. ಪಂದ್ಯ ಕೂಡ ಟೈ ಆಯಿತು. ಆಸ್ಟ್ರೇಲಿಯಾದ ಪ್ರತಿಷ್ಠಿತ ಪೋಕ್ಸ್ ಸ್ಪೋರ್ಟ್ಸ್ ಚಾನೆಲ್ ” Warne is genious or match fixer ” ಎಂದು ಹೆಡ್‌ ಲೈನ್‌ ಹಾಕಿ ವಾರ್ನ್‌ ಅವರ ಕಾಲೆಳೆದಿತ್ತು.

ಜೀವನದ ತಿರುವುಗಳು

ಹಣ, ಯಶಸ್ಸು, ಜನಪ್ರಿಯತೆ ಎಲ್ಲವೂ ಇತ್ತು. ಜೀವನವನ್ನು ಬಲು ಮೋಜಿನಿಂದ ಕಳೆದಿದ್ದರು. ಚೆಂಡಿಗೆ ತಿರುವು ನೀಡುತಿದ್ದ ವಾರ್ನ್‌ಅವರ ವೈಯಕ್ತಿಕ ಜೀವನದಲ್ಲೂ ಹಲವು ತಿರುವುಗಳಿದ್ದವು. 1995ರಲ್ಲಿ ಸಿಮೋನ್ ಕಲಾನ್ ಅವರನ್ನು ಮದುವೆಯಾದ್ದರು. ವಾರ್ನ್‌ ಅವರ ವಿವಾಹೇತರ ಸಂಬಂಧದಿಂದ ನೊಂದ ಕಲಾನ್ ಇಂಗ್ಲೆಂಡ್‌ನಿಂದ 3 ಮಕ್ಕಳೊಂದಿಗೆ ಆಸ್ಟ್ರೇಲಿಯಾಗೆ ವಾಪಸಾಗಿ ಮಾಡಿದ ಮೊದಲ ಕೆಲಸ ವಿಚ್ಛೇಧನಕ್ಕೆ ಅರ್ಜಿ. 2005ರಲ್ಲಿ ಅವರಿಬ್ಬರು ಪರಸ್ಪರ ದೂರವಾದರು. ನಂತರ ಬ್ರಿಟಿಷ್ ನಟಿ ಲಿಜ್ ಹರ್ಲಿ ಜತೆ ಇದ್ದರು. ಪಾಪ್ ಸ್ಟಾರ್ ವ್ಯಾಲೆರಿ ಪಾಕ್ಸ್ ಜತೆ ಸುತ್ತಾಟ ಪ್ರಾರಂಭಿಸಿದ ನಂತರ ಲಿಜ್ ಹರ್ಲಿ ಕೂಡ ದೂರವಾದರು. ನಂತರ ಮಿರರ್ ಯುಕೆ ಗೆ ನೀಡಿದ ಸಂದರ್ಶನದಲ್ಲಿ “ಲಿಜ್ ಹರ್ಲಿಯೊಂದಿಗಿನ ದಿನಗಳು ಜೀವನದ ಬಹಳ ಖುಷಿಯಾದ ದಿನಗಳು” ಎಂದು ವಾರ್ನ್‌ ಹೇಳಿಕೊಂಡಿದ್ದರು. ನಂತರ ಮಾಡೆಲ್ ಎಮಿಲಿ ಸ್ಕಾಟ್, ನಟಿ ಕೊಲಿ ಕೊನಾರ್ಡ್‌ ಜತೆ ಸಹ ವಾರ್ನ್‌ ಹೆಸರು ತಳುಕು ಹಾಕಿಕೊಂಡಿತ್ತು. 2017ರಲ್ಲಿ ಲಂಡನ್‌ನ ಮೇಪೆರ್ ನೈಟ್ ಕ್ಲಬ್ ನಲ್ಲಿ ವ್ಯಾಲೆರಿ ಪಾಕ್ಸ್ ಮೇಲೆ ಹಲ್ಲೆ ನಡೆಸಿಯೂ ಸುದ್ದಿಯಾಗಿದ್ದರು.

10 ವರ್ಷಗಳ ಕಾಲ ಸಿಮೊನ್ ಕಲಾನ್ ಜತೆ ಸಂಸಾರ ನಡೆಸಿದ ವಾರ್ನ್‌ಗೆ ಬ್ರೂಕ್, ಸಮರ್ ಮತ್ತು ಜಾಕ್ಸನ್ ಸೇರಿ ಮೂವರು ಮಕ್ಕಳಿದ್ದಾರೆ. ಕಲಾನ್‌ರಿಂದ ದೂರವಾಗಿದ್ದರೂ ಭುಜದೆತ್ತರ ಬೆಳೆದು ನಿಂತಿದ್ದ ಮೂವರು ಮಕ್ಕಳಿಗೆ ಕೊನೆಯವರೆಗೂ ವಾರ್ನ್‌ ಮುದ್ದಿನ ಅಪ್ಪನಾಗಿದ್ದರು. ಸಂದರ್ಶನವೊಂದರಲ್ಲಿ ವಾರ್ನ್‌ “ನನ್ನಿಂದ ಮಕ್ಕಳಿಗೆ ಮುಜುಗರವಾಗಿದೆ. ನನ್ನಿಂದ ಅವರು ತಲೆ ತಗ್ಗಿಸುವಂತಾಗಿದೆ ಆದರೂ ಅವರು ನನ್ನನ್ನು ಅರ್ಥೈಸಿಕೊಂಡು ನಾನು ಹೇಗಿರುವನೋ, ಹಾಗೆ ಸ್ವೀಕರಿಸಿದ್ದಾರೆ ಎಂದು ಹೇಳುತ್ತಾ, ” Being a single parent is very difficult, bloody hard, but fun too” ಅಂತ ಹೇಳುವುದರನ್ನು ಮರೆತಿರಲಿಲ್ಲ. ಅದಕ್ಕಾಗಿಯೆ ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ” Warne as one of the nations greatest cricketer and charecters ಎಂದು ವಾರ್ನ್‌ ಅವರನ್ನು ಬಣ್ಣಿಸಿದ್ದರು.

ನಿವೃತ್ತಿ ನಂತರವೂ ಸುದ್ದಿ

2007ರಲ್ಲಿ ನಿವ್ರತ್ತಿ ನಂತರ ಸಹ ರಾದ್ಧಾಂತಗಳಿಂದ ಸದಾ ಸುದ್ದಿಯಲ್ಲಿರುತ್ತಿದ್ದರು. ಇಂಗ್ಲೆಂಡ್‌ನಲ್ಲಿ ಅಪಾರ್ಟ್‌ಮೆಂಟ್‌ನ ಕಿಟಕಿ ಬಾಗಿಲು ತೆರೆದಿಟ್ಟು ಪಾರ್ಟಿ ನಡೆಸಿ ಅಕ್ಕಪಕ್ಕದವರಿಗೆ ಇರಸುಮುರಿಸು ಉಂಟು ಮಾಡಿದ್ದರು. ಅವರು ಎಲ್ಲೇ ಹೋದರೂ ಪತ್ರಕರ್ತರು ಸುತ್ತುವರಿಯುತ್ತಿದ್ದರು. ವಾರ್ನ್‌ ಫೌಂಡೇಷನ್‌ ಮೂಲಕ ನಿರ್ಗತಿಕ ಮಕ್ಕಳಿಗೆ, ಬಡವರಿಗೆ ನೆರವಿನ ಹಸ್ತವನ್ನೂ ಚಾಚಿದ್ದರು.

ವಿಕ್ಷಕ ವಿವರ ತೊಡಗಿಕೊಂಡಿದ್ದ ವಾರ್ನ್‌ ಇತ್ತೀಚಿನ ವರ್ಷಗಳಲ್ಲಿ ಒಂಟಿಯಾಗಿದ್ದ. ಜೀವನದ ಕುರಿತು ಸದಾ ಉತ್ಸುಕತೆ ಹೊಂದಿದ್ದ ವಾರ್ನ್‌ ಅವರಲ್ಲಿ ತುಂಟತನ ಕೊನೇ ತನಕವೂ ಇತ್ತು.

ವಾರ್ನ್‌ ಹಲವರಿಗೆ ರೋಲ್ ಮಾಡೆಲ್ ಆಗಿದ್ದರು. ಕೋಟ್ಯಂತರ ಮಂದಿ ವಾರ್ನ್‌ ಅವರಂತೆ ಬೌಲಿಂಗ್ ಮಾಡಲು ಯತ್ನಿಸಿ ಸೋತಿದ್ದಾರೆ. ವಾರ್ನ್‌ ಸ್ಪಿನ್ ಬೌಲಿಂಗ್‌ಗೆ ಹೊಸ ಭಾಷ್ಯ ಬರೆದವರು. ಇಂದಿಗೂ, ಎಂದೆಂದಿಗೂ ಅವರೊಬ್ಬ ಕ್ರಿಕೆಟ್‌ನ ಮಹಾನ್ ದಂತಕತೆ ಎಂಬುದರಲ್ಲಿ ಎರಡು ಮಾತಿಲ್ಲ. ವಾರ್ನ್‌ ಇಂದಿಗೆ ಬದುಕಿರುತ್ತಿದ್ದರೆ ಇಂದಿಗೆ 53 ವರ್ಷ ತುಂಬಿರುತ್ತಿತ್ತು.

ಇದನ್ನೂ ಓದಿ | ರಾಜ ಮಾರ್ಗ ಅಂಕಣ: ಶೇನ್‌ ವಾರ್ನ್‌ ಅಂದರೆ ಹೆದರುತ್ತಿದ್ದ ಸಚಿನ್‌ ತಿರುಗಿಬಿದ್ದಿದ್ದು ಹೇಗೆ?

Exit mobile version