Site icon Vistara News

ವಿಸ್ತಾರ ಸಂಪಾದಕೀಯ: ಮಾನವ ಹಕ್ಕುಗಳ ಪ್ರಶ್ನೆ; ಪಾಕ್‌ ಮೊದಲು ತನ್ನ ಹುಳುಕು ಸರಿಪಡಿಸಿಕೊಳ್ಳಲಿ

pak human right

ವಿಶ್ವಸಂಸ್ಥೆ ಸಾಮಾನ್ಯ ಸಭೆಯ (UNGA) 78ನೇ ಅಧಿವೇಶನದಲ್ಲಿ ಜಮ್ಮು-ಕಾಶ್ಮೀರದ ವಿಚಾರ ಪ್ರಸ್ತಾಪಿಸಿದ ಪಾಕಿಸ್ತಾನ ಹಂಗಾಮಿ ಪ್ರಧಾನಿ ಅನ್ವರ್‌ ಉಲ್‌ ಹಕ್‌ ಕಾಕರ್‌ ಅವರಿಗೆ ಭಾರತ ತಿರುಗೇಟು ನೀಡಿದೆ. ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ವಿಶ್ವಸಂಸ್ಥೆಯ ಭಾರತದ (India At UNGA) ಕಾರ್ಯದರ್ಶಿ ಪೆತಲ್‌ ಗೆಹ್ಲೋಟ್‌, “ಪಾಕಿಸ್ತಾನವು ಭಾರತದ ಅವಿಭಾಜ್ಯ ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು-ಕಾಶ್ಮೀರ ಹಾಗೂ ಲಡಾಕ್‌ ವಿಷಯದಲ್ಲಿ ಮಧ್ಯಪ್ರವೇಶಿಸುವ ಅಗತ್ಯವಿಲ್ಲ” ಎಂದು ಚಾಟಿ ಬೀಸಿದ್ದಾರೆ. “ಭಾರತದ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಚಾಳಿಯನ್ನು ಪಾಕಿಸ್ತಾನ ಬಿಡಬೇಕು. ಪಾಕಿಸ್ತಾನವು ತನ್ನ ದೇಶದಲ್ಲಿ ಆಗುತ್ತಿರುವ ಮಾನವ ಹಕ್ಕುಗಳ ದಮನದ ವಿಷಯವನ್ನು ಜಗತ್ತಿನ ಕಣ್ಣಿನಿಂದ ತಪ್ಪಿಸಿಕೊಳ್ಳಲು ಯಾವಾಗಲೂ ವಿಶ್ವಸಂಸ್ಥೆಯಲ್ಲಿ ಜಮ್ಮು-ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸುತ್ತದೆ. ಆದರೆ, ಪಾಕಿಸ್ತಾನದಲ್ಲಿಯೇ ಸಾಕಷ್ಟು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಹಾಗಾಗಿ, ಅದು ಮೊದಲು ತನ್ನ ದೇಶದ ಹುಳುಕನ್ನು ಸರಿಪಡಿಸಿಕೊಳ್ಳಬೇಕು” ಎಂದು ಪೆತಲ್‌ ಗೆಹ್ಲೋಟ್‌ ಹೇಳಿದ್ದಾರೆ.

ಗೆಹ್ಲೋಟ್‌ ಸರಿಯಾಗಿಯೇ ಹೇಳಿದ್ದಾರೆ. ಪಾಕಿಸ್ತಾನದ ಹುಳುಕುಗಳು ಲೋಕದ ಕಣ್ಣಿನ ಮುಂದೆ ಸಾಕಷ್ಟು ಸ್ಪಷ್ಟವಾಗಿಯೇ ಇವೆ. ಅದು ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಜಿಹಾದಿ ಉಗ್ರರಿಗಾಗಿ ಶಿಬಿರಗಳನ್ನು ನಡೆಸುತ್ತಿದೆ. ಇದನ್ನು ಅಲ್ಲಿನ ಗುಪ್ತಚರ ಸಂಸ್ಥೆ ಐಎಸ್‌ಐ ನಿರ್ವಹಿಸುತ್ತದೆ. ಅಲ್ಲಿಂದ ಕಾಶ್ಮೀರಕ್ಕೆ ಅಕ್ರಮವಾಗಿ ನುಸುಳುವ ಈ ಉಗ್ರರು ಅಲ್ಲಿ ನರಮೇಧ ನಡೆಸುತ್ತಾರೆ. ಇತ್ತೀಚೆಗೆ ತಾನೆ ನಡೆದ ಒಂದು ವಾರ ದೀರ್ಘಾವಧಿಯ ಎನ್‌ಕೌಂಟರ್‌ ಹಾಗೂ ಅಲ್ಲಿ ಹುತಾತ್ಮರಾದ ಭಾರತೀಯ ಯೋಧರನ್ನು ನೆನಪಿಸಿಕೊಳ್ಳಬಹುದು. ಪಿಒಕೆಯಲ್ಲಿಯೇ ತಯಾರಾದ ಉಗ್ರರೇ ತಾಲಿಬಾನ್‌ನಲ್ಲಿಯೂ ಇದ್ದು, ಅಲ್ಲಿ ಮಾನವ ಹಕ್ಕುಗಳ ದಮನಕ್ಕೆ ಕಾರಣರಾಗಿದ್ದಾರೆ. ಇನ್ನು ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಅಷ್ಟಿಷ್ಟಲ್ಲ. ಮುಸ್ಲಿಮರು ಹೊರತುಪಡಿಸಿದ ಇನ್ಯಾವ ಧರ್ಮದವರೂ ಅಲ್ಲಿ ಬದುಕಲಾಗದಂಥ ಸ್ಥಿತಿಯನ್ನು ತಂದಿಡಲಾಗಿದೆ. ಹಿಂದೂ, ಕ್ರೈಸ್ತ, ಸಿಖ್‌ ಧರ್ಮದ ಮಹಿಳೆಯರ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ. ಮಾನವ ಹಕ್ಕುಗಳು ಜಗತ್ತಿನಲ್ಲೇ ಕೆಟ್ಟದಾಗಿದ್ದರೆ, ಅದು ಪಾಕಿಸ್ತಾನದಲ್ಲಿ ಮಾತ್ರ. ಪ್ರತಿ ವರ್ಷ ಪಾಕಿಸ್ತಾನದಲ್ಲಿ ಒಂದು ಸಾವಿರ ಅಲ್ಪಸಂಖ್ಯಾತ ಮಹಿಳೆಯರನ್ನು ಅಪಹರಿಸಿ, ಅವರನ್ನು ಬಲವಂತವಾಗಿ ಮತಾಂತರ ಮಾಡಲಾಗುತ್ತಿದೆ. ಇಂತಹ ಅನಿಷ್ಟಗಳನ್ನು ಪಾಕಿಸ್ತಾನ ನಿರ್ಮೂಲನೆ ಮಾಡಬೇಕು ಎಂದು ಗೆಹ್ಲೋಟ್‌ ಆಗ್ರಹಿಸಿರುವುದು ಸರಿಯಾಗಿದೆ.

2022ರಲ್ಲಿ ವಿಶ್ವಾದ್ಯಂತ ಭಯೋತ್ಪಾದನೆ ಸಂಬಂಧಿತ ಸಾವುಗಳಲ್ಲಿ ಪಾಕಿಸ್ತಾನವು ಎರಡನೇ ಅತಿದೊಡ್ಡ ಹೆಚ್ಚಳವನ್ನು ದಾಖಲಿಸಿದೆ. 2021ರಲ್ಲಿ 292 ಇದ್ದ ಸಾವಿನ ಸಂಖ್ಯೆ ಕಳೆದ ವರ್ಷದ ಶೇ.120 ಏರಿಕೆ ದಾಖಲಿಸಿದ್ದು, ಒಟ್ಟು 643 ಸಾವು ವರದಿಯಾಗಿದೆ. ಇದು ವರ್ಷದಿಂದ ವರ್ಷಕ್ಕೆ ಅತಿದೊಡ್ಡ ಹೆಚ್ಚಳವನ್ನು ಕಾಣುತ್ತಿದೆ. ಅದರಲ್ಲೂ ಭಯೋತ್ಪಾದನೆಯಿಂದಾಗಿ ಸಾವನ್ನಪ್ಪುತ್ತಿರುವವರಲ್ಲಿ ಶೇ.55 ಮಂದಿ ಸೇನೆಯ ಸಿಬ್ಬಂದಿ. ಭಯೋತ್ಪಾದನೆ ಸಂಬಂಧಿಸಿ ಜನರು ಸಾವನ್ನಪ್ಪುತ್ತಿರುವ ಪಟ್ಟಿಯಲ್ಲಿ ಪಾಕಿಸ್ತಾನ ನಾಲ್ಕು ಸ್ಥಾನ ಮೇಲಕ್ಕೆ ಹೋಗಿದ್ದು ಸದ್ಯ ಆರನೇ ಸ್ಥಾನದಲ್ಲಿದೆ. ಇದೆಲ್ಲವೂ ಆಸ್ಟ್ರೇಲಿಯಾ ಮೂಲದ ಇನ್‌ಸ್ಟಿಟ್ಯೂಟ್ ಫಾರ್ ಎಕನಾಮಿಕ್ಸ್ ಅಂಡ್ ಪೀಸ್ ಬಿಡುಗಡೆ ಮಾಡಿರುವ ವಾರ್ಷಿಕ ಜಾಗತಿಕ ಭಯೋತ್ಪಾದನಾ ಸೂಚ್ಯಂಕ(ಜಿಟಿಐ) ವರದಿಯಲ್ಲಿದೆ. ಪಾಕಿಸ್ತಾನವು ಭಯೋತ್ಪಾದನೆಯ ರಾಜಧಾನಿ ಎನ್ನುವುದು ಸಾಬೀತಾದ ಸಂಗತಿ. ಮತಾಂಧರನ್ನು, ಪ್ರತ್ಯೇಕತಾವಾದಿಗಳನ್ನು ಸೃಷ್ಟಿಸಿ ಅವರಿಗೆ ಆಯುಧಗಳನ್ನೂ ಪೂರೈಸಿ, ಪಂಜಾಬ್‌ನಲ್ಲೂ ಖಲಿಸ್ತಾನ್‌ವಾದಿಗಳಿಗೆ ತೆರೆಮರೆಯ ಬೆಂಬಲ ನೀಡಿ ಅದು ಸೃಷ್ಟಿಸಿದ ಅನಾಹುತ, ಮಾನವ ಹಕ್ಕು ಉಲ್ಲಂಘನೆ ಅಷ್ಟಿಷ್ಟಲ್ಲ. ಇಂಥ ದೇಶಕ್ಕೆ ಭಾರತಕ್ಕೆ ಉಪದೇಶ ಮಾಡುವ ನೈತಿಕ ನೆಲೆಯಿಲ್ಲ.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಏಷ್ಯನ್‌ ಗೇಮ್ಸ್‌ನಲ್ಲಿ ಅರುಣಾಚಲ ತಗಾದೆ, ಚೀನಾದ ಅಧಿಕ ಪ್ರಸಂಗ

ಕಾಶ್ಮೀರದ ಬಗ್ಗೆ ಪಾಕ್‌ ಪ್ರಧಾನಿ ಆಡಿರುವ ಮಾತುಗಳಲ್ಲಿ ಹುರುಳಿಲ್ಲ. ಜಮ್ಮು- ಕಾಶ್ಮೀರದಲ್ಲಿ ಆರ್ಟಿಕಲ್‌ 370 ರದ್ದಾಗಿ ಎರಡು ವರ್ಷಗಳಾದವು. ಈ ಎರಡು ವರ್ಷಗಳಲ್ಲಿ ಅಲ್ಲಿನ ಜನಜೀವನ ಸುಧಾರಿಸಿದೆ. ಪ್ರವಾಸೋದ್ಯಮ ಚಿಗುರಿದೆ. ದೇಶೀಯ ಹಾಗೂ ವಿದೇಶೀಯ ಹೊಸ ಹೂಡಿಕೆಗಳು ಬರುತ್ತಿವೆ. ಭಾರತೀಯರು ಇಲ್ಲಿ ಆಸ್ತಿ ಹೊಂದುವಂತಾಗಿದೆ. ಇದು ಸಹಜವಾಗಿಯೇ ಇಲ್ಲಿ ಪ್ರತ್ಯೇಕತಾವಾದವನ್ನು ಬಿತ್ತಲು ದಶಕಗಳಿಂದ ಪ್ರಯತ್ನಿಸುತ್ತಿದ್ದ ಪಾಕಿಸ್ತಾನಕ್ಕೆ ಆದ ಹಿನ್ನಡೆಯಾಗಿದೆ. ಅದಕ್ಕಾಗಿಯೇ ಆ ದೇಶ ಮೈಪರಚಿಕೊಳ್ಳುತ್ತಿದೆ. ಭಾರತವನ್ನು ದ್ವೇಷಿಸುತ್ತ ಪಾಕ್‌ ಹುಟ್ಟುಹಾಕಿದ ಮತಾಂಧತೆ ಇಂದು ಅದನ್ನೇ ತಿನ್ನುತ್ತಿದೆ. ಇದಕ್ಕೆ ಬರ್ಬರ ಆರ್ಥಿಕ ದುಃಸ್ಥಿತಿಯೂ ಸೇರಿಕೊಂಡು ಹಸಿವು, ಬಡತನ, ನಿರುದ್ಯೋಗ, ಭಯೋತ್ಪಾದನೆಗಳ ಗೂಡಾಗಿಬಿಟ್ಟಿದೆ ಆ ದೇಶ. ಇನ್ನಾದರೂ ಪಾಕ್ ಆಡಳಿತಗಾರರಿಗೆ, ಸೇನಾಧಿಕಾರಿಗಳಿಗೆ ಬುದ್ಧಿ ಬರಲಿ. ಮಾನವ ಹಕ್ಕುಗಳ ವಿಚಾರದಲ್ಲಿ ಭಾರತವನ್ನು ನೋಡಿ ಪಾಕ್‌ ಪಾಠ ಕಲಿಯಲಿ.

Exit mobile version