ಚೆನ್ನೈ: ಮಹಾಬಲಿಪುರಮ್‌ನಲ್ಲಿ ಆಯೋಜನೆಗೊಂಡಿರುವ ೪೪ನೇ ಚೆಸ್ ಒಲಿಂಪಿಯಾಡ್‌ಗೆ (Chess Olympiad) ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಗುರುವಾರ ಚಾಲನೆ ನೀಡಿದರು. ಚೆನ್ನೈನ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ವಿಶ್ವ ಮಟ್ಟದ ಬೃಹತ್ ಚೆಸ್ ಕೂಟವನ್ನು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು “”ತಮಿಳುನಾಡಿನಲ್ಲಿ ಹಲವಾರು ದೇಗುಲಗಳಿವೆ. ಅವೆಲ್ಲವೂ ಕ್ರೀಡೆಯನ್ನು ಪ್ರತಿನಿಧಿಸುತ್ತವೆ. ಅದೇ ರೀತಿ ತಮಿಳುನಾಡಿನಲ್ಲಿ ಚೆಸ್‌ಗೆ ಸಹಸ್ರಾರು ವರ್ಷಗಳ ಇತಿಹಾಸವಿದೆ. ವಿಭಿನ್ನ ಸಂಸ್ಕೃತಿ ಹಾಗೂ ಪುರಾತನ ಭಾಷೆಯನ್ನು ಹೊಂದಿರುವ ತಮಿಳುನಾಡಿನಲ್ಲಿ ಖ್ಯಾತ ಚೆಸ್‌ಪಟುಗಳು ಇದ್ದಾರೆ,” ಎಂದು ಅವರು ಕೊಂಡಾಡಿದರು.
“ಕ್ರೀಡೆಯಲ್ಲಿ ಸೋಲುವವರು ಎಂಬುದಿಲ್ಲ. ಈಗ ಗೆದ್ದವರು ಹಾಗೂ ಭವಿಷ್ಯದಲ್ಲಿ ಗೆಲುವು ಸಾಧಿಸುವವರು ಇದ್ದಾರೆ. ನಮ್ಮ ಸಂಸ್ಕೃತಿಯಲ್ಲಿ ಕ್ರೀಡೆಗೆ ದೈವೀ ಭಾವ ಇದೆ,” ಎಂದು ಅವರು ಹೇಳಿದರು.
ತಮಿಳುನಾಡು ರಾಜ್ಯಪಾಲ ಆರ್. ಎನ್ ರವಿ, ಮುಖ್ಯಮಂತ್ರಿ ಎಂ. ಕೆ ಸ್ಟಾಲಿನ್ ಹಾಗೂ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರ ಉಪಸ್ಥಿತಿಯಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಭಾರತದ ಮೊದಲ ಗ್ರ್ಯಾಂಡ್ ಮಾಸ್ಟರ್ ಹಾಗೂ ಭಾರತ ತಂಡದ ಮಾರ್ಗದರ್ಶಕ ವಿಶ್ವನಾಥನ್ ಆನಂದ್ ಅವರು ಚೆಸ್ ಒಲಿಂಪಿಯಾಡ್ ಕ್ರೀಡಾ ಜ್ಯೋತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಸ್ತಾಂತರಿಸಿದರು. ಅದನ್ನವರು ಚೆಸ್‌ಪಟು ಪ್ರಜ್ಞಾನಂದ ಅವರಿಗೆ ಹಸ್ತಾಂತರಿಸಿದರು. ಈ ಚೆಸ್ ಕ್ರೀಡಾಜ್ಯೋತಿ ಕಳೆದ ೪೦ ದಿನಗಳಲ್ಲಿ ಭಾರತದ ೭೦ ನಗರಗಳನ್ನು ದಾಟಿ ಮಹಾಬಲಿಪುರಮ್‌ಗೆ ತಲುಪಿತ್ತು. ರಸ್ತೆಯುದ್ದಕ್ಕೂ ಚೆಸ್ ಒಲಿಂಪಿಯಾಡ್‌ನ ಮಸ್ಕಾಟ್ “ಚೆಸ್ ತಂಬಿ” ಸ್ಥಾಪಿಸಲಾಗಿತ್ತು.
ಧೋತಿ ಉಟ್ಟು ಬಂದ ಪ್ರಧಾನಿ
ಪ್ರಧಾನಿ ನರೇಂದ್ರ ಮೋದಿ ಅವರು ಬಿಳಿ ಬಣ್ಣದ ಧೋತಿ ಹಾಗೂ ಅರ್ಧ ತೋಳಿನ ಬಿಳಿ ಅಂಗಿ ಧರಿಸಿದ್ದರು. ಅಲ್ಲದೆ ಕತ್ತಿನ ಮೇಲೆ ಹಾಕಿಕೊಂಡಿದ್ದ ಶಾಲು ಚೆಸ್ ಬೋರ್ಡ್‌ನ ವಿನ್ಯಾಸ ಹೊಂದಿತ್ತು. ನೆಹರೂ ಒಳಾಂಗಣ ಕ್ರೀಡಾಂಗಣಕ್ಕೆ ಪ್ರಧಾನಿ ಮೋದಿಯವರು ಸಾಗಿದ ಹಾದಿಯಲ್ಲಿ ಬೆಳಕು ಹಾಗೂ ಬಣ್ಣದ ಚಿತ್ತಾರ ಮೂಡಿಸಲಾಗಿತ್ತು. ಅಂತೆಯೇ ಉದ್ಘಾಟನೆಗೆ ಆಗಮಿಸಿದ್ದ ಮೋದಿಯವರಿಗೆ ತಮಿಳುನಾಡು ಸಿಎಂ ಎಂ. ಕೆ ಸ್ಟಾಲಿನ್ ಅವರು ಮಹಾಬಲಿಪುರಮ್‌ನ ದೇಗುಲದ ಸ್ಮರಣಿಕೆಯನ್ನ ನೀಡಿ ಗೌರವಿಸಿದರು.
ರಾಜ್ಯ ದೂರ ಸಂಪರ್ಕ ಸಚಿವ ಎಲ್ ಮುರುಗನ್ ಹಾಗೂ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ಮಾತನಾಡಿ, ಸ್ಪರ್ಧೆಗೆ ಸಜ್ಜಾಗಿರುವ ಚೆಸ್ ಪಟುಗಳಿಗೆ ಶುಭಾಶಯ ಕೋರಿದರು.
ಸಂಗೀತ ಕಾರ್ಯಕ್ರಮ
ಉದ್ಘಾಟನೆಗೆ ಮೊದಲು ಸಂಗೀತ ಕಾರ್ಯಕ್ರಮಗಳು ನಡೆದವು. Rapper ಅರಿವು ಹಾಗೂ ಜನಪದ ಹಾಡುಗಾರ್ತಿ ಕಡಕುಳಿ ಮರಿಯಮ್ಮಾಳ್ ಅವರ ಸಂಗೀತ ಕಾರ್ಯಕ್ರಮಗಳ ನಡೆದವು. ಕಾರ್ಯಕ್ರಮದಲ್ಲಿ ನಟ ಕಮಲ್ ಹಾಸನ್ ಧ್ವನಿಯಲ್ಲಿ ತಮಿಳುನಾಡಿನ ಇತಿಹಾಸವನ್ನು ಬಣ್ಣಿಸಲಾಯಿತು.
ಇದನ್ನೂ ಓದಿ | chess olympiad | ಪಾಕ್ ರಾಜಕೀಯಕ್ಕೆ ಭಾರತದ ತಿರುಗೇಟು