ಲಂಡನ್: ಫಾರ್ಮುಲಾ-1(F-1) ಲೋಕದ ಸಾಮ್ರಾಟನಾಗಿ ಮೆರೆಯುತ್ತಿರುವ, 7 ಬಾರಿಯ ಚಾಂಪಿಯನ್ ಲೂಯಿಸ್ ಹ್ಯಾಮಿಲ್ಟನ್ ಅವರು ಕನ್ನಡ ಮಾತನಾಡಿ ಕನ್ನಡಿಗರ(Lewis Hamilton kannada) ಮನ ಗೆದ್ದಿದ್ದಾರೆ. ಬ್ರಿಟನ್‌ನ ಈ ಲೂಯಿಸ್ ಹ್ಯಾಮಿಲ್ಟನ್(Lewis Hamilton) ಫಾರ್ಮುಲಾ-1 ಕ್ಷೇತ್ರದ ಸಾರ್ವಕಾಲಿಕ ಶ್ರೇಷ್ಠ ಚಾಲಕನಾಗಿದ್ದಾರೆ. ಜತೆಗೆ ಅಂದುಕೊಂಡಿದ್ದನ್ನು ಸಾಧಿಸಿದ ಚತುರನೂ ಹೌದು.
ಹ್ಯಾಮಿಲ್ಟನ್ ಬಾಯಲ್ಲಿ ಕನ್ನಡ ಪದವನ್ನು ಉಚ್ಚರಿಸುವ ಪ್ರಯತ್ನದಲ್ಲಿ ಯುವತಿಯೊಬ್ಬರು ಯಶಸ್ವಿಯಾಗಿದ್ದಾರೆ. ಹ್ಯಾಮಿಲ್ಟನ್ ‘ಒಳ್ಳೆಯದಾಗಲಿ’ ಎಂದು ಕನ್ನಡದಲ್ಲಿ ಹಾರೈಸಿರುವ ವಿಡಿಯೊ ಇದೀಗ ಎಲ್ಲೆಡೆ ವೈರಲ್(viral video) ಆಗುತ್ತಿದೆ. ಯುವತಿಯೊಬ್ಬರು ಗುಡ್ ಲಕ್ ಎಂಬ ಪದವನ್ನು 44 ವಿವಿಧ ಭಾಷೆಗಳಲ್ಲಿ ಬರೆದಿರುವ ಕಾರ್ಡ್ವೊಂದನ್ನು ಹ್ಯಾಮಿಲ್ಟನ್ಗೆ ತೊರಿಸಿದ್ದಾರೆ. ಇದರಲ್ಲಿ ಕನ್ನಡದಲ್ಲೂ ‘ಒಳ್ಳೆಯದಾಗಲಿ’ ಎಂಬ ಪದವನ್ನು ಬರೆಯಲಾಗಿದ್ದು. ಇದನ್ನು ಓದಲು ಸಾಧ್ಯವಾಗದ ಹ್ಯಾಮಿಲ್ಟನ್ಗೆ ಈ ಯುವತಿ ಹೇಗೆ ಉಚ್ಚರಿಸಬೇಕು ಎಂದು ಹೇಳಿಕೊಟ್ಟಿದ್ದಾಳೆ. ಆರಂಭದಲ್ಲಿ ತಡವರಿಸಿದ ಹ್ಯಾಮಿಲ್ಟನ್ ಅಂತಿಮವಾಗಿ ‘ಒಳ್ಳೆಯದಾಗಲಿ’ ಎಂದು ಹೇಳುವಲ್ಲಿ ಯಶಸ್ಸು ಕಂಡಿದ್ದಾರೆ. ಕೆಲ ಕನ್ನಡಿಗರು ಈ ವಿಡಿಯೊಗೆ ‘ನಮ್ಮ ಹುಡುಗ’ ಎಂದು ಕಮೆಂಟ್ ಮಾಡಿದ್ದಾರೆ.
Lewis Hamilton attempts to speak in kannada 😭😭😭😭, im literally crying rn. NAM HUDGA!!!! pic.twitter.com/N2BzjhkA5m
— def not sxchidxnxnd (@XenaCcp) March 1, 2024
ಅಪಾಯಕಾರಿ ಟ್ರ್ಯಾಕ್‌ಗಳಲ್ಲಿ ಜೀವದ ಹಂಗು ತೊರೆದು, ಶರವೇಗದಲ್ಲಿ ಕಾರು ಚಲಾಯಿಸುವ ಆ ಸಾಹಸಿ, ಅದೆಷ್ಟೋ ಮಂದಿ ರೇಸರ್‌ಗಳಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ. 2003ರಲ್ಲಿ ಮೊದಲ ಬಾರಿ ಕಾರು ರೇಸ್‌ನಲ್ಲಿ ಭಾಗವಹಿಸಿದ್ದರು. ಬ್ರಿಟಿಷ್ ಫಾರ್ಮುಲಾ ರೆನಾಲ್ಟ್ ರೇಸ್ ಸೀರಿಸ್ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಂಡಿದ್ದ ಅವರು, 15 ರೇಸ್‌ಗಳ ಪೈಕಿ ಹತ್ತರಲ್ಲಿ ಗೆದ್ದು ಎಲ್ಲರ ಹುಬ್ಬೇರುವಂತೆ ಮಾಡಿದ್ದರು. ಅದಾದ ಬಳಿಕ ಫಾರ್ಮುಲಾ-3 ಯುರೋ ಸೀರಿಸ್ ಚಾಂಪಿಯನ್‌ಶಿಪ್ ಗ್ರ್ಯಾನ್ ಪ್ರಿ-2 ರೇಸ್ ಸೀರಿಸ್‌ಗಳಲ್ಲಿಯೂ ಅಮೋಘ ಪ್ರದರ್ಶನ ತೋರಿ ಮನೆ ಮಾತಾದರು.
ಹ್ಯಾಮಿಲ್ಟನ್ ಅವರ ಫಾರ್ಮುಲಾ-1 ಕನಸು ಸಾಕಾರಗೊಂಡಿದ್ದು 2007ರಲ್ಲಿ. ಆ ವರ್ಷ ಮೆಕ್ಲಾರೆನ್ ಫಾರ್ಮುಲಾ-1 ತಂಡ ಸೇರಿದ ಅವರು ಕೇವಲ ಒಂದು ಅಂಕದಿಂದ ವಿಶ್ವ ಚಾಂಪಿಯನ್ ಪಟ್ಟ ಕೈಚೆಲ್ಲಿದ್ದರು. ಆ ಋತುವಿನಲ್ಲಿ ಪದಾರ್ಪಣೆ ವರ್ಷದಲ್ಲೇ ನಾಲ್ಕು ರೇಸ್‌ಗಳಲ್ಲಿ ಗೆದ್ದು ಜಾಕ್ವೆಸ್ ವಿಲ್ಲೆನೆಯುವ್ ಹೆಸರಿನಲ್ಲಿದ್ದ ದಾಖಲೆ ಸರಿಗಟ್ಟಿದ್ದರು. ಮರು ವರ್ಷ ಅವರ ಅದೃಷ್ಟದ ಬಾಗಿಲು ತೆರೆಯಿತು. 23ನೇ ವಯಸ್ಸಿನಲ್ಲೇ ವಿಶ್ವ ಚಾಂಪಿಯನ್ ಆದ ಹ್ಯಾಮಿಲ್ಟನ್, ಈ ಸಾಧನೆ ಮಾಡಿದ ಅತೀ ಕಿರಿಯ ಚಾಲಕ ಎಂಬ ದಾಖಲೆ ಬರೆದಿದ್ದರು. ಆ ನಂತರದ್ದು ಇತಿಹಾಸ.
ಇದನ್ನೂ ಓದಿ Actor Yash: ಹಾಲಿವುಡ್ ಸ್ಟಂಟ್ ಡೈರೆಕ್ಟರ್ ಜತೆ ರಾಕಿಂಗ್ ಸ್ಟಾರ್ ಯಶ್!
ಪ್ರಾಣಾಪಾಯದಿಂದ ಪಾರಾಗಿದ್ದ ಹ್ಯಾಮಿಲ್ಟನ್
ಇಟಲಿಯನ್ ಗ್ರ್ಯಾನ್ ಪ್ರಿ ಫಾರ್ಮುಲಾ 1 ರೇಸ್ ವೇಳೆ ಭಾರಿ ಅಪಘಾತ ನಡೆದಿದ್ದು, ‘ಹಾಲೋ’ ಸುರಕ್ಷತೆ ವ್ಯವಸ್ಥೆಯಿಂದಾಗಿ 7 ಬಾರಿಯ ವಿಶ್ವ ಚಾಂಪಿಯನ್ ಲೂಯಿಸ್ ಹ್ಯಾಮಿಲ್ಟನ್ ಪ್ರಾಣಾಪಾಯದಿಂದ ಪಾರಾಗಿದ್ದರು.
ರೆಡ್‌ಬುಲ್ ರೇಸಿಂಗ್ ತಂಡದ ಚಾಲಕ ಮ್ಯಾಕ್ಸ್ ವೆಸ್ಟಾರ್ಪೆನ್ ಅವರ ಅಪಾಯಕಾರಿಯಾರಿ ಚಾಲನೆಯಿಂದ ತಿರುವೊಂದರಲ್ಲಿ ಅವರ ಕಾರು ಹ್ಯಾಮಿಲ್ಟನ್‌ರ ಕಾರಿಗೆ ಡಿಕ್ಕಿ ಹೊಡೆದಿತ್ತು. ಈ ರಭಸಕ್ಕೆ ಕಾರು ಹ್ಯಾಮಿಲ್ಟನ್ ಅವರ ಮೇಲೆ ಬಿದ್ದಿತ್ತು. ‘ಹಾಲೋ’ ವ್ಯವಸ್ಥೆ ಇಲ್ಲದಿದ್ದರೆ ವೆಸ್ಟಾರ್ಪೆನ್ ಅವರ ಕಾರಿನ ಚಕ್ರ ಹ್ಯಾಮಿಲ್ಟನ್ ತಲೆ ಮೇಲೆ ಹರಿದು ದೊಡ್ಡ ಅವಘಡವೊಂದು ಸಂಭವಿಸುತ್ತಿತ್ತು. ‘ಹಾಲೋ’ ವ್ಯವಸ್ಥೆ ಇದ್ದ ಕಾರಣದಿಂದ ಹ್ಯಾಮಿಲ್ಟನ್ ಬದುಕುಳಿದಿದ್ದರು.
ಈ ಅವಘಡ ಸಂಭವಿಸಿದ ಬಳಿಕ ಮಾತನಾಡಿದ್ದ ಹ್ಯಾಮಿಲ್ಟನ್ ‘ಹಾಲೋ’ ವ್ಯವಸ್ಥೆ ಇಲ್ಲವಾಗಿದ್ದರೆ ನಾನು ಬದುಕುಳಿಯುತ್ತಿರಲಿಲ್ಲ. ಇದೊಂದು ಉತ್ತಮ ವ್ಯವಸ್ಥೆಯಾಗಿದೆ. ಇಂತಹ ವ್ಯವಸ್ಥೆ ಇದ್ದಾಗ ಹಲವು ರೇಸರ್ಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಳುವ ಮನಸ್ಸು ಮಾಡುತ್ತಾರೆ. ಇದನ್ನು ಕಂಡು ಹಿಡಿದವರಿಗೆ ನಿಜವಾಗಿಯೂ ಧನ್ಯವಾದ ಹೇಳಲೇ ಬೇಕು ಎಂದು ಹೇಳಿದ್ದರು.