ರಾಜ್ಕೋಟ್: ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ(IND vs AUS 3rd ODI) ಎರಡೂ ಪಂದ್ಯಗಳನ್ನು ಏಕಪಕ್ಷೀಯವಾಗಿ ಗೆದ್ದು ಸರಣಿ ವಶಪಡಿಸಿಕೊಂಡಿರುವ ಭಾರತವೀಗ ಪ್ರವಾಸಿ ಆಸ್ಟ್ರೇಲಿಯಾವನ್ನು ಕ್ಲೀನ್ ಸ್ವೀಪ್ ಆಗಿ ಮುಗಿಸಲು ಹೊರಟಿದೆ. ಬುಧವಾರದ ಅಂತಿಮ ಪಂದ್ಯವನ್ನೂ ಗೆದ್ದರೆ ಟೀಮ್ ಇಂಡಿಯಾದ ವೈಟ್ವಾಶ್ ಕಾರ್ಯತಂತ್ರ ಅತ್ಯಂತ ಯಶಸ್ವಿಯಾಗಲಿದೆ.
ಪ್ರತಿಷ್ಠೆ ಉಳಿಸಿಕೊಂಡೀತೇ ಆಸೀಸ್?
ಪೂರ್ಣ ಪ್ರಮಾಣದ ಆಸ್ಟ್ರೇಲಿಯಾ ತಂಡವನ್ನು ಕಂಡಾಗ ಭಾರತಕ್ಕೆ ಕಠಿಣ ಸವಾಲು ಎದುರಾಗಲಿದೆ ಎಂದೇ ಭಾವಿಸಲಾಗಿತ್ತು. ಏಕೆಂದರೆ ಮೊದಲೆರಡು ಪಂದ್ಯಗಳಿಗೆ ಅನುಭವಿಗಳಾದ ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಸೇರಿ ಇನ್ನು ಕೆಲ ಆಟಗಾರು ವಿಶ್ರಾಂತಿ ಪಡೆದಿದ್ದರು. ಆದರೆ ಕನ್ನಡಿಗ ರಾಹುಲ್ ಸಾರಥ್ಯ ತಂಡ ಶ್ರೇಷ್ಠ ಪ್ರದರ್ಶನ ತೋರುವ ಮೂಲಕ ಆಸೀಸ್ಗೆ ನೀರು ಕುಡಿಸಿತ್ತು. ಆಸೀಸ್ ಅತ್ಯಂತ ನೀರಸ ಪ್ರದರ್ಶನ ತೋರಿತ್ತು. ಅಂತಿಮ ಪಂದ್ಯದಲ್ಲಾದರೂ ಆಸ್ಟ್ರೇಲಿಯಾ ತಿರುಗಿ ಬಿದ್ದೀತೇ? ಪ್ರತಿಷ್ಠೆ ಉಳಿಸಿಕೊಂಡೀತೇ? ಎಂಬುದು ಈ ಪಂದ್ಯದ ಕೌತುಕ.
ಗಿಲ್-ಶಾರ್ದೂಲ್ಗೆ ರೆಸ್ಟ್
ಮೊದಲೆರಡು ಪಂದ್ಯಗಳಿಗೆ ವಿಶ್ರಾಂತಿ ಪಡೆದಿದ್ದ ಖಾಯಂ ನಾಯಕ ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಕುಲ್ದೀಪ್ ಯಾದವ್ ಮತ್ತು ಜಸ್ಪ್ರೀತ್ ಬುಮ್ರಾ ಅವರು ಈ ಪಂದ್ಯದಲ್ಲಿ ಆಡಲು ಸಜ್ಜಾಗಿದ್ದಾರೆ. ವಿಶ್ವಕಪ್ ನಿಟ್ಟಿನಲ್ಲಿ ಪ್ರಚಂಡ ಫಾರ್ಮ್ನಲ್ಲಿರುವ ಯುವ ಆಟಗಾರ ಶುಭಮನ್ ಗಿಲ್ ಮತ್ತು ಶಾರ್ದೂಲ್ ಠಾಕೂರ್ಗೆ ಈ ಪಂದ್ಯದಿಂದ ವಿಶ್ರಾಂತಿ ನೀಡಲಾಗಿದೆ.
ಶುಭಮನ್ ಗಿಲ್ ಅವರು ಈ ಪಂದ್ಯದಿಂದ ವಿಶ್ರಾಂತಿ ಪಡೆದ ಕಾರಣ ರೋಹಿತ್ ಶರ್ಮ ಜತೆ ಇಶಾನ್ ಕಿಶನ್ ಆರಂಭಿಜನಾಗಿ ಕಣಕ್ಕಿಳಿಯಬಹುದು. ಕಳೆದ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಆಡಿದ್ದ ಅಯ್ಯರ್ ಈ ಸ್ಥಾನವನ್ನು ಕೊಹ್ಲಿಗೆ ಬಿಟ್ಟುಕೊಟ್ಟು ನಾಲ್ಕನೇ ಕ್ರಮಾಂಕದಲ್ಲಿ ಇಳಿಯಲಿದ್ದಾರೆ. ರಾಹುಲ್ 5ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಬಹುದು.
ಜಡೇಜಾಗೂ ವಿಶ್ರಾಂತಿ ಸಾಧ್ಯತೆ
ಭಾರತ ಇದುವರೆಗೆ ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ 7 ಸರಣಿಯನ್ನು ಗೆದ್ದ ಸಾಧನೆ ಮಾಡಿ(ಈ ಸರಣಿಯೂ ಒಳಗೊಂಡು) ಆದರೆ ಒಮ್ಮೆಯೂ ಕ್ಲೀನ್ ಸ್ವೀಪ್ ಸಾಧನೆ ಮಾಡಿಲ್ಲ. ಈ ಬಾರಿ ಉತ್ತಮ ಅವಕಾಶ ಭಾರತಕ್ಕಿದೆ. ಇದಕ್ಕೆ ಅಂತಿಮ ಪಂದ್ಯವನ್ನೂ ಗೆಲ್ಲಬೇಕಿದೆ. ಏಷ್ಯಾಕಪ್ ಫೈನಲ್ನಲ್ಲಿ ಘಾತಕ ಬೌಲಿಂಗ್ ದಾಳಿ ನಡೆಸಿ ಲಂಕಾ ದಹನ ಮಾಡಿದ ಮೊಹಮ್ಮದ್ ಸಿರಾಜ್ ಈ ಪಂದ್ಯದಲ್ಲಿ ಕಣಕಿಳಿಯುವ ಸಾಧ್ಯತೆ ಇದೆ. ಮೊದಲೆರಡು ಪಂದ್ಯಕ್ಕೆ ಅವರು ವಿಶ್ರಾಂತಿ ಪಡೆದಿದ್ದರು. ಸತತ ಪಂದ್ಯ ಆಡುತ್ತಿರುವ ರವೀಂದ್ರ ಜಡೇಜಾ ಅವರಿಗೆ ವಿಶ್ರಾಂತಿ ನೀಡುವ ಸಲುವಾಗಿ ಆಡುವ ಬಳಗದಿಂದ ಹೊರಗಿಡುವ ಸಾಧ್ಯತೆಯೂ ಇದೆ. ಅವರ ಸ್ಥಾನದಲ್ಲಿ ಕುಲ್ ದೀಪ್ ಆಡಬಹುದು. ಅಕ್ಷರ್ ಪಟೇಲ್ ಗಾಯಗೊಂಡ ಕಾರಣ ಅಶ್ವಿನ್ಗೆ ಈ ಪಂದ್ಯದಲ್ಲಿಯೂ ಅವಕಾಶ ನೀಡಿ ವಿಶ್ವಕಪ್ಗೆ ಬದಲಿ ಆಟಗಾರನಾಗಿ ಆಯ್ಕೆ ಮಾಡುವ ಸಾಧ್ಯತೆಯೂ ಇದೆ.
ಇದನ್ನೂ ಓದಿ IND vs AUS 3rd ODI: ರಾಜ್ಕೋಟ್ನ ಪಿಚ್ ರಿಪೋರ್ಟ್ ದಾಖಲೆಯೇ ವಿಚಿತ್ರ
ತಂಡಗಳು
ಭಾರತ: ರೋಹಿತ್ ಶರ್ಮ, ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಇಶಾನ್ ಕಿಶನ್, ಆರ್.ಅಶ್ವಿನ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.
ಆಸ್ಟ್ರೇಲಿಯಾ: ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್, ಮಾರ್ನಸ್ ಲಬುಶೇನ್, ಕ್ಯಾಮೆರಾನ್ ಗ್ರೀನ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಮಾರ್ಕಸ್ ಸ್ಟೊಯಿನಿಸ್, ಮ್ಯಾಥ್ಯೂ ಶಾರ್ಟ್, ಪ್ಯಾಟ್ ಕಮ್ಮಿನ್ಸ್ (ನಾಯಕ), ಸೀನ್ ಅಬಾಟ್, ಆಡಮ್ ಝಂಪಾ