ಪ್ಯಾರಿಸ್: ಕತಾರ್ ಫಿಫಾ ವಿಶ್ವ ಕಪ್ ವಿಜೇತ ಅರ್ಜೆಂಟೀನಾ ಫುಟ್‌ಬಾಲ್ ತಂಡದ ನಾಯಕ, ಪ್ಯಾರಿಸ್ ಸೇಂಟ್ ಜರ್ಮೈನ್‌ನ (ಪಿಎಸ್‌ಜಿ) ಪ್ರಮುಖ ಆಟಗಾರ ಲಿಯೋನೆಲ್ ಮೆಸ್ಸಿ(Lionel Messi) ಅವರು ಕ್ಲಬ್ನ ಅನುಮತಿ ಇಲ್ಲದೆ ಸೌದಿ ಅರೇಬಿಯಾಕ್ಕೆ ಪ್ರವಾಸ ಕೈಗೊಂಡಿದ್ದಕ್ಕೆ ಕ್ಷಮೆಯಾಚಿಸಿದ್ದಾರೆ.
ಲಿಯೋನೆಲ್ ಮೆಸ್ಸಿ ಅವರು ಅನಧಿಕೃತವಾಗಿ ತಂಡಕ್ಕೆ ತಿಳಿಸದೇ 2 ದಿನಗಳ ಕಾಲ ಸೌದಿ ಅರೇಬಿಯಕ್ಕೆ ತೆರಳಿದ್ದರು. ಇದನ್ನು ಪಿಎಸ್‌ಜಿ ಗಂಭೀರವಾಗಿ ಪರಿಗಣಿಸಿ ಅವರಿಗೆ ಎರಡು ವಾರಗಳ ಕಾಲ ನಿಷೇಧ ಹೇರಿತ್ತು. ಇದೀಗ ಮೆಸ್ಸಿ ಅವರು ತಮ್ಮ ತಪ್ಪಿಗೆ ಕ್ಷಮೆ ಕೇಳಿದ್ದಾರೆ. ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೊ ಮೂಲಕ ಕ್ಷಮೆಯಾಚಿಸಿರುವ ಮೆಸ್ಸಿ “ನಾನು ಮಾಡಿದ ತಪ್ಪಿಗೆ ಕ್ಲಬ್ ಬಳಿಕ ಕ್ಷಮೆ ಕೇಳುತ್ತೇನೆ. ಆ ದೇಶದ ಪ್ರವಾಸೋದ್ಯಮ ಕಚೇರಿಯ ಗುತ್ತಿಗೆ ಅನ್ವಯ ಸೌದಿ ಅರೇಬಿಯಾಕ್ಕೆ ಪ್ರವಾಸ ಕೈಗೊಳ್ಳದೆ ನನಗೆ ಬೇರೆ ದಾರಿ ಇರಲಿಲ್ಲ. ಆದರೆ ಈ ವಿಚಾರವನ್ನು ನಾನು ಕ್ಲಬ್ ಬಳಿ ಹೇಳದೆ ಇರುವುದು ನನ್ನ ತಪ್ಪು” ಎಂದು ಮೆಸ್ಸಿ ಹೇಳಿದ್ದಾರೆ.
ಸದ್ಯ ಮೆಸ್ಸಿ ಅವರು ತಮ್ಮ ತಪ್ಪಿಗೆ ಕ್ಷಮೆ ಕೇಳಿರುವುದರಿಂದ ಕ್ಲಬ್ ನಿಷೇಧ ಶಿಕ್ಷೆಯನ್ನು ಕಡಿತಗೊಳಿಸಲಿದೆಯಾ ಎಂದು ಕಾದು ನೋಡಬೇಕಿದೆ. ಮೂಲಗಳ ಪ್ರಕಾರ ಮೆಸ್ಸಿ ಕೆಲವು ಪಂದ್ಯಗಳು ಪಿಎಸ್‌ಜಿ ಪರ ಆಡುವುದಿಲ್ಲ. ಮೇ 21ರಂದು ಆಕ್ಷೆರ್ ತಂಡದ ವಿರುದ್ಧ ನಡೆಯುವ ಪಂದ್ಯದ ಮೂಲಕ ತಂಡಕ್ಕೆ ಮರಳುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.
ನಿವೃತ್ತಿಯ ಸುಳಿವು ಬಿಟ್ಟುಕೊಟ್ಟ ಲಿಯೋನೆಲ್ ಮೆಸ್ಸಿ
ವೃತ್ತಿ ಜೀವನದ ಅತ್ಯಂತ ಮಹತ್ವದಾದ ಫಿಫಾ ವಿಶ್ವಕಪ್ ಗೆದ್ದ ಬಳಿಕ ಇನ್ನೇನು ಹೆಚ್ಚಿನ ಆಸೆ ಉಳಿದಿಲ್ಲ ಎಂದು ಹೇಳುವ ಮೂಲಕ ಲಿಯೋನೆಲ್ ಮೆಸ್ಸಿ(Lionel Messi) ಅವರು ಕೆಲ ತಿಂಗಳುಗಳ ಹಿಂದೆ ನಿವೃತ್ತಿಯ ಸುಳಿವು ನೀಡಿದ್ದರು. ಇತ್ತೀಚಿಗೆ ನೀಡಿದ ಸಂದರ್ಶನವೊಂದರಲ್ಲಿ ವೈಯಕ್ತಿಕವಾಗಿ ವೃತ್ತಿಜೀವನದಲ್ಲಿ ಎಲ್ಲವನ್ನೂ ಪಡೆದುಕೊಂಡಿದ್ದೇನೆ. ಇನ್ನೇನು ಬಯಕೆ ನನ್ನ ಮುಂದೆ ಇಲ್ಲ ಹೀಗೆ ಹೇಳುವ ಮೂಲಕ ಮೆಸ್ಸಿ ಫುಟ್ಬಾಲ್ಗೆ ಗುಡ್ ಬೈ ಹೇಳುವ ಸುಳಿವು ನೀಡಿದ್ದರು.
ಇದನ್ನೂ ಓದಿ Lionel Messi: ‘ನಿಮಗಾಗಿ ಕಾಯುತ್ತಿದ್ದೇವೆ’; ಲಿಯೋನೆಲ್ ಮೆಸ್ಸಿಗೆ ಬೆದರಿಕೆ ಹಾಕಿದ ಅಪರಿಚಿತ ಬಂದೂಕುಧಾರಿಗಳು
“ಫುಟ್ಬಾಲ್ ಆರಂಭಿಸಿದಾಗ ನಾನು ಈ ಮಟ್ಟದ ಸಾಧನೆ ತೋರುತ್ತೇನೆ ಎಂದು ಎಂದಿಗೂ ನಾನು ಊಹಿಸಿರಲಿಲ್ಲ. ಫುಟ್ಬಾಲ್ ವೃತ್ತಿಜೀವನದಲ್ಲಿದ್ದ ಒಂದೇ ಕೊರಗು ವಿಶ್ವ ಕಪ್ ಗೆಲ್ಲುವುದಾಗಿತ್ತು. ಇದೂ ಕೂಡ ನೆರವೇರಿದೆ. ಎಲ್ಲ ಪ್ರತಿಷ್ಠಿತ ಟೂರ್ನಿಗಳಲ್ಲಿಯೂ ಕಪ್ ಗೆದ್ದಿರುವ ನನಗೆ ಇನ್ನೇನು ಆಸೆಗಳು ಉಳಿದಿಲ್ಲ” ಎಂದು ಮೆಸ್ಸಿ ಹೇಳಿದ್ದರು. ಸದ್ಯ ಅವರು ತಮ್ಮ ಈ ನಿರ್ಧಾರವನ್ನು ಅಧಿಕೃತವಾಗಿ ಯಾವಾಗ ತಿಳಿಸಲಿದ್ದಾರೆ ಎಂದು ಕಾದು ನೋಡಬೇಕಿದೆ.